ಹುಡುಕಿ

60 ನೇ ವಿಶ್ವ ಸಾಮಾಜಿಕ ಸಂವಹನ ದಿನ 60 ನೇ ವಿಶ್ವ ಸಾಮಾಜಿಕ ಸಂವಹನ ದಿನ  (ANSA)

ಜಗದ್ಗುರು ಲಿಯೋರವರು: ತಂತ್ರಜ್ಞಾನವು ಮಾನವ ವ್ಯಕ್ತಿಗೆ ಸೇವೆ ಸಲ್ಲಿಸಬೇಕು, ಅವನನ್ನು ಬದಲಿಸಬಾರದು

60ನೇ ವಿಶ್ವ ಸಾಮಾಜಿಕ ಸಂವಹನ ದಿನಾಚರಣೆಯ ಸಂದರ್ಭದಲ್ಲಿ ನೀಡಿದ ತಮ್ಮ ಸಂದೇಶದಲ್ಲಿ, ಜಗದ್ಗುರು XIVನೇ ಲಿಯೋರವರು ತಂತ್ರಜ್ಞಾನ ನವೀನತೆ ವಿಶೇಷವಾಗಿ ಕೃತಕ ಬುದ್ಧಿ ಮಾನವ ವ್ಯಕ್ತಿಗೆ ಸೇವೆ ಸಲ್ಲಿಸುವಂತಿರಬೇಕು ಮಾನವ ಗೌರವವನ್ನು ಕುಗ್ಗಿಸುವುದಾಗಲಿ ಅಥವಾ ಮಾನವನನ್ನು ಬದಲಿಸುವುದಾಗಲಿ ಆಗಬಾರದು ಎಂಬುದರ ಮಹತ್ವವನ್ನು ಒತ್ತಿ ಹೇಳಿದರು.

ವ್ಯಾಟಿಕನ್ ವರದಿ

 

ಮಾನವನ ಮುಖ ಮತ್ತು ಧ್ವನಿ ಪ್ರತಿಯೊಬ್ಬ ವ್ಯಕ್ತಿಯ ಅನನ್ಯ ಗುರುತುಗಳಾಗಿದ್ದು, ಮಾನವ ಗುರುತು ಮತ್ತು ಸಂಬಂಧಗಳ ಮೂಲಾಧಾರವಾಗಿವೆ. ಈ ಸತ್ಯವನ್ನು ಆಧರಿಸಿ, ಜಗದ್ಗುರು XIVನೇ ಲಿಯೋರವರು 2026 ಮೇ 17ರಂದು ಆಚರಿಸಲ್ಪಡುವ 60ನೇ ವಿಶ್ವ ಸಾಮಾಜಿಕ ಸಂವಹನ ದಿನಾಚರಣೆಗಾಗಿ ತಮ್ಮ ಸಂದೇಶವನ್ನು ಮಂಡಿಸುತ್ತಾರೆ. ಡಿಜಿಟಲ್ ಸಂವಹನ ಮತ್ತು ಕೃತಕ ಬುದ್ಧಿಯ ಮೇಲೆ ಕೇಂದ್ರೀಕರಿಸಿದ ಈ ಸಂದೇಶವು, ತಂತ್ರಜ್ಞಾನದಿಂದ ಹೆಚ್ಚಾಗಿ ರೂಪುಗೊಳ್ಳುತ್ತಿರುವ ಯುಗದಲ್ಲಿ ಮಾನವ ಗೌರವವನ್ನು ರಕ್ಷಿಸುವ ಅಗತ್ಯವನ್ನು ಒತ್ತಿ ಹೇಳುತ್ತದೆ.

ಮಾನವನು ದೇವರ ರೂಪ ಮತ್ತು ಸಾದೃಶ್ಯದಲ್ಲಿ ಸೃಷ್ಟಿಸಲ್ಪಟ್ಟವನು ಹಾಗೂ ವಾಕ್ಯದ ಮೂಲಕ ಸಂಬಂಧಕ್ಕೆ ಕರೆಯಲ್ಪಟ್ಟವನು ಎಂಬುದನ್ನು ಜಗದ್ಗುರುಗಳು ನೆನಪಿಸುತ್ತಾರೆ. ಆದ್ದರಿಂದ ಮುಖ ಮತ್ತು ಧ್ವನಿಯ ಸಂರಕ್ಷಣೆ ಎಂದರೆ ಪ್ರತಿಯೊಬ್ಬ ವ್ಯಕ್ತಿಯಲ್ಲಿರುವ ದೈವಿಕ ಮುದ್ರೆಯನ್ನು ಕಾಪಾಡುವುದು ಮತ್ತು ಪ್ರತಿಯೊಂದು ಮಾನವ ಜೀವನದ ಅನನ್ಯ ಕರೆಯನ್ನು ಗೌರವಿಸುವುದಾಗಿದೆ.

