ಹುಡುಕಿ

Il Papa � arrivato a Ponte Mammolo, ultima delle 5 visite alle chiese di periferia

ಜಗದ್ಗುರು XIVನೇ ಲಿಯೋರವರು ರೋಮಿನ ಧರ್ಮ ಕೇಂದ್ರಗಳ ಸಮುದಾಯಕ್ಕೆ ಭರವಸೆಯ ಸಂಕೇತವಾಗಿರಿ ಎಂದು ಪ್ರೋತ್ಸಾಹಿಸಿದರು

ಜಗದ್ಗುರು XIVನೇ ಲಿಯೋರವರು ರೋಮಿನ ಪೊಂಟೆ ಮಮ್ಮೋಲೊ ಉಪನಗರದಲ್ಲಿರುವ ಯೇಸುವಿನ ಪವಿತ್ರ ಹೃದಯ ಧರ್ಮ ಕೇಂದ್ರಕ್ಕೆ ಭೇಟಿ ನೀಡಿದರು. ಸಮುದಾಯವನ್ನು ಭರವಸೆಯ ಸಂಕೇತವಾಗಿ ಉಳಿಯಲು ಪ್ರೋತ್ಸಾಹಿಸಿದ ಅವರು, ವಲಸಿಗರು, ಬಡವರು ಮತ್ತು ಕೈದಿಗಳಿಗೆ ನೀಡುತ್ತಿರುವ ಅವರ ಸೇವೆಯನ್ನು ಮೆಚ್ಚಿದರು. ಜೊತೆಗೆ, ನೋವು ಮತ್ತು ಸಂಘರ್ಷಗಳಿಂದ ಗುರುತಿಸಲ್ಪಟ್ಟಿರುವ ಈ ಜಗತ್ತಿನಲ್ಲಿ ತೆರೆದ ಮನಸ್ಸು, ಐಕ್ಯತೆ ಮತ್ತು ಶಾಂತಿ ಅಗತ್ಯವೆಂದು ಅವರು ಕರೆ ನೀಡಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಭಾನುವಾರ ಮಧ್ಯಾಹ್ನ ರೋಮ್‌ನ ಪೊಂಟೆ ಮಮ್ಮೋಲೊ ಪ್ರದೇಶದಲ್ಲಿರುವ ಯೇಸುವಿನ ಪವಿತ್ರ ಹೃದಯ ಧರ್ಮ ಕೇಂದ್ರಕ್ಕೆ ಭೇಟಿ ನೀಡಿದರು. ಇದು ರೋಮಿನ ಧರ್ಮಪ್ರಾಂತ್ಯದ  ಸಮುದಾಯಗಳಿಗೆ ಅವರು ತಪಸ್ಸು ಕಾಲದಲ್ಲಿ ಮಾಡಿದ ಐದನೇ ಧರ್ಮಾಧ್ಯಕ್ಷೀಯ ಭೇಟಿಯಾಗಿದೆ. ಈ ಭೇಟಿಯಲ್ಲಿ ರೋಮ್ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಹಾಗೂ ಸೇಂಟ್ ಜಾನ್ ಲ್ಯಾಟೆರನ್ನ ಆರ್ಚ್‌ಬೆಸಿಲಿಕಾದ ಮಹಾ ಯಾಜಕರಾಗಿರುವ ಕಾರ್ಡಿನಲ್ ಬಾಲ್ಡೊ ರೀನಾರವರು ಜಗದ್ಗುರುಗಳ ಜೊತೆಗಿದ್ದರು.

