ಜಗದ್ಗರುಗಳು: ನಮ್ಮ ಕಾಲದ ವೈಪರಿತ್ಯಗಳ ನಡುವೆ ಧರ್ಮ ಸಭೆಯ ದಾನಧರ್ಮದ ದೃಢ ಕೋಟೆಯಾಗಿರಬೇಕು
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ಪುನರುತ್ಥಾನದ ಹಬ್ಬದ ಮುನ್ನ ರೋಮ್‌ನ ವಿವಿಧ ಧರ್ಮ ಕೇಂದ್ರಗಳಿಗೆ ನೀಡುತ್ತಿರುವ ಭೇಟಿಗಳ ಭಾಗವಾಗಿ, ಕ್ಯಾಸ್ಟ್ರೋ ಪ್ರೆಟೋರಿಯೋ ಪ್ರದೇಶದಲ್ಲಿರುವ ಪವಿತ್ರ ಹೃದಯದ ಬಸಿಲಿಕಾಗೆ ಭೇಟಿ ನೀಡಿದರು. ಟರ್ಮಿನಿ ರೈಲು ನಿಲ್ದಾಣದ ಸಮೀಪವಿರುವ ಈ ಧರ್ಮ ಕೇಂದ್ರವನ್ನು ಡಾನ್ ಬಾಸ್ಕೊದ ಸಲೇಸಿಯನ್ಸ್ ಸಂಘ ನಡೆಸುತ್ತಿದೆ. ಭಾನುವಾರ ಬೆಳಗ್ಗೆಯೇ ಸಾವಿರಾರು ಭಕ್ತರು ಜಗದ್ಗುರುಗಳನ್ನು ಸ್ವಾಗತಿಸಲು ಸೇರಿದ್ದರು.
ತಮ್ಮ ಪ್ರವಚನದಲ್ಲಿ ಜಗದ್ಗುರುಗಳು “ಸನ್ನಿಹಿತತೆ” ಮತ್ತು “ದಾನಧರ್ಮ”ವೇ ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಹಿಂಸೆ ಮತ್ತು ಸಾಮಾಜಿಕ ವೈಪರಿತ್ಯಗಳ ವಿರುದ್ಧದ ಗೋಡೆಯಾಗಬೇಕು ಎಂದು ಹೇಳಿದರು. ಕೆಲವೇ ಮೀಟರ್‌ಗಳ ಅಂತರದಲ್ಲಿ ಸುಖಸೌಕರ್ಯಗಳೊಂದಿಗೆ ಓಡಾಡುವವರು ಮತ್ತು ಮನೆಯಿಲ್ಲದವರು ಇರುವ ಈ ಪ್ರದೇಶವು ನಮ್ಮ ಕಾಲದ ವೈಪರಿತ್ಯಗಳನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಜಗದ್ಗರುಗಳು ಆಗಮಿಸಿದಾಗ ಭಕ್ತರಲ್ಲಿ ಅಪಾರ ಉತ್ಸಾಹ ಮೂಡಿತು. ಮಕ್ಕಳಿಗೆ, ಬಡವರಿಗೆ, ಹಾಗೂ ಮದುವೆಗೆ ಸಿದ್ಧರಾಗುತ್ತಿದ್ದ ಜೋಡಿಗೆ ಆಶೀರ್ವಾದ ನೀಡಿದರು. ಎಲ್ಲರೂ ಸ್ವಾಗತಾರ್ಹರಾಗಿರುವ ಸ್ಥಳ ಎಷ್ಟು ಸುಂದರ ಎಂದು ಅವರು ಹೇಳಿದರು. ಯೇಸುವಿನ ಪ್ರೀತಿ ಮತ್ತು ಕರುಣೆಯೇ ಎಲ್ಲರನ್ನು ಒಂದಾಗಿ ಸೇರಿಸಿದೆ ಎಂದು ಅವರು ಒತ್ತಿಹೇಳಿದರು.
