ಪೋಪ್: ಸುಜ್ಞಾನ, ಪ್ರೀತಿ ಹಾಗೂ ಕರುಣೆಯಿಂದ ನ್ಯಾಯ ಪಾಲನೆಯಾಗಬೇಕು
ವರದಿ: ವ್ಯಾಟಿಕನ್ ನ್ಯೂಸ್
ನ್ಯಾಯದ ಜ್ಯೂಬಿಲಿಯಲ್ಲಿ ಪೋಪ್ ಲಿಯೋ XIV ನ್ಯಾಯ ಮತ್ತು ಸಮಾಜದಲ್ಲಿ ಅದರ ಕಾರ್ಯದ ಬಗ್ಗೆ ಚಿಂತಿಸುತ್ತಾ, ಭಕ್ತಾಧಿಗಳನ್ನು "ದೇವರ ಮೇಲೆ ದೃಷ್ಟಿ ನೆಟ್ಟು, ಜನರ ಸೇವೆಯಲ್ಲಿ ನ್ಯಾಯದ ಪಾಲನೆಯನ್ನು ಯಾವಾಗಲೂ ಪೂರ್ಣವಾಗಿ ವ್ಯಕ್ತಪಡಿಸಲು" ಆಹ್ವಾನಿಸಿದರು.
ಸೇಂಟ್ ಪೀಟರ್ಸ್ ಚೌಕದಲ್ಲಿ ನೆರೆದಿದ್ದ ಯಾತ್ರಾರ್ಥಿಗಳ ದೊಡ್ಡ ಗುಂಪನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಲಿಯೋ, ಸಮಾಜದ ಕ್ರಮಬದ್ಧ ಅಭಿವೃದ್ಧಿಗೆ ಮತ್ತು ಪ್ರತಿಯೊಬ್ಬ ಪುರುಷ ಮತ್ತು ಮಹಿಳೆಯ ಆತ್ಮಸಾಕ್ಷಿಯನ್ನು ಪ್ರೇರೇಪಿಸುವ ಮತ್ತು ಮಾರ್ಗದರ್ಶನ ಮಾಡುವ ಒಂದು ಪ್ರಮುಖ ಸದ್ಗುಣವಾಗಿ ನ್ಯಾಯವು ಅನಿವಾರ್ಯವಾಗಿದೆ ಎಂದು ಒತ್ತಾಯಿಸಿದರು.
"ನ್ಯಾಯವನ್ನು ಪ್ರೀತಿಸಿ ಮತ್ತು ಕೆಟ್ಟದ್ದನ್ನು ತಪ್ಪಿಸಿ" ಎಂಬ ಬೈಬಲ್‌ನ ಉಪದೇಶವನ್ನು ಮತ್ತು "ಪ್ರತಿಯೊಬ್ಬರಿಗೂ ಅವರವರ ಅರ್ಹತೆಯನ್ನು ಸಲ್ಲಿಸುವುದು" ಎಂಬ ನ್ಯಾಯದ ಸಾಂಪ್ರದಾಯಿಕ ವ್ಯಾಖ್ಯಾನವನ್ನು ನೆನಪಿಸಿಕೊಳ್ಳುತ್ತಾ, ಪೋಪ್ ಲಿಯೋ ಈ ರೀತಿಯ ನ್ಯಾಯವು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇರುವ "ಆಳವಾದ ಹಂಬಲವನ್ನು ತಣಿಸುವುದಿಲ್ಲ" ಎಂದು ಹೇಳಿದರು.
ನ್ಯಾಯವು "ವ್ಯಕ್ತಿಯ ಘನತೆ, ಇತರರೊಂದಿಗಿನ ಅವನ ಅಥವಾ ಅವಳ ಸಂಬಂಧ ಮತ್ತು ಸಹಬಾಳ್ವೆಯ ಸಾಮುದಾಯಿಕ ಆಯಾಮವನ್ನು ಅದರ ರಚನೆಗಳು ಮತ್ತು ಹಂಚಿಕೆಯ ನಿಯಮಗಳೊಂದಿಗೆ" ಒಂದುಗೂಡಿಸುತ್ತದೆ ಎಂದು ಪೋಪ್ ಲಿಯೋ ವಿವರಿಸಿದರು.
ನ್ಯಾಯವು "ಎಲ್ಲಕ್ಕಿಂತ ಹೆಚ್ಚಾಗಿ, ಒಂದು ಸದ್ಗುಣವಾಗಿದೆ; ಅಂದರೆ, ನಮ್ಮ ನಡವಳಿಕೆಯನ್ನು ವಿವೇಚನೆ ಮತ್ತು ನಂಬಿಕೆಗೆ ಅನುಗುಣವಾಗಿ ನಿಯಂತ್ರಿಸುವ ದೃಢ ಮತ್ತು ಸ್ಥಿರವಾದ ಮನೋಭಾವ" ಎಂದು ಪೋಪ್ ಲಿಯೋ ನೆನಪಿಸಿಕೊಂಡರು, ಇದು "ದೇವರು ಮತ್ತು ನಮ್ಮ ನೆರೆಹೊರೆಯವರಿಗೆ ಅವರ ಸಲ್ಲಬೇಕಾದದ್ದನ್ನು ಸಲ್ಲಿಸುವ ನಿರಂತರ ಮತ್ತು ದೃಢವಾದ ಇಚ್ಛೆಯನ್ನು" ಒಳಗೊಂಡಿದೆ ಎಂದು ಹೇಳಿದರು.