ಈ ಭೇಟಿಯ ಮೂಲಕ ಜಗದ್ಗುರುಗಳು ಸುಮಾರು ನಲವತ್ತು ವರ್ಷಗಳ ಹಿಂದೆ ಜಗದ್ಗುರು IIನೇ ಜಾನ್ ಪಾಲ್ ರವರನ್ನು ಭೇಟಿ ನೀಡಿದ್ದ ಅದೇ ಧರ್ಮ ಕೇಂದ್ರಕ್ಕೆ ಮತ್ತೆ ಆಗಮಿಸಿದರು. ಫೆಬ್ರವರಿಯಲ್ಲಿ ಆರಂಭವಾದ ರೋಮಿನ ಧರ್ಮ ಕೇಂದ್ರಗಳಿಗೆ  ಮಾಡಿದ ಧರ್ಮಾಧ್ಯಕ್ಷೀಯ ಭೇಟಿಗಳ ಸರಣಿಗೆ ಈ ಭೇಟಿ ಅಂತಿಮ ಘಟ್ಟವಾಯಿತು. ಈ ಧರ್ಮ ಕೇಂದ್ರವು ರೋಮಿನ ಉತ್ತರ–ಪೂರ್ವ ಭಾಗದಲ್ಲಿದ್ದು, ಸಾಮಾಜಿಕ ಸವಾಲುಗಳ ನಡುವೆ ಸಹಾನುಭೂತಿ ಮತ್ತು ಸಹಕಾರದ ಬಲವಾದ ಜಾಲವನ್ನು ಹೊಂದಿದೆ. ಇದರ ಪ್ರದೇಶದಲ್ಲಿ ಇರುವ ರೆಬಿಬಿಯಾ ಜೈಲು ಕೂಡ ಈ ಸಮುದಾಯದ ಜೀವನಕ್ಕೆ ವಿಶೇಷವಾಗಿ ಸಂಬಂಧಿಸಿದೆ.

ಜಗದ್ಗರುಗಳು ಮಧ್ಯಾಹ್ನ ಧರ್ಮ ಕೇಂದ್ರಕ್ಕೆ ಆಗಮಿಸಿದಾಗ ಮಕ್ಕಳೂ, ಯುವಕರೂ ಮತ್ತು ಕುಟುಂಬಗಳೂ ಹೃದಯಪೂರ್ವಕವಾಗಿ ಅವರನ್ನು ಸ್ವಾಗತಿಸಿದರು. ಅವರ ಆತಿಥ್ಯ, ಪ್ರೀತಿ ಮತ್ತು ಸೇವೆಯ ಸಾಕ್ಷಿಯನ್ನು ಮೆಚ್ಚಿದ ಜಗದ್ಗುರುಗಳು, ಈ ಸೇವೆಯನ್ನು ದುಃಖ ಮತ್ತು ಯುದ್ಧಗಳಿಂದ ಬಳಲುತ್ತಿರುವ ಜಗತ್ತಿನಲ್ಲಿ “ಭರವಸೆಯ ಸಂಕೇತ” ಎಂದು ವಿವರಿಸಿದರು. ದಾನ ಕಾರ್ಯಗಳು, ವಲಸಿಗರಿಗೆ ನೆರವು, ರೋಗಿಗಳಿಗೆ ಸಹಾಯ ಮತ್ತು ನಿರುದ್ಯೋಗ ಅಥವಾ ವಾಸಸ್ಥಳದ ಸಮಸ್ಯೆಗಳನ್ನು ಎದುರಿಸುವವರಿಗೆ ನೀಡುವ ಸಹಾಯದಂತಹ ಹಲವಾರು ಕಾರ್ಯಗಳನ್ನು ಅವರು ವಿಶೇಷವಾಗಿ ಪ್ರಶಂಸಿಸಿದರು.

