ಹುಡುಕಿ

ಲೂದ್ಸ್ ನ ಅಭಯಾರಣ್ಯ ಲೂದ್ಸ್ ನ ಅಭಯಾರಣ್ಯ  (AFP or licensors)

ಶಿಕ್ಷಣ, ದುರುಪಯೋಗ ಮತ್ತು ಲಿಟರ್ಜಿ ಕುರಿತು ಜಗದ್ಗುರುಗಳು ಫ್ರೆಂಚ್ ಬಿಷಪ್‌ಗಳಿಗೆ ಪತ್ರ ಬರೆಯುತ್ತಾರೆ

ಜಗದ್ಗುರು XIVನೇ ಲಿಯೋರವರು ಲೂದ್ಸ್ ನಲ್ಲಿ ನಡೆಯುವ ಫ್ರೆಂಚ್ ಬಿಷಪ್‌ಗಳ ಸಮಿತಿಯ ವಸಂತಕಾಲದ ಪೂರ್ಣಸಭೆಗೆ ಸಂದೇಶವನ್ನು ಕಳುಹಿಸಿ, ಕಥೋಲಿಕ ಶಿಕ್ಷಣವನ್ನು ರಕ್ಷಿಸಲು, ದುರುಪಯೋಗವನ್ನು ಎದುರಿಸುವಲ್ಲಿ ದೃಢವಾಗಿರಲು ಮತ್ತು ವೆಟಸ್ ಒರ್ಡೊಗೆ ಸಂಬಂಧಿಸಿದ ಸಮುದಾಯಗಳನ್ನು ಸ್ವಾಗತಿಸುವ ಮಾರ್ಗಗಳ ಬಗ್ಗೆ ಚಿಂತಿಸಲು ಬಿಷಪ್‌ಗಳನ್ನು ಪ್ರೇರೇಪಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು ಲಿಯೋರವರು ಫ್ರಾನ್ಸ್‌ನ ಬಿಷಪ್‌ಗಳ ವಸಂತಕಾಲದ ಪೂರ್ಣಸಭೆಯ ಆರಂಭದ ಸಂದರ್ಭದಲ್ಲಿ ಸಂದೇಶವನ್ನು ಕಳುಹಿಸಿದರು. ಈ ಸಂದೇಶವನ್ನು ಕಾರ್ಡಿನಲ್ ಪಿಯೆತ್ರೋ ಪಾರೋಲಿನ್ ಅವರು ಸಹಿ ಮಾಡಿದ್ದು, ಶಿಕ್ಷಣ, ದುರುಪಯೋಗ ಮತ್ತು ಲಿಟರ್ಜಿ ಎಂಬ ಮೂರು ಪ್ರಮುಖ ವಿಷಯಗಳನ್ನು ಒಳಗೊಂಡಿತ್ತು. ಲೂದ್ಸ್ ನ ಮರಿಯಮ್ಮನವರ ತೀರ್ಥಕ್ಷೇತ್ರದಲ್ಲಿ ನಡೆಯುವ ಈ ಸಭೆಯಲ್ಲಿ ಈ ವಿಷಯಗಳೇ ಚರ್ಚೆಗೆ ಮಾರ್ಗದರ್ಶಿಯಾಗಿವೆ.

ಕಥೋಲಿಕ ಶಿಕ್ಷಣವನ್ನು ರಕ್ಷಿಸುವ ವಿಷಯದಲ್ಲಿ, ಇತ್ತೀಚಿನ ದುರುಪಯೋಗ ಘಟನೆಗಳಿಂದ ಉಂಟಾದ ವಿರೋಧಾತ್ಮಕ ವಾತಾವರಣವನ್ನು ಜಗದ್ಗುರುಗಳು ಗಮನಿಸಿದರು. ಆದರೂ, ಕಥೋಲಿಕ ಶಿಕ್ಷಣದ ಕ್ರೈಸ್ತ ಗುರುತನ್ನು ದೃಢವಾಗಿ ಕಾಯ್ದುಕೊಳ್ಳಬೇಕು ಮತ್ತು ಎಲ್ಲರ ನಂಬಿಕೆಗಳನ್ನು ಗೌರವಿಸುವ ಮನೋಭಾವವನ್ನು ಮುಂದುವರಿಸಬೇಕು ಎಂದು ಅವರು ಬಿಷಪ್‌ಗಳಿಗೆ ಪ್ರೇರೇಪಿಸಿದರು.

