ಜಗದ್ಗರುಗಳು ಬಿಷಪ್‌ಗಳ ಸಮ್ಮೇಳನಗಳ ಅಧ್ಯಕ್ಷರನ್ನು ಕುಟುಂಬಗಳ ಕುರಿತ ಸಭೆಗೆ ಕರೆಯುತ್ತಾರೆ.
ವ್ಯಾಟಿಕನ್ ವರದಿ
ಹತ್ತು ವರ್ಷಗಳ ಹಿಂದೆ, ಜಗದ್ಗುರು ಫ್ರಾನ್ಸಿಸ್ ರವರು ಕುಟುಂಬದ ಪ್ರೀತಿಯ ಕುರಿತು ಅಮೋರಿಸ್ ಲೇಟಿಟಿಯಾಯ ಎಂಬ ಪ್ರೇಷಿತರ ಉಪದೇಶವನ್ನು ಪ್ರಕಟಿಸಿದರು. 2014 ಮತ್ತು 2015ರ ಬಿಷಪ್‌ಗಳ ಸೈನೋಡ್‌ಗಳಿಂದ ಪ್ರೇರಿತವಾದ ಈ ದಸ್ತಾವೇಜನ್ನು ಈಗ ಜಗದ್ಗುರು XIVನೇ ಲಿಯೋರವರು “ವೈವಾಹಿಕ ಪ್ರೀತಿ ಮತ್ತು ಕುಟುಂಬ ಜೀವನದ ಕುರಿತು ಭರವಸೆಯ ಪ್ರಕಾಶಮಾನ ಸಂದೇಶ ಎಂದು ಪ್ರಶಂಸಿಸಿದ್ದಾರೆ. ಈ ದಸ್ತಾವೇಜು ಧರ್ಮ ಸಭೆಯಲ್ಲಿ ಆಲೋಚನೆ ಮತ್ತು ಧರ್ಮಾಧ್ಯಕ್ಷೀಯ ಪರಿವರ್ತನೆಗೆ ಉತ್ತೇಜನ ನೀಡಿದೆ ಎಂದು ಅವರು ಹೇಳಿದ್ದಾರೆ.
ಜಗದ್ಗುರು XIVನೇ ಲಿಯೋರವರು ಇಂದಿನ ಜಗತ್ತು ವೇಗವಾಗಿ ಬದಲಾಗುತ್ತಿದೆ, ವಿಶೇಷವಾಗಿ ಕುಟುಂಬ ಜೀವನದಲ್ಲಿ ಬದಲಾವಣೆಗಳು ಹೆಚ್ಚಾಗಿವೆ ಎಂದು ಗಮನಿಸಿದರು. ಈ ಹಿನ್ನೆಲೆಯಲ್ಲಿ, 2026ರ ಅಕ್ಟೋಬರ್‌ನಲ್ಲಿ ರೋಮಿನಲ್ಲಿ ಬಿಷಪ್‌ಗಳ ಸಮ್ಮೇಳನಗಳ ಅಧ್ಯಕ್ಷರ ಸಭೆಯನ್ನು ಕರೆದಿದ್ದು, ಇಂದಿನ ಕುಟುಂಬಗಳಿಗೆ ಸುವಾರ್ತೆಯನ್ನು ಹೇಗೆ ಸಾರಬೇಕು ಎಂಬುದರ ಬಗ್ಗೆ ಚರ್ಚಿಸಲು ಉದ್ದೇಶಿಸಲಾಗಿದೆ.
ಈ ಸಭೆ ಪರಸ್ಪರ ಆಲಿಸುವ ಮನೋಭಾವದೊಂದಿಗೆ ಸೈನೋಡಲ್ ವಿವೇಕದ ಮೂಲಕ ಮುಂದಿನ ಹೆಜ್ಜೆಗಳನ್ನು ಗುರುತಿಸಲು ಅವಕಾಶ ಒದಗಿಸುತ್ತದೆ. ಸ್ಥಳೀಯ ಧರ್ಮ ಸಭೆಗಳಲ್ಲಿ ನಡೆಯುತ್ತಿರುವ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು, ಅಮೋರಿಸ್ ಲೇಟಿಟಿಯಾಯ ಬೆಳಕಿನಲ್ಲಿ ಕುಟುಂಬಗಳಿಗೆ ಸುವಾರ್ತೆಯನ್ನು ಪ್ರಕಟಿಸುವ ಮಾರ್ಗಗಳನ್ನು ಅನ್ವೇಷಿಸಲಾಗುತ್ತದೆ.
