ಹುಡುಕಿ

ಗಾಜಿನ ಹಾರ್ಪ್ ವಾದಕ ವೀರಪೋಂಗ್ ತವೀಸಾಕ್, 2026ರ ಜುಲೈ 25ರಂದು ನಡೆದ MISSION POSSIBLE Thailand Season 3ರಲ್ಲಿ ಕಲೆ ಮತ್ತು ಮೌನವಾದ ಆಲಿಸುವಿಕೆ ಮುಚ್ಚಿಕೊಂಡಿರುವ ಮಾನವ ಹೃದಯಗಳನ್ನೂ ಹೇಗೆ ತಲುಪಬಲ್ಲದು ಎಂಬುದನ್ನು ಹಂಚಿಕೊಳ್ಳುತ್ತಿರುವುದು. (ಚಿತ್ರ:ಥೈಲ್ಯಾಂಡ್‌ನ ಕಥೋಲಿಕ ಸಾಮಾಜಿಕ ಸಂವಹನ) ಗಾಜಿನ ಹಾರ್ಪ್ ವಾದಕ ವೀರಪೋಂಗ್ ತವೀಸಾಕ್, 2026ರ ಜುಲೈ 25ರಂದು ನಡೆದ MISSION POSSIBLE Thailand Season 3ರಲ್ಲಿ ಕಲೆ ಮತ್ತು ಮೌನವಾದ ಆಲಿಸುವಿಕೆ ಮುಚ್ಚಿಕೊಂಡಿರುವ ಮಾನವ ಹೃದಯಗಳನ್ನೂ ಹೇಗೆ ತಲುಪಬಲ್ಲದು ಎಂಬುದನ್ನು ಹಂಚಿಕೊಳ್ಳುತ್ತಿರುವುದು. (ಚಿತ್ರ:ಥೈಲ್ಯಾಂಡ್‌ನ ಕಥೋಲಿಕ ಸಾಮಾಜಿಕ ಸಂವಹನ) 

ಜ್ಞಾನದ ನಾದಗಳು: ಹೃದಯದಿಂದ ಆಲಿಸಲು ಪ್ರೇರಕವಾದ ಸಂಗೀತ

ಥಾಯ್ಲೆಂಡ್‌ನ ಕರಾವಳಿ ವಿಶ್ರಾಂತಿ ತಾಣವಾದ ಹುವಾ ಹಿನ್‌ನಲ್ಲಿ, ವಾರಾಂತ್ಯದಲ್ಲಿ ತಮ್ಮ ದಿಟ್ಟ ಆಲೋಚನೆಗಳನ್ನು ಸ್ಪಷ್ಟವಾದ ಸಾಮಾಜಿಕ ಕಾರ್ಯಗಳಾಗಿ ರೂಪಿಸಲು ಒಟ್ಟುಗೂಡಿದ್ದ 70 ಪ್ರೌಢಶಾಲಾ ವಿದ್ಯಾರ್ಥಿಗಳ ಮುಂದೆ ಗಾಜಿನ ಹಾರ್ಪ್‌ನ ನಾದ ಮೊಳಗಿತು.

ಲೇಖಕರು: ಚೈನಾರೊಂಗ್ ಮೊಂಥಿಯೆನ್ವಿಚಿಯೆಂಚೈ

ನೀರು ತುಂಬಿದ ವೈನ್ ಗ್ಲಾಸ್‌ಗಳ ಮೇಲೆ ವೀರಪೋಂಗ್ ತವೀಸಾಕ್ ತಮ್ಮ ಬೆರಳುಗಳನ್ನು ನವಿರಾಗಿ ಚಲಿಸುತ್ತಿದ್ದಂತೆ ಮಧುರವಾದ ಸೂಕ್ಷ್ಮ ನಾದಗಳು ಮೂಡಿದವು; ಮಕ್ಕಳು ತದೇಕಚಿತ್ತದಿಂದ ಆಲಿಸಿದರು. ಬಳಿಕ ಈ ಗಾಜಿನ ಹಾರ್ಪ್ ವಾದಕ ಬ್ಯಾಂಕಾಕ್‌ನ ಕಾರಾಗೃಹವೊಂದರಲ್ಲಿ ತಾವು ವಾದ್ಯ ನುಡಿಸಿದ್ದ ನೆನಪನ್ನು ಹಂಚಿಕೊಂಡು, ಕಲೆ ಮತ್ತು ಮೌನವಾಗಿ ಆಲಿಸುವ ಗುಣವು ಅತ್ಯಂತ ಮುಚ್ಚಿಕೊಂಡಿರುವ ಮಾನವ ಹೃದಯಗಳನ್ನೂ ಹೇಗೆ ತಲುಪಬಲ್ಲದು ಎಂಬುದನ್ನು ವಿವರಿಸಿದರು. ಜುಲೈ 25ರಿಂದ 27ರವರೆಗೆ ನಡೆದ ಮಿಷನ್ ಪಾಸಿಬಲ್ ಯೂಥ್ ಸೋಶಿಯಲ್ ಹ್ಯಾಕಥಾನಿನ ಮೂರನೇ ಆವೃತ್ತಿಯಲ್ಲಿ ತವೀಸಾಕ್ ನಾಲ್ವರು “ಮಾರ್ಗದರ್ಶಕರಲ್ಲಿ” ಒಬ್ಬರಾಗಿ ಭಾಗವಹಿಸಿದ್ದರು.

