ಜಗದ್ಗುರು XIV ನೇ ಲಿಯೋರವರು ಆಫ್ರಿಕಾ, ಸ್ಪೇನ್ ಮತ್ತು ಮೊನಾಕೊಗಳಿಗೆ ಪ್ರೇಷಿತರ ಪ್ರವಾಸಗಳನ್ನು ಕೈಗೊಳ್ಳಲಿದ್ದಾರೆ
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು 2026ರ ಮೊದಲಾರ್ಧದಲ್ಲಿ ಆಫ್ರಿಕಾ ಹಾಗೂ ಯುರೋಪಿನ ಕಡೆ ಮೂರು ಮಹತ್ವದ ಪ್ರೇಷಿತರ ಪ್ರವಾಸಗಳನ್ನು ಕೈಗೊಳ್ಳಲಿದ್ದಾರೆ ಎಂದು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಪ್ರಕಟಿಸಿದೆ. ಮಾರ್ಚ್ 28ರಂದು ಮೊನಾಕೊ ಸಂಸ್ಥಾನಕ್ಕೆ ಒಂದು ದಿನದ ಭೇಟಿಯಿಂದ ಈ ಪ್ರವಾಸಗಳು ಆರಂಭವಾಗಲಿವೆ. ಬಳಿಕ ಏಪ್ರಿಲ್ 13ರಿಂದ 23ರವರೆಗೆ ಆಫ್ರಿಕಾ ಪ್ರವಾಸ ಮತ್ತು ಜೂನ್ 6ರಿಂದ 12ರವರೆಗೆ ಸ್ಪೇನ್ ಪ್ರವಾಸ ನಡೆಯಲಿದೆ.
ಆಫ್ರಿಕಾ ಪ್ರವಾಸವು ಅತ್ಯಂತ ದೀರ್ಘವಾಗಿದ್ದು, ಅಲ್ಜೀರಿಯಾ, ಕ್ಯಾಮರೂನ್, ಅಂಗೋಲಾ ಮತ್ತು ಈಕ್ವಟೋರಿಯಲ್ ಗಿನಿಯಾ ದೇಶಗಳನ್ನು ಒಳಗೊಂಡಿರುತ್ತದೆ. ಇದು ಸಂತ ಅಗಸ್ಟೀನ್ ರವರ ಹೆಜ್ಜೆಗುರುತುಗಳನ್ನು ಅನುಸರಿಸುವ ಯಾತ್ರೆಯಾಗಿ ಕಾಣುತ್ತದೆ. ವಿಶೇಷವಾಗಿ ಕ್ಯಾಮರೂನ್‌ನ ಆಂಗ್ಲಭಾಷಾ ಪ್ರದೇಶದಲ್ಲಿ ನಡೆಯುತ್ತಿರುವ ಗೃಹಯುದ್ಧದ ಹಿನ್ನೆಲೆಯಲ್ಲಿ ಶಾಂತಿಯ ಸಂದೇಶವನ್ನು ಒತ್ತಿ ಹೇಳುವ ಉದ್ದೇಶವೂ ಇದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಡವರ ಮತ್ತು ಅವರ ಸೇವಕರ ಕಡೆ ವಿಶೇಷ ಗಮನ ಹರಿಸಲಾಗುವುದು.
ಮಾರ್ಚ್ ಅಂತ್ಯದಲ್ಲಿ ನಡೆಯುವ ಮೊನಾಕೊ ಭೇಟಿಯು ಈ ವರ್ಷ ಜಗದ್ಗುರುಗಳ ಮೊದಲ ವಿದೇಶಿ ಪ್ರವಾಸವಾಗಲಿದೆ. ಕಥೋಲಿಕ ಧರ್ಮವು ರಾಜ್ಯಧರ್ಮವಾಗಿರುವ ಈ ಸಣ್ಣ ಯುರೋಪಿಯನ್ ರಾಷ್ಟ್ರದಲ್ಲಿ ನಾಗರಿಕ ಸಂಸ್ಥೆಗಳು ಮತ್ತು ಧರ್ಮ ಸಭೆ ನಡುವೆ ಸಂವಾದವು ಮಹತ್ವದ್ದಾಗಿದೆ. ಆಧುನಿಕ ಯುಗದಲ್ಲಿ ಮೊಟ್ಟಮೊದಲು ಜಗದ್ಗುರುಗಳು ಭೇಟಿ ನೀಡುತ್ತಿರುವುದು ವಿಶೇಷವೆನಿಸುತ್ತದೆ.
ಜೂನ್ ತಿಂಗಳಲ್ಲಿ ಜಗದ್ಗುರುಗಳು ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾ ನಗರಗಳಿಗೆ ಭೇಟಿ ನೀಡಲಿದ್ದಾರೆ. ಬಾರ್ಸಿಲೋನಾದಲ್ಲಿ ಅವರು ಸಗ್ರಾಡಾ ಫ್ಯಾಮಿಲಿಯಾ ಬಸಿಲಿಕಾದ ಹೊಸ ಹಾಗೂ ಅತಿ ಎತ್ತರದ ಗೋಪುರವನ್ನು ಉದ್ಘಾಟಿಸಲಿದ್ದಾರೆ. ಈ ಭೇಟಿ ಪ್ರಸಿದ್ಧ ವಾಸ್ತುಶಿಲ್ಪಿ ಆಂಟೋನಿ ಗೌಡಿ ರವರ ನಿಧನದ ಶತಮಾನೋತ್ಸವದ ಸಂದರ್ಭದಲ್ಲಿ ನಡೆಯಲಿದೆ.
ಇದೇ ಪ್ರವಾಸದ ಭಾಗವಾಗಿ ಜಗದ್ಗುರುಗಳು ಕ್ಯಾನರಿ ದ್ವೀಪಸಮೂಹಕ್ಕೂ ಭೇಟಿ ನೀಡಲಿದ್ದಾರೆ. ಆಫ್ರಿಕಾದಿಂದ ಯುರೋಪಿನತ್ತ ನಡೆಯುವ ಪ್ರಮುಖ ವಲಸೆ ಮಾರ್ಗವಾಗಿರುವ ಈ ಪ್ರದೇಶದಲ್ಲಿ ಮಾನವೀಯ ಸಮಸ್ಯೆಗಳಿಗೂ ಅವರು ಗಮನಹರಿಸಲಿದ್ದಾರೆ. ಈ ಮೂರು ಪ್ರವಾಸಗಳ ಮೂಲಕ ಜಗದ್ಗುರುಗಳು ವಿವಿಧ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶಗಳಲ್ಲಿ ಜನರನ್ನು ಭೇಟಿಯಾಗಿ, ಶಾಂತಿ ಮತ್ತು ಸಹೋದರತ್ವದ ಸಂದೇಶವನ್ನು ಬಲಪಡಿಸಲಿದ್ದಾರೆ.
