ಹುಡುಕಿ

ತ್ರಿಕಾಲ ಪ್ರಾಥ೯ನೆಯಲ್ಲಿ ಜಗದ್ಗುರು XIV ನೇ ಲಿಯೋರವರು ತ್ರಿಕಾಲ ಪ್ರಾಥ೯ನೆಯಲ್ಲಿ ಜಗದ್ಗುರು XIV ನೇ ಲಿಯೋರವರು  (ANSA)

“ತ್ರಿಕಾಲ ಪ್ರಾರ್ಥನೆಯಲ್ಲಿ ಜಗದ್ಗುರುಗಳು: ನಂಬಿಕೆ ಪೀಡಿತ ಮಾನವಕುಲದ ನೋವನ್ನು ನೋಡುವಂತೆ ನಮ್ಮ ಕಣ್ಣುಗಳನ್ನು ತೆರೆಯುತ್ತದೆ.”

ಭಾನುವಾರದ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಜನ್ಮದಿಂದಲೇ ಕುರುಡನಾಗಿದ್ದ ವ್ಯಕ್ತಿಯನ್ನು ಯೇಸು ಕ್ರಿಸ್ತರು ಗುಣಪಡಿಸಿದ ಘಟನೆ ಕುರಿತು ಚಿಂತನೆ ಹಂಚಿಕೊಂಡು, ನಂಬಿಕೆ ನಮ್ಮನ್ನು ಮಾನವಕುಲವನ್ನೂ ಅದರ ಸಂಕಷ್ಟಗಳನ್ನೂ ದೇವರು ನೋಡುವ ದೃಷ್ಟಿಯಿಂದ ನೋಡುವಂತೆ ಕಲಿಸುತ್ತದೆ ಎಂದು ಹೇಳಿದರು.

ವ್ಯಾಟಿಕನ್ ವರದಿ

ಜಗದ್ಗುರು XIV ನೇ ಲಿಯೋರವರು ಭಾನುವಾರದಂದು ಸಂತ ಪೇತ್ರರ ಚೌಕದಲ್ಲಿ ಕೂಡಿದ್ದ ಯಾತ್ರಿಕರೊಂದಿಗೆ ತ್ರಿಕಾಲ ಪ್ರಾರ್ಥನೆಯನ್ನು ನೆರವೇರಿಸಿದರು. ಮಧ್ಯಾಹ್ನದ ಮರಿಯಮ್ಮನವರ ಪ್ರಾರ್ಥನೆಯ ಮೊದಲು ನೀಡಿದ ತಮ್ಮ ಸಂದೇಶದಲ್ಲಿ ಅವರು ಆ ದಿನದ ಸುವಾರ್ತೆಯ ಬಗ್ಗೆ ಚಿಂತನೆ ಹಂಚಿಕೊಂಡರು. ಆ ಸುವಾರ್ತೆಯಲ್ಲಿ ಯೇಸು ಕ್ರಿಸ್ತರು ಜನ್ಮದಿಂದಲೇ ಕುರುಡನಾಗಿದ್ದ ಒಬ್ಬ ವ್ಯಕ್ತಿಯನ್ನು ಗುಣಪಡಿಸಿದ ಘಟನೆ (ಯೋಹಾನ 9:1-41) ವಿವರಿಸಲಾಗಿದೆ.

ಜಗದ್ಗರುಗಳು ಹೇಳಿದರು ಈ ಘಟನೆ ರಕ್ಷಣೆಯ ರಹಸ್ಯವನ್ನು ನಮಗೆ ತೋರಿಸುತ್ತದೆ. ಮಾನವಕುಲವು ಅಂಧಕಾರದಲ್ಲಿ ವಾಸಿಸುತ್ತಿದ್ದಾಗ ದೇವರ ಪುತ್ರನು ನಮ್ಮ ಕಣ್ಣುಗಳನ್ನು ತೆರೆಯಲು ಲೋಕಕ್ಕೆ ಬಂದನು. ಸುವಾರ್ತೆಯಲ್ಲಿನ ಆ ಕುರುಡನಂತೆ, ನಾವೂ ಸಹ ಜೀವನದ ಆಳವಾದ ರಹಸ್ಯವನ್ನು ಸಂಪೂರ್ಣವಾಗಿ ಗ್ರಹಿಸಲು ಅಸಮರ್ಥರಾಗಿರುವ ಕಾರಣದಿಂದ “ಆತ್ಮಿಕವಾಗಿ ಕುರುಡರಾಗಿ” ಹುಟ್ಟಿದ್ದೇವೆ.

