ಹುಡುಕಿ

ಜಗದ್ಗುರು XIVನೇ ಲಿಯೋರವರು  ಧಾರ್ಮಿಕ ಮಹಿಳಾ ನಾಯಕತ್ವ ಸಮ್ಮೇಳನದ ಅಧ್ಯಕ್ಷ ಮಂಡಳಿಯೊಂದಿಗೆ ಜಗದ್ಗುರು XIVನೇ ಲಿಯೋರವರು ಧಾರ್ಮಿಕ ಮಹಿಳಾ ನಾಯಕತ್ವ ಸಮ್ಮೇಳನದ ಅಧ್ಯಕ್ಷ ಮಂಡಳಿಯೊಂದಿಗೆ  (ANSA)

ಅಮೆರಿಕದ ಸಿಸ್ಟರ್ಸ್: ವಲಸಿಗರ ದುಸ್ಥಿತಿಯ ಬಗ್ಗೆ ಜಗದ್ಗುರುಗಳು ನಮ್ಮ ಕಾಳಜಿಯನ್ನು ಹಂಚಿಕೊಳ್ಳುತ್ತಾರೆ

ಜಗದ್ಗುರು XIVನೇ ಲಿಯೋರವರನ್ನು ಭೇಟಿ ಮಾಡಿದ ನಂತರ, ಮಹಿಳಾ ಧಾರ್ಮಿಕರ ನಾಯಕತ್ವ ಸಮ್ಮೇಳನದ ಅಧ್ಯಕ್ಷ ಮಂಡಳಿ ಅಮೆರಿಕದ ವಲಸಿಗರ ಪರಿಸ್ಥಿತಿ, ಸೈನೋಡಾಲಿಟಿ ಮತ್ತು ಧರ್ಮ ಸಭೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಕುರಿತು ವ್ಯಾಟಿಕನ್ ನ್ಯೂಸ್‌ಗೆ ಮಾತನಾಡಿತು.

ವ್ಯಾಟಿಕನ್ ವರದಿ

ಅಮೆರಿಕದಲ್ಲಿ ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ವಿಭಜನೆ ಮತ್ತು ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಯೇ, ಅಲ್ಲಿ ಧರ್ಮ ಸಭೆಯ ಶಾಂತಿ ಮತ್ತು ಸೌಹಾರ್ದತೆಯ ಧ್ವನಿಯಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತಿದೆ. ಸುಮಾರು 30,000 ಸದಸ್ಯರನ್ನು ಹೊಂದಿರುವ ಮಹಿಳಾ ಧಾರ್ಮಿಕರ ನಾಯಕತ್ವ ಸಮ್ಮೇಳನ (ಎಲ್ ಸಿ ಡಬ್ಲ್ಯೂ ಆರ್ ) ಈ ಕಾಲದ ಸಂಕೇತಗಳನ್ನು ಓದಿ ಪ್ರತಿಕ್ರಿಯಿಸುವ ಮಹತ್ವದ ಸಂಘಟನೆಯಾಗಿದೆ. ಇದು ಮಹಿಳಾ ಧಾರ್ಮಿಕ ಸಂಘಗಳ ನಾಯಕರನ್ನು ಒಟ್ಟುಗೂಡಿಸಿ, ಸುವಾರ್ತೆಯ ಸೇವೆಯಲ್ಲಿ ಅವರ ಪಾತ್ರಗಳನ್ನು ನೆರವೇರಿಸಲು ಸಹಾಯ ಮಾಡುತ್ತದೆ.

ಮಾರ್ಚ್ 26ರಂದು ಜಗದ್ಗುರು XIVನೇ ಲಿಯೋರವರು ಎಲ್ ಸಿ ಡಬ್ಲ್ಯೂ ಆರ್  ಅಧ್ಯಕ್ಷ ಮಂಡಳಿಯನ್ನು ಭೇಟಿ ಮಾಡಿದರು. ಈ ಭೇಟಿಯಲ್ಲಿ ಅಮೆರಿಕದ ವಲಸಿಗರ ಪರಿಸ್ಥಿತಿ ಪ್ರಮುಖ ಚರ್ಚಾ ವಿಷಯವಾಗಿತ್ತು. ಅಮೆರಿಕದಲ್ಲಿ ಮಾನವರೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಎಲ್ ಸಿ ಡಬ್ಲ್ಯೂ ಆರ್  ಸದಸ್ಯರು ತಮ್ಮ ನೋವನ್ನು ಹಂಚಿಕೊಂಡಾಗ, ಜಗದ್ಗುರುಗಳ ಮುಖದಲ್ಲೂ ಆ ನೋವು ಸ್ಪಷ್ಟವಾಗಿತ್ತು ಎಂದು ಅವರು ಹೇಳಿದರು. ವಲಸಿಗರ ದುಸ್ಥಿತಿಯ ಬಗ್ಗೆ ಜಗದ್ಗುರುಗಳು ಮತ್ತು ಎಲ್ ಸಿ ಡಬ್ಲ್ಯೂ ಆರ್ ನಡುವೆ ಸಾಮಾನ್ಯ ಕಾಳಜಿಯಿದೆ ಎಂದು ಅವರು ಒತ್ತಿಹೇಳಿದರು.

