ಹುಡುಕಿ

ಜಗದ್ಗುರು XIVನೇ ಲಿಯೋರವರು  ಸರ್ಕಾರಿ ರೈ ಸುದ್ದಿ ಕಾರ್ಯಕ್ರಮ ಟಿಜಿ2 ನ ಇಟಾಲಿಯನ್ ಪತ್ರಕರ್ತರನ್ನು ಭೇಟಿಯಾಗುತ್ತಾರೆ ಜಗದ್ಗುರು XIVನೇ ಲಿಯೋರವರು ಸರ್ಕಾರಿ ರೈ ಸುದ್ದಿ ಕಾರ್ಯಕ್ರಮ ಟಿಜಿ2 ನ ಇಟಾಲಿಯನ್ ಪತ್ರಕರ್ತರನ್ನು ಭೇಟಿಯಾಗುತ್ತಾರೆ  (@Vatican Media)

ಜಗದ್ಗುಜಗದ್ಗುರು XIVನೇ ಲಿಯೋರವರು: ವಿಶೇಷವಾಗಿ ಯುದ್ಧದ ಸಂದರ್ಭದಲ್ಲಿ ಮಾಹಿತಿಯು ಪ್ರಚಾರದ ಸಾಧನವಾಗಬಾರದು

ಜಗದ್ಗುರು XIVನೇ ಲಿಯೋರವರು ಟಿಜಿ2 ಸುದ್ದಿ ಪ್ರಸಾರದ ಇಟಾಲಿಯನ್ ಪತ್ರಕರ್ತರನ್ನು ಭೇಟಿಯಾಗಿ, ವಿಶೇಷವಾಗಿ ಸಂಘರ್ಷ ಮತ್ತು ಯುದ್ಧದ ಸಂದರ್ಭಗಳಲ್ಲಿ ಮಾಧ್ಯಮಗಳು ಅಧಿಕಾರದ “ಮೆಗಾಫೋನ್” ಆಗಿರಬಾರದು ಎಂದು ಎಚ್ಚರಿಸಿದರು

 ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಸೋಮವಾರ ಯುದ್ಧದ ಸಂದರ್ಭಗಳಲ್ಲಿ ಮಾಧ್ಯಮಗಳು ಯುದ್ಧದ ಸುದ್ದಿಗಳನ್ನು ಬಾಧೆ ಅನುಭವಿಸುವ ಜನರ ಮಾನವೀಯ ದೃಷ್ಟಿಕೋನದಿಂದ ವಿವರಿಸಬೇಕು ಮತ್ತು ಅಧಿಕಾರದ ಮೆಗಾಫೋನ್ ಆಗಿ ಪರಿಣಮಿಸಬಾರದು ಎಂದರು.

ಇಟಾಲಿಯ ಸರ್ಕಾರಿ ದೂರದರ್ಶನ ಚಾನೆಲ್ ರೈ 2 ನ ಟಿಜಿ2 ಸುದ್ದಿ ಪ್ರಸಾರದ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ಸಮಯದಲ್ಲೂ, ವಿಶೇಷವಾಗಿ ನಾವು ಅನುಭವಿಸುತ್ತಿರುವಂತಹ ಯುದ್ಧದ ದಾರುಣ ಪರಿಸ್ಥಿತಿಗಳಲ್ಲಿ, ಮಾಹಿತಿ ಪ್ರಚಾರದ ಸಾಧನವಾಗುವ ಅಪಾಯದಿಂದ ದೂರ ಇರಬೇಕು ಎಂದು ಹೇಳಿದರು.

ಇಂತಹ ಸಂಘರ್ಷದ ಸಂದರ್ಭಗಳಲ್ಲಿ, ಸುದ್ದಿಗಳನ್ನು ಪರಿಶೀಲಿಸಿ ಸತ್ಯವನ್ನು ದೃಢಪಡಿಸುವ ಪತ್ರಕರ್ತರ ಕರ್ತವ್ಯ ಇನ್ನಷ್ಟು ತುರ್ತು, ಸೂಕ್ಷ್ಮ ಮತ್ತು ಅತ್ಯಾವಶ್ಯಕವಾಗುತ್ತದೆ. ಅಧಿಕಾರದ ಧ್ವನಿಯಾಗಿ ಮಾರ್ಪಡದೇ ಇರಲು ಪತ್ರಕರ್ತರು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕು, ಎಂದು ಜಗದ್ಗುರುಗಳು ಹೇಳಿದರು.

ಯುದ್ಧವು ಜನಸಾಮಾನ್ಯರಿಗೆ ತರುವ ನೋವು ಮತ್ತು ಸಂಕಷ್ಟವನ್ನು ತೋರಿಸುವುದು ಮಾಧ್ಯಮಗಳ ಕರ್ತವ್ಯ ಎಂದು ಅವರು ಹೇಳಿದರು. ಯುದ್ಧದ ನಿಜವಾದ ಮುಖವನ್ನು ತೋರಿಸಿ, ಅದನ್ನು ಬಾಧಿತರ ಕಣ್ಣುಗಳ ಮೂಲಕ ಹೇಳಬೇಕು ಅದು ಕೇವಲ ಒಂದು ವಿಡಿಯೋ ಗೇಮ್‌ನಂತೆ ಕಾಣದಂತೆ ನೋಡಿಕೊಳ್ಳಬೇಕು, ಎಂದು ಅವರು ಒತ್ತಿ ಹೇಳಿದರು.

