ಫಾ. ಆಗಸ್ಟೊ ರಾಫೆಲ್ ರಾಮಿರೆಜ್ ಮೊನಾಸ್ಟೀರಿಯೊಂ ಫಾ. ಆಗಸ್ಟೊ ರಾಫೆಲ್ ರಾಮಿರೆಜ್ ಮೊನಾಸ್ಟೀರಿಯೊಂ 

ಜಗದ್ಗುರುಗಳು ಎರಡು ಹೊಸ ದೈವ ಸಂಕಲ್ಪ ಮತ್ತು ನಾಲ್ಕು ಪೂಜ್ಯರಿಗಾಗಿ ಆದೇಶಗಳನ್ನು ಅನುಮೋದಿಸಿದರು

ಜಗದ್ಗುರು XIV ನೇ ಲಿಯೋವರು ಸಂತರ ಘೋಷಣೆಯ ಪ್ರಕ್ರಿಯೆಗೆ ಸಂಬಂಧಿಸಿದ ಆದೇಶಗಳನ್ನು ಅನುಮೋದಿಸಿದ್ದು, ಗ್ವಾಟೆಮಾಲಾದ ಯಾಜಕರಾದ ಆಗುಸ್ಟೊ ರಫೇಲ್ ರಾಮಿರೆಜ್ ಮೊನಾಸ್ಟೇರಿಯೊ ಮತ್ತು ಮದರ್ ಮರಿಯಾ ಇಗ್ನಾಜಿಯಾ ಇಸಾಕ್ಕಿ ಅವರ ಹುತಾತ್ಮತೆಯನ್ನು ಅಧಿಕೃತವಾಗಿ ಗುರುತಿಸಿದ್ದಾರೆ. ಇದರೊಂದಿಗೆ ಅವರ ದೈವ ಸಂಕಲ್ಪ ಘೋಷಣೆಗೆ (ಬಿಯಾಟಿಫಿಕೇಶನ್) ಮಾರ್ಗ ಸುಗಮವಾಗಿದೆ.

ವ್ಯಾಟಿಕನ್ ವರದಿ

 

ಗುರುವಾರ ಜಗದ್ಗುರು XIVನೇ ಲಿಯೋರವರು  ಸಂತರ ಘೋಷಣಾ ಇಲಾಖೆಯ ಪ್ರಿಫೆಕ್ಟ್ ಕಾರ್ಡಿನಲ್ ಮಾರ್ಚೆಲ್ಲೊ ಸೆಮೆರಾರೊರವರನ್ನು ಭೇಟಿಯಾಗಿ, ಇಬ್ಬರನ್ನು ದೈವ ಸಂಕಲ್ಪಕ್ಕೆ ಘೋಷಿಸಲು ಹಾಗೂ ನಾಲ್ವರನ್ನು ಹೊಸ ಪೂಜ್ಯರಾಗಿ ಮಾನ್ಯತೆ ನೀಡಲು ಸಂಬಂಧಿಸಿದ ಆದೇಶಗಳನ್ನು ಪ್ರಕಟಿಸಲು ಅನುಮೋದಿಸಿದರು. ಈ ಆದೇಶಗಳು ಧರ್ಮ ಸಭೆಯ ಅಧಿಕೃತ ಗುರುತಿನೊಂದಿಗೆ ಅವರ ಪವಿತ್ರತೆಯ ಮಾರ್ಗವನ್ನು ಸ್ಪಷ್ಟಗೊಳಿಸುತ್ತವೆ.

