ಟೆಹ್ರಾನ್ ತೈಲ ಸಂಸ್ಕರಣಾಗಾರದಲ್ಲಿ ನಡೆದ ದಾಳಿಯ ನಂತರ ಸ್ಫೋಟಗಳು ಸಂಭವಿಸಿವೆ ಟೆಹ್ರಾನ್ ತೈಲ ಸಂಸ್ಕರಣಾಗಾರದಲ್ಲಿ ನಡೆದ ದಾಳಿಯ ನಂತರ ಸ್ಫೋಟಗಳು ಸಂಭವಿಸಿವೆ 

ಜಗದ್ಗುರು ಲಿಯೋರವರು: ಇರಾನ್‌ನಲ್ಲಿ ಯುದ್ಧದ ಶಸ್ತ್ರಗಳು ನಿಶ್ಶಬ್ದವಾಗಲಿ.”

ಭಾನುವಾರದ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ, ಸಂತ ಪೇತ್ರರ ಚೌಕದಲ್ಲಿ ಸೇರಿದ್ದ ಸುಮಾರು 15,000 ಯಾತ್ರಿಕರನ್ನು ಉದ್ದೇಶಿಸಿ ಜಗದ್ಗುರು ಲಿಯೋರವರು ಪ್ರಾರ್ಥಿಸಲು ಆಹ್ವಾನಿಸಿದರು “ಬಾಂಬ್‌ಗಳ ಗರ್ಜನೆ ನಿಲ್ಲಲಿ, ಶಸ್ತ್ರಾಸ್ತ್ರಗಳು ಮೌನವಾಗಲಿ, ಮತ್ತು ಜನರ ಧ್ವನಿ ಕೇಳಿಸಬಹುದಾದ ಸಂವಾದಕ್ಕೆ ಒಂದು ಅವಕಾಶ ತೆರೆದಿಡಲ್ಪಡಲಿ ಎಂದರು.

ವ್ಯಾಟಿಕನ್ ವರದಿ

ಭಾನುವಾರ ಸಂತ ಪೇತ್ರರ ಚೌಕದಲ್ಲಿ ತ್ರಿಕಾಲ ಪ್ರಾರ್ಥನೆ ಮುಗಿಸಿದ ನಂತರ, ಜಗದ್ಗುರು XIVನೇ ಲಿಯೋರವರ ಚಿಂತನೆಗಳು ಮಧ್ಯಪ್ರಾಚ್ಯದ ಕಡೆಗೆ ತಿರುಗಿದವು. ಅಲ್ಲಿಂದ ಬರುತ್ತಿರುವ ಸುದ್ದಿಗಳು ತಮಗೆ ಆಳವಾದ ದುಃಖವನ್ನು ಉಂಟುಮಾಡುತ್ತಿವೆ ಎಂದು ಅವರು ಹೇಳಿದರು.

ಸಂತ ಪೇತ್ರರ ಚೌಕದಲ್ಲಿ ಸೇರಿದ್ದ ಸುಮಾರು ಹದಿನೈದು ಸಾವಿರ ಯಾತ್ರಿಕರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳು, ವಿಶೇಷವಾಗಿ ಇರಾನ್ ಮತ್ತು ಆ ಪ್ರದೇಶದಾದ್ಯಂತ ನಡೆಯುತ್ತಿರುವ ಹಿಂಸೆ ಮತ್ತು ನಾಶ ಹಾಗೂ ದ್ವೇಷ ಮತ್ತು ಭಯದ ವ್ಯಾಪಕ ವಾತಾವರಣ ಬಗ್ಗೆ ಉಲ್ಲೇಖಿಸಿದರು.

ಈ ಸಂಘರ್ಷವು ಸಮೀಪದ ದೇಶಗಳಿಗೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು. ವಿಶೇಷವಾಗಿ “ಪ್ರಿಯ ಲೆಬನಾನ್” ಮತ್ತೆ ಅಸ್ಥಿರತೆಯೊಳಗೆ ಜಾರಿಬಿಡುವ ಸಾಧ್ಯತೆಯ ಬಗ್ಗೆ ಅವರು ಚಿಂತಿಸಿದರು.

ಜಗದ್ಗುರು ಲಿಯೋರವರು ಎಲ್ಲರನ್ನು ಪ್ರಾರ್ಥಿಸಲು ಆಹ್ವಾನಿಸಿ, “ಬಾಂಬ್‌ಗಳ ಗರ್ಜನೆ ನಿಲ್ಲಲಿ, ಶಸ್ತ್ರಾಸ್ತ್ರಗಳು ಮೌನವಾಗಲಿ ಮತ್ತು ಜನರ ಧ್ವನಿ ಕೇಳಿಸಬಹುದಾದ ಸಂವಾದಕ್ಕೆ ಅವಕಾಶ ತೆರೆಯಲ್ಪಡಲಿ” ಎಂದು ಪ್ರಾರ್ಥಿಸಿದರು.

