ಜಗದ್ಗುರುಗಳು: "ಸಂಘರ್ಷವಿಲ್ಲದ ಯುಗವು ಸಾಧಿಸಲಾಗದದ್ದಲ್ಲ.”
ವ್ಯಾಟಿಕನ್ ವರದಿ
ಜಗದ್ಗುರು ಲಿಯೋರವರು ಶನಿವಾರ ಅಮೆರಿಕದ ಚಿಕಾಗೋದಲ್ಲಿರುವ ಲೊಯೊಲಾ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಶಾಂತಿ ಮತ್ತು ಸೌಹಾರ್ದ ಸಭೆಗೆ ಸಂದೇಶವನ್ನು ಕಳುಹಿಸಿದರು. ಈ ಸಭೆಯಲ್ಲಿ ಭಾಗವಹಿಸಿದವರಿಗೆ ಅವರು ಮಾತನಾಡುತ್ತಾ, ಜಗದ್ಗುರು ಫ್ರಾನ್ಸಿಸ್ ರವರು 2022ರಲ್ಲಿ ಆರಂಭಿಸಿದ “ಸೇತುವೆಗಳ ನಿರ್ಮಾಣ ಉಪಕ್ರಮ" ಕಾರ್ಯಕ್ರಮವನ್ನು ಮುಂದುವರಿಸುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ತಮ್ಮ ಸಂದೇಶದಲ್ಲಿ ಅವರು ವಿಶೇಷವಾಗಿ ಮೂರು ಮುಖ್ಯ ವಿಷಯಗಳನ್ನು ಒತ್ತಿ ಹೇಳಿದರು.
ಮೊದಲನೆಯದಾಗಿ, ನಿಜವಾದ ಶಾಂತಿ ಎಂದರೆ ಕೇವಲ ಸಂಘರ್ಷವಲ್ಲ ಎಂದು ಜಗದ್ಗುರುಗಳು ಹೇಳಿದರು. ಅದು ದೇವರಿಂದ ದೊರೆಯುವ ಒಂದು ವರವಾಗಿದೆ. ಹಿಂಸೆಯ ಮೂಲಕ ಅಥವಾ ಮೋಸದ ಮೂಲಕ ಶಾಂತಿಯನ್ನು ತರುವುದಿಲ್ಲ ನಿಜವಾದ ಶಾಂತಿ ಯೇಸು ಕ್ರಿಸ್ತನಲ್ಲಿ ಕಂಡುಬರುತ್ತದೆ. ಯೇಸು ಯುಗದ ಅಂತ್ಯದವರೆಗೂ ನಮ್ಮೊಂದಿಗೇ ಇರುವವರು ಎಂದು ಅವರು ನೆನಪಿಸಿದರು.
ಎರಡನೆಯದಾಗಿ, ಶಾಂತಿಯನ್ನು ಸಾಧಿಸಲು ಅಂತಾರಾಷ್ಟ್ರೀಯ ಸಮುದಾಯದ ಸಹಕಾರ ಮತ್ತು ಬದ್ಧತೆ ಅತ್ಯಂತ ಅಗತ್ಯವೆಂದು ಜಗದ್ಗುರು ಲಿಯೋರವರು ಹೇಳಿದರು. ಸಾಮೂಹಿಕ ಹಿತಕ್ಕಾಗಿ ವಿವಿಧ ಸಂಸ್ಥೆಗಳು, ಸಂಘಟನೆಗಳು, ವಿಜ್ಞಾನಿಗಳು ಮತ್ತು ವಿವಿಧ ಕ್ಷೇತ್ರಗಳ ನಾಯಕರು ಒಂದಾಗಿ ಕೆಲಸ ಮಾಡಬೇಕು ಎಂದು ಅವರು ಒತ್ತಿ ಹೇಳಿದರು. ಇಂತಹ ಬಹುಶಾಖಾ ಸಹಕಾರವು ಶಾಂತಿ ಸ್ಥಾಪನೆಗೆ ಬಹಳ ಮುಖ್ಯವಾಗಿದೆ.
