ಹುಡುಕಿ

Pope Leo XIV leads a Mass to mark the World Day of Peace in St. Peter's Basilica at the Vatican Pope Leo XIV leads a Mass to mark the World Day of Peace in St. Peter's Basilica at the Vatican 

ಪೋಪ್: ಶಾಂತಿಯ ವರ್ಷವನ್ನು ಕಟ್ಟಲು ಇಂದೇ ಆರಂಭಿಸೋಣ

2026ರ ತಮ್ಮ ಮೊದಲ ದೇವದೂತರ ಸಂದೇಶದಲ್ಲಿ, ಜಗದ್ಗುರು ಲಿಯೋ ರವರು ಎಲ್ಲರಿಗೂ ನಮ್ಮ ಹೃದಯಗಳನ್ನು ಅಸ್ತ್ರರಹಿತಗೊಳಿಸಿ, ಎಲ್ಲಾ ರೀತಿಯ ಹಿಂಸೆಯಿಂದ ದೂರವಿದ್ದು, ಶಾಂತಿಯ ವರ್ಷವನ್ನು ಕಟ್ಟೋಣ ಎಂದು ಮನವಿ ಮಾಡಿದರು.

ವ್ಯಾಟಿಕನ್ ವರದಿ

2026ರ ಮೊದಲ ದಿನದಂದು ಸಂತ ಪೀಟರ್ ಚೌಕದಲ್ಲಿ ಸೇರಿದ್ದ ಸುಮಾರು 40,000 ಮಂದಿಯನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರು XIVನೇ ಲಿಯೋ ರವರು, ಅವರಿಗೆ ಶಾಂತಿಯೂ ಎಲ್ಲ ಮಂಗಳಕರವೂ ದೊರಕಲಿ ಎಂದು ಹೃದಯಪೂರ್ವಕ ಶುಭಾಶಯಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಇಟಾಲಿಯನ್ ಗಣರಾಜ್ಯದ ರಾಷ್ಟ್ರಪತಿ ಸರ್ಜಿಯೋ ಮಾಟ್ಟರೆಲ್ಲರವರಿಗೆ ಸಹ ತಮ್ಮ ಶುಭಾಶಯಗಳನ್ನು ವ್ಯಕ್ತಪಡಿಸಿದರು.

ತ್ರಿಕಾಲ ಪ್ರಾರ್ಥನೆಯ ನಂತರ ತಮ್ಮದೇ ಮಾತುಗಳಲ್ಲಿ ಮಾತನಾಡಿದ ಜಗದ್ಗುರು, 1968ರಲ್ಲಿ ಸಂತ ಜಗದ್ಗುರು VI ನೇ ಪೌಲರವರ ಆಶಯದಂತೆ, ಕಳೆದ 58 ವರ್ಷಗಳಿಂದ ಜನವರಿ 1ರಂದು ವಿಶ್ವ ಶಾಂತಿ ದಿನವಾಗಿ ಆಚರಿಸಲಾಗುತ್ತಿದೆ ಎಂದು ಸ್ಮರಿಸಿದರು. ಆ ದಿನಕ್ಕಾಗಿ ತಮ್ಮ ಸಂದೇಶದಲ್ಲಿ, ಜಗದ್ಗುರು ಲಿಯೋರವರು ಜಗದ್ಗುರುಗಳ ಸ್ಥಾನಕ್ಕೆ ಆಯ್ಕೆಯಾದ ನಂತರ ಪ್ರಭು ನಮಗೆ ಸೂಚಿಸಿದ ಅಭಿವಾದನೆಯನ್ನು ನೆನಪಿಸಿಕೊಂಡರು.

ನಿಮ್ಮೆಲ್ಲರಿಗೂ ಶಾಂತಿ ಇರಲಿ!

ಈ ಶಾಂತಿ ಎಂದರೆ, ಎಂದು ಜಗದ್ಗುರುಗಳು ಮುಂದುವರೆಸಿದರು, ಅಸ್ತ್ರವಿಲ್ಲದ ಮತ್ತು ಅಸ್ತ್ರರಹಿತಗೊಳಿಸುವ ಶಾಂತಿ ಅದು ದೇವರಿಂದ ಬರುತ್ತದೆ ಆತನ ನಿಸ್ವಾರ್ಥ ಪ್ರೀತಿಯ ಕೊಡುಗೆಯಾಗಿದ್ದು, ನಮ್ಮ ಜವಾಬ್ದಾರಿಗೆ ಒಪ್ಪಿಸಲ್ಪಟ್ಟಿದೆ ಎಂದರು.

ಹೊಸ ಶಾಂತಿಯ ವರ್ಷದತ್ತ ಕರೆ

ಈ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು, ಪವಿತ್ರ ತಂದೆ ಕ್ರಿಸ್ತನ ಕೃಪೆಯೊಂದಿಗೆ ಎಲ್ಲರಿಗೂ ಸವಾಲು ಹಾಕಿದರು.