ವಲಸಿಗರ ಸಮಸ್ಯೆ ಕುರಿತು,ಎಲ್ ಸಿ ಡಬ್ಲ್ಯೂ ಆರ್ ಸದಸ್ಯರು ನೆಲಮಟ್ಟದಲ್ಲಿ ಸಹಾಯ ಮಾಡುವುದರ ಜೊತೆಗೆ ಸರ್ಕಾರದ ಮಟ್ಟದಲ್ಲೂ ಧ್ವನಿಯನ್ನೆತ್ತುತ್ತಿದ್ದಾರೆ. ಅವರು ಆಹಾರ, ಅಗತ್ಯ ವಸ್ತುಗಳು ನೀಡುವುದರೊಂದಿಗೆ ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ಸಹಾಯ ಮಾಡುತ್ತಾರೆ. ಸುವಾರ್ತೆಯ ಕರೆಯಂತೆ ಅತಿಥಿಯನ್ನು ಸ್ವಾಗತಿಸುವುದು ಎಂಬ ಮೌಲ್ಯವನ್ನು ಅವರು ಜೀವಂತವಾಗಿಟ್ಟುಕೊಂಡಿದ್ದಾರೆ.

ಅಮೆರಿಕದಲ್ಲಿ ಹೆಚ್ಚುತ್ತಿರುವ ವಿಭಜನೆಗೆ ಪ್ರತಿಯಾಗಿ, ಎಲ್ ಸಿ ಡಬ್ಲ್ಯೂ ಆರ್ ಸಂಬಂಧಗಳನ್ನು ಬಲಪಡಿಸುವತ್ತ ಗಮನಹರಿಸಿದೆ. ಪರಸ್ಪರ ಕೇಳಿಕೊಳ್ಳುವುದು, ಗೌರವದಿಂದ ಮಾತನಾಡುವುದು ಮತ್ತು ಸಂಬಂಧಗಳನ್ನು ನಿರ್ಮಿಸುವ ಮೂಲಕ ಸಮಾಜದಲ್ಲಿ ಸೇತುವೆಗಳನ್ನು ಕಟ್ಟಲು ಅವರು ಪ್ರಯತ್ನಿಸುತ್ತಿದ್ದಾರೆ. ಇದು ಸೈನೋಡಾಲಿಟಿಯ ಆತ್ಮದೊಂದಿಗೆ ಹೊಂದಿಕೊಳ್ಳುವ ಪ್ರಯತ್ನವಾಗಿದ್ದು, ಧರ್ಮ ಸಭೆಯು ಒಟ್ಟಾಗಿ ನಡೆಯುವ ಮಾರ್ಗವನ್ನು ಉತ್ತೇಜಿಸುತ್ತದೆ.

ಧರ್ಮ ಸಭೆಯಲ್ಲಿ ಮಹಿಳೆಯರ ಪಾತ್ರದ ವಿಷಯದಲ್ಲಿ, ಮಹಿಳೆಯರು ನಾಯಕತ್ವದಲ್ಲಿ ಭಾಗವಹಿಸಬೇಕು ಎಂಬ ಅಗತ್ಯವನ್ನು ಅವರು ಒತ್ತಿಹೇಳಿದರು. ಇದು ಕೇವಲ ಧಾರ್ಮಿಕ ಅಥವಾ ಕಾನೂನು ಸಂಬಂಧಿತ ವಿಷಯವಲ್ಲ, ಸಾಂಸ್ಕೃತಿಕ ವಿಷಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ವಿಚಾರವನ್ನು ಜಗತ್ತಿನ ಮಟ್ಟದಲ್ಲಿ ಚರ್ಚೆಗೆ ತರಲಾಗುತ್ತಿರುವುದು ಸಂತೋಷದ ಸಂಗತಿ ಎಂದು ಅವರು ಹೇಳಿದರು.

ಕೊನೆಯಲ್ಲಿ, ಜಗದ್ಗುರು ಫ್ರಾನ್ಸಿಸ್ ಮತ್ತು ಜಗದ್ಗುರು XIVನೇ ಲಿಯೋರವರು  ಇಬ್ಬರೂ ಮಹಿಳೆಯರನ್ನು ನಾಯಕತ್ವ ಹುದ್ದೆಗಳಿಗೆ ನೇಮಿಸಿರುವುದು ಧರ್ಮ ಸಭೆಯ ಸಂಸ್ಕೃತಿಯಲ್ಲಿ ಬದಲಾವಣೆಗೆ ಅವರು ಬದ್ಧರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ಈ ಬದಲಾವಣೆಗಳು ಧರ್ಮ ಸಭೆಯಲ್ಲಿ ಮಹಿಳೆಯರ ಪಾತ್ರವನ್ನು ಇನ್ನಷ್ಟು ಬಲಪಡಿಸುವ ದಿಕ್ಕಿನಲ್ಲಿ ಸಾಗುತ್ತಿವೆ.

27 ಮಾರ್ಚ್ 2026, 10:17