ಥಾಯ್ಲೆಂಡ್‌ನ ಕಥೋಲಿಕ ಶಿಕ್ಷಣ ಮಂಡಳಿ ಮತ್ತು ಲೈಕಾಸ್ ಸುದ್ದಿ ಸಂಸ್ಥೆ ಜಂಟಿಯಾಗಿ, ಥಾಯ್ಲೆಂಡ್‌ನ ಪ್ರವಾಸಿ ನಗರವಾದ ಹುವಾ ಹಿನ್‌ನ ಸಲೇಶಿಯನ್ ಧ್ಯಾನ ಕೇಂದ್ರ ಮತ್ತು ಹುವಾ ಹಿನ್ ವಿತ್ತಯಾಲೈ ಶಾಲೆಯಲ್ಲಿ “Together We Make a Better World Possible”(ಒಟ್ಟಾಗಿ ಉತ್ತಮ ಜಗತ್ತಿನ ನಿರ್ಮಾಣ ನಮ್ಮಿಂದ ಸಾಧ್ಯ) ಸಮಗ್ರ ಸಿನೊಡಲ್ ಧ್ಯೇಯದಡಿ, ಪ್ರೇರಣೆ, ಸಹಯೋಗದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಮತ್ತು ಭರವಸೆಯನ್ನು ಹಂಚಿಕೊಳ್ಳಲು ಈ ಕಾರ್ಯಕ್ರಮ ವೇದಿಕೆಯನ್ನು ಒದಗಿಸಿತು.

ಮೂರು ದಿನಗಳ ಅಂತ್ಯದಲ್ಲಿ, ಥಾಯ್ಲೆಂಡ್‌ನ ವಿವಿಧ y ಶಾಲೆಗಳನ್ನು ಪ್ರತಿನಿಧಿಸಿದ 12 ತಂಡಗಳು ತಮ್ಮ ಕನಸಿನ ಪರಿಹಾರಗಳನ್ನು ವಾಸ್ತವಕ್ಕೆ ತರಲು ಆರಂಭಿಕ ಹಣಕಾಸು ನೆರವು ಪಡೆಯುವ ಉದ್ದೇಶದಿಂದ ತಮ್ಮ ಯೋಜನೆಗಳನ್ನು ಮಂಡಿಸಲಿವೆ.

ವಿವಿಧ ಸಂಪ್ರದಾಯಗಳ ನಡುವೆ ಸಿನೊಡಲ್ ಮನೋಭಾವ

ಕಥೋಲಿಕ ಸಂಪ್ರದಾಯದಲ್ಲಿ ಬೇರೂರಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಹಿನ್ನೆಲೆಯವರು ಭಾಗವಹಿಸಿದ್ದು, ಅವರಲ್ಲಿ ಬಹುಪಾಲು ಬೌದ್ಧ ಧರ್ಮೀಯರಾಗಿದ್ದರು. ತಮ್ಮ ವಿಭಿನ್ನ ಧಾರ್ಮಿಕ ಹಿನ್ನೆಲೆಗಳ ಹೊರತಾಗಿಯೂ ಯುವ ಪ್ರತಿನಿಧಿಗಳು ಸಿನೊಡಾಲಿಟಿಯ ಮನೋಭಾವವನ್ನು ಅಳವಡಿಸಿಕೊಂಡರು. ದಿವಂಗತ ಜಗದ್ಗುರು ಫ್ರಾನ್ಸಿಸ್ ಅವರು ವಿಶೇಷವಾಗಿ ಉತ್ತೇಜಿಸಿದ್ದ ಈ ಪರಿಕಲ್ಪನೆಯು, ಧರ್ಮಸಭೆ ಮತ್ತು ಇಡೀ ಮಾನವ ಕುಟುಂಬವು ಆಳವಾಗಿ ಆಲಿಸಬೇಕು, ಒಟ್ಟಾಗಿ ನಡೆಯಬೇಕು ಮತ್ತು ಭರವಸೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡುತ್ತದೆ.

