ಜಗದ್ಗರುಗಳು ಹೇಳುತ್ತಾರೆ: ಮಹಿಳೆಯರ ಮೇಲಿನ ಹಿಂಸೆಯನ್ನು ಲಘುವಾಗಿ ಕಾಣಬೇಡಿ ಭಯವಿಲ್ಲದೆ ದೂರ ಮಾಡಿ.
ವ್ಯಾಟಿಕನ್ ವರದಿ
ಮಾರ್ಚ್ 8ರ ಅಂತರರಾಷ್ಟ್ರೀಯ ಮಹಿಳಾ ದಿನದಂದು ಪ್ರಕಟವಾದ ಪಿಯಾಜ್ಜಾ ಸಾನ್ ಪಿಯೇತ್ರೊ ಮಾಸಪತ್ರಿಕೆಯಲ್ಲಿ ಜಗದ್ಗುರು XIVನೇ ಲಿಯೋರವರು ಓದುಗರೊಬ್ಬರ ಪ್ರಶ್ನೆಗೆ ಉತ್ತರ ನೀಡಿದರು. ರೋಮ್‌ನ ಜಿಯೋವನ್ನಾ ಎಂಬ ಓದುಗ ಪತ್ರ ಬರೆದು, ಅನೇಕ ಮಹಿಳೆಯರು ಎದುರಿಸುತ್ತಿರುವ ದುಃಖದ ಬಗ್ಗೆ “ಕಣ್ಣೀರಿನ ಕಣ್ಣುಗಳಿಂದ” ಮಾತನಾಡಿದ್ದಾರೆ. ಕೆಲವೊಮ್ಮೆ ಮಹಿಳೆಯರು ಪ್ರೀತಿಸಿ ಮದುವೆಯಾಗುವುದು ಅಥವಾ ಕುಟುಂಬವನ್ನು ನಿರ್ಮಿಸುವುದು ಅವರಿಗಾಗಿ ಒಂದು ಬಲೆಯಾಗಿ ಮಾರ್ಪಡುತ್ತದೆ ಎಂದು ಅವರು ಹೇಳಿ, ಮಹಿಳೆಯರ ಮೇಲಿನ ಹೆಚ್ಚುತ್ತಿರುವ ಹಿಂಸೆಯ ಬಗ್ಗೆ ಪ್ರಶ್ನೆ ಎತ್ತಿದರು.
ಜಗದ್ಗುರು ಲಿಯೋರವರು ತಮ್ಮ ಉತ್ತರದಲ್ಲಿ ಈ ವಿಷಯವು ತಮಗೆ ತುಂಬಾ ದುಃಖವನ್ನುಂಟುಮಾಡುತ್ತದೆ ಎಂದು ಹೇಳಿದರು. ವಿಶೇಷವಾಗಿ ಮಹಿಳೆಯರ ಮೇಲಿನ ಹಿಂಸೆ ಅತ್ಯಂತ ಗಂಭೀರ ಸಮಸ್ಯೆಯಾಗಿದೆ ಎಂದು ಅವರು ಒತ್ತಿ ಹೇಳಿದರು. ಅವರು ಸಂತ IIನೇ ಜಾನ್ ಪಾಲ್ ರವರು ಹೇಳಿದ “ಸ್ತ್ರೀ ಪ್ರತಿಭೆ” ಎಂಬ ಕಲ್ಪನೆಯನ್ನು ಉಲ್ಲೇಖಿಸಿ, ಹಿಂಸಾತ್ಮಕ ಚಿಂತನೆಗಳಿಂದ ತುಂಬಿದ ಜಗತ್ತಿನಲ್ಲಿ ಮಹಿಳೆಯರ ಪಾತ್ರವನ್ನು ಇನ್ನಷ್ಟು ಬೆಂಬಲಿಸಬೇಕೆಂದು ಹೇಳಿದರು.
