ಇಟಲಿಯಲ್ಲಿ ಬಡ ಮತ್ತು ಅಂಚಿನಲ್ಲಿರುವ ವ್ಯಕ್ತಿಯ ಛಾಯಾಚಿತ್ರ ಇಟಲಿಯಲ್ಲಿ ಬಡ ಮತ್ತು ಅಂಚಿನಲ್ಲಿರುವ ವ್ಯಕ್ತಿಯ ಛಾಯಾಚಿತ್ರ 

ಜಗದ್ಗುರು XIVನೇ ಲಿಯೋರವರು: ಆರೋಗ್ಯವು ಕೆಲವರಿಗೆ ಮಾತ್ರ ಇರುವ ಐಶ್ವರ್ಯವಾಗಿರಬಾರದು

ಜಗದ್ಗುರು XIVನೇ ಲಿಯೋರವರು ಇಂದಿನ ಯುರೋಪಿನಲ್ಲಿ ಅನೇಕರು ಅನುಭವಿಸುತ್ತಿರುವ ದಾರಿದ್ರ್ಯ, ಏಕಾಂತ ಮತ್ತು ಪ್ರತ್ಯೇಕತೆಯ ಪರಿಸ್ಥಿತಿಗಳ ಕುರಿತು ಚಿಂತನೆ ವ್ಯಕ್ತಪಡಿಸಿ, ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಅಸಮಾನತೆಗಳು ಮತ್ತು ಅನ್ಯಾಯಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಇವುಗಳು ಸಂಘರ್ಷಗಳಿಗೆ ಕಾರಣವಾಗುವ ಸಾಧ್ಯತೆಯೂ ಇದೆ ಎಂದು ಅವರು ಎಚ್ಚರಿಸಿದರು.

ವ್ಯಾಟಿಕನ್ ವರದಿ

ಬುಧವಾರ ಜಗದ್ಗುರುಗಳು “ಸಾರ್ವತ್ರಿಕ ಆರೋಗ್ಯ ಕವಚ  ಕೇವಲ ಸಾಧಿಸಬೇಕಾದ ತಾಂತ್ರಿಕ ಗುರಿಯಲ್ಲ ಅದು ನ್ಯಾಯಸಮ್ಮತ ಸಮಾಜವೆಂದು ಕರೆಯಿಸಿಕೊಳ್ಳಲು ಬಯಸುವ ಸಮಾಜಗಳಿಗಾಗಿ ಮುಖ್ಯವಾಗಿ ಒಂದು ನೈತಿಕ ಅವಶ್ಯಕತೆ ಎಂದು ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದರು. ಅನ್ಯಾಯವು ಸಂಘರ್ಷಗಳಿಗೆ ಕಾರಣವಾಗದಂತೆ ತಡೆಯಲು ಇದೂ ಅಗತ್ಯವೆಂದು ಅವರು ಹೇಳಿದರು.

ವ್ಯಾಟಿಕನ್‌ನಲ್ಲಿ ನಡೆದ ಖಾಸಗಿ ಸಭೆಯಲ್ಲಿ, ಯುರೋಪಿನ ಬಿಷಪ್‌ಗಳ ಸಭೆಗಳ ಪರಿಷತ್ತು, ವಿಶ್ವ ಆರೋಗ್ಯ ಸಂಸ್ಥೆ (ಯುರೋಪಿಯನ್ ಪ್ರದೇಶ) ಮತ್ತು ಇಟಾಲಿಯನ್ ಬಿಷಪ್‌ಗಳ ಸಭೆಯು ಆಯೋಜಿಸಿದ “ಇಂದು ನನ್ನ ನೆರೆಯವರು ಯಾರು?” ಎಂಬ ಸಮ್ಮೇಳನದಲ್ಲಿ ಭಾಗವಹಿಸಿದ್ದವರನ್ನು ಉದ್ದೇಶಿಸಿ ಜಗದ್ಗುರುಗಳು ಮಾತನಾಡಿದರು.