ಈ ಧರ್ಮ ಕೇಂದ್ರದಲ್ಲಿ ಡಾನ್ ಬೊಸ್ಕೊ ರವರ ಆತ್ಮಸ್ಫೂರ್ತಿಯ ಸೇವಾ ಪರಂಪರೆ ಜೀವಂತವಾಗಿದೆ. ಯುವಕರಿಗಾಗಿ ಕಾರ್ಯ, ಬಡವರಿಗೆ ಆಹಾರ ವಿತರಣೆ, ಮಾನಸಿಕ ಬೆಂಬಲ ಕೇಂದ್ರಗಳು ಹಾಗೂ ಅಗತ್ಯವಿರುವವರಿಗೆ ಆಶ್ರಯ ಒದಗಿಸುವಂತಹ ಹಲವು ಕಾರ್ಯಗಳು ಇಲ್ಲಿ ನಡೆಯುತ್ತಿವೆ. ವಿವಿಧ ಧಾರ್ಮಿಕ ಸಂಘಗಳ ಸಹೋದರಿಯರೂ ಸಮುದಾಯ ಸೇವೆಯಲ್ಲಿ ತೊಡಗಿದ್ದಾರೆ.
ತಪಸ್ಸು ಕಾಲದಲ್ಲಿ ವಿಶೇಷವಾಗಿ ತಮ್ಮ ದೀಕ್ಷಾಸ್ನಾನದ ಕೃಪೆಯನ್ನು ಮರುಪರಿಶೀಲಿಸಲು ಎಲ್ಲರನ್ನು ಜಗದ್ಗುರುಗಳು ಆಹ್ವಾನಿಸಿದರು. ದೇವರನ್ನು ಹೌದು ಎಂದು ಹೇಳುವುದರಲ್ಲೇ ನಿಜವಾದ ಸ್ವಾತಂತ್ರ್ಯ ಮತ್ತು ಸಂತೋಷ ಸಿಗುತ್ತದೆ ಎಂಬ ಸುವಾರ್ತೆಯ ಸಂದೇಶವನ್ನು ಅವರು ನೆನಪಿಸಿದರು.
ಕ್ಯಾಸ್ಟ್ರೋ ಪ್ರೆಟೋರಿಯೋ ಪ್ರದೇಶದಲ್ಲಿ ವಿದ್ಯಾರ್ಥಿಗಳು, ಉದ್ಯೋಗಾರ್ಥಿಗಳು, ವಲಸಿಗರು ಮತ್ತು ಶರಣಾರ್ಥಿಗಳು ವಾಸಿಸುತ್ತಿದ್ದಾರೆ. ಇವರ ಜೊತೆಗೆ ಮನೆಯಿಲ್ಲದವರೂ ಇದ್ದಾರೆ. ಕಾರಿಟಾಸ್ ಸಂಸ್ಥೆಯ ಆಶ್ರಯ ಕೇಂದ್ರದಲ್ಲಿ ತಂಗುವವರು ಈ ಪ್ರದೇಶದ ಮತ್ತೊಂದು ಮುಖವನ್ನು ತೋರಿಸುತ್ತಾರೆ. ಉತ್ತಮ ಸಾಧ್ಯತೆಗಳ ಜೊತೆಗೆ ಮದ್ದು ವ್ಯಾಪಾರ ಮತ್ತು ವೇಶ್ಯಾವಾಟಿಕೆಯಂತಹ ಅಕ್ರಮ ಚಟುವಟಿಕೆಗಳೂ ಇರುವುದನ್ನು ಜಗದ್ಗುರುಗಳು ಉಲ್ಲೇಖಿಸಿದರು.
ಕೊನೆಯಲ್ಲಿ ಜಗದ್ಗುರುಗಳು ಸಮುದಾಯವನ್ನು “ಈ ಪ್ರದೇಶದ ಹುಳಿಹಿಟ್ಟಿನೊಳಗಿನ ಸುವಾರ್ತೆಯ ಹುಳಿ” ಆಗಿರಲು ಕರೆದರು. ಶಾಂತಿ, ನಿರೀಕ್ಷೆ ಮತ್ತು ಕ್ರೈಸ್ತ ಬದ್ಧತೆಯಿಂದ ಸಮುದಾಯವನ್ನು ಕಟ್ಟುವ ಕಾರ್ಯದಲ್ಲಿ ತೊಡಗಬೇಕೆಂದು ಪ್ರೋತ್ಸಾಹಿಸಿದರು. ಧರ್ಮ ಕೇಂದ್ರದ ಪರವಾಗಿ ಅವರಿಗೆ ಪವಿತ್ರ ಹೃದಯದ ಚಿತ್ರವನ್ನು ಉಡುಗೊರೆಯಾಗಿ ನೀಡಲಾಯಿತು ಈ ಭೇಟಿ ಪ್ರದೇಶದ ಸಾಮಾಜಿಕ ಗಾಯಗಳಿಗೆ ಔಷಧವಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.
