ಜಗದ್ಗುರು XIV ನೇ ಲಿಯೋರವರು ಜಗದ್ಗುರು XIV ನೇ ಲಿಯೋರವರು  

“ಫ್ರೆಂಚ್ ಕ್ರೈಸ್ತ ಉದ್ಯಮಿಗಳು ಮತ್ತು ವ್ಯಾಪಾರ ನಾಯಕರುಗಳನ್ನು ಜಗದ್ಗುರು ಲಿಯೋರವರು ಉದ್ದೇಶಿಸಿ ಮಾತನಾಡಿದರು.”

ಜಗದ್ಗುರು ಲಿಯೋರವರು ಫ್ರಾನ್ಸ್‌ನ ವಾಣಿಜ್ಯೋದ್ಯಮಿಗಳು ಮತ್ತು ಡೈರಿಜೆಂಟ್ಸ್ ಕ್ರೆಟಿಯನ್ಸ್ (ಇಡಿಸಿ) ಸಂಸ್ಥೆಯ ಶತಮಾನೋತ್ಸವದ ಸಂದರ್ಭದಲ್ಲಿ ಕಳುಹಿಸಿದ ಸಂದೇಶದಲ್ಲಿ, ಫ್ರಾನ್ಸ್‌ನ ಲಿಯೋನ್ ನಗರದಲ್ಲಿ ಸೇರಿದ್ದ ಕ್ರೈಸ್ತ ಉದ್ಯಮಿಗಳು ಮತ್ತು ನಾಯಕರುಗಳಿಗೆ ಸಂದೇಶ ನೀಡಿದರು.ಆ ಸಂದೇಶದಲ್ಲಿ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಆಳವಾದ ಬದಲಾವಣೆಗಳನ್ನು ಅನುಭವಿಸುತ್ತಿರುವ ಇಂದಿನ ಜಗತ್ತಿನಲ್ಲಿ ಕ್ರೈಸ್ತ ಉದ್ಯಮಿಗಳಿಗೆ ವಿಶೇಷ ಹೊಣೆಗಾರಿಕೆ ಇದೆ ಎಂದು ಜಗದ್ಗುರು XIVನೇ ಲಿಯೋರವರು ನೆನಪಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು ಲಿಯೋರವರು ಫ್ರಾನ್ಸ್‌ನ ವಾಣಿಜ್ಯೋದ್ಯಮಿಗಳು ಮತ್ತು ಡೈರಿಜೆಂಟ್ಸ್ ಕ್ರೆಟಿಯನ್ಸ್ (ಇಡಿಸಿ)ಸಂಸ್ಥೆಯ ಶತಮಾನೋತ್ಸವದ ಸಂದರ್ಭದಲ್ಲಿ ಕಳುಹಿಸಿದ ಸಂದೇಶದಲ್ಲಿ ಕ್ರೈಸ್ತ ಉದ್ಯಮಿಗಳು ಮತ್ತು ವ್ಯಾಪಾರ ನಾಯಕರಿಗೆ ಸಾಮೂಹಿಕ ಹಿತವನ್ನು ಮುಂದಿಟ್ಟುಕೊಂಡು ಕಾರ್ಯನಿರ್ವಹಿಸಲು ಪ್ರೋತ್ಸಾಹಿಸಿದರು. ಫ್ರಾನ್ಸ್‌ನ ಲಿಯೋನ್ ನಗರದಲ್ಲಿ ನಡೆದ ಸಮಾವೇಶಕ್ಕೆ ಈ ಸಂದೇಶವನ್ನು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಪಿಯಾತ್ರೋ ಪಾರೋಲಿನ್ ರವರ ಮೂಲಕ ಕಳುಹಿಸಲಾಯಿತು. ಕಳೆದ ನೂರು ವರ್ಷಗಳಲ್ಲಿ ಈ ಚಳುವಳಿ ನಡೆಸಿದ ಸೇವೆಯನ್ನು ಜಗದ್ಗುರುಗಳು ಶ್ಲಾಘಿಸಿ, ಸಮಾಜದ ಒಳ್ಳೆಯದಾಗಿ ತಮ್ಮ ಬದ್ಧತೆಯನ್ನು ಪುನಃನವೀಕರಿಸಬೇಕೆಂದು ಸದಸ್ಯರನ್ನು ಆಹ್ವಾನಿಸಿದರು.

ಜಗದ್ಗರುಗಳು ಹೇಳುವಂತೆ, ಆರ್ಥಿಕ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಬದುಕುವ ಕ್ರೈಸ್ತ ನಂಬಿಕೆ ಹೊಣೆಗಾರಿಕೆ, ಸೃಜನಶೀಲತೆ ಮತ್ತು ಮಾನವ  ಗೌರವವನ್ನು ಉತ್ತೇಜಿಸಬಹುದು. ಇಂದಿನ ಕಾಲದಲ್ಲಿ ನಡೆಯುತ್ತಿರುವ ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆಗಳ ನಡುವೆ ಈ ಸಾಕ್ಷ್ಯತೆ ಇನ್ನಷ್ಟು ಅಗತ್ಯವಾಗಿದೆ ಎಂದು ಅವರು ಹೇಳಿದರು.