ಅದರ ಕಾರಣಕ್ಕೇ ದೇವರು ಯೇಸುವಿನಲ್ಲಿ ಮಾನವರಾಗಿ ಅವತರಿಸಿದರು ಎಂದು ಜಗದ್ಗುರುಗಳು ವಿವರಿಸಿದರು. ದೇವರ ಕೃಪೆಯ ಉಸಿರಿನಿಂದ ರೂಪುಗೊಂಡಿರುವ ನಮ್ಮ ಮಾನವತ್ವಕ್ಕೆ ಹೊಸ ಬೆಳಕು ದೊರಕುವಂತೆ ಮಾಡಲು ಅವರು ಬಂದರು. ಆ ಬೆಳಕು ನಮ್ಮನ್ನು , ಇತರರನ್ನು ಮತ್ತು ದೇವರನ್ನು ಸತ್ಯದ ದೃಷ್ಟಿಯಿಂದ ನೋಡಲು ಸಹಾಯ ಮಾಡುತ್ತದೆ.

ಕೆಲವರು ನಂಬಿಕೆಯನ್ನು “ಅಂಧಕಾರದಲ್ಲಿ ಮಾಡುವ ಜಿಗಿತ” ಎಂದು ಹೇಳುತ್ತಾರೆ; ಅಂದರೆ ಕಣ್ಣು ಮುಚ್ಚಿ ಕುರುಡಾಗಿ ನಂಬುವುದು ಎಂದು ಅರ್ಥೈಸುತ್ತಾರೆ. ಆದರೆ ಜಗದ್ಗುರು ಲಿಯೋರವರು ನಿಜವಾದ ನಂಬಿಕೆ ಅಂಥದ್ದಲ್ಲ ಎಂದು ಹೇಳಿದರು. ಕ್ರಿಸ್ತನೊಂದಿಗೆ ನಮ್ಮ ಸಂಪರ್ಕ ಮತ್ತು ಅವರ ಪ್ರೀತಿ ನಮ್ಮ ಕಣ್ಣುಗಳನ್ನು ಹೊಸ ರೀತಿಯಲ್ಲಿ ತೆರೆಯುತ್ತದೆ.

ನಂಬಿಕೆ ಎಂದರೆ ಬುದ್ಧಿಯನ್ನು ತ್ಯಜಿಸುವುದು ಅಥವಾ ಲೋಕದಿಂದ ದೂರವಾಗುವುದು ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಬದಲಾಗಿ, ನಂಬಿಕೆ ನಮಗೆ ಎಲ್ಲವನ್ನೂ ಯೇಸು ನೋಡಿದಂತೆ, ಅವರ ಕಣ್ಣುಗಳಿಂದಲೇ ನೋಡಲು ಸಹಾಯ ಮಾಡುತ್ತದೆ. ಆದ್ದರಿಂದ ಕ್ರೈಸ್ತರು ಇತರರ ನೋವುಗಳನ್ನು ಮತ್ತು ಮಾನವಕುಲವನ್ನು ಗಾಯಗೊಳಿಸುವ ಕಷ್ಟಗಳನ್ನು ಗಮನಿಸುವಂತೆ ತಮ್ಮ ಕಣ್ಣುಗಳನ್ನು ತೆರೆಯಬೇಕು ಎಂದು ಅವರು ಕರೆ ನೀಡಿದರು.

ಕೊನೆಗೆ ಜಗದ್ಗುರುಗಳು ಹೇಳಿದರು: ಹಿಂಸಾಚಾರ ಮತ್ತು ಅನ್ಯಾಯಗಳಿಂದ ತುಂಬಿರುವ ಈ ಜಗತ್ತಿನಲ್ಲಿ ಕ್ರೈಸ್ತರು ಜಾಗರೂಕ, ಕಾಳಜಿಯುತ ಮತ್ತು ಪ್ರವಾದಿ ನಂಬಿಕೆಗೆ ಸಾಕ್ಷಿಯಾಗಬೇಕು. ಶಾಂತಿ, ನ್ಯಾಯ ಮತ್ತು ಸಹೋದರತ್ವಕ್ಕಾಗಿ ನಮ್ಮ ಬದ್ಧತೆಯ ಮೂಲಕ ಸುವಾರ್ತೆಯ ಬೆಳಕನ್ನು ಇತರರಿಗೆ ತಲುಪಿಸಬೇಕು. ಅಂತಿಮವಾಗಿ ಅವರು ಪವಿತ್ರ ಕನ್ಯಾ ಮರಿಯಮ್ಮನವರ ಮಧ್ಯಸ್ಥಿಕೆಯನ್ನು ಬೇಡಿ, ಕ್ರಿಸ್ತನು ನಮ್ಮ ಹೃದಯಗಳನ್ನು ತೆರೆಯಲಿ ಮತ್ತು ಸರಳತೆ ಹಾಗೂ ಧೈರ್ಯದಿಂದ ಅವರಿಗೆ ಸಾಕ್ಷಿಯಾಗಲು ನಮಗೆ ಸಹಾಯ ಮಾಡಲಿ ಎಂದು ಪ್ರಾರ್ಥಿಸಿದರು.

15 ಮಾರ್ಚ್ 2026, 16:10