ಈ ಆದೇಶಗಳಲ್ಲಿ ಗ್ವಾಟೆಮಾಲಾದ ಫ್ರಾನ್ಸಿಸ್ಕನ್ ಪಾದ್ರಿ ಫಾದರ್ ಆಗುಸ್ಟೊ ರಫೇಲ್ ರಾಮಿರೆಜ್ ಮೊನಾಸ್ಟೇರಿಯೊ ಅವರ ಹುತಾತ್ಮತೆಯನ್ನು ಅಧಿಕೃತವಾಗಿ ಗುರುತಿಸಲಾಗಿದೆ. ನಾಗರಿಕ ಯುದ್ಧದಿಂದ ಚಿದ್ರಗೊಂಡಿದ್ದ ಗ್ವಾಟೆಮಾಲಾದಲ್ಲಿ, ಅವರು ಬಡವರ ಮತ್ತು ರಕ್ಷಣೆಯಿಲ್ಲದವರ ಸೇವೆಗೆ ತಮ್ಮ ಜೀವನವನ್ನು ಸಮರ್ಪಿಸಿದ್ದರು. ಅನೇಕ ಬೆದರಿಕೆಗಳು, ಬಂಧನ ಮತ್ತು ಯಾತನೆಗಳ ಬಳಿಕ, 1983ರಲ್ಲಿ ಅವರನ್ನು ಸೈನಿಕರು ಬಂಧಿಸಿ ಹತ್ಯೆಗೈದರು. ಧರ್ಮದ ವಿರುದ್ಧದ ದ್ವೇಷದಿಂದಲೇ ಅವರು ಹತ್ಯೆಗೀಡಾದರು ಎಂದು ಧರ್ಮ ಸಭೆ ಘೋಷಿಸಿದೆ.

ಇದೇ ಸಂದರ್ಭದಲ್ಲಿ, ಯೇಸುಕ್ರಿಸ್ತನ ಪವಿತ್ರ ಹೃದಯದ ಉರ್ಸುಲೈನ್ ಸಭೆಯ ಸ್ಥಾಪಕಿಯಾದ ಮದರ್ ಮರಿಯಾ ಇಗ್ನಾಜಿಯಾ ಇಸಾಕ್ಕಿರವರ ಮಧ್ಯಸ್ಥಿಕೆಯಿಂದ ಸಂಭವಿಸಿದ ಅದ್ಭುತ ಗುಣಮುಖತೆಯನ್ನೂ ಜಗದ್ಗುರುಗಳು ಗುರುತಿಸಿದ್ದಾರೆ. 1950ರಲ್ಲಿ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಸಿಸ್ಟರ್ ಮರಿಯಾ ಅಸ್ಸುಂಟಾ ಜಪ್ಪೆಲ್ಲಾ ರವರು ಅಪ್ರತೀಕ್ಷಿತವಾಗಿ ಸಂಪೂರ್ಣ ಗುಣಮುಖರಾಗಿದ್ದು, ಇದನ್ನು ವೈದ್ಯರು ಸಹ ವೈಜ್ಞಾನಿಕವಾಗಿ ವಿವರಿಸಲಾಗದ ಘಟನೆಯೆಂದು ದಾಖಲಿಸಿದ್ದಾರೆ. ಈ ಮೂಲಕ ಮದರ್ ಇಸಾಕ್ಕಿರವರ ದೈವ ಸಂಕಲ್ಪದ ಘೋಷಣೆಗೆ ದಾರಿ ತೆರೆಯಲಾಗಿದೆ.

ಜಗದ್ಗುರು XIV ನೇ ಲಿಯೋರವರು ನಾಲ್ವರು ದೇವಭಕ್ತರ ವೀರಗುಣಗಳನ್ನು ಗುರುತಿಸಿ ಅವರನ್ನು ಪೂಜ್ಯರಾಗಿ ಘೋಷಿಸಿದ್ದಾರೆ. ಇಟಲಿಯ ಲೈಕನಾದ ನೆೆರಿನೊ ಕೋಬಿಯಾಂಕಿರವರು ಪ್ರಾರ್ಥನೆ ಮತ್ತು ದೃಢ ನಂಬಿಕೆಯಲ್ಲಿ ಆಳವಾಗಿ ಬೇರುಬಿಟ್ಟ ದಾನಮಯ ಜೀವನ ನಡೆಸಿದರು. ಯುವಕರ ಸೇವೆ, ವಿಪತ್ತು ಪರಿಹಾರ ಕಾರ್ಯಗಳು ಮತ್ತು ಅಂತರರಾಷ್ಟ್ರೀಯ ದಾನ ಕಾರ್ಯಗಳಲ್ಲಿ ಅವರು ತೊಡಗಿಸಿಕೊಂಡಿದ್ದರು.