ಮನೋಭಾವಗಳ ಪರಿವರ್ತನೆ

ಜುಲೈ 25ರ ಮೊದಲ ದಿನವು ವಿದ್ಯಾರ್ಥಿಗಳು ತಮ್ಮ ಉದ್ದೇಶವನ್ನು ಸ್ಪಷ್ಟವಾಗಿ ಅರಿತುಕೊಳ್ಳುವುದರ ಮೇಲೆ ಕೇಂದ್ರೀಕೃತವಾಗಿತ್ತು. ಯುವ “ಹ್ಯಾಕರ್‌ಗಳಿಗೆ” ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ ಸಾಮಾಜಿಕ ನಾವೀನ್ಯಕಾರರು ತಮ್ಮ ಜೀವನದ ಸವಾಲುಗಳು, ಅವುಗಳನ್ನು ಎದುರಿಸಿದ ಸ್ಥೈರ್ಯ ಮತ್ತು ಭರವಸೆಯನ್ನು ಕಂಡುಕೊಂಡ ಅನುಭವಗಳನ್ನು ಹಂಚಿಕೊಂಡರು. ತಂಡಗಳು ತಮ್ಮ ಯೋಜನೆಯ ಪರಿಕಲ್ಪನೆಗಳನ್ನು ಇನ್ನಷ್ಟು ಸ್ಪಷ್ಟಗೊಳಿಸಲು ಆರಂಭಿಸಿದಾಗ ಅವರು ಮಾರ್ಗದರ್ಶನ ನೀಡಿದರು. ಒಬ್ಬ ಮಾರ್ಗದರ್ಶಕಿ ತಾವು ಮೂರು ಬಾರಿ ಕ್ಯಾನ್ಸರ್‌ ಎದುರಿಸಿದ ಅನುಭವವನ್ನು ಹಂಚಿಕೊಂಡು, ಅಚಲವಾದ ಸಕಾರಾತ್ಮಕ ಮನೋಭಾವವು ಸಹಿಸಲಾಗದಂತಿರುವ ನೋವನ್ನೂ ಹೇಗೆ ಶಕ್ತಿಯಾಗಿ ಪರಿವರ್ತಿಸಬಲ್ಲದು ಎಂಬುದನ್ನು ಒತ್ತಿಹೇಳಿದರು. ಮತ್ತೊಬ್ಬ ಮಾರ್ಗದರ್ಶಕರು ಸರ್ಕಾರಿ ಭವನದ ಹೊರಗೆ ಪ್ರತಿಭಟನಾಕಾರರೊಂದಿಗೆ ನೇರವಾಗಿ ಸಂವಾದ ನಡೆಸಿದ ಅನುಭವವನ್ನು ನೆನಪಿಸಿಕೊಂಡು, ಜನರೊಂದಿಗೆ ನಿಂತು ಅವರು ಅನುಭವಿಸುತ್ತಿರುವ ಅನ್ಯಾಯಗಳನ್ನು ಆಳವಾಗಿ ಆಲಿಸುವುದರ ಪರಿವರ್ತನಾತ್ಮಕ ಶಕ್ತಿಯನ್ನು ವಿವರಿಸಿದರು.

