ಅವರ್ ಲೇಡಿ ಆಫ್ ಮಾರ್ಟಿರ್ಡಮ್ ಚಾಪೆಲ್‌ನಲ್ಲಿ ಕ್ಯಾಂಟರ್ಬರಿಯ ಆರ್ಚ್‌ಬಿಷಪ್, ಡೇಮ್ ಸಾರಾ ಮುಲ್ಲಲ್ಲಿ ಮತ್ತು ಕಾರ್ಡಿನಲ್ ಕರ್ಟ್ ಕೋಚ್ ರವರೊಂದಿಗೆ ಸಾಮಾನ್ಯ ಪ್ರಾರ್ಥನಾ ಸೇವೆ ಅವರ್ ಲೇಡಿ ಆಫ್ ಮಾರ್ಟಿರ್ಡಮ್ ಚಾಪೆಲ್‌ನಲ್ಲಿ ಕ್ಯಾಂಟರ್ಬರಿಯ ಆರ್ಚ್‌ಬಿಷಪ್, ಡೇಮ್ ಸಾರಾ ಮುಲ್ಲಲ್ಲಿ ಮತ್ತು ಕಾರ್ಡಿನಲ್ ಕರ್ಟ್ ಕೋಚ್ ರವರೊಂದಿಗೆ ಸಾಮಾನ್ಯ ಪ್ರಾರ್ಥನಾ ಸೇವೆ 

ಜಗದ್ಗುರುಗಳು ಕ್ಯಾಂಟರ್ಬರಿ ಮಹಾಧರ್ಮಾಧ್ಯಕ್ಷರಿಗೆ ಸತ್ಯ ಮತ್ತು ಪ್ರೀತಿಯಲ್ಲಿ ಸಂವಾದ ಮುಂದುವರಿಯುವ ಭರವಸೆ ನೀಡಿದರು.

ಜಗದ್ಗುರು XIVನೇ ಲಿಯೋರವರು ಮಹಾಧರ್ಮಾಧ್ಯಕ್ಷರಾದ ಸಾರಾ ಮಲ್ಲಾಲಿರವರ ಸ್ಥಾಪನಾ ಸಮಾರಂಭದ ಸಂದರ್ಭದಲ್ಲಿ ಅವರಿಗೆ ಸಂದೇಶವನ್ನು ಕಳುಹಿಸಿದರು. ಆ ಸಂದೇಶದಲ್ಲಿ ಕಥೋಲಿಕ ಆಂಗ್ಲಿಕನ್ ಸಂಬಂಧಗಳಲ್ಲಿ ಸಾಧನೆಯಾದ ಪ್ರಗತಿ ಮತ್ತು ಎದುರಿಸುತ್ತಿರುವ ಸವಾಲುಗಳನ್ನು ಅವರು ಸ್ಮರಿಸಿದರು. ಮಹಾಧರ್ಮಾಧ್ಯಕ್ಷರ ಸ್ಥಾಪನಾ ಸಮಾರಂಭವು ಮಾರ್ಚ್ 25 ರಂದು ಕ್ಯಾಂಟರ್ಬರಿ ದೇವಾಲಯದಲ್ಲಿ ನಡೆಯಿತು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಕ್ಯಾಂಟರ್ಬರಿ ಮಹಾಧರ್ಮಾಧ್ಯಕ್ಷರಾಗಿ ಸಾರಾ ಮಲ್ಲಾಲಿರವರ ಸ್ಥಾಪನಾ ಸಮಾರಂಭದ ಸಂದರ್ಭದಲ್ಲಿ ಅವರಿಗೆ ಸಂದೇಶವನ್ನು ಕಳುಹಿಸಿದರು. ತಮ್ಮ ಸಂದೇಶದಲ್ಲಿ ಅವರು ತಮ್ಮ ಪ್ರಾರ್ಥನೆಗಳ ಭರವಸೆ ನೀಡುವುದರ ಜೊತೆಗೆ ಸತ್ಯ ಮತ್ತು ಪ್ರೀತಿಯಲ್ಲಿ ಕೃಪೆ, ಕರುಣೆ ಮತ್ತು ಶಾಂತಿ ಅವರ ಜೀವನದಲ್ಲಿ ಇರಲೆಂದು ಕೋರಿದರು. ಮಾರ್ಚ್ 25 ರಂದು ಕ್ಯಾಂಟರ್ಬರಿ ದೇವಾಲಯದಲ್ಲಿ ನಡೆದ ಈ ಸಮಾರಂಭವು ಅವರ ಸಾರ್ವಜನಿಕ ಧಾರ್ಮಿಕ ಸೇವೆಯ ಆರಂಭವನ್ನು ಸೂಚಿಸುತ್ತದೆ. ಸುಮಾರು 2,000 ಅತಿಥಿಗಳ ಸಮ್ಮುಖದಲ್ಲಿ, ಪ್ರಿನ್ಸ್ ಮತ್ತು ಪ್ರಿನ್ಸೆಸ್ ಆಫ್ ವೇಲ್ಸ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು.

