ರೋಮಿನ ಧರ್ಮ ಕೇಂದ್ರಗಳಿಗೆ ಜಗದ್ಗುರುಗಳು: ನಿಮ್ಮ ನೆರೆಹೊರೆಯ ಗಾಯಗಳನ್ನು ಸೌಹಾರ್ದದಿಂದ ಬಂಧಿಸಿ
ವ್ಯಾಟಿಕನ್ ವರದಿ
ಜಗದ್ಗುರು XIV ನೇ ಲಿಯೋರವರು ಮಾರ್ಚ್ 1 ಭಾನುವಾರ ತಮ್ಮ ಧರ್ಮಪ್ರಾಂತ್ಯದ ಮೂರನೇ ಧರ್ಮ ಕೇಂದ್ರವನ್ನು ಭೇಟಿಯಾಗಿ, ಇಟಲಿಯ ರಾಜಧಾನಿ ರೋಮಿನ ಪೂರ್ವ ಭಾಗದಲ್ಲಿರುವ “ಕ್ವಾರ್ಟಿಚಿಯೋಲೊ” ಪ್ರದೇಶದ ಪ್ರಭುವಿನ ಸ್ವಗಾ೯ರೋಹಣ ಧರ್ಮ ಕೇಂದ್ರದಲ್ಲಿ ಮಧ್ಯಾಹ್ನ ಸಮಯವನ್ನು ಕಳೆದರು. 1980ರ ಫೆಬ್ರವರಿ 3ರಂದು ಇದೇ ಧರ್ಮ ಕೇಂದ್ರಕ್ಕೆ ಭೇಟಿ ನೀಡಿದ್ದ ಜಗದ್ಗುರು IIನೇ ಜಾನ್ ಪಾಲ್ ರವರ ಹೆಜ್ಜೆ ಗುರುತುಗಳನ್ನು ಅವರು ಅನುಸರಿಸಿದರು. ರೋಮ್ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಕಾರ್ಡಿನಲ್ ಬಾಲ್ಡೋ ರೇಯ್ನಾ ರವರು ಜಗದ್ಗುರುಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಜಗದ್ಗರುಗಳ ಮೊದಲು ಧರ್ಮ ಕೇಂದ್ರದ ಮಕ್ಕಳನ್ನು ಭೇಟಿ ಮಾಡಿ, ಮಧ್ಯಪ್ರಾಚ್ಯದಲ್ಲಿ ಮತ್ತೆ ಪ್ರಚಂಡಗೊಂಡ ಯುದ್ಧದ ಬಗ್ಗೆ ದುಃಖ ವ್ಯಕ್ತಪಡಿಸಿದರು. ದೇವರು ಎಲ್ಲರಿಗೂ ಶಾಂತಿಯನ್ನು ಬಯಸುತ್ತಾರೆ ಎಂದು ಹೇಳಿ, ಶಾಂತಿಗಾಗಿ ತೀವ್ರವಾಗಿ ಪ್ರಾರ್ಥಿಸಬೇಕು ಏಕತೆಯಿಂದ ಬದುಕಬೇಕು ಇತರರಿಗೆ ಹಾನಿ ಮಾಡುವ ಪ್ರಲೋಭನಕ್ಕೆ ಮಣಿಯಬಾರದು. ಹಿಂಸೆ ಯಾವತ್ತೂ ಸರಿಯಾದ ಆಯ್ಕೆಯಲ್ಲ ಎಂದು ಹೇಳಿದರು.