ಜಗದ್ಗರುಗಳು ತಮ್ಮ ಭಾಷಣದಲ್ಲಿ, ಧಮ೯ ಕೇಂದ್ರದ ಸಮುದಾಯವು ಎಲ್ಲರನ್ನು ಸ್ವಾಗತಿಸುವ ಸ್ಥಳವಾಗಬೇಕು ಎಂದು ಹೇಳಿದರು. ಇತ್ತೀಚೆಗೆ ಒಬ್ಬ ಮಹಿಳೆ ಜಗತ್ತಿನ ಸ್ಥಿತಿಯನ್ನು ನೋಡಿ ಈ ಲೋಕದಲ್ಲಿ ಭರವಸೆಯ ಸಂಕೇತಗಳು ಕಾಣುತ್ತಿಲ್ಲ ಎಂದು ದುಃಖದಿಂದ ಹೇಳಿದ ಘಟನೆಯನ್ನು ಅವರು ನೆನಪಿಸಿದರು. ಯುದ್ಧ ಮತ್ತು ನೋವುಗಳಿಂದ ಬಳಲುತ್ತಿರುವ ಜನರಿಗೆ ಧರ್ಮ ಕೇಂದ್ರದ ಸಮುದಾಯವೇ ಜೀವಂತ ಭರವಸೆಯ ಸಾಕ್ಷಿಯಾಗಬಹುದು ಎಂದು ಅವರು ಹೇಳಿದರು. ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟು ಸಹೋದರ–ಸಹೋದರಿಯರಂತೆ ಬದುಕುವವರು ದೇವರ ಅನಂತ ಪ್ರೀತಿಯನ್ನು ಲೋಕಕ್ಕೆ ತೋರಿಸಬಹುದು ಎಂದು ಅವರು ತಿಳಿಸಿದರು.

ಜಗದ್ಗರುಗಳು ಧರ್ಮ ಸಭೆಯೊಳಗೆ ಪ್ರವೇಶಿಸದವರನ್ನೂ ಗಮನಿಸಿದರು ಬಾಲ್ಕನಿ ಮತ್ತು ಮೇಲ್ಚಾವಣಿಗಳಿಂದ ಕಾರ್ಯಕ್ರಮವನ್ನು ನೋಡುತ್ತಿದ್ದವರಿಗೂ ಅವರು ಆಶೀರ್ವಾದ ನೀಡಿದರು. ಎಲ್ಲರೂ ಆಹ್ವಾನಿತರಾಗಿದ್ದಾರೆ, ಎಲ್ಲರೂ ಕರೆಯಲ್ಪಟ್ಟಿದ್ದಾರೆ, ಎಂದು ಹೇಳಿದ ಅವರು, ಧರ್ಮ ಕೇಂದ್ರವು ಎಲ್ಲರಿಗೂ ತೆರೆದಿರುವ ಒಂದು ಕುಟುಂಬದಂತಿರಬೇಕು ಎಂದು ಹೇಳಿದರು. ಕ್ರೈಸ್ತ ಸಮುದಾಯವು ಯೇಸು ಕ್ರಿಸ್ತನ ಪ್ರೀತಿ ಮತ್ತು ರಕ್ಷಣೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಸ್ಥಳವಾಗಬೇಕು ಎಂದು ಅವರು ಒತ್ತಿ ಹೇಳಿದರು.

ಪವಿತ್ರ ಬಲಿಪೂಜೆಯ ಆಚರಣೆಗೆ ಮುನ್ನ ಜಗದ್ಗುರುಗಳು ವೃದ್ಧರು ಮತ್ತು ಅಸ್ವಸ್ಥರನ್ನು ಭೇಟಿಯಾದರು. ತಪಸ್ಸು ಕಾಲವು ಎಲ್ಲರಿಗೂ ಬಾಗಿಲುಗಳನ್ನು ತೆರೆದಿಡುವ ಸಮಯ ಎಂದು ಅವರು ನೆನಪಿಸಿದರು. ಅನೇಕ ರೋಮಿನ ಧರ್ಮ ಕೇಂದ್ರಗಳು ವಿದೇಶಿಗರ ಒಗ್ಗೂಡಿಕೆಗೆ ನೀಡುತ್ತಿರುವ ಸಹಾಯವನ್ನು ಅವರು ಮೆಚ್ಚಿ, ಅನ್ಯರನ್ನು ಸ್ವಾಗತಿಸುವಂತೆ ಸುವಾರ್ತೆಯ ಆಹ್ವಾನವನ್ನು ನೆನಪಿಸಿದರು. ಏಕಾಂತದಿಂದ ಬಳಲುತ್ತಿರುವ ಜನರ ನೋವನ್ನು ಉಲ್ಲೇಖಿಸಿ, ಯೇಸುವಿನ ಹೃದಯವನ್ನು ಪ್ರತಿಬಿಂಬಿಸುವ ಧರ್ಮ ಕೇಂದ್ರವು ಎಲ್ಲರಿಗೂ ಕುಟುಂಬದ ಅನುಭವ ನೀಡುವ ಸ್ಥಳವಾಗಬೇಕು ಎಂದು ಹೇಳಿದರು.