ಸುದ್ದಿ ಪ್ರಸಾರದಲ್ಲಿ ಕೆಲವೇ ನಿಮಿಷಗಳಲ್ಲಿ ಈ ಎಲ್ಲವನ್ನು ಸಮರ್ಪಕವಾಗಿ ವಿವರಿಸುವುದು ಸುಲಭವಲ್ಲ ಎಂಬುದನ್ನು ಜಗದ್ಗುರುಗಳು ಒಪ್ಪಿಕೊಂಡರೂ, ಆದರೂ ಇದೇ ಮಾಧ್ಯಮಗಳ ಮುಂದೆ ಇರುವ ಸವಾಲು ಎಂದು ಹೇಳಿದರು. 1976ರಲ್ಲಿ ಸ್ಥಾಪಿತವಾದ ಟಿಜಿ2 ಸುದ್ದಿ ವಿಭಾಗದ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರು ವ್ಯಾಟಿಕನ್‌ನಲ್ಲಿ ಪತ್ರಕರ್ತರನ್ನು ಭೇಟಿಯಾದರು.

ತಂತ್ರಜ್ಞಾನದ ವೇಗವಾದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಮಾಧ್ಯಮಗಳಲ್ಲಿ ಮಾನವೀಯ ದೃಷ್ಟಿಕೋನವನ್ನು ಉಳಿಸುವುದು ಅತ್ಯಂತ ಮುಖ್ಯ ಎಂದು ಜಗದ್ಗುರುಗಳು ಹೇಳಿದರು. ದೂರದರ್ಶನ ಪತ್ರಿಕೋದ್ಯಮದಲ್ಲಿ ಅನಾಲಾಗ್ ಪದ್ಧತಿಯಿಂದ ಡಿಜಿಟಲ್ ಪದ್ಧತಿಗೆ ಬದಲಾವಣೆ ಸೇರಿದಂತೆ ಅನೇಕ ಪರಿವರ್ತನೆಗಳು ನಡೆದಿರುವುದನ್ನು ಅವರು ಉಲ್ಲೇಖಿಸಿದರು. ಆದರೆ ಯಾವುದೇ ತಂತ್ರಜ್ಞಾನವೂ ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ ಮತ್ತು ಸ್ವತಂತ್ರ ಮನೋಭಾವವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಸಂವಹನವನ್ನು ಮಾನವೀಯ ಮೌಲ್ಯಗಳ ಆಧಾರದ ಮೇಲೆ ನಿಯಂತ್ರಿಸಬೇಕೆಂದು ಜಗದ್ಗುರುಗಳು ಹೇಳಿದರು. ಇದರ ಅರ್ಥ ಸಾಧನಗಳು ಮತ್ತು ಗುರಿಗಳ ನಡುವಿನ ವ್ಯತ್ಯಾಸವನ್ನು ಸರಿಯಾಗಿ ಅರಿಯುವುದಾಗಿದೆ ಎಂದು ಅವರು ವಿವರಿಸಿದರು.

ಮಾಧ್ಯಮಗಳಲ್ಲಿ ತೆರೆದ ಮನಸ್ಸು ಅತ್ಯಂತ ಅಗತ್ಯವೆಂದು ಜಗದ್ಗುರುಗಳು ಒತ್ತಿ ಹೇಳಿದರು. ಕೇವಲ ತನ್ನದೇ ಅಭಿಪ್ರಾಯವನ್ನು ದೃಢಪಡಿಸುವ ಸುದ್ದಿಗಳನ್ನು ಹುಡುಕುವುದಕ್ಕಿಂತ, ವಿವಿಧ ಧ್ವನಿಗಳು ಮತ್ತು ದೃಷ್ಟಿಕೋನಗಳನ್ನು ಸ್ವೀಕರಿಸುವ ಮನೋಭಾವ ಇರಬೇಕು ಎಂದು ಹೇಳಿದರು.

ಇತಿಹಾಸದಲ್ಲಿ ಟಿಜಿ2 ನಲ್ಲಿ ವಿವಿಧ ಸಾಂಸ್ಕೃತಿಕ ದೃಷ್ಟಿಕೋನಗಳು ಸಹಅಸ್ತಿತ್ವ ಹೊಂದಿದ್ದವು ಎಂದು ಜಗದ್ಗುರುಗಳು ನೆನಪಿಸಿದರು. ಸ್ನೇಹಭಾವದಿಂದ ಕೂಡಿದ ಈ ವೈವಿಧ್ಯತೆ ಮಾಧ್ಯಮಕ್ಕೆ ಒಂದು ಮಹತ್ವದ ಸಂಪತ್ತಾಗಿದ್ದು, ಇಂದಿನ ಕಾಲದಲ್ಲಿ ಹೆಚ್ಚುತ್ತಿರುವ ಧ್ರುವೀಕರಣ ಮತ್ತು ಆಲೋಚನಾ ಕಟ್ಟುನಿಟ್ಟಿನ ನಡುವೆ ಸಂವಾದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.

16 ಮಾರ್ಚ್ 2026, 09:04