ಪರಿಸರದ ಸಾಮಾಜಿಕ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ಮಕ್ಕಳು ಪರಸ್ಪರ ಗೌರವದಿಂದ ವರ್ತಿಸಬೇಕು ಮತ್ತು ಮದ್ಯದ ವ್ಯಸನಕ್ಕೆ ‘ಇಲ್ಲ’ ಎಂದು ಹೇಳಬೇಕು ಎಂದು ಪ್ರೋತ್ಸಾಹಿಸಿದರು. ಈ ಪ್ರದೇಶದಲ್ಲಿ ಮಾದಕ ವಸ್ತುಗಳ ದುರುಪಯೋಗ ಸಮಸ್ಯೆಯಾಗಿದೆ ಎಂಬುದನ್ನು ಅವರು ಒಪ್ಪಿಕೊಂಡರು. ನಂತರ ಅವರು ವಯೋವೃದ್ಧರು ಮತ್ತು ಅಸ್ವಸ್ಥರನ್ನು ಭೇಟಿಯಾಗಿ, ಸಮುದಾಯದಲ್ಲಿ ನಾವು ಒಂದಾಗುವಾಗ ನಮ್ಮಲ್ಲಿರುವ ಪ್ರತ್ಯೇಕ ಶಕ್ತಿಗಿಂತ ದೊಡ್ಡ ಶಕ್ತಿಯನ್ನು ಅನುಭವಿಸುತ್ತೇವೆ ಅದು ದೇವರ ಪ್ರೀತಿಯಿಂದ ಬರುತ್ತದೆ ಮತ್ತು ನಮಗೆ ಕುಟುಂಬದ ಅನುಭವವನ್ನು ನೀಡುತ್ತದೆ ಎಂದು ಹೇಳಿದರು.
ಜಗದ್ಗರುಗಳು ಸಮುದಾಯದ ಉತ್ತೇಜನಕ್ಕಾಗಿ ನಾಗರಿಕ ಅಧಿಕಾರಿಗಳೊಂದಿಗೆ ಸಹಕರಿಸಿ ಅಪರಾಧ ಚಟುವಟಿಕೆಗಳನ್ನು ನಿರ್ಮೂಲ ಮಾಡುವಂತೆ ಕರೆ ನೀಡಿದರು. ಧರ್ಮ ಕೇಂದ್ರದ ಧರ್ಮ ಸಭೆಯ ಪವಿತ್ರ ಬಲಿ ಪೂಜೆಯನ್ನು ಆಚರಿಸಿ, ಅಬ್ರಹಾಮನ ವಿಶ್ವಾಸಯಾತ್ರೆ ಮತ್ತು ಯೇಸುವಿನ ರೂಪಾಂತರ ಘಟನೆಯ ಕುರಿತು ಧ್ಯಾನಿಸಿದರು. ಅನಿಶ್ಚಿತತೆಯಿಂದ ಓಡಿಹೋಗದೆ, ದೇವರ ಮೇಲೆ ವಿಶ್ವಾಸವಿಟ್ಟು ಜೀವನಯಾತ್ರೆಯನ್ನು ಮುಂದುವರಿಸುವಂತೆ ಅವರು ಕ್ರೈಸ್ತರನ್ನು ಉತ್ತೇಜಿಸಿದರು.
ಕೊನೆಯಲ್ಲಿ, ಕ್ವಾರ್ಟಿಚಿಯೋಲೊ ಪ್ರದೇಶದ ನಿವಾಸಿಗಳು ಭರವಸೆಯ ಚಿಹ್ನೆಗಳಾಗಬೇಕು ಮತ್ತು ತಮ್ಮ ಪ್ರದೇಶದ ಗಾಯಗಳನ್ನು ನಂಬಿಕೆಯ ದೃಷ್ಟಿಯಿಂದ ಗುಣಪಡಿಸಬೇಕು ಎಂದು ಅವರು ಆಹ್ವಾನಿಸಿದರು. ವಿಶೇಷವಾಗಿ ಯುವಕರು ಧೈರ್ಯ ಮತ್ತು ಸತ್ಯಸಂಧ ಜೀವನವನ್ನು ಆಯ್ಕೆಮಾಡಿ ಸಾಧಾರಣತೆಯನ್ನು ಮೀರಿ ಸಾಗಬೇಕು ಎಂದು ಹೇಳಿದರು. ಪವಿತ್ರ ಬಲಿ ಪೂಜೆಯ ನಂತರ ಧರ್ಮಾಧ್ಯಕ್ಷರ ಸಮಿತಿಯ ಸದಸ್ಯರನ್ನು ಭೇಟಿಯಾದ ಅವರು, ನಾನು ನಿಮ್ಮ ರೋಮಿನ ಬಿಷಪ್ ಆಗಿ ಹೊಸವನಾಗಿದ್ದರೂ, ನಿಮ್ಮ ಸಮುದಾಯದ ಜೀವಂತ ಆತ್ಮವನ್ನು ಕಂಡು ಹರ್ಷಿಸುತ್ತಿದ್ದೇನೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