ಜಗದ್ಗುರು XIVನೇ ಲಿಯೋರವರು ಅಮೋರಿಸ್ ಲೇಟಿಟಿಯಾವನ್ನು, ಜಗದ್ಗುರು IIನೇ ಜಾನ್ ಪಾಲ್ ಅವರ ಫ್ಯಾಮಿಲಿಯರಿಸ್ ಕನ್ಸೋರ್ಟಿಯೊ ಜೊತೆಗೆ, ದ್ವಿತೀಯ ವಾಟಿಕನ್ ಮಹಾಸಭೆಯ ನಂತರ ಕುಟುಂಬ ಸೇವೆಯಲ್ಲಿ ಧರ್ಮ ಸಭೆಯ ಬೋಧನೆ ಮತ್ತು ಧರ್ಮಾಧ್ಯಕ್ಷೀಯ ಬದ್ಧತೆಯನ್ನು ಬಲಪಡಿಸಿದ ಪ್ರಮುಖ ದಸ್ತಾವೇಜುಗಳಲ್ಲಿ ಒಂದೆಂದು ಹೇಳಿದರು. ಕುಟುಂಬದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳನ್ನು ಗಮನಿಸಿ, ಕುಟುಂಬಗಳ ಅನುಭವಗಳನ್ನು ಕೇಳುವುದು ಬಹಳ ಅಗತ್ಯವೆಂದು ಜಗದ್ಗುರು ಫ್ರಾನ್ಸಿಸ್ ರವರು ಒತ್ತಿ ಹೇಳಿದ್ದಾರೆ.
ಕುಟುಂಬವು ಸಮಾಜದ ಮೂಲ ಅಸ್ತಿತ್ವವಾಗಿದ್ದು, ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಶಾಲೆಯಂತಿದೆ ಎಂದು ಅವರು ಹೇಳಿದರು. ವಿವಾಹದ ಸಂಸ್ಕಾರದ ಮೂಲಕ ಕ್ರೈಸ್ತ ದಂಪತಿಗಳು “ಗೃಹ ಧರ್ಮ ಸಭೆ” ರೂಪಿಸುತ್ತಾರೆ, ಇದು ನಂಬಿಕೆಯನ್ನು ಬೋಧಿಸಲು ಮತ್ತು ಹಂಚಿಕೊಳ್ಳಲು ಮುಖ್ಯವಾದ ಪಾತ್ರ ವಹಿಸುತ್ತದೆ. ಆದರೆ ಇತ್ತೀಚಿನ ದಶಕಗಳಲ್ಲಿ ಸಂಭವಿಸಿದ ಬದಲಾವಣೆಗಳು ಹೊಸ ಧರ್ಮಾಧ್ಯಕ್ಷೀಯ ವಿಧಾನಗಳ ಅಗತ್ಯವನ್ನೂ ಉಂಟುಮಾಡಿವೆ.
ಜಗದ್ಗುರು XIV ನೇ ಲಿಯೋ ರವರು ಯುವ ಪೀಳಿಗೆಗೆ ಕುಟುಂಬದ ಸುವಾರ್ತೆಯನ್ನು ಸಾರಲು ಹೊಸ ಮಾರ್ಗಗಳನ್ನು ಕಂಡುಹಿಡಿಯಬೇಕೆಂದು ಕರೆ ನೀಡಿದರು. ಬಡತನ ಮತ್ತು ಹಿಂಸೆಯಿಂದ ಬಳಲುತ್ತಿರುವ ಕುಟುಂಬಗಳಿಗೆ ಬೆಂಬಲ ನೀಡುವುದು ಅಗತ್ಯವೆಂದು ಅವರು ಹೇಳಿದರು. ಕೊನೆಯಲ್ಲಿ, ವಿವಾಹ ಜೀವನದ ಸೌಂದರ್ಯವನ್ನು ಅರಿತು, ಯುವಕರು ಧರ್ಮ ಸಭೆಯಲ್ಲಿ ಅದಕ್ಕೆ ಆಕರ್ಷಿತರಾಗುವಂತೆ ಧರ್ಮ ಸಭೆ ತನ್ನ ಬದ್ಧತೆಯನ್ನು ಪುನರುಜ್ಜೀವನಗೊಳಿಸಬೇಕು ಎಂದು ಅವರು ಸೂಚಿಸಿದರು.