ತಮ್ಮ ಈ ಪ್ರಾರ್ಥನೆಯನ್ನು ಅವರು ಶಾಂತಿಯ ರಾಣಿ ಮರಿಯಮ್ಮನಿಗೆ ಒಪ್ಪಿಸುತ್ತಿರುವುದಾಗಿ ಹೇಳಿದರು. ಯುದ್ಧದಿಂದ ನರಳುತ್ತಿರುವವರಿಗಾಗಿ ಮಧ್ಯಸ್ಥಿಕೆ ವಹಿಸಲು ಮತ್ತು ಜನರ ಹೃದಯಗಳನ್ನು ಸಮಾಧಾನ ಮತ್ತು ಭರವಸೆಯ ಮಾರ್ಗಗಳತ್ತ ದಾರಿತೋರಿಸಲು ಅವರು ಮರಿಯಮ್ಮನನ್ನು ವಿನಂತಿಸಿದರು.

ಒಂದು ವಾರದ ಹಿಂದೆ ನಡೆದ ತ್ರಿಕಾಲ ಪ್ರಾರ್ಥನೆಯಲ್ಲಿಯೂ ಜಗದ್ಗುರು ಲಿಯೋರವರು ಮಧ್ಯಪ್ರಾಚ್ಯ ಮತ್ತು ಇರಾನ್‌ನ ಪರಿಸ್ಥಿತಿಯ ಬಗ್ಗೆ ಆಳವಾದ ಚಿಂತೆ ವ್ಯಕ್ತಪಡಿಸಿದ್ದರು. ಶಾಂತಿ ಮತ್ತು ಸ್ಥಿರತೆ ಪರಸ್ಪರ ಬೆದರಿಕೆಗಳಿಂದಲೂ ಅಥವಾ ಶಸ್ತ್ರಾಸ್ತ್ರಗಳಿಂದಲೂ ನಿರ್ಮಾಣವಾಗುವುದಿಲ್ಲ ಬದಲಾಗಿ ವಿವೇಕಪೂರ್ಣ, ನಿಜವಾದ ಮತ್ತು ಹೊಣೆಗಾರಿಕೆಯಿಂದ ನಡೆಯುವ ಸಂವಾದದ ಮೂಲಕವೇ ಸಾಧ್ಯ ಎಂದು ಅವರು ಹೇಳಿದರು.

ಹಿಂಸೆ ನಿಯಂತ್ರಣ ತಪ್ಪಿದರೆ ಭಾರೀ ದುರಂತ ಸಂಭವಿಸಬಹುದು ಎಂದು ಜಗದ್ಗುರುಗಳು ಎಚ್ಚರಿಸಿದರು. ಆದ್ದರಿಂದ ಸಂಘರ್ಷದಲ್ಲಿರುವ ಎಲ್ಲ ಪಕ್ಷಗಳಿಗೂ ಹಿಂಸೆಯ ಚಕ್ರವನ್ನು ನಿಲ್ಲಿಸುವ ನೈತಿಕ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವಂತೆ ಅವರು ಮನವಿ ಮಾಡಿದರು. ರಾಷ್ಟ್ರಗಳು ಮತ್ತೆ ಸಂವಾದದ ಮಾರ್ಗಕ್ಕೆ ಮರಳಿ, ನ್ಯಾಯದ ಆಧಾರದಲ್ಲಿ ಶಾಂತಿಯುತ ಸಹವಾಸವನ್ನು ಬಯಸುವ ಜನರ ಹಿತಕ್ಕಾಗಿ ಕಾರ್ಯನಿರ್ವಹಿಸಲಿ ಎಂದು ಅವರು ಪ್ರಾರ್ಥಿಸಿದರು.ರಾಜತಾಂತ್ರಿಕತೆ ತನ್ನ ಪಾತ್ರವನ್ನು ಮತ್ತೆ ಪಡೆಯಲಿ, ಮತ್ತು ಜನರ ಹಿತವನ್ನು ಉತ್ತೇಜಿಸಲಿ, ಎಂದು ಜಗದ್ಗುರುಗಳು ಹೇಳಿದರು. “ನಾವು ಶಾಂತಿಯಿಗಾಗಿ ನಿರಂತರವಾಗಿ ಪ್ರಾರ್ಥಿಸೋಣ.” ಎಂದರು

 

 

08 ಮಾರ್ಚ್ 2026, 17:19