ಯೂರೋಪ್ ಮತ್ತು ಆಫ್ರಿಕಾ ದೇಶಗಳು ಜಗದ್ಗುರುಗಳ ಪ್ರಯಾಣಗಳ ಘೋಷಣೆಗೆ ಪ್ರತಿಕ್ರಿಯೆ ನೀಡಿವೆ.
ವ್ಯಾಟಿಕನ್ ವರದಿ
ಜಗದ್ಗರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಫೆಬ್ರವರಿ 25ರಂದು ಅಧಿಕೃತವಾಗಿ ಘೋಷಿಸಿದಂತೆ, ಜಗದ್ಗುರು XIVನೇ ಲಿಯೋರವರು ಮುಂದಿನ ತಿಂಗಳುಗಳಲ್ಲಿ ಹಲವು ದೇಶಗಳಿಗೆ ಪ್ರೇಷಿತರ ಪ್ರವಾಸಗಳನ್ನು ಕೈಗೊಳ್ಳಲಿದ್ದಾರೆ. ಮಾರ್ಚ್ 28ರಂದು ಅವರು ಮೊದಲು ಮೋನಾಕೋಗೆ ಭೇಟಿ ನೀಡಲಿದ್ದು, ಏಪ್ರಿಲ್ 13ರಿಂದ 23ರವರೆಗೆ ಅಲ್ಜೀರಿಯಾ, ಕ್ಯಾಮರೂನ್, ಆಂಗೋಲಾ ಮತ್ತು ಇಕ್ವಟೋರಿಯಲ್ ಗಿನಿಯಾ ದೇಶಗಳಿಗೆ ಹತ್ತು ದಿನಗಳ ಪ್ರವಾಸ ಮಾಡಲಿದ್ದಾರೆ. ನಂತರ ಜೂನ್ 6ರಿಂದ 12ರವರೆಗೆ ಸ್ಪೇನ್ ದೇಶಕ್ಕೆ ಭೇಟಿ ನೀಡಿ ಮ್ಯಾಡ್ರಿಡ್, ಬಾರ್ಸಿಲೋನಾ, ಕ್ಯಾನರಿ ದ್ವೀಪಗಳು, ಟೆನೆರಿಫೆ ಮತ್ತು ಗ್ರಾನ್ ಕನಾರಿಯಾ ಪ್ರದೇಶಗಳನ್ನು ಭೇಟಿ ಮಾಡುವರು.
ಮೋನಾಕೋದಲ್ಲಿ ಈ ಭೇಟಿ ಐತಿಹಾಸಿಕ ಕ್ಷಣವೆಂದು ಪರಿಗಣಿಸಲಾಗುತ್ತಿದೆ, ಏಕೆಂದರೆ ಆಡಳಿತದಲ್ಲಿರುವ ಜಗದ್ಗುರುಗಳು ಒಬ್ಬರು ಮೊದಲ ಬಾರಿಗೆ ಆ ನಗರ-ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಮೋನಾಕೋ ಮಹಾಧರ್ಮಪ್ರಾಂತ್ಯ ಮತ್ತು ಅರಮನೆ ಪ್ರಕಟಿಸಿದ ಹೇಳಿಕೆಗಳಲ್ಲಿ, ಈ ಭೇಟಿ ಶತಮಾನಗಳ ಹಳೆಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂಕೇತವೆಂದು ಹೇಳಲಾಗಿದೆ. ಕಥೋಲಿಕ ಧರ್ಮ ರಾಜ್ಯಧರ್ಮವಾಗಿರುವ ಕೆಲವೇ ದೇಶಗಳಲ್ಲಿ ಮೋನಾಕೋ ಒಂದು ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ.
ಅಲ್ಜೀರಿಯಾದ ಬಿಷಪ್‌ಗಳು ಜಗದ್ಗುರು XIVನೇ ಲಿಯೋರವರವರನ್ನು“ಶಾಂತಿಯ ಪ್ರೇಷಿತ” ಎಂದು ವರ್ಣಿಸಿ ಅಪಾರ ಸಂತೋಷ ವ್ಯಕ್ತಪಡಿಸಿದ್ದಾರೆ. ಸಂತ ಆಗಸ್ಟಿನ್ ರವರ ಹೆಜ್ಜೆ ಗುರುತುಗಳನ್ನು ಅನುಸರಿಸುವ ಈ ಪ್ರವಾಸವು ಕ್ರೈಸ್ತರು ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಸಂವಾದ ಮತ್ತು ಸೇತುವೆ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ. ಶಾಂತಿ, ಸಂವಾದ ಮತ್ತು ಸಹಬಾಳ್ವೆ ಈ ಭೇಟಿಯ ಮುಖ್ಯ ಸಂದೇಶಗಳಾಗಿವೆ ಎಂದು ಅವರು ಒತ್ತಿಹೇಳಿದ್ದಾರೆ.
ರಾಜಕೀಯ ಮತ್ತು ಭದ್ರತಾ ಸವಾಲುಗಳನ್ನು ಎದುರಿಸುತ್ತಿರುವ ಕ್ಯಾಮರೂನ್‌ನಲ್ಲಿ, ಈ ಭೇಟಿ “ಭರವಸೆಯ ಸಂಕೇತ” ಎಂದು ಪರಿಗಣಿಸಲಾಗಿದೆ. ದೇಶದ ಮೂಲಸೌಕರ್ಯವನ್ನು ಸುಧಾರಿಸುವ ಕಾರ್ಯಗಳು ಈಗಾಗಲೇ ಪ್ರಾರಂಭವಾಗಿದ್ದು, ಜಗದ್ಗುರುಗಳ ಭೇಟಿ ವಿಶ್ವಾಸವನ್ನು ಬಲಪಡಿಸಲು ಮತ್ತು ಮಾನವೀಯ ಸಂಕಷ್ಟಕ್ಕೆ ಸ್ಪಂದಿಸಲು ನೆರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಸ್ಪೇನ್ ದೇಶದಲ್ಲಿಯೂ ಅಪಾರ ಹರ್ಷ ಮತ್ತು ಕೃತಜ್ಞತೆಯ ವಾತಾವರಣ ಕಂಡುಬರುತ್ತಿದೆ. ಸುಮಾರು 14 ವರ್ಷಗಳ ನಂತರ ಜಗದ್ಗುರುಗಳು ಸ್ಪೇನ್‌ಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ಮ್ಯಾಡ್ರಿಡ್ ಮಹಾಧರ್ಮಪ್ರಾಂತ್ಯವು ವ್ಯಾಪಕ ಸಿದ್ಧತೆಗಳನ್ನು ಆರಂಭಿಸಿದೆ. ಈ ಭೇಟಿ ವಿಶ್ವಾಸ, ಏಕತೆ ಮತ್ತು ಮಿಷನರಿ ನವೀಕರಣಕ್ಕೆ ದಾರಿಯಾಗಲೆಂದು ಧರ್ಮ ಸಭೆಯ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದು, ಎಲ್ಲ ವಿಶ್ವಾಸಿಗಳಿಗೆ ಆಧ್ಯಾತ್ಮಿಕ ಸಿದ್ಧತೆಗೆ ಆಹ್ವಾನ ನೀಡಿದ್ದಾರೆ.