ಇಟಲಿಯ ಕನ್ಯಾ ಸ್ತ್ರೀ ಕ್ರೊಚಿಫಿಸ್ಸಾ ಮಿಲಿಟೆರ್ನಿ ರವರು ಬಡವರು, ರೋಗಿಗಳು, ವೃದ್ಧರು ಮತ್ತು ಮರಣಾವಸ್ಥೆಯಲ್ಲಿರುವವರಿಗಾಗಿ ಸೇವೆಯಲ್ಲಿ ತಮ್ಮ ಜೀವನವನ್ನು ಸಮರ್ಪಿಸಿದರು. ಸರಳತೆ ಮತ್ತು ವಿನಮ್ರತೆಯಲ್ಲಿ ಜೀವಿಸಿದ ಅವರು, ಗಂಭೀರ ಆರೋಗ್ಯ ಸಮಸ್ಯೆಗಳ ನಡುವೆಯೂ ಶಾಂತ ಮನಸ್ಸಿನಿಂದ ನೋವನ್ನು ಸ್ವೀಕರಿಸಿ ಪವಿತ್ರ ಜೀವನಕ್ಕೆ ಸಾಕ್ಷಿಯಾದರು.

ಬ್ರೆಜಿಲ್‌ನ ಕಾರ್ಮೆಲ್ ಸಭೆಯ ಪ್ರಿಯೊರೆಸ್ ಆಗಿದ್ದ ಮರಿಯಾ ಗಿಸೆಲ್ದಾ ವಿಲ್ಲೆಲಾರವರು ಆತ್ಮೀಯತೆ ಮತ್ತು ದಯೆಯಿಂದ ಅನೇಕರಿಗೆ ಆಧ್ಯಾತ್ಮಿಕ ಆಧಾರವಾಗಿದ್ದರು.ಜೀವನದಲ್ಲಿದ್ದರೂ ಸಹ, ಸಲಹೆ ಮತ್ತು ಸಾಂತ್ವನಕ್ಕಾಗಿ ಬಂದವರಿಗೆ ಅವರು ಸದಾ ತೆರೆದ ಮನಸ್ಸಿನಿಂದ ಸ್ವಾಗತ ನೀಡಿದರು.

ಇಟಲಿಯ ಮರಿಯಾ ಟೆಕ್ಲಾ ಅಂಟೋನಿಯಾ ರೆಲುಚೆಂತಿ ರವರು ಶಿಕ್ಷಣ ಮತ್ತು ರೂಪಣೆಗೆ ತಮ್ಮ ಜೀವನವನ್ನು ಅರ್ಪಿಸಿ, ಇಮ್ಯಾಕುಲೇಟ್ ಕನ್ಸೆಪ್ಷನ್‌ನ ಪಿಯಸ್ ವರ್ಕರ್ ಸಿಸ್ಟರ್ಸ್ ಸಭೆಯನ್ನು ಸ್ಥಾಪಿಸಿದರು. ಸ್ಥಿರ ನಂಬಿಕೆ ಮತ್ತು ದಾನಭಾವದಿಂದ ತುಂಬಿದ ಅವರ ಜೀವನ, ಧರ್ಮ ಸಭೆಯಲ್ಲಿ ಪವಿತ್ರತೆಯ ಶಾಶ್ವತ ಮಾದರಿಯಾಗಿ ಉಳಿದಿದೆ.

22 ಜನವರಿ 2026, 20:50