ಕ್ರೈಸ್ತ ನಾಯಕತ್ವದ ವಿಶೇಷ ಕರೆಯನ್ನು ಕುರಿತು ಮಾತನಾಡಿದ ಜಗದ್ಗುರುಗಳು, ಕ್ರೈಸ್ತ ನಾಯಕನ ಕರೆಯು ಸಮಾಜಕ್ಕೆ ಸೇವೆ ಮಾಡುವುದಾಗಿದೆ ಎಂದು ಹೇಳಿದರು. ಆರ್ಥಿಕ ಚಟುವಟಿಕೆ ಕೇವಲ ಲಾಭವನ್ನು ಪಡೆಯುವ ಉದ್ದೇಶಕ್ಕೆ ಮಾತ್ರ ಸೀಮಿತವಾಗಬಾರದು ಅದು ಮಾನವನ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಬೇಕು. ವ್ಯವಹಾರ ಸಂಸ್ಥೆಗಳು ಕೇವಲ ಉತ್ಪಾದನೆ ಅಥವಾ ಸಂಪತ್ತಿನ ಸಂಗ್ರಹಣೆಯ ಸಾಧನಗಳಲ್ಲ, ಅವು ಒಟ್ಟಾಗಿ ಬೆಳೆಯುವ ಜನರ ಸಮುದಾಯಗಳು ಆಗಿವೆ ಎಂದು ಅವರು ಒತ್ತಿಹೇಳಿದರು.

ಜಗದ್ಗರುಗಳು ಹೇಳಿದರು, ಧರ್ಮ ಸಭೆಯ ಸಾಮಾಜಿಕ ಬೋಧನೆ, ವಿಶೇಷವಾಗಿ ರೆರುಮ್ ನೋವರುಮ್ ಎಂಬ ಎನ್‌ಸಿಕ್ಲಿಕಲ್, ಉದ್ಯಮಿಗಳಿಗೆ ಪ್ರತಿಯೊಬ್ಬ ಕಾರ್ಮಿಕರ ಗೌರವವನ್ನು ಕಾಪಾಡುವಂತೆ ಹಾಗೂ ಅತ್ಯಂತ ದುರ್ಬಲರನ್ನು ರಕ್ಷಿಸುವಂತೆ ಕರೆ ನೀಡುತ್ತದೆ. ಕಂಪನಿಯ ಯಶಸ್ಸನ್ನು ಕೇವಲ ಆರ್ಥಿಕ ಫಲಿತಾಂಶಗಳಿಂದ ಮಾತ್ರವಲ್ಲ, ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವುದರಿಂದ ಮತ್ತು ಸಮಾಜವನ್ನು ಏಕತೆಯಲ್ಲಿ ಕಟ್ಟುವ ಸಾಮರ್ಥ್ಯದಿಂದಲೂ ಅಳೆಯಬೇಕು ಎಂದು ಅವರು ಹೇಳಿದರು.

ಯುವಜನರ ಭವಿಷ್ಯದಲ್ಲೂ ಹೂಡಿಕೆ ಮಾಡಬೇಕೆಂದು ಜಗದ್ಗುರುಗಳು ಸೂಚಿಸಿದರು. ಹೊಸ ತಲೆಮಾರಿಗೆ ವಿಶ್ವಾಸವಿಟ್ಟು ಅವರಿಗೆ ಸ್ಥಿರ ಮತ್ತು ಅರ್ಥಪೂರ್ಣ ಉದ್ಯೋಗಾವಕಾಶಗಳನ್ನು ನೀಡುವುದು ಕೇವಲ ಆರ್ಥಿಕ ನಿರ್ಧಾರವಲ್ಲ ಅದು ಹೊಣೆಗಾರಿಕೆ ಮತ್ತು ಭರವಸೆಯ ಕಾರ್ಯವಾಗಿದೆ ಎಂದು ಅವರು ಹೇಳಿದರು. ಇದರಿಂದ ಸಮಾಜದಲ್ಲಿ ಹೊರತಳ್ಳುವಿಕೆ ಮತ್ತು ಅಂಚಿನ ಸ್ಥಿತಿಯನ್ನು ತಡೆಯಲು ಸಾಧ್ಯವಾಗುತ್ತದೆ.

ಕೊನೆಯಲ್ಲಿ, ಧರ್ಮ ಸಭೆ ಮತ್ತು ಸಮಾಜದ ಸೇವೆಯಲ್ಲಿ ಇಡಿಸಿ ನಡೆಸುತ್ತಿರುವ ಕಾರ್ಯವನ್ನು ಶ್ಲಾಘಿಸಿದ ಜಗದ್ಗುರುಗಳು, ತಮ್ಮ ಗುರಿಯನ್ನು ಧೈರ್ಯ ಮತ್ತು ದೃಢಸಂಕಲ್ಪದೊಂದಿಗೆ ಮುಂದುವರಿಸಲು ಪ್ರೋತ್ಸಾಹಿಸಿದರು. ದೇವರು ನೀಡಿರುವ ಪ್ರತಿಭೆಗಳು ಎಲ್ಲರ ಹಿತಕ್ಕಾಗಿ ಫಲ ನೀಡಬೇಕು ಎಂಬುದನ್ನು ನೆನಪಿಸಿ, ತಮ್ಮ ಬದ್ಧತೆ ಸಮಾಜದಲ್ಲಿ ಭರವಸೆಯನ್ನು ಉಂಟುಮಾಡಿ ದೀರ್ಘಕಾಲಿಕ ಫಲಗಳನ್ನು ತರಲಿದೆ ಎಂಬ ವಿಶ್ವಾಸದೊಂದಿಗೆ ಮುಂದುವರಿಯುವಂತೆ ಅವರು ಹೇಳಿದರು.

13 ಮಾರ್ಚ್ 2026, 18:34