ಹುಡುಕಿ

ಜಗದ್ಗುರು XIV ನೇ ಲಿಯೋರವರು ಜಗದ್ಗುರು XIV ನೇ ಲಿಯೋರವರು  (ANSA)

ಜಗದ್ಗರುಗಳು ಕಥೋಲಿಕ ಮಾಧ್ಯಮಗಳಿಗೆ: ಸಂಧಾನಕ್ಕಾಗಿ ಧ್ವನಿಗಳನ್ನು ಬಲಪಡಿಸಿ, ಹೃದಯಗಳನ್ನು ನಿರಾಯುಧಗೊಳಿಸಿ

ಜನವರಿ 21ರಿಂದ 23ರವರೆಗೆ ಲೂರ್ದು ನಗರದಲ್ಲಿ ನಡೆಯುತ್ತಿರುವ ಸೈಂಟ್ ಫ್ರಾನ್ಸಿಸ್ ದೆ ಸೇಲ್ಸ್ ದಿನಗಳ 29ನೇ ಆವೃತ್ತಿಯ ಸಂದರ್ಭದಲ್ಲಿ, ಫ್ರೆಂಚ್ ಕಥೋಲಿಕ ಮಾಧ್ಯಮ ಮಹಾಸಂಘಕ್ಕೆ ಜಗದ್ಗುರು XIVನೇ ಲಿಯೋರವರು ಸಂದೇಶವನ್ನು ಕಳುಹಿಸಿದ್ದಾರೆ.

ವ್ಯಾಟಿಕನ್ ವರದಿ

 

ವಿಭಜನೆಗಳು ಹೆಚ್ಚುತ್ತಿರುವ ಹಾಗೂ ಕೃತಕ ಬುದ್ಧಿ ಉದಯದಿಂದ ಗುರುತಿಸಲ್ಪಟ್ಟ ಜಗತ್ತಿನಲ್ಲಿ, ಕಥೋಲಿಕ ಮಾಧ್ಯಮ ಮತ್ತು ಸಂವಹನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು ದುಃಖದಲ್ಲಿರುವ ಜನರ ಹಾಗೂ ಶಾಂತಿಗಾಗಿ ಶ್ರಮಿಸುವವರ ಕಥೆಗಳಿಗೆ ಸ್ಥಳ ನೀಡಬೇಕೆಂದು ಜಗದ್ಗುರು XIVನೇ ಲಿಯೋರವರು ಮನವಿ ಮಾಡಿದ್ದಾರೆ. ದ್ವೇಷ ಮತ್ತು ಅತಿರೇಕದಿಂದ ಹೃದಯಗಳನ್ನು ನಿರಾಯುಧಗೊಳಿಸಿ, ಸಂಧಾನವನ್ನು ಧೈರ್ಯದಿಂದ ಹುಡುಕುವ ಧ್ವನಿಗಳನ್ನು ಬಲಪಡಿಸುವಂತೆ ಅವರು ಪ್ರೋತ್ಸಾಹಿಸಿದರು.

ವಿಭಜಿತ ಮತ್ತು ಧ್ರುವೀಕೃತ ಸಮಾಜದಲ್ಲಿ, ದುರ್ಬಲರು, ಅಂಚಿನಲ್ಲಿರುವವರು, ಒಂಟಿಯಾಗಿರುವವರು ಮತ್ತು ಪ್ರೀತಿಸಲ್ಪಟ್ಟಿದ್ದೇವೆ ಎಂಬ ಸಂತೋಷವನ್ನು ಅನುಭವಿಸಬೇಕಾದವರ ಅನುಭವಗಳನ್ನು ಕೇಳಿ ಮತ್ತು ಹಂಚಿಕೊಳ್ಳುವ ಅಂಟೆನ್ನಾಗಳಾಗಿರಬೇಕೆಂದು ಜಗದ್ಗುರುಗಳು ಹೇಳಿದರು. ಇಂತಹ ಸಂವಹನವು ಮಾನವ ಗೌರವಕ್ಕೆ ಗೌರವ ತೋರುವ ದೃಷ್ಟಿಕೋನವನ್ನು ಬೆಳೆಸಬೇಕು ಎಂದು ಅವರು ಒತ್ತಿಹೇಳಿದರು.

