ಕೈವ್‌ನಲ್ಲಿರುವ ತುರ್ತು ಸೇವೆಗಳ ಟೆಂಟ್‌ನ ಹಿಂದೆ ಒಬ್ಬ ವ್ಯಕ್ತಿ ನಡೆದುಕೊಂಡು ಹೋಗುತ್ತಿದ್ದಾನೆ ಕೈವ್‌ನಲ್ಲಿರುವ ತುರ್ತು ಸೇವೆಗಳ ಟೆಂಟ್‌ನ ಹಿಂದೆ ಒಬ್ಬ ವ್ಯಕ್ತಿ ನಡೆದುಕೊಂಡು ಹೋಗುತ್ತಿದ್ದಾನೆ  (AFP or licensors)

ಜಗದ್ಗುರುಗಳು ಉಕ್ರೇನ್‌ಗೆ ಔಷಧಿಗಳು ಮತ್ತು ಹೀಟರ್‌ಗಳನ್ನು ಕಳುಹಿಸಿದರು.

ಯುದ್ಧದ ನಾಲ್ಕನೇ ಕ್ರೂರ ಚಳಿಕಾಲವನ್ನು ಎದುರಿಸುತ್ತಿರುವ ಉಕ್ರೇನ್‌ನ ಈ ಸಂಕಷ್ಟದ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಸ್ಥಳೀಯ ಬಿಷಪ್‌ಗಳ ತುರ್ತು ಮನವಿಗೆ ಸ್ಪಂದಿಸಿ, ಅತ್ಯಂತ ಅಗತ್ಯವಿರುವವರಿಗೆ ಅತ್ಯಾವಶ್ಯಕ ವೈದ್ಯಕೀಯ ಸಾಮಗ್ರಿಗಳು ಮತ್ತು ವಿದ್ಯುತ್ ಹೀಟರ್‌ಗಳಿಂದ ತುಂಬಿದ ಒಂದು ಲಾರಿಯನ್ನು ಕಳುಹಿಸಿದ್ದಾರೆ.

ವ್ಯಾಟಿಕನ್ ವರದಿ

ಯುದ್ಧವು ನಾಶದ ಗುರುತುಗಳನ್ನು ಬಿಟ್ಟಿದೆ ಕುಟುಂಬಗಳು ಚೂರುಚೂರಾಗಿವೆ, ನಾಗರಿಕರು ಪ್ರಾಣ ಉಳಿಸಿಕೊಳ್ಳಲು ಓಡಿಹೋಗಿದ್ದಾರೆ, ಮುಂಚೂಣಿಗೆ ಕಳುಹಿಸಲಾದ ಪತಿಗಳಿಂದ ಮಹಿಳೆಯರು ಮತ್ತು ಮಕ್ಕಳು ಬೇರ್ಪಟ್ಟಿದ್ದಾರೆ, ಮನೆಗಳು ಅವಶೇಷಗಳಾಗಿ ಮಾರ್ಪಟ್ಟಿವೆ. ಆದರೂ ಅತಿ ಕತ್ತಲೆಯ ಕ್ಷಣಗಳಲ್ಲಿಯೂ ದಯೆಯೂ ಧೈರ್ಯವೂ ಕಂಗೊಳಿಸುತ್ತಿವೆ.

ಉಕ್ರೇನ್‌ನ ಪರಿಸ್ಥಿತಿಯನ್ನು ಮಾನವೀಯ ವಿಪತ್ತು ಎಂದು ವರ್ಣಿಸಿದ ಮನಕಲಕುವ ಮನವಿಗೆ ಪ್ರತಿಕ್ರಿಯೆಯಾಗಿ, ಜಗದ್ಗುರು XIVನೇ ಲಿಯೋರವರು ಅತ್ಯಾವಶ್ಯಕ ಔಷಧಿಗಳ ಸಾಗಣೆಯನ್ನು ಕಳುಹಿಸಿದ್ದಾರೆ.

ಡಿಕಾಸ್ಟರಿ ಫಾರ್ ದ ಸರ್ವಿಸ್ ಆಫ್ ಚಾರಿಟಿ ಪ್ರಕಟಿಸಿದ ಹೇಳಿಕೆಯ ಪ್ರಕಾರ, 10 ಲಕ್ಷ ಯೂರೋಗಳಿಗಿಂತ ಹೆಚ್ಚು ಮೌಲ್ಯದ ಔಷಧಿ ಸಾಮಗ್ರಿಗಳಿಂದ ತುಂಬಿದ ಒಂದು ಲಾರಿಯನ್ನು ಜಗದ್ಗುರುಗಳು ಕಳುಹಿಸಿದ್ದಾರೆ. ಈ ನೆರವು ಮುಖ್ಯವಾಗಿ ಬ್ಯಾಂಕೊ ಫಾರ್ಮಾಸ್ಯೂಟಿಕೊ ಇಟಿಎಸ್ ಫೌಂಡೇಶನ್ ರವರ ಸಹಕಾರದಿಂದ ಸಾಧ್ಯವಾಯಿತು.

ವ್ಯಾಟಿಕನ್‌ನಲ್ಲಿ ನೆರವು ಸಾಮಗ್ರಿಗಳನ್ನು ಲಾರಿಗಳಿಗೆ ತುಂಬಲಾಗುತ್ತಿದೆ.