ಜಗದ್ಗರುಗಳ ಮಾತಿನ ಪ್ರಕಾರ, ಮಹಿಳೆಯರು ಕಾಳಜಿ ಮತ್ತು ಸಹೋದರತ್ವದ ಸಂಸ್ಕೃತಿಯನ್ನು ನಿರ್ಮಿಸುವ ಪ್ರಮುಖ ವ್ಯಕ್ತಿಗಳು. ಮಾನವಕುಲದ ಭವಿಷ್ಯ ಮತ್ತು ಗೌರವಕ್ಕಾಗಿ ಅವರು ಮಹತ್ವದ ಪಾತ್ರ ವಹಿಸುತ್ತಾರೆ. ಆದರೆ ಇದೇ ಕಾರಣದಿಂದ ಕೆಲವೊಮ್ಮೆ ಅವರು ಹಿಂಸೆಯ ಗುರಿಯಾಗುತ್ತಾರೆ, ಏಕೆಂದರೆ ಅವರು ನಂಬಿಕೆ, ಸ್ವಾತಂತ್ರ್ಯ, ಸಮಾನತೆ, ಭರವಸೆ, ಏಕತೆ ಮತ್ತು ನ್ಯಾಯ ಎಂಬ ಮೌಲ್ಯಗಳನ್ನು ಸಮಾಜಕ್ಕೆ ನೆನಪಿಸುತ್ತಾರೆ.
ಈ ಮೌಲ್ಯಗಳಿಗೆ ವಿರುದ್ಧವಾಗಿ ಸ್ವಾರ್ಥ, ಪೂರ್ವಾಗ್ರಹ, ಭೇದಭಾವ ಮತ್ತು ಇತರರ ಮೇಲೆ ಪ್ರಾಬಲ್ಯ ಸಾಧಿಸುವ ಮನೋಭಾವಗಳು ಸಮಾಜದಲ್ಲಿ ಹೆಚ್ಚುತ್ತಿರುವುದನ್ನು ಜಗದ್ಗುರುಗಳು ಖಂಡಿಸಿದರು. ಯಾವುದೇ ರೀತಿಯ ಹಿಂಸೆಯನ್ನು ಕಡಿಮೆ ಎಂದು ಕಾಣಬಾರದು ಮತ್ತು ಅದರ ಬಗ್ಗೆ ದೂರು ನೀಡಲು ಜನರು ಹೆದರಬಾರದು ಎಂದು ಅವರು ಹೇಳಿದರು. ಹಿಂಸೆ ನಾಗರಿಕತೆಯನ್ನೂ ಅರಣ್ಯತೆಯನ್ನೂ ವಿಭಜಿಸುವ ಗಡಿ ರೇಖೆಯಾಗಿದೆ ಎಂದು ಅವರು ಒತ್ತಿ ಹೇಳಿದರು.
ಯುವಜನರಲ್ಲಿ ಗೌರವದ ಸಂಸ್ಕೃತಿಯನ್ನು ಬೆಳೆಸಲು ಶಿಕ್ಷಣ ಬಹಳ ಮುಖ್ಯ ಎಂದು ಜಗದ್ಗುರುಗಳು ಹೇಳಿದರು. ಶಾಲೆಗಳು ಮತ್ತು ಧರ್ಮಸಭೆಗಳು ಒಟ್ಟಾಗಿ ಕೆಲಸ ಮಾಡಿದರೆ ಹೊಸ ಪೀಳಿಗೆಗೆ ಗೌರವ, ಪ್ರೀತಿ ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನು ಕಲಿಸಬಹುದು ಎಂದು ಅವರು ಒತ್ತಿ ಹೇಳಿದರು. ಮಹಿಳೆಯನ್ನು ಒಬ್ಬ ವ್ಯಕ್ತಿಯಾಗಿ ಗೌರವಿಸುವ ಮನೋಭಾವವನ್ನು ಸಮಾಜದಲ್ಲಿ ಬೆಳೆಸಬೇಕು ಎಂದು ಅವರು ಹೇಳಿದರು.
ಕೊನೆಗೆ, ಕುಟುಂಬಗಳು, ಶಾಲೆಗಳು, ಧರ್ಮ ಸಭೆಗಳು ಸಂಘಟನೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳು ಒಂದಾಗಿ ಮಹಿಳೆಯರ ಮೇಲಿನ ಹಿಂಸೆಯನ್ನು ತಡೆಯಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಜಗದ್ಗುರುಗಳು ಕರೆ ನೀಡಿದರು. ಯುವಜನರಿಗೆ ಸರಿಯಾದ ಶಿಕ್ಷಣ ನೀಡುವ ಮೂಲಕ ಹಿಂಸೆಯನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಬೇಕು ಮತ್ತು ಎಲ್ಲರೂ ಶಾಂತಿಯ ಜನರಾಗಬೇಕು ಎಂದು ಅವರು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.