“ಡಬ್ಲೂಎಚ್ಒ ಯುರೋಪಿಯನ್ ಹೆಲ್ತ್ ಇಕ್ವಿಟಿ ಸ್ಟೇಟಸ್ ರಿಪೋರ್ಟ್”ನ ಎರಡನೇ ಆವೃತ್ತಿ ಬಿಡುಗಡೆಗೊಂಡ ದಿನವೇ ಮಾತನಾಡಿದ ಜಗದ್ಗುರುಗಳು, ಈ ವರದಿ ಯುರೋಪಿನ ಅನೇಕ ಬಡ ಮತ್ತು ಪ್ರತ್ಯೇಕಗೊಂಡ ಜನರು ಎದುರಿಸುತ್ತಿರುವ ಪರಿಸ್ಥಿತಿಗಳನ್ನು ಗಮನಕ್ಕೆ ತರುತ್ತದೆ ಎಂದು ಹೇಳಿದರು.

ಆರೋಗ್ಯ ಕ್ಷೇತ್ರದಲ್ಲಿ ಅಸಮಾನತೆಗಳು ಅನೇಕ ಯುರೋಪಿನ ದೇಶಗಳಲ್ಲಿ ಹೆಚ್ಚುತ್ತಿರುವುದನ್ನು ಗಮನಿಸಿದ ಅವರು, ವಿಶೇಷವಾಗಿ ಯುವಜನರ ಮಾನಸಿಕ ಆರೋಗ್ಯದ ಕಡೆ ತುರ್ತು ಗಮನ ನೀಡಬೇಕೆಂದು ಕರೆ ನೀಡಿದರು.

ಆರೋಗ್ಯ ಮತ್ತು ಸಾಮಾಜಿಕ ಶಾಂತಿ

ಆರೋಗ್ಯವು ಕೆಲವರಿಗೆ ಮಾತ್ರ ಇರುವ ಐಶ್ವರ್ಯವಾಗಿರಬಾರದು, ಎಂದು ಜಗದ್ಗುರುಗಳು ಹೇಳಿದರು. ಇದು ಸಾಮಾಜಿಕ ಶಾಂತಿಗೆ ಅಗತ್ಯವಾದ ಮೂಲಭೂತ ಅಂಶ ಎಂದು ಅವರು ಒತ್ತಿ ಹೇಳಿದರು.

ಆರೋಗ್ಯ ಸೇವೆಗಳು ಅತೀ ದುರ್ಬಲರಿಗೆ ಸಹ ಲಭ್ಯವಾಗಬೇಕು ಅದು ಅವರ ಮಾನವ ಗೌರವದ ಅವಶ್ಯಕತೆಯಾಗಿರುವುದರ ಜೊತೆಗೆ, ಅನ್ಯಾಯವು ಸಂಘರ್ಷಗಳಿಗೆ ಕಾರಣವಾಗದಂತೆ ತಡೆಯಲು ಸಹ ಸಹಾಯಕವಾಗಿದೆ, ಎಂದು ಅವರು ಹೇಳಿದರು.

ಸುವಾರ್ತೆಯ ಭಾಗಗಳು, ಆದಿಕಾಂಡ, ಸಂತ ಆಗಸ್ಟಿನ್ ರವರ ಬರಹಗಳು ಮತ್ತು ಜಗದ್ಗುರು ಫ್ರಾನ್ಸಿಸ್ ರವರ ಫ್ರಾಟೆಲ್ಲಿ ತುಟ್ಟಿ ಪತ್ರಿಕೆಯನ್ನು ಉಲ್ಲೇಖಿಸಿದ ನಂತರ,  “ಹಿಂಸಾಚಾರ ಮತ್ತು ಇತರರ ನೋವುಗಳನ್ನು ನೋಡುವುದರಲ್ಲಿ ದೂರವಾಗುವುದು, ಗಮನವಿಲ್ಲದಿರುವುದು ಮತ್ತು ಸಂವೇದನೆ ಕಳೆದುಕೊಳ್ಳುವುದು ನಮಗೆ ನಿರ್ಲಕ್ಷ್ಯದ ದಾರಿಗೆ ಕೊಂಡೊಯ್ಯುತ್ತದೆ. ಆದರೆ ಎಲ್ಲಾ ಜನರು, ವಿಶೇಷವಾಗಿ ಕ್ರೈಸ್ತರು, ನೋವು ಅನುಭವಿಸುವವರತ್ತ ತಮ್ಮ ದೃಷ್ಟಿಯನ್ನು ನೆಟ್ಟಗಿಡಲು ಕರೆಯಲ್ಪಟ್ಟಿದ್ದಾರೆ—ಏಕಾಂತದಲ್ಲಿರುವವರ ನೋವು, ವಿವಿಧ ಕಾರಣಗಳಿಂದ ಸಮಾಜದಿಂದ ದೂರವಾಗಿರುವವರು ಮತ್ತು ತಳ್ಳಿಹಾಕಲ್ಪಟ್ಟವರು‌ ಎಂದು ಪರಿಗಣಿಸಲ್ಪಡುವವರ ನೋವು. ಇವರಿಲ್ಲದೆ, ಮಾನವ ವ್ಯಕ್ತಿಯ ಮೇಲೆ ಆಧಾರಿತ ನ್ಯಾಯಸಮ್ಮತ ಸಮಾಜವನ್ನು ನಾವು ನಿರ್ಮಿಸಲು ಸಾಧ್ಯವಿಲ್ಲ ಎಂದು ಜಗದ್ಗುರುಗಳು ಹೇಳಿದರು.