ಮೂರನೆಯದಾಗಿ, ಶಾಂತಿ ಎಂದರೆ ದೇವರೊಂದಿಗೆ, ನಮ್ಮೊಳಗಿನ ಆತ್ಮದೊಂದಿಗೆ, ಇತರರೊಂದಿಗೆ ಮತ್ತು ಸೃಷ್ಟಿಯೊಂದಿಗೆ ಹೊಂದಾಣಿಕೆ ಸಾಧಿಸುವ ನಿರಂತರ ಪ್ರಯಾಣ ಎಂದು ಜಗದ್ಗುರುಗಳು ವಿವರಿಸಿದರು. ಕೆಲವೊಮ್ಮೆ ಸಂಘರ್ಷವಿಲ್ಲದ ಯುಗ ಸಾಧ್ಯವಿಲ್ಲವೆಂದು ನಾವು ಭಾವಿಸಬಹುದು. ಆದರೆ ವಿಭಿನ್ನ ಧಾರ್ಮಿಕ ಪರಂಪರೆಗಳ ಜನರು ಒಂದಾಗಿ ಪ್ರಾರ್ಥನೆ ಮಾಡುವಾಗ, ಅದು ಇತಿಹಾಸದ ದಿಕ್ಕನ್ನೇ ಬದಲಾಯಿಸುವ ಶಕ್ತಿಯನ್ನು ಹೊಂದಿದೆ ಎಂದು ಅವರು ಹೇಳಿದರು.
ಈ ಸಭೆಯಲ್ಲಿ ಅಮೆರಿಕಾ ಖಂಡದ ವಿವಿಧ ದೇಶಗಳಿಂದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ತಜ್ಞರು ಭಾಗವಹಿಸಿದ್ದಾರೆ. ಶಾಂತಿಯನ್ನು ನಿರ್ಮಿಸಲು ಪ್ರಾಯೋಗಿಕ ಮಾರ್ಗಗಳನ್ನು ಹುಡುಕುವುದು ಈ ಸಭೆಯ ಉದ್ದೇಶವಾಗಿದೆ. ಸಭೆಯನ್ನು ಚಿಕಾಗೋ ಆರ್ಚ್‌ಬಿಷಪ್ ಕಾರ್ಡಿನಲ್ ಬ್ಲೇಸ್ ಕ್ಯೂಪಿಚ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತಿದೆ.
ಸಭೆಯಲ್ಲಿ ಭಾಗವಹಿಸಿದವರು ಶಾಂತಿ ಮತ್ತು ಧರ್ಮ ಸಭೆ, ಶಾಂತಿ, ಕಾನೂನು ಮತ್ತು ವಲಸೆ, ಶಾಂತಿ ಮತ್ತು ಆರ್ಥಿಕತೆ, ಸಂಸ್ಕೃತಿ ಮತ್ತು ಕಲೆಗಳಿಂದ ಶಾಂತಿಯ ಪ್ರೇರಣೆ, ಮತ್ತು ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಶಾಂತಿ, ಸತ್ಯ ಮತ್ತು ನ್ಯಾಯ ಎಂಬ ಐದು ವಿಷಯಗಳ ಮೇಲೆ ಚರ್ಚೆ ನಡೆಸುತ್ತಿದ್ದಾರೆ. ಈ ಕಾರ್ಯಕ್ರಮವು ಲ್ಯಾಟಿನ್ ಅಮೆರಿಕಾದ ಜಗದ್ಗುರುಗಳ ಆಯೋಗದ ಕಾರ್ಯದರ್ಶಿ ಎಮಿಲ್ಸೆ ಕುಡಾರವರ ಸಮಾರೋಪ ಭಾಷಣದೊಂದಿಗೆ ಮುಕ್ತಾಯಗೊಳ್ಳಲಿದೆ.
