ಸಾಮಾನ್ಯ ಸಭೆಯಲ್ಲಿ ಜಗದ್ಗರುಗಳು: ಸುವಾರ್ತೆಯನ್ನು ಘೋಷಿಸಲು ಧರ್ಮ ಸಭೆಯ ವಗ೯ವ್ಯವಸ್ಥೆ ಕ್ರಿಸ್ತನಿಂದ ಉದ್ಭವಿಸಿದೆ
ವ್ಯಾಟಿಕನ್ ವರದಿ
ಬುಧವಾರದ ಸಾಮಾನ್ಯ ಸಭೆಯಲ್ಲಿ ಜಗದ್ಗುರು XIVನೇ ಲಿಯೋರವರು ಲುಮೆನ್ ಜೆಂಟಿಯಮ್ ಎಂಬ ಧಾರ್ಮಿಕ ಸಂವಿಧಾನದ ಮೂರನೇ ಅಧ್ಯಾಯದ ಕುರಿತು ಚಿಂತನೆ ನಡೆಸಿದರು. ತಮ್ಮ ಧಾರ್ಮಿಕ ಶಿಕ್ಷಣ ಯೋಜನೆಯಲ್ಲಿ, ದ್ವಿತೀಯ ವ್ಯಾಟಿಕನ್ ಮಹಾಸಭೆಯ ಈ ದಸ್ತಾವೇಜು ಮೊದಲಿಗೆ ಧರ್ಮ ಸಭೆಯನ್ನು ದೇವರ ಜನರಾಗಿ ವಿವರಿಸಿ, ನಂತರ ಅದರ ವಗ೯ವ್ಯವಸ್ಥೆಯ ರೂಪವನ್ನು ವಿವರಿಸುತ್ತದೆ ಎಂದು ಅವರು ಹೇಳಿದರು.
ಧರ್ಮ ಸಭೆಯ ವಗ೯ವ್ಯವಸ್ಥೆ ದೇವರ ಜನರಿಂದ ನಂತರ ಬಂದ ಅಂಶವಲ್ಲ, ಆದರೆ ಧರ್ಮ ಸಭೆಯು ಹುಟ್ಟಿನಲ್ಲೇ ಜೊತೆಯಾಗಿ ಬಂದ ಮೂಲಭೂತ ಅಂಶವಾಗಿದೆ ಎಂದು ಜಗದ್ಗುರುಗಳು ವಿವರಿಸಿದರು. ಯೇಸುವಿನ ಮೊದಲ ಶಿಷ್ಯರಾದ ಪ್ರೇಷಿತರು ಕ್ರಿಸ್ತನ ಪಾಸ್ಕ ರಹಸ್ಯದ ಮೂಲಕ ವಿಮೋಚನೆ ಪಡೆದ ಸಮುದಾಯವಾಗಿದ್ದು, ಅವರನ್ನು ಕ್ರಿಸ್ತನೇ ಜಗತ್ತಿನ ರಕ್ಷಣೆಗೆ ಸಾಧನವಾಗಿ ನೇಮಿಸಿದ್ದಾನೆ ಎಂದು ಹೇಳಿದರು.
“ವಗ೯ವ್ಯವಸ್ಥೆಯ ರಚನೆ ಮಾನವನ ಸೃಷ್ಟಿಯಲ್ಲ, ಅಥವಾ ಧರ್ಮ ಸಭೆಯ ಒಳಗಿನ ಸಾಮಾಜಿಕ ವ್ಯವಸ್ಥೆಗೆ ಮಾತ್ರ ಸಂಬಂಧಪಟ್ಟದ್ದಲ್ಲ ಅದು ದೇವರಿಂದ ಸ್ಥಾಪಿತವಾದ ವ್ಯವಸ್ಥೆಯಾಗಿದ್ದು, ಕಾಲಾಂತ್ಯದವರೆಗೆ ಪ್ರೇಷಿತರಿಗೆ ನೀಡಲಾದ ಗುರಿಯನ್ನು ಮುಂದುವರಿಸಲು ಉದ್ದೇಶಿತವಾಗಿದೆ ಎಂದು ಜಗದ್ಗುರುಗಳು ಹೇಳಿದರು.
ಕಥೋಲಿಕ ಧರ್ಮ ಸಭೆಯ ಏಕತೆ, ಗುರಿ ಮತ್ತು ಪವಿತ್ರೀಕರಣದ ಸೇವೆಗೆ ಕೆಲಸ ಮಾಡುವ ವಗ೯ವ್ಯವಸ್ಥೆಯ ರಚನೆಯನ್ನು ಹೊಂದಿದೆ ಎಂದು ಅವರು ನೆನಪಿಸಿದರು. ಪ್ರೇಷಿತರು ಗುರುವಿನ ರಕ್ಷಣಾತ್ಮಕ ಉಪದೇಶವನ್ನು ನಿಷ್ಠೆಯಿಂದ ಕಾಪಾಡಲು ಕರೆಯಲ್ಪಟ್ಟಿರುವುದರಿಂದ, ಅವರು ತಮ್ಮ ಸೇವೆಯನ್ನು ತಮ್ಮ ಉತ್ತರಾಧಿಕಾರಿಗಳಿಗೆ ಹಸ್ತಾಂತರಿಸುತ್ತಾರೆ ಎಂದು ಹೇಳಿದರು.