ತಮ್ಮ ಸಂದೇಶದಲ್ಲಿ, ಆಂಗ್ಲಿಕನ್ ಸಮುದಾಯದ ಮುಖ್ಯಸ್ಥರಾಗಿ ಅವರಿಗೆ ನೀಡಲಾದ ಹೊಣೆಗಾರಿಕೆಗಳು ಮಹತ್ವಪೂರ್ಣವಾಗಿವೆ ಎಂದು ಜಗದ್ಗುರುಗಳು ಗಮನಿಸಿದರು. ಈ ಹೊಣೆಗಾರಿಕೆಗಳು ಕೇವಲ ಕ್ಯಾಂಟರ್ಬರಿ ಧರ್ಮಪ್ರಾಂತ್ಯಕ್ಕೆ ಮಾತ್ರ ಸೀಮಿತವಲ್ಲದೆ, ಇಂಗ್ಲೆಂಡ್ ಧರ್ಮ ಸಭೆ ಹಾಗೂ ವಿಶ್ವದ ಆಂಗ್ಲಿಕನ್ ಸಮುದಾಯದ ಮೇಲೆಯೂ ವ್ಯಾಪಿಸಿದೆ. ಇತಿಹಾಸದ ಸವಾಲಿನ ಕ್ಷಣದಲ್ಲಿ ಅವರು ತಮ್ಮ ಸೇವೆಯನ್ನು ಪ್ರಾರಂಭಿಸುತ್ತಿದ್ದಾರೆ ಎಂದು ಹೇಳಿದ ಜಗದ್ಗುರುಗಳು, ದೇವರ ತಾಯಿ ಮರಿಯಮ್ಮನವರಿಂದ ಪ್ರೇರಣೆ ಪಡೆದು ಪವಿತ್ರಾತ್ಮನ ಮಾರ್ಗದರ್ಶನದಲ್ಲಿ ಜ್ಞಾನದಿಂದ ಬಲಪಡಿಸಲಿ ಎಂದು ಪ್ರಾರ್ಥಿಸಿದರು.

