ಇರಾನ್ ನಗರದ ಇಸ್ಫಹಾನ್ ಮೇಲೆ ಅಮೆರಿಕ-ಇಸ್ರೇಲಿ ದಾಳಿ. ಇರಾನ್ ನಗರದ ಇಸ್ಫಹಾನ್ ಮೇಲೆ ಅಮೆರಿಕ-ಇಸ್ರೇಲಿ ದಾಳಿ.  (AFP or licensors)

“ಮಧ್ಯಪ್ರಾಚ್ಯದ ಯುದ್ಧದ ನಡುವೆ ಯುದ್ಧ ವಿರಾಮ ಮತ್ತು ಸಂವಾದಕ್ಕೆ ಜಗದ್ಗುರುಗಳು ಕರೆ ನೀಡಿದರು.”

ಜಗದ್ಗುರು XIVನೇ ಲಿಯೋರವರು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಹೊಣೆಗಾರರಾಗಿರುವ ಎಲ್ಲರಿಗೂ ಯುದ್ಧ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಮತ್ತು ಸಂವಾದದ ಮಾರ್ಗಗಳನ್ನು ಪುನಃ ಆರಂಭಿಸುವಂತೆ ಮನವಿ ಮಾಡಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಭಾನುವಾರ ಮಾತನಾಡುತ್ತಾ, ಯುನೈಟೆಡ್ ಸ್ಟೇಟ್ಸ್, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಹೊಣೆಗಾರರಾಗಿರುವ ಎಲ್ಲರಿಗೂ ಯುದ್ಧ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಹಾಗೂ ಸಂವಾದದ ಮಾರ್ಗಗಳನ್ನು ಪುನಃ ಆರಂಭಿಸುವಂತೆ ಮನವಿ ಮಾಡಿದರು. “ಮಧ್ಯಪ್ರಾಚ್ಯದ ಕ್ರೈಸ್ತರ ಮತ್ತು ಸದುದ್ದೇಶ ಹೊಂದಿರುವ ಎಲ್ಲಾ ಮಹಿಳೆಯರು ಪುರುಷರ ಹೆಸರಿನಲ್ಲಿ ನಾವು ಮನವಿ ಮಾಡುತ್ತೇನೆ ಯುದ್ಧ ನಿಲ್ಲಿಸಿ, ಸಂವಾದದ ದಾರಿಗಳನ್ನು ಮತ್ತೆ ತೆರೆಯಿರಿ, ಎಂದು ಅವರು ಹೇಳಿದರು.

ಜಗದ್ಗರುಗಳು ಹೇಳಿದರು: ಹಿಂಸಾಚಾರವು ಯಾವಾಗಲೂ ಜನರು ಕಾಯುತ್ತಿರುವ ನ್ಯಾಯ, ಸ್ಥಿರತೆ ಮತ್ತು ಶಾಂತಿಯನ್ನು ತರಲು ಸಾಧ್ಯವಿಲ್ಲ. ತ್ರಿಕಾಲ ಪ್ರಾರ್ಥನೆಯ ನಂತರ ವಿಶ್ವಾಸಿಗಳಿಗೆ ಮಾತನಾಡಿದ ಅವರು, ಕಳೆದ ಎರಡು ವಾರಗಳಿಂದ ಮಧ್ಯ ಪ್ರಾಚ್ಯದ ಪ್ರದೇಶದ ಜನರು ಯುದ್ಧದ ಭೀಕರ ಹಿಂಸೆಯಿಂದ ತೀವ್ರವಾಗಿ ಬಳಲುತ್ತಿದ್ದಾರೆ ಎಂದು ನೆನಪಿಸಿದರು.

ಈ ಸಂಘರ್ಷದ ಪರಿಣಾಮವಾಗಿ ಸಾವಿರಾರು ನಿರಪರಾಧಿಗಳು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಅನೇಕರು ತಮ್ಮ ಮನೆಗಳನ್ನು ತೊರೆದು ಹೋಗಬೇಕಾದ ಪರಿಸ್ಥಿತಿಗೆ ತಲುಪಿದ್ದಾರೆ. ಶಾಲೆಗಳು, ಆಸ್ಪತ್ರೆಗಳು ಮತ್ತು ವಾಸಸ್ಥಳಗಳ ಮೇಲೆ ನಡೆದ ದಾಳಿಗಳಲ್ಲಿ ತಮ್ಮ ಪ್ರಿಯಜನರನ್ನು ಕಳೆದುಕೊಂಡ ಎಲ್ಲರಿಗೂ ತಾನು ಪ್ರಾರ್ಥನೆಯಲ್ಲಿ ಹತ್ತಿರವಾಗಿದ್ದೇನೆ ಎಂದು ಜಗದ್ಗುರುಗಳು ತಿಳಿಸಿದರು.