ದ್ವಿತೀಯ ವ್ಯಾಟಿಕನ್ ಮಹಾಸಭೆಯು ಧರ್ಮ ಸಭೆಯ ಹೊರಗಿನ ರೂಪವನ್ನಷ್ಟೇ ಅಲ್ಲ, ಅದರ ಮೂಲಭೂತ ರಚನೆಯನ್ನು ವಿವರಿಸಲು ಪ್ರಯತ್ನಿಸಿತು ಎಂದು ಜಗದ್ಗುರುಗಳು ಹೇಳಿದರು. ಲುಮೆನ್ ಜೆಂಟಿಯಮ್ ಸೇವಕತ್ವ ಅಥವಾ ವಗ೯ ವ್ಯವಸ್ಥೆಯ ಯಾಜಕತ್ವವನ್ನು ವಿವರಿಸುತ್ತದೆ, ಇದು ವಿಶ್ವಾಸಿಗಳ ಸಾಮಾನ್ಯ ಯಾಜಕತ್ವದಿಂದ ಸ್ವಭಾವದಲ್ಲಿಯೂ ಮತ್ತು ಮಟ್ಟದಲ್ಲಿಯೂ ಭಿನ್ನವಾಗಿದೆ.
ದಿಕ್ಷಾಸ್ನಾನ ಪಡೆದ ಎಲ್ಲಾ ಕ್ರೈಸ್ತರು ಕ್ರಿಸ್ತನ ಯಾಜಕತ್ವದಲ್ಲಿ ಪಾಲ್ಗೊಳ್ಳುತ್ತಿದ್ದರೂ, ಸೇವಕ ಯಾಜಕತ್ವಕ್ಕೆ ನೇಮಕಗೊಂಡವರು ಪವಿತ್ರ ಅಧಿಕಾರವನ್ನು ಹೊಂದಿದ್ದಾರೆ, ಇದು ಧರ್ಮ ಸಭೆಯ ಸೇವೆಗೆ ಬಳಸಲ್ಪಡುತ್ತದೆ ಎಂದು ಜಗದ್ಗುರುಗಳು ವಿವರಿಸಿದರು. ಬಿಷಪ್‌ಗಳು, ಗುರುಗಳು ಮತ್ತು ಉಪ ಯಾಜಕರು ದೇವರ ಜನರ ಸೇವೆಗೆ ವಿಭಿನ್ನ ಕರ್ತವ್ಯಗಳನ್ನು ಹೊಂದಿದ್ದಾರೆ, ಎಲ್ಲರೂ ರಕ್ಷಣೆಯನ್ನು ಪಡೆಯಲು ಸಹಾಯವಾಗುತ್ತದೆ.
ಧರ್ಮ ಸಭೆಯ ವಗ೯ವ್ಯವಸ್ಥೆ ಆಂತರಿಕ ವಾಸ್ತವಿಕತೆಯೂ ಆಗಿದ್ದು,ಪ್ರೇಷಿತರ ಗುರಿ ಬಾಹ್ಯ ವ್ಯಕ್ತೀಕರಣವೂ ಆಗಿದೆ ಎಂದು ಜಗದ್ಗುರುಗಳು ಹೇಳಿದರು. ಜಗದ್ಗುರು VIನೇ ಪೌಲ್ ರವರ ಮಾತುಗಳನ್ನು ಉಲ್ಲೇಖಿಸಿ, ವಗ೯ವ್ಯವಸ್ಥೆಯು ಕ್ರಿಸ್ತನ ಪ್ರೀತಿಯಿಂದ ಹುಟ್ಟಿದ್ದು, ನಂಬಿಕೆಯ ಸಂಪತ್ತನ್ನು ಶುದ್ಧವಾಗಿ ಮತ್ತು ಫಲಪ್ರದವಾಗಿ ಹಂಚಲು ಉದ್ದೇಶಿತವಾಗಿದೆ ಎಂದು ಹೇಳಿದರು.
ಕೊನೆಗೆ, ಜಗದ್ಗುರು XIVನೇ ಲಿಯೋರವರು ದೇವರು ತನ್ನ ಧರ್ಮ ಸಭೆಗೆ ಸುವಾರ್ತೆಯ ಪ್ರೀತಿಯಿಂದ ತುಂಬಿರುವ ಸೇವಕರನ್ನು ಕಳುಹಿಸಲಿ ಮತ್ತು ಅವರು ಜಗತ್ತಿನ ಎಲ್ಲ ಭಾಗಗಳಲ್ಲಿ ಧೈರ್ಯಶಾಲಿ ಮಿಷನರಿಗಳಾಗಲಿ ಎಂದು ಪ್ರಾರ್ಥಿಸಿದರು.