1966ರಲ್ಲಿ ಜಗದ್ಗುರು VIನೇ ಪೌಲ್ ಮತ್ತು ಆರ್ಚ್‌ಬಿಷಪ್ ಮೈಕೆಲ್ ರಾಮ್ಸೇ ನಡುವೆ ನಡೆದ ಐತಿಹಾಸಿಕ ಭೇಟಿಯನ್ನು ಜಗದ್ಗುರುಗಳು ಸ್ಮರಿಸಿದರು. ಆ ಸಂದರ್ಭದಲ್ಲಿ ಕಥೋಲಿಕ ಮತ್ತು ಆಂಗ್ಲಿಕನ್ ಸಮುದಾಯಗಳು ಕ್ರೈಸ್ತ ಪ್ರೀತಿಯ ಆಧಾರದ ಮೇಲೆ ಸಹೋದರತ್ವದ ಸಂಬಂಧಗಳನ್ನು ವಿಕಸಿಸಲು ಹೊಸ ಹಂತಕ್ಕೆ ಬದ್ಧರಾದರು. ಈ ಬದ್ಧತೆ ಕಳೆದ ಅರವತ್ತು ವರ್ಷಗಳಲ್ಲಿ ಫಲಪ್ರದವಾಗಿದೆ ಎಂದು ಅವರು ಉಲ್ಲೇಖಿಸಿದರು. ಆಂಗ್ಲಿಕನ್-ರೋಮನ ಕಥೋಲಿಕ ಅಂತಾರಾಷ್ಟ್ರೀಯ ಆಯೋಗ ( ಎ ಆರ್ ಸಿ ಐ ಸಿ) ಈ ಪರಸ್ಪರ ಅರ್ಥೈಸುವಿಕೆಯನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಆದರೆ ಈ ಏಕತಾ ಪ್ರಯಾಣದಲ್ಲಿ ಕೆಲವು ಸವಾಲುಗಳೂ ಎದುರಾದವು ಎಂದು ಜಗದ್ಗುರುಗಳು ಒಪ್ಪಿಕೊಂಡರು. 2016ರಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ಮತ್ತು ಜಸ್ಟಿನ್ ವೆಲ್ಬಿ ಸಹಿ ಮಾಡಿದ ಸಂಯುಕ್ತ ಘೋಷಣೆಯಲ್ಲಿ ಹೊಸ ಸಂದರ್ಭಗಳು ಹೊಸ ಭೇದಾಭಿಪ್ರಾಯಗಳನ್ನು ತಂದಿವೆ ಎಂದು ಉಲ್ಲೇಖಿಸಲಾಗಿದೆ. ಆದರೂ ಈ ಭೇದಗಳು ಕ್ರೈಸ್ತರನ್ನು ಕ್ರಿಸ್ತನಲ್ಲಿ ಸಹೋದರ ಸಹೋದರಿಯರಾಗಿ ಗುರುತಿಸುವುದನ್ನು ತಡೆಯುವುದಿಲ್ಲ ಎಂದು ಅವರು ಹೇಳಿದರು.

ಆದ್ದರಿಂದ ಸಂವಾದವು ಸತ್ಯ ಮತ್ತು ಪ್ರೀತಿಯಲ್ಲಿ ಮುಂದುವರಿಯಬೇಕು ಎಂದು ಜಗದ್ಗುರುಗಳು ಅಭಿಪ್ರಾಯಪಟ್ಟರು. ಕ್ರೈಸ್ತರು ದೇವರ ಕೃಪೆ, ಕರುಣೆ ಮತ್ತು ಶಾಂತಿಯನ್ನು ಒಟ್ಟಾಗಿ ಅರಿತು ಅದನ್ನು ವಿಶ್ವಕ್ಕೆ ಸಾರಬೇಕು ಎಂದು ಅವರು ಹೇಳಿದರು. ಕ್ರೈಸ್ತರ ಏಕತೆ ಕ್ರಿಸ್ತನ ಸಂದೇಶವನ್ನು ಸಾರುವಲ್ಲಿ ಪ್ರಮುಖವಾಗಿದೆ ಮತ್ತು ವಿಭಜನೆಗಳು ಆ ಕಾರ್ಯವನ್ನು ದುರ್ಬಲಗೊಳಿಸಬಹುದು ಎಂದು ಅವರು ಎಚ್ಚರಿಸಿದರು.

ಈ ಸಂದೇಶವನ್ನು ಮಾರ್ಚ್ 26ರಂದು ಕ್ಯಾಂಟರ್ಬರಿ ದೇವಾಲಯದಲ್ಲಿ ನಡೆದ ಸಾಮೂಹಿಕ ಪ್ರಾರ್ಥನಾ ಸೇವೆಯ ಅಂತ್ಯದಲ್ಲಿ ಪ್ರಕಟಿಸಲಾಯಿತು. ಈ ಆಚರಣೆ 1966ರ ಐತಿಹಾಸಿಕ ಭೇಟಿಯ 60ನೇ ವಾರ್ಷಿಕೋತ್ಸವವನ್ನು ಸ್ಮರಿಸಿತು. ಈ ಸಂದರ್ಭದಲ್ಲಿ ವಿವಿಧ ಕಥೋಲಿಕ ಪ್ರತಿನಿಧಿಗಳು ಭಾಗವಹಿಸಿದ್ದು, ಕ್ರೈಸ್ತ ಏಕತೆ ಮತ್ತು ಸಾಮಾನ್ಯ ಸಾಕ್ಷ್ಯಕ್ಕೆ ಮಹತ್ವ ನೀಡಲಾಗಿದೆ.

26 ಮಾರ್ಚ್ 2026, 16:39