ಮಕ್ಕಳ ಮೇಲಿನ ದುರುಪಯೋಗದ ಪ್ರಶ್ನೆಯ ಬಗ್ಗೆ, ಜಗದ್ಗುರು ಫ್ರಾನ್ಸಿಸ್ ರವರು ನೀಡಿದ ಮಾರ್ಗದರ್ಶನವನ್ನು ನೆನಪಿಸಿಕೊಂಡು, ಪೀಡಿತರ ಕಂಠವನ್ನು ಕೇಳುವುದು ಧರ್ಮ ಸಭೆಯ ಕರ್ತವ್ಯವೆಂದು ಪುನಃ ಒತ್ತಿಹೇಳಿದರು. ಪೀಡಿತರ ಆರೈಕೆ, ದೀರ್ಘಕಾಲಿಕ ತಡೆ ಕ್ರಮಗಳು ಮತ್ತು ದೇವರ ಕರುಣೆಯನ್ನು ಎಲ್ಲರಿಗೂ ವಿಸ್ತರಿಸುವ ಅಗತ್ಯವಿದೆ ಎಂದು ಹೇಳಿದರು. ದುರುಪಯೋಗ ಮಾಡಿದ ಯಾಜಕರುಗಳಿಗೂ ಕರುಣೆ ನೀಡಬೇಕು ಎಂದು ಅವರು ಸೂಚಿಸಿದರು.

ಲಿಟರ್ಜಿ ವಿಷಯದಲ್ಲಿ, ವಿಶೇಷವಾಗಿ ವೆಟಸ್ ಒರ್ಡೊಗೆ ಸಂಬಂಧಿಸಿದ ಸಮುದಾಯಗಳ ಬಗ್ಗೆ ಜಗದ್ಗುರುಗಳು ಚಿಂತೆಯನ್ನು ವ್ಯಕ್ತಪಡಿಸಿದರು. ಈ ವಿಷಯ ಧರ್ಮ ಸಭೆಯಲ್ಲಿ ವಿಭಜನೆಗೆ ಕಾರಣವಾಗಬಾರದು ಎಂದು ಎಚ್ಚರಿಸಿದರು. ಧರ್ಮ ಸಭೆ ತಾಯಿಯಂತೆ ಗಾಯಗಳನ್ನು ಗುಣಪಡಿಸಿ, ಪರಸ್ಪರ ಅರ್ಥಮಾಡಿಕೊಳ್ಳುವ ಮನೋಭಾವವನ್ನು ಬೆಳೆಸಬೇಕು ಎಂದು ಹೇಳಿದರು.

ಕೊನೆಗೆ, ಧರ್ಮ ಸಭೆ ಎದುರಿಸುತ್ತಿರುವ ಸವಾಲುಗಳ ನಡುವೆಯೂ, ಭರವಸೆಯ ಚಿಹ್ನೆಗಳಿವೆ ಎಂದು ಜಗದ್ಗುರುಗಳು ತಿಳಿಸಿದರು. ಕಳೆದ ಕೆಲವು ವರ್ಷಗಳಲ್ಲಿ ಕಟೆಕುಮೆನ್ಸ್‌ಗಳ (ದೀಕ್ಷೆಗೆ ಸಿದ್ಧರಾಗುವವರ) ಸಂಖ್ಯೆ ಹೆಚ್ಚುತ್ತಿರುವುದು ದೇವರ ಸಾನ್ನಿಧ್ಯದ ಸಂಕೇತವಾಗಿದೆ. ಈ ಆತ್ಮೀಯ ಆಸಕ್ತಿ ಹೆಚ್ಚುತ್ತಿರುವುದು ಭವಿಷ್ಯದ ಬಗ್ಗೆ ಧೈರ್ಯ ತುಂಬುವ ಸಂಗತಿಯಾಗಿದೆಯೆಂದು ಅವರು ಹೇಳಿದರು.

25 ಮಾರ್ಚ್ 2026, 09:08