ಸಂತ ಆಗ್ನೆಸ್ ರವರ ಹಬ್ಬದಂದು ಜಗದ್ಗುರು XIVನೇ ಲಿಯೋರವರಿಗೆ ಕುರಿಮರಿಗಳ ಸಮರ್ಪಣೆ
ವ್ಯಾಟಿಕನ್ ವರದಿ
ಜನವರಿ 21ರಂದು ಬುಧವಾರ, ವಾಟಿಕನ್‌ನ ಅರ್ಬನ್ VIII ಚಾಪೆಲ್‌ನಲ್ಲಿ ರೋಮಿನ ಸಂತ ಆಗ್ನೆಸ್ ರವರ ಸ್ಮರಣೋತ್ಸವದ ಸಂದರ್ಭದಲ್ಲಿ ಜಗದ್ಗುರು XIVನೇ ಲಿಯೋರವರಿಗೆ ಎರಡು ಕುರಿಮರಿಗಳನ್ನು ಸಮರ್ಪಿಸಲಾಯಿತು. ಇದು ರೋಮನ್ ಚರ್ಚಿನ ಅತ್ಯಂತ ಪ್ರಾಚೀನ ಸಂಪ್ರದಾಯಗಳಲ್ಲಿ ಒಂದಾಗಿದೆ.
ಈ ಸಂಪ್ರದಾಯದಂತೆ, ನಂತರ ಆ ಕುರಿಮರಿಗಳನ್ನು ಉತ್ತರ ರೋಮಿನಲ್ಲಿರುವ ‘ಸಂತ ಆಗ್ನೆಸ್ ಔಟ್‌ಸೈಡ್ ದ ವಾಲ್ಸ್’ ಬಸಿಲಿಕಾದಲ್ಲಿ ಆಶೀರ್ವದಿಸಲಾಯಿತು. ಇದೇ ಬಸಿಲಿಕಾದಲ್ಲೇ ನಾಲ್ಕನೇ ಶತಮಾನದಲ್ಲಿ ಹುತಾತ್ಮಳಾದ ಸಂತ ಆಗ್ನೆಸ್ ಸಮಾಧಿಯಿದ್ದು, ಈ ಆಚರಣೆ ಆಕೆಯ ಜೀವನ ಮತ್ತು ಸಾಕ್ಷ್ಯದೊಂದಿಗೆ ಆಳವಾಗಿ ಸಂಬಂಧ ಹೊಂದಿದೆ.
ಪರಂಪರೆಯಂತೆ, ಈ ಕುರಿಮರಿಗಳ ಉಣ್ಣೆಯನ್ನು ಹೊಸ ಮೆಟ್ರೋಪಾಲಿಟನ್ ಮಹಾಧರ್ಮಾಧ್ಯಕ್ಷರಿಗೆ ನೀಡಲಾಗುವ ಪ್ಯಾಲಿಯಂಗಳನ್ನು ತಯಾರಿಸಲು ಬಳಸಲಾಗುತ್ತದೆ. ಪ್ಯಾಲಿಯಂ ಎಂಬುದು ಜಗದ್ಗುರುಗಳು ಮತ್ತು ಮೆಟ್ರೋಪಾಲಿಟನ್ ಮಹಾಧರ್ಮಾಧ್ಯಕ್ಷರು ತಮ್ಮ ಧರ್ಮ ಸಭೆಗಳಲ್ಲಿ ಮತ್ತು ತಮ್ಮ ಧರ್ಮಪ್ರಾಂತ್ಯಗಳಲ್ಲಿ ಧರಿಸುವ ಗೌರವ ಹಾಗೂ ಆಡಳಿತಾಧಿಕಾರದ ಪೂಜಾವಿಧಿಯ ಚಿಹ್ನೆಯಾಗಿದ್ದು, ಆರು ಕಪ್ಪು ರೇಷ್ಮೆ ಶಿಲುಬೆಗಳಿಂದ ಅಲಂಕರಿಸಲಾದ ಬಿಳಿ ಉಣ್ಣೆಯ ಪಟ್ಟಿಯಾಗಿರುತ್ತದೆ.
ಪ್ಯಾಲಿಯಂಗಳ ಆಶೀರ್ವಾದ ಮತ್ತು ಪ್ರದಾನ ವಿಧಿ ಪ್ರತಿವರ್ಷ ಜೂನ್ 29ರಂದು, ಸಂತ ಪೇತ್ರ ಮತ್ತು ಸಂತ ಪೌಲರ ಮಹೋತ್ಸವದಂದು ಜಗದ್ಗುರುಗಳಿಂದ ನೆರವೇರಿಸಲಾಗುತ್ತದೆ. ಈ ದಿನ ಹೊಸ ಮಹಾಧರ್ಮಾಧ್ಯಕ್ಷರು ತಮ್ಮ ಸೇವೆಯ ವಿಶೇಷ ಚಿಹ್ನೆಯನ್ನು ಸ್ವೀಕರಿಸುತ್ತಾರೆ.
ಈ ಸಂಪ್ರದಾಯದ ಮೊದಲ ಉಲ್ಲೇಖ ಆರನೆಯ ಶತಮಾನಕ್ಕೆ ಸೇರಿದ್ದು, ಸಂತ ಆಗ್ನೆಸ್ ರವರ ಜೀವನಕ್ಕೆ ಸಂಬಂಧಿಸಿದ ಪೌರಾಣಿಕ ಕಥೆಯೊಂದರೊಂದಿಗೆ ಇದು ಜೋಡಿಸಿಕೊಂಡಿದೆ. ಆ ಕಥೆಯ ಪ್ರಕಾರ, ತಮ್ಮ ಮರಣಾನಂತರ ಸಂತ ಆಗ್ನೆಸ್ ತಮ್ಮ ಪೋಷಕರಿಗೆ ಸಮಾಧಿಯ ಬಳಿ ಕಾಣಿಸಿಕೊಂಡು, ಕನ್ಯೆಯರ ಗುಂಪಿನ ಮಧ್ಯದಲ್ಲಿ ಶುದ್ಧ ಕುರಿಮರಿಯನ್ನು ಕೈಯಲ್ಲಿ ಹಿಡಿದಿರುವಂತೆ ದರ್ಶನ ನೀಡಿದರು.
ಕಾಲಾಂತರದಲ್ಲಿ ಈ ಸಂಪ್ರದಾಯದಲ್ಲಿ ಕೆಲವು ಬದಲಾವಣೆಗಳಾಗಿದ್ದರೂ, ಅದರ ಆಧ್ಯಾತ್ಮಿಕ ಅರ್ಥ ಉಳಿದಿದೆ. ಇಂದಿಗೂ ಬೆನೆಡಿಕ್ಟೈನ್ ಸನ್ಯಾಸಿನಿಯರು ಕುರಿಮರಿಗಳ ಉಣ್ಣೆಯನ್ನು ಕತ್ತರಿಸಿ ಹೊಸ ಪ್ಯಾಲಿಯಂಗಳನ್ನು ತಯಾರಿಸುವ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ, ಇದರಿಂದ ಈ ಪ್ರಾಚೀನ ಧರ್ಮ ಸಭೆಯ ಪರಂಪರೆ ಜೀವಂತವಾಗಿಯೇ ಮುಂದುವರಿಯುತ್ತಿದೆ.