ಡಿಜಿಟಲ್ ತಂತ್ರಜ್ಞಾನಗಳು, ವಿಶೇಷವಾಗಿ ಧ್ವನಿ, ಮುಖ ಮತ್ತು ಭಾವನೆಗಳನ್ನು ಅನುಕರಿಸುವ ಸಾಮರ್ಥ್ಯ ಹೊಂದಿರುವ ಕೃತಕ ಬುದ್ಧಿಯ ವ್ಯವಸ್ಥೆಗಳು, ಮಾನವ ಸಂವಹನದ ಮೂಲಭೂತ ಆಯಾಮಗಳನ್ನು ಬದಲಾಯಿಸುವ ಅಪಾಯವಿದೆ ಎಂದು ಜಗದ್ಗುರುಗಳು ಎಚ್ಚರಿಸುತ್ತಾರೆ. ಈ ಸವಾಲು ತಂತ್ರಜ್ಞಾನ ಸಂಬಂಧಿತದ್ದಕ್ಕಿಂತ ಹೆಚ್ಚಾಗಿ ಮಾನವಶಾಸ್ತ್ರೀಯವಾಗಿದ್ದು, ಮಾನವ ಗುರುತು ಮತ್ತು ನಿಜವಾದ ಸಂಬಂಧಗಳನ್ನು ರಕ್ಷಿಸುವುದೇ ಅದರ ಕೇಂದ್ರವಾಗಿದೆ.

ಸಾಮಾಜಿಕ ಮಾಧ್ಯಮಗಳ ಅಲ್ಗಾರಿದಮ್‌ಗಳು ತ್ವರಿತ ಭಾವನಾತ್ಮಕ ಪ್ರತಿಕ್ರಿಯೆಗಳಿಗೆ ಆದ್ಯತೆ ನೀಡುವುದರಿಂದ ಚಿಂತನೆ ಮತ್ತು ವಿಮರ್ಶಾತ್ಮಕ ಆಲೋಚನೆ ದುರ್ಬಲಗೊಳ್ಳುತ್ತದೆ ಹಾಗೂ ಸಾಮಾಜಿಕ ಧ್ರುವೀಕರಣ ಹೆಚ್ಚಾಗುತ್ತದೆ ಎಂದು ಅವರು ಸೂಚಿಸುತ್ತಾರೆ. ಜೊತೆಗೆ ಮಾಹಿತಿ, ಸೃಜನಶೀಲತೆ ಮತ್ತು ನಿರ್ಧಾರ ಪ್ರಕ್ರಿಯೆಗಳಲ್ಲಿ ಕೃತಕ ಬುದ್ಧಿಯ ಮೇಲಿನ ಹೆಚ್ಚುತ್ತಿರುವ ಅವಲಂಬನೆ ಮಾನವನ ವಿಶ್ಲೇಷಣಾ ಸಾಮರ್ಥ್ಯ, ಕಲ್ಪನೆ ಮತ್ತು ವೈಯಕ್ತಿಕ ಜವಾಬ್ದಾರಿಯನ್ನು ಕುಗ್ಗಿಸಬಹುದೆಂದು ಎಚ್ಚರಿಸುತ್ತಾರೆ.

ಈ ಸವಾಲುಗಳಿಗೆ ಉತ್ತರವಾಗಿ, ಜವಾಬ್ದಾರಿ, ಸಹಕಾರ ಮತ್ತು ಶಿಕ್ಷಣವನ್ನು ಜಗದ್ಗುರುಗಳು ಪ್ರಮುಖ ಆಧಾರಸ್ತಂಭಗಳೆಂದು ಗುರುತಿಸುತ್ತಾರೆ. ಮಾಧ್ಯಮ ಹಾಗೂ ಕೃತಕ ಬುದ್ಧಿ ಜ್ಞಾನದಲ್ಲಿ ಶಿಕ್ಷಣವನ್ನು ಬಲಪಡಿಸುವುದರ ಮೂಲಕ ಮಾನವ ಗುರುತನ್ನು ರಕ್ಷಿಸಿ, ಜವಾಬ್ದಾರಿಯುತ ಸಂವಹನ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಅವರು ತಿಳಿಸುತ್ತಾರೆ.

24 ಜನವರಿ 2026, 21:40