ಆ ದಿನದ ಪ್ರಮುಖ ಆಕರ್ಷಣೆಗಳಲ್ಲಿ ತವೀಸಾಕ್ ಅವರ ಗಾಜಿನ ಹಾರ್ಪ್ ವಾದನ ಮತ್ತು ಚಿಂತನೆ ಒಂದಾಗಿತ್ತು. “ಕಾರಾಗೃಹದಲ್ಲಿರುವವರ ಗಮನ ಸೆಳೆಯುವುದು ಒಂದು ವಿಷಯ. ಆದರೆ ನೀವು ನಿಜವಾಗಿಯೂ ಅವರಿಗಾಗಿ ಅಲ್ಲಿದ್ದೀರಿ ಎಂಬ ವಿಶ್ವಾಸವನ್ನು ಗಳಿಸುವುದು ಬಹಳ ಕಷ್ಟ,” ಎಂದು ತವೀಸಾಕ್ ಹೇಳಿದರು. “ಆದರೆ ಅವರ ಮುಂದೆ ನಾನು ಗಾಜಿನ ಹಾರ್ಪ್ ನುಡಿಸಿದಾಗ, ನಾನು ನಿಜವಾಗಿಯೂ ಅವರಿಗಾಗಿ ಅಲ್ಲಿದ್ದೇನೆ ಎಂಬುದನ್ನು ಅವರು ಅನುಭವಿಸುತ್ತಾರೆ. ಆಗಲೇ ನಾವು ಪರಸ್ಪರ ಆಲಿಸಲು ಸಿದ್ಧರಾಗುತ್ತೇವೆ.” ಯುವ ಸಾಮಾಜಿಕ ಹ್ಯಾಕಥಾನ್‌ನಲ್ಲಿ ಭಾಗವಹಿಸಿದ್ದ ಯುವಜನರೂ ಇದೇ ಅನುಭವವನ್ನು ವ್ಯಕ್ತಪಡಿಸಿದರು.

“ಸಂಗೀತವು ನಮ್ಮ ಸಂಪೂರ್ಣ ಗಮನವನ್ನು ಸೆಳೆಯಿತು ಮತ್ತು ಅವರು ಹೇಳಿದ್ದನ್ನು ಆಳವಾಗಿ ಆಲಿಸಲು ನಮಗೆ ಸಹಾಯ ಮಾಡಿತು,” ಎಂದು ಥೋನ್‌ಬುರಿಯ ಸೇಂಟ್ ಪೀಟರ್ಸ್ ಶಾಲೆಯ 11ನೇ ತರಗತಿ ವಿದ್ಯಾರ್ಥಿ ಕಾರ್ನ್ ಹೇಳಿದರು. “ನಮ್ಮ ಹ್ಯಾಕಿಂಗ್‌ನಲ್ಲಿ ಕೇವಲ ತಾಂತ್ರಿಕ ಬುದ್ಧಿಮತ್ತೆಯನ್ನಲ್ಲ, ನಿಜವಾದ ಜ್ಞಾನವನ್ನು ಬಳಸಬೇಕು ಎಂಬುದನ್ನು ಅದು ನಮಗೆ ಕಲಿಸಿತು.” ಕಾರ್ನ್ ಅವರ ಸಹಪಾಠಿ ನೊಪ್ಪನಂಟ್ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಗಾಜಿನ ಹಾರ್ಪ್‌ನಂತಹ ಅಸಾಂಪ್ರದಾಯಿಕ ಮಾಧ್ಯಮವು ಸಾಮಾಜಿಕ ಯೋಜನೆಗಳ ಮೂಲಕ ಜನರ ಜೀವನವನ್ನು ಸ್ಪರ್ಶಿಸುವ ಸೃಜನಾತ್ಮಕ ಮಾರ್ಗಗಳತ್ತ ತಮ್ಮ ಕಣ್ಣು ತೆರೆಸಿತು ಎಂದು ಹೇಳಿದರು.

ಆಲೋಚನೆಗಳಿಂದ ಕಾರ್ಯದತ್ತ: ಮುಂದಿನ ಹಾದಿ

ಜುಲೈ 26ರಂದು ತೀವ್ರವಾದ “ಹ್ಯಾಕಿಂಗ್” ಅವಧಿಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾದಾಗ, ವೃತ್ತಿಪರ ಭಾಷಣ ತರಬೇತುದಾರರು ಯುವ ತಂಡಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದರು. ಆರಂಭಿಕ ವಿಚಾರಮಂಥನದಿಂದ ಯೋಜಿತ ಹಾಗೂ ಅನುಷ್ಠಾನಗೊಳಿಸಬಹುದಾದ ಪರಿಹಾರಗಳತ್ತ ಸಾಗಲು ಅವರಿಗೆ ಮಾರ್ಗದರ್ಶನ ನೀಡಿದರು. ವಿವಿಧ ಶಾಲೆಗಳು ಮತ್ತು ಪ್ರದೇಶಗಳ ಗಡಿಗಳನ್ನು ಮೀರಿ ಹೊಸ ಸ್ನೇಹಗಳು ರೂಪುಗೊಂಡವು. ವೈಯಕ್ತಿಕ ಒಳನೋಟಗಳು ಸಾಮೂಹಿಕ ಮುನ್ನಡೆಯ ಶಕ್ತಿಯಾಗಿ ಪರಿವರ್ತಿತವಾದವು.