ನಾವು ಒಟ್ಟಾಗಿ ಮಾತ್ರ ಎಲ್ಲರನ್ನೂ ಕಾಳಜಿ ವಹಿಸುವ ಸಾಮರ್ಥ್ಯವಿರುವ ಏಕತೆಯ ಸಮುದಾಯಗಳನ್ನು ನಿರ್ಮಿಸಬಹುದು ಅಲ್ಲಿ ಎಲ್ಲರ ಹಿತಕ್ಕಾಗಿ ಸುಖ ಮತ್ತು ಶಾಂತಿ ವೃದ್ಧಿಯಾಗಬಹುದು,ಎಂದು ಅವರು ಮುಂದುವರಿಸಿದರು.

ಸಮಾರಿಯದ ಮನೋಭಾವವನ್ನು ಪ್ರತಿಬಿಂಬಿಸುವ ಕ್ರೈಸ್ತ ಜೀವನ

ಕೊನೆಯಲ್ಲಿ, ಮಾನವೀಯತೆ ಮತ್ತು ವಿಶ್ವಭ್ರಾತೃತ್ವದ ಅಭಿವೃದ್ಧಿಗೆ ಸದಾ ಸೇವೆ ಸಲ್ಲಿಸುವ ಧರ್ಮ ಸಭೆಯ ಪಾತ್ರವನ್ನು ಜಗದ್ಗುರುಗಳು ಪುನರುಚ್ಚರಿಸಿದರು.

ಯುರೋಪಿನಲ್ಲಿಯೂ ವಿಶ್ವದಾದ್ಯಂತವೂ ಇರುವ ಧರ್ಮ ಸಭೆಗಳು, ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಹಕಾರದಿಂದ, ವಿಶೇಷವಾಗಿ ಅತೀ ದುರ್ಬಲ ಜನರಿಗೆ ಬೆಂಬಲ ನೀಡುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿನ ಅಸಮಾನತೆಗಳನ್ನು ಎದುರಿಸಲು ಮಹತ್ವದ ಪಾತ್ರ ವಹಿಸಬಹುದು ಎಂದು ಅವರು ಹೇಳಿದರು.

ಅಂತಿಮವಾಗಿ, ನಮ್ಮ ಕ್ರೈಸ್ತ ಜೀವನಶೈಲಿ ಸದಾ ಸಹೋದರತ್ವದ, ಸಮಾರಿಯದ ಮನೋಭಾವವನ್ನು ಪ್ರತಿಬಿಂಬಿಸಲಿ ಅದು ಆತಿಥ್ಯಪರ, ಧೈರ್ಯಶಾಲಿ, ಬದ್ಧ ಮತ್ತು ಸಹಾಯಕವಾಗಿದ್ದು, ದೇವರೊಂದಿಗೆ ನಮ್ಮ ಏಕತೆ ಮತ್ತು ಯೇಸು ಕ್ರಿಸ್ತನಲ್ಲಿ ಇರುವ ನಮ್ಮ ನಂಬಿಕೆಯಲ್ಲಿ ನೆಲೆಗೊಂಡಿರಲಿ ಎಂದು ಅವರು ಕ್ರೈಸ್ತರಿಗೆ ಮನವಿ ಮಾಡಿದರು.

18 ಮಾರ್ಚ್ 2026, 18:00