ಜಗದ್ಗುರು ಲಿಯೋರವರು ಲೆಬನಾನ್ ನಲ್ಲಿ ಉಂಟಾಗಿರುವ ಗಂಭೀರ ಪರಿಸ್ಥಿತಿಯ ಬಗ್ಗೆ ಕೂಡ ತೀವ್ರ ಚಿಂತೆ ವ್ಯಕ್ತಪಡಿಸಿದರು. ದೇಶದಲ್ಲಿ ನಡೆಯುತ್ತಿರುವ ಸಂಕಷ್ಟಕ್ಕೆ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳಲು ಸಂವಾದದ ಮಾರ್ಗಗಳು ತೆರೆಯಬೇಕು ಮತ್ತು ಅದು ಎಲ್ಲಾ ಲೆಬನಾನ್ ಜನರ ಸಾಮೂಹಿಕ ಹಿತಕ್ಕಾಗಿ ಅಗತ್ಯವೆಂದು ಅವರು ಹೇಳಿದರು.

ಇರಾನ್ ಸಂಬಂಧಿತ ಈ ಸಂಘರ್ಷದ ಪರಿಣಾಮವಾಗಿ ಮಧ್ಯಪ್ರಾಚ್ಯದಲ್ಲಿ ಸಾಮಾನ್ಯ ನಾಗರಿಕರು ಅತ್ಯಂತ ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದಾರೆ. ದಕ್ಷಿಣ ಲೆಬನಾನ್‌ನಲ್ಲಿ ನಡೆದ ದಾಳಿಯಲ್ಲಿ ವೈದ್ಯಕೀಯ ಸಿಬ್ಬಂದಿ ಸಾವನ್ನಪ್ಪಿದ ಘಟನೆ ಸೇರಿದಂತೆ ಹಲವು ದಾಳಿಗಳು ಸಂಭವಿಸಿವೆ. ಲೆಬನಾನ್ ಆರೋಗ್ಯ ಸಚಿವಾಲಯದ ಪ್ರಕಾರ ನೂರಾರು ಜನರು ಮೃತಪಟ್ಟಿದ್ದಾರೆ ಮತ್ತು ಲಕ್ಷಾಂತರ ಜನರು ತಮ್ಮ ಮನೆಗಳಿಂದ ಸ್ಥಳಾಂತರಗೊಳ್ಳಬೇಕಾಗಿದೆ.

ಇದೇ ಸಮಯದಲ್ಲಿ ಇರಾನ್‌ನಲ್ಲಿಯೂ ದಾಳಿಗಳಿಂದ ಅನೇಕ ನಾಗರಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಯುದ್ಧ ಆರಂಭವಾದ ಬಳಿಕ ಸಾವಿರಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಕೆಲವು ಸಂಸ್ಥೆಗಳು ಅಂದಾಜಿಸಿವೆ. ಈ ಎಲ್ಲಾ ಘಟನೆಗಳ ನಡುವೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದು, ಹಲವಾರು ದೇಶಗಳು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ತಡೆಯಲು ಕ್ರಮಗಳನ್ನು ಕೈಗೊಂಡಿವೆ. ಈ ಹಿನ್ನೆಲೆಯಲ್ಲಿ ಶಾಂತಿ, ಸಂವಾದ ಮತ್ತು ನ್ಯಾಯಕ್ಕಾಗಿ ಜಗತ್ತಿನ ನಾಯಕರು ಪ್ರಯತ್ನಿಸಬೇಕು ಎಂದು ಜಗದ್ಗುರು ಲಿಯೋರವರು ಮತ್ತೆ ಮನವಿ ಮಾಡಿದರು.

15 ಮಾರ್ಚ್ 2026, 16:14