ಜಗದ್ಗುರು XIVನೇ ಲಿಯೋರವರು ಪವಿತ್ರ ವಾರದ ವೇಳೆ ಕ್ರಿಸ್ತನೊಂದಿಗೆ ದುಃಖ ಅನುಭವಿಸುವ ಮಧ್ಯಪ್ರಾಚ್ಯದ ಅನೇಕ ಕ್ರೈಸ್ತರನ್ನು ನೆನಪಿಸಿಕೊಂಡರು.
ವ್ಯಾಟಿಕನ್ ವರದಿ
“ಧಮ೯ಸಭೆ ಪ್ರಭುವಿನ ಯಾತನೆಯ ರಹಸ್ಯವನ್ನು ಧ್ಯಾನಿಸುವ ಈ ಸಮಯದಲ್ಲೇ, ಇಂದು ನಿಜವಾಗಿಯೂ ಅವನ ನೋವಿನಲ್ಲಿ ಪಾಲುಗೊಳ್ಳುತ್ತಿರುವವರನ್ನು ನಾವು ಮರೆಯಬಾರದು.
ಈ ಅಭಿಪ್ರಾಯವನ್ನು ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್‌ನಲ್ಲಿ ನಡೆದ ಗರಿಗಳ ಭಾನುವಾರದ ಬಲಿ ಪೂಜೆಯ ಅಂತ್ಯದಲ್ಲಿ ವ್ಯಕ್ತಪಡಿಸಿದರು.
ಮಧ್ಯಪ್ರಾಚ್ಯದ ಕ್ರೈಸ್ತರ ಸಂಕಷ್ಟದ ಕಡೆಗೆ ಧರ್ಮ ಸಭೆಯ ಗಮನವನ್ನು ಸೆಳೆಯುತ್ತಾ, ಅವರ ಪರೀಕ್ಷೆ ಎಲ್ಲರ ಮನಸ್ಸಾಕ್ಷಿಯನ್ನು ಕರೆಯುತ್ತದೆ” ಎಂದು ಅವರು ಹೇಳಿದರು.
“ಪವಿತ್ರ ವಾರದ ಆರಂಭದಲ್ಲಿ, ಭಯಾನಕ ಸಂಘರ್ಷದ ಪರಿಣಾಮಗಳನ್ನು ಅನುಭವಿಸುತ್ತಿರುವ ಮತ್ತು ಅನೇಕ ಸಂದರ್ಭಗಳಲ್ಲಿ ಈ ಪವಿತ್ರ ದಿನಗಳ ಆಚರಣೆಗಳನ್ನು ಸಂಪೂರ್ಣವಾಗಿ ಪಾಲಿಸಲು ಸಾಧ್ಯವಾಗದ ಮಧ್ಯಪ್ರಾಚ್ಯದ ಕ್ರೈಸ್ತರೊಂದಿಗೆ ನಾವು ಪ್ರಾರ್ಥನೆಯಲ್ಲಿ ಎಲ್ಲಕ್ಕಿಂತಲೂ ಹೆಚ್ಚು ಹತ್ತಿರವಾಗಿದ್ದೇವೆ,” ಎಂದು ಅವರು ಹೇಳಿದರು.
ಜಗದ್ಗುರುಗಳು ಭಕ್ತರನ್ನು ಶಾಂತಿಯ ರಾಜನಾದ ದೇವರ ಬಳಿಗೆ ತಮ್ಮ ವಿನಂತಿಗಳನ್ನು ಅರ್ಪಿಸಲು ಆಹ್ವಾನಿಸಿ, ಯುದ್ಧದಿಂದ ಗಾಯಗೊಂಡ ಜನರನ್ನು ಆತನು ಬಲಪಡಿಸಲಿ ಮತ್ತು ಸಮಾಧಾನ ಹಾಗೂ ಶಾಂತಿಯ ನಿಜವಾದ ಮಾರ್ಗಗಳನ್ನು ತೆರೆಯಲಿ ಎಂದು ಪ್ರಾರ್ಥಿಸಿದರು.
ಮಧ್ಯಾಹ್ನದ ತ್ರಿಕಾಲ ಪ್ರಾರ್ಥನೆಗೆ ಮುನ್ನ, ಯುದ್ಧದ ಬಲಿಯಾಗಿರುವ ಸಮುದ್ರಯಾನಿಗಳನ್ನು ಪ್ರಭುವಿಗೆ ಒಪ್ಪಿಸಿ, ಮೃತರಾದವರಿಗೂ, ಗಾಯಗೊಂಡವರಿಗೂ ಮತ್ತು ಅವರ ಕುಟುಂಬಗಳಿಗೂ ಪ್ರಾರ್ಥಿಸುತ್ತೇನೆ ಎಂದು ಜಗದ್ಗುರುಗಳು ಹೇಳಿದರು.
ಭೂಮಿ, ಆಕಾಶ ಮತ್ತು ಸಮುದ್ರ,ಎಂದು ಅವರು ಒತ್ತಿಹೇಳಿದರು, ಜೀವನಕ್ಕೂ ಶಾಂತಿಗೂ ಸೃಷ್ಟಿಸಲ್ಪಟ್ಟವು ಎಂದರು.
ಕೊನೆಗೆ, ಸಮುದ್ರದಲ್ಲಿ ಸಾವನ್ನಪ್ಪಿದ ಎಲ್ಲಾ ವಲಸಿಗರಿಗಾಗಿ, ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಕ್ರೀಟ್ ದ್ವೀಪದ ತೀರದ ಬಳಿ ಪ್ರಾಣ ಕಳೆದುಕೊಂಡವರಿಗಾಗಿ ಪ್ರಾರ್ಥಿಸಬೇಕೆಂದು ಜಗದ್ಗುರು ಲಿಯೋರವರು ಧರ್ಮ ಸಭೆಗೆ ಮನವಿ ಮಾಡಿದರು.