ಇಂದೇ ಆರಂಭಿಸಿ ನಮ್ಮ ಹೃದಯಗಳನ್ನು ಅಸ್ತ್ರರಹಿತಗೊಳಿಸುವ ಮೂಲಕ ಹಾಗೂ ಎಲ್ಲಾ ರೀತಿಯ ಹಿಂಸೆಯಿಂದ ದೂರವಿರುವ ಮೂಲಕ—ಶಾಂತಿಯ ವರ್ಷವನ್ನು ಕಟ್ಟೋಣ ಎಂದರು.

ಲೋಕದಾದ್ಯಂತ ಅನೇಕ ಜನರು ಮತ್ತು ಸಂಸ್ಥೆಗಳು ಈಗಾಗಲೇ ಹಿಂಸೆಯನ್ನು ಅಂತ್ಯಗೊಳಿಸಲು ಶ್ರಮಿಸುತ್ತಿದ್ದು, ಶಾಂತಿ ನಿರ್ಮಾಣಕ್ಕಾಗಿ ಅನೇಕ ಉಪಕ್ರಮಗಳನ್ನು ಕೈಗೊಂಡಿವೆ ಎಂಬುದನ್ನು ಜಗದ್ಗುರುಗಳು ಗುರುತಿಸಿದರು. ವಿಶೇಷವಾಗಿ, ಇಟಲಿಯ ಕ್ಯಾಟಾನಿಯಾದಲ್ಲಿ ಡಿಸೆಂಬರ್ 31ರ ಸಂಜೆ ನಡೆದ ರಾಷ್ಟ್ರೀಯ ಶಾಂತಿ ಮೆರವಣಿಗೆಯನ್ನೂ, ಸಂತ್‌ಎಜಿಡಿಯೊ ಸಮುದಾಯದ ಸದಸ್ಯರು ನಡೆಸಲಿರುವ ಮತ್ತೊಂದು ಶಾಂತಿ ಮೆರವಣಿಗೆಯನ್ನೂ ಅವರು ಉಲ್ಲೇಖಿಸಿದರು.

ಅಂತಿಮವಾಗಿ, ಅಮೆರಿಕದ ನ್ಯೂ ಜರ್ಸಿ ರಾಜ್ಯದ ರಿಚ್‌ಲ್ಯಾಂಡ್‌ನಿಂದ ಬಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಜಗದ್ಗುರುಗಳು ಹಾರ್ದಿಕವಾಗಿ ವಂದಿಸಿದರು.

ಸಂತ ಫ್ರಾನ್ಸಿಸ್ ಆಫ್ ಅಸ್ಸಿಸಿಯವರ ನಿಧನದ 800ನೇ ವಾರ್ಷಿಕೋತ್ಸವವನ್ನು ಸ್ಮರಿಸಿಕೊಂಡು, ಜಗದ್ಗುರು ಲಿಯೋರವರು ಪವಿತ್ರ ಗ್ರಂಥದಿಂದ ತೆಗೆದುಕೊಂಡ ಸಂತ ಫ್ರಾನ್ಸಿಸ್ ರವರ ಆಶೀರ್ವಾದದೊಂದಿಗೆ ತಮ್ಮ ದೇವದೂತರ ಸಂದೇಶವನ್ನು ಸಮಾಪ್ತಿಗೊಳಿಸಿದರು.

ಪ್ರಭು ನಿನ್ನನ್ನು ಆಶೀರ್ವದಿಸಲಿ ಮತ್ತು ಕಾಪಾಡಲಿ

ಪ್ರಭು ತನ್ನ ಮುಖವನ್ನು ನಿನ್ನ ಮೇಲೆ ಪ್ರಕಾಶಿಸಲಿ ಮತ್ತು ನಿನಗೆ ಕೃಪೆ ತೋರಿಸಲಿ

ಪ್ರಭು ತನ್ನ ಮುಖವನ್ನು ನಿನ್ನ ಕಡೆ ಎತ್ತಿ ನಿನಗೆ ಶಾಂತಿ ನೀಡಲಿ.

ಇದರ ಜೊತೆಗೆ, ಹೊಸ ವರ್ಷದಲ್ಲಿ ದೇವಮಾತೆ ಮರಿಯಮ್ಮನು ನಮ್ಮ ಯಾತ್ರೆಯಲ್ಲಿ ನಮಗೆ ಮಾರ್ಗದರ್ಶನ ನೀಡಲಿ ಎಂಬ ತಮ್ಮ ಆಶಯವನ್ನೂ ಜಗದ್ಗುರುಗಳು ವ್ಯಕ್ತಪಡಿಸಿದರು.

01 ಜನವರಿ 2026, 16:25