ಪವಿತ್ರ ಬಲಿಪೂಜೆಯ ಸಂದರ್ಭದಲ್ಲಿ ತನ್ನ ಪ್ರಭೋಧನೆಯಲ್ಲಿ  ಜಗದ್ಗುರುಗಳು, ಜನ್ಮಾಂಧನನ್ನು ಗುಣಪಡಿಸಿದ ಯೇಸುವಿನ ಸುವಾರ್ತೆ ಘಟನೆಯನ್ನು ಉಲ್ಲೇಖಿಸಿದರು. ಕ್ರಿಸ್ತನು ಲೋಕಕ್ಕೆ ಬೆಳಕನ್ನು ತರುತ್ತಾರೆ ಆ ಬೆಳಕು ಮಾನವಕುಲವನ್ನು ಕೆಟ್ಟತನದ ಅಂಧಕಾರದಿಂದ ಮುಕ್ತಗೊಳಿಸಿ ಹೊಸ ಜೀವನದ ದಾರಿಯನ್ನು ತೆರೆದಿಡುತ್ತದೆ ಎಂದು ಹೇಳಿದರು. ವಿಶ್ವದ ಹಲವೆಡೆ ನಡೆಯುತ್ತಿರುವ ಹಿಂಸಾತ್ಮಕ ಸಂಘರ್ಷಗಳ ಬಗ್ಗೆ ಮಾತನಾಡಿದ ಅವರು, ಯುದ್ಧವು ಸಮಸ್ಯೆಗಳಿಗೆ ಪರಿಹಾರವಲ್ಲ ಎಂದು ಎಚ್ಚರಿಸಿದರು ಮತ್ತು ಹಿಂಸೆಯನ್ನು ನ್ಯಾಯೀಕರಿಸಲು ದೇವರ ಹೆಸರನ್ನು ಬಳಸಬಾರದು ಎಂದು ಹೇಳಿದರು.

ಧರ್ಮ ಕೇಂದ್ರದ ಸಮುದಾಯವು ಬಡವರು, ವಲಸಿಗರು ಮತ್ತು  ರೆಬಿಬಿಯಾ ಜೈಲು ಕೈದಿಗಳೊಂದಿಗೆ ನಡೆಸುತ್ತಿರುವ ಸೇವೆಯನ್ನು ಜಗದ್ಗುರುಗಳು. ಮೆಚ್ಚಿದರು. ಬೆಳಕಿನ ಮಕ್ಕಳಾಗಿ ಸೇವೆ, ಶಿಕ್ಷಣ ಮತ್ತು ದಯೆಯ ಮೂಲಕ ತಮ್ಮ ಸಾಕ್ಷಿಯನ್ನು ಮುಂದುವರಿಸಬೇಕು ಎಂದು ಅವರು ವಿಶ್ವಾಸಿಗಳಿಗೆ ಪ್ರೋತ್ಸಾಹಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಜಗದ್ಗುರುಗಳು ಧರ್ಮ ಕೇಂದ್ರದ ಧರ್ಮಧ್ಯಕ್ಷರ  ಪರಿಷತ್ತು ಹಾಗೂ ಯಾಜಕರನ್ನು ಭೇಟಿಯಾಗಿ, ವಿಶ್ವಾಸಿಗಳಿಗೆ ಆಶೀರ್ವಾದ ನೀಡಿದ ಬಳಿಕ ವ್ಯಾಟಿಕನ್‌ಗೆ ಮರಳಿದರು. ಅವರು ಎಲ್ಲರನ್ನು ಸಂತೋಷದಿಂದ ಬದುಕಿ ಇತರರಿಗೆ ಭರವಸೆಯ ಸಂಕೇತವಾಗಿರಿ ಎಂದು ಪ್ರೋತ್ಸಾಹಿಸಿದರು.

15 ಮಾರ್ಚ್ 2026, 08:51