ಜುಲೈ 27ರ ಅಂತಿಮ ಪ್ರದರ್ಶನದತ್ತ ಹ್ಯಾಕಥಾನ್ ಸಾಗುತ್ತಿದ್ದಂತೆ, ಯುವ ಭಾಗವಹಿಸುವವರು ಕೇವಲ ಸಿದ್ಧಾಂತಕ್ಕೆ ಸೀಮಿತವಾಗದೆ ಸಕ್ರಿಯ ನಾಗರಿಕತ್ವದತ್ತ ಹೆಜ್ಜೆ ಇಡಲು ಆರಂಭಿಸಿದರು. ತಮ್ಮ ಯೋಜನೆಗಳನ್ನು ಮಂಡಿಸಲು ಸಿದ್ಧರಾಗುತ್ತಿದ್ದ ಯುವ ತಂಡಗಳನ್ನು ಉದ್ದೇಶಿಸಿ ಆಯೋಜಕರು ಹೀಗೆ ಸಲಹೆ ನೀಡಿದರು:

“ನೀವು ನಿಮ್ಮ ಆಲೋಚನೆಯನ್ನು ಮಂಡಿಸಿ, ಅದನ್ನು ನಿಜವಾಗಿಯೂ ಅನುಷ್ಠಾನಗೊಳಿಸಲು ಅಗತ್ಯವಾದ ಹಣಕಾಸು ನೆರವನ್ನು ಪಡೆದಾಗ, ನಿಮ್ಮ ಜೀವನವನ್ನೂ, ಇತರರ ಜೀವನವನ್ನೂ ಮತ್ತು ವಿಶಾಲ ಸಮಾಜವನ್ನೂ ಬದಲಾಯಿಸಬಹುದು ಎಂಬುದನ್ನು ನಾನು ನಿಜವಾಗಿಯೂ ನಂಬುತ್ತೇನೆ. ಆದರೆ ಹಣಕಾಸು ನೆರವು ಪಡೆಯುವುದು ಬಹುಮಾನವಲ್ಲ; ಅದು ಒಂದು ಹೊಣೆ ಮತ್ತು ಜವಾಬ್ದಾರಿ—ಉತ್ತಮ ಜಗತ್ತನ್ನು ವಾಸ್ತವವಾಗಿಸುವ ಒಂದು ಧ್ಯೇಯ.”

ಸೃಜನಾತ್ಮಕ ತಂತ್ರಜ್ಞಾನವನ್ನು ಮಾನವೀಯ ಸಹಾನುಭೂತಿಯೊಂದಿಗೆ ಸಂಯೋಜಿಸುವ ಮೂಲಕ—ಮಾನವತೆಯ ಮಹತ್ವವನ್ನು ಎತ್ತಿಹಿಡಿಯುತ್ತಾ—MISSION POSSIBLEನ ಯುವ ಭಾಗವಹಿಸುವವರು ಆಳವಾದ ಆಲಿಸುವಿಕೆಯು ನಾವೀನ್ಯತೆಯನ್ನು ಹೆಚ್ಚು ನ್ಯಾಯಯುತ ಮತ್ತು ಸಾಮರಸ್ಯಪೂರ್ಣ ಜಗತ್ತಿನತ್ತ ಹೇಗೆ ಮುನ್ನಡೆಸಬಲ್ಲದು ಎಂಬುದನ್ನು ತೋರಿಸುತ್ತಿದ್ದಾರೆ.

ಈ ಲೇಖನವು ಮೂಲತಃ LiCAS Newsನಲ್ಲಿ ಪ್ರಕಟಗೊಂಡಿದೆ. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಮೂರನೇ ವ್ಯಕ್ತಿಗಳಿಂದ ಅನಧಿಕೃತ ಮರುಪ್ರಕಟಣೆಗೆ ಅನುಮತಿ ಇಲ್ಲ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

01 ಆಗಸ್ಟ್ 2026, 18:32