ಔಷಧಿ ಮತ್ತು ಇನ್ನಷ್ಟು

ಯುದ್ಧದ ಸಂದರ್ಭದಲ್ಲಿ ಅಗತ್ಯಗಳು ಔಷಧಿಗಳಷ್ಟರಲ್ಲಿ ಸೀಮಿತವಾಗಿರುವುದಿಲ್ಲ. ಖಾರ್ಕಿವ್-ಝಪೊರಿಝ್ಜಿಯಾ ಪ್ರದೇಶದ ಬಿಷಪ್ ಪಾವ್ಲೋ ಹೊಂಚಾರುಕ್ ರವರು, ಸೈನಿಕ ದಾಳಿಗಳಿಂದ ವಿದ್ಯುತ್ ಮೂಲಸೌಕರ್ಯ ಹಾನಿಗೊಂಡ ಪರಿಣಾಮ ಉಷ್ಣತೆಯಿಲ್ಲದೆ ಉಳಿದ 800ಕ್ಕೂ ಹೆಚ್ಚು ಕುಟುಂಬಗಳ ಪರವಾಗಿ ತುರ್ತು ಮನವಿ ಮಾಡಿದರು. ಅಲ್ಪಾವಧಿಯಲ್ಲಿ ದುರಸ್ತಿ ಸಾಧ್ಯವಿಲ್ಲದ ಕಾರಣ, ಜಗದ್ಗುರುಗಳು ದಾನಾಧಿಕಾರಿಯಾದ ಕಾರ್ಡಿನಲ್ ಕೊನ್ರಾಡ್ ಕ್ರಾಯೆವ್ಸ್ಕಿ ರವರನ್ನು ಸಂಪರ್ಕಿಸಿ ಹೀಟಿಂಗ್ ಉಪಕರಣಗಳಿಗಾಗಿ ಸಹಾಯ ಕೋರಿದರು.

ಇಂದು, ಫೆಬ್ರವರಿ 24ರಂದು, ಇಟಲಿಯಲ್ಲಿ ಖರೀದಿಸಲಾದ ನೂರಾರು ಎಣ್ಣೆ ತುಂಬಿದ ವಿದ್ಯುತ್ ಹೀಟರ್‌ಗಳು ಝಪೊರಿಝ್ಜಿಯಾಗೆ ತಲುಪಿವೆ. 1,000ಕ್ಕೂ ಹೆಚ್ಚು ಹೀಟರ್‌ಗಳು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಉಷ್ಣತೆಯನ್ನು ಒದಗಿಸಲಿವೆ. ಕೆಲವರು  ಆಶ್ರಯ ಕೇಂದ್ರಗಳು ಮತ್ತು ತಾತ್ಕಾಲಿಕ ವಸತಿಗಳಲ್ಲಿ ಆಶ್ರಯ ಪಡೆಯಬೇಕಾದ ಪರಿಸ್ಥಿತಿಯಲ್ಲಿದ್ದಾರೆ.

“ಎಲ್ಲಾ ಲಾಜಿಸ್ಟಿಕ್ ಮತ್ತು ಕಾರ್ಯಾಚರಣಾ ಸವಾಲುಗಳಿದ್ದರೂ,” ಎಂದು ಜಗದ್ಗುರುಗಳು ದಾನಾಧಿಕಾರಿಗಳಿಗೆ ಹೇಳಿದರು, “ಈ ಸಾಮಗ್ರಿಗಳನ್ನು ಬಾಂಬ್ ದಾಳಿಗೆ ಒಳಗಾದ ಪ್ರದೇಶಗಳಾದ್ಯಂತ ಶೀಘ್ರದಲ್ಲೇ ವಿತರಿಸಲಾಗುವುದು ಎಂದರು.

ಶಾಂತಿಯ ಉಡುಗೊರೆ

ಈ ನೆರವು ಫೆಬ್ರವರಿ 22ರ ಭಾನುವಾರ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಜಗದ್ಗುರುಗಳು ಮಾಡಿದ ಮನವಿಗೆ ನೀಡಿದ ನೈಜ ಪ್ರತಿಕ್ರಿಯೆಯಾಗಿದೆ.

ಜಗದ್ಗುರುಗಳು ಯುದ್ಧ ಪ್ರಾರಂಭವಾದ ವಾರ್ಷಿಕೋತ್ಸವವನ್ನು, ಬಲಿಯಾದವರನ್ನು, ಮನೆಕಳೆದುಕೊಂಡ  ಕುಟುಂಬಗಳನ್ನು ಮತ್ತು ವರ್ಣಿಸಲಾಗದ ನೋವನ್ನು ಸ್ಮರಿಸಿ,  ಶಾಂತಿಯ ತುರ್ತು ಅಗತ್ಯವನ್ನು ತಡವಮಡಬಾರದೆಂದು ಮತ್ತೆ ಒತ್ತಿಹೇಳಿದರು.

ಕೊನೆಗೆ, ಬಹುಕಾಲದಿಂದ ನಿರೀಕ್ಷಿಸಲಾಗುತ್ತಿರುವ ಶಾಂತಿಯ ಉಡುಗೊರೆ ನಮ್ಮ ದಿನಗಳ ಮೇಲೆ ಕಂಗೊಳಿಸಲಿ ಎಂಬ ಉದ್ದೇಶದಿಂದ ಎಲ್ಲರೂ ಪ್ರಾರ್ಥಿಸಬೇಕೆಂದು ಜಗದ್ಗುರು XIVನೇ ಲಿಯೋರವರು ವಿನಂತಿಸಿದರು.

24 ಫೆಬ್ರವರಿ 2026, 18:23