ಕೃತಕ ಬುದ್ಧಿಯ ಪ್ರಭಾವ ಹೆಚ್ಚುತ್ತಿರುವ ಈ ಯುಗದಲ್ಲಿ, ಹೃದಯದ ಕಾರಣಗಳಿಗೆ, ಉತ್ತಮ ಸಂಬಂಧಗಳ ಕೇಂದ್ರತೆಗೆ ಮತ್ತು ಯಾರನ್ನೂ ಹೊರತುಪಡಿಸದೇ ಇತರರ ಹತ್ತಿರ ಹೋಗುವ ಸಾಮರ್ಥ್ಯಕ್ಕೆ ಮರಳುವುದು ಅತ್ಯಾವಶ್ಯಕವೆಂದು ಜಗದ್ಗುರುಗಳು ತಿಳಿಸಿದರು. ನಂಬಿಕೆಯಿಲ್ಲದವರಿಗೂ ಸಹ ಸತ್ಯದ ಸೇವೆಯನ್ನು ನೀಡುವ ಶಕ್ತಿಯು ಕಥೋಲಿಕ ಮಾಧ್ಯಮಗಳಿಗೆ ಇದೆ ಎಂದು ಅವರು ಹೇಳಿದರು.

ಜಗದ್ಗುರು XIV ನೇ ಲಿಯೋರವರು “ಪದಗಳು ಮತ್ತು ಚಿತ್ರಗಳ ಯುದ್ಧಕ್ಕೆ ಇಲ್ಲ” ಎಂದು ಹೇಳುತ್ತಾ, ಜೀವನದ ಗಾಯಗಳನ್ನು ಗುಣಪಡಿಸುವ, ವೈರತ್ವದಿಂದ ವಿಭಜಿತ ಜನರನ್ನು ಮತ್ತು ಸಮುದಾಯಗಳನ್ನು ಒಗ್ಗೂಡಿಸುವ ಪದಗಳ ಅಗತ್ಯವಿದೆ ಎಂದರು. ಜಗದ್ಗರುಗಳ ಹುದ್ದೆ ಆರಂಭದಿಂದಲೇ, ಪೂರ್ವಾಗ್ರಹವಿಲ್ಲದೆ ಮತ್ತು ಪ್ರತಿಯೊಬ್ಬರ ಗೌರವವನ್ನು ಕಾಪಾಡುವ, ನಿರಾಯುಧ ಮತ್ತು ನಿರಾಯುಧಗೊಳಿಸುವ ಸಂವಹನವನ್ನು ಉತ್ತೇಜಿಸುವ ಅಗತ್ಯವನ್ನು ಅವರು ನಿರಂತರವಾಗಿ ಒತ್ತಿಹೇಳುತ್ತಿದ್ದಾರೆ.

ಅಂತಿಮವಾಗಿ, 2016ರಲ್ಲಿ ಹತ್ಯೆಗೀಡಾದ ಫ್ರೆಂಚ್ ಪಾದ್ರಿ ಫಾದರ್ ಜಾಕ್ ಹಮೆಲ್ ರವರನ್ನು ಜಗದ್ಗುರುಗಳು ಮಾಧ್ಯಮ ಕಾರ್ಯಕರ್ತರಿಗೆ ಮಾದರಿಯಾಗಿ ಸೂಚಿಸಿದರು. ಸಂವಾದ ಮತ್ತು ಶಾಂತಿಯ ಮೌಲ್ಯದಲ್ಲಿ ನಂಬಿಕೆ ಇಟ್ಟಿದ್ದ ಅವರ ಉದಾಹರಣೆ, ಸತ್ಯವನ್ನು ಪ್ರೀತಿಯಲ್ಲಿ ಹುಡುಕುವವರಾಗಿ, ಒಡೆದಿರುವುದನ್ನು ಜೋಡಿಸುವ ಮತ್ತು ಮಾನವೀಯ ಗಾಯಗಳಿಗೆ ಔಷಧಿಯಾಗುವ‌ ಸಂವಹನವನ್ನು ರೂಪಿಸಲು ಎಲ್ಲರನ್ನು ಪ್ರೇರೇಪಿಸಲಿ ಎಂದು ಜಗದ್ಗರುಗಳು ಆಶಿಸಿದರು.

21 ಜನವರಿ 2026, 00:00