ವಿಯೆಟ್ನಾಂನ ಲಾ ವಾಂಗ್‌ನ ಮರಿಯಮ್ಮನವರ ಪುಣ್ಯಕ್ಷೇತ್ರ ವಿಯೆಟ್ನಾಂನ ಲಾ ವಾಂಗ್‌ನ ಮರಿಯಮ್ಮನವರ ಪುಣ್ಯಕ್ಷೇತ್ರ 

ವಿಯೆಟ್ನಾಂನ ಲಾ ವಾಂಗ್‌ನ ಮಾತೆಯ ಪುಣ್ಯಕ್ಷೇತ್ರಕ್ಕೆ ತೀರ್ಥಯಾತ್ರೆ ಕೈಗೊಂಡಿರುವ ವಿಯೆಟ್ನಾಂ ಕಥೋಲಿಕರು

“ಶುಭಸಂದೇಶವಾಹಕಿ ಮರಿಯಮ್ಮ” ಎಂಬ ವಿಷಯವನ್ನು ಕೇಂದ್ರವಾಗಿಸಿಕೊಂಡು, ಲಾ ವಾಂಗ್‌ನ ಮಾತೆಯ ಗೌರವಾರ್ಥವಾಗಿ ನಡೆದ 32ನೇ ರಾಷ್ಟ್ರೀಯ ಲಾ ವಾಂಗ್ ತೀರ್ಥಯಾತ್ರಾ ಮಹಾಸಭೆಯು ಧ್ಯಾನ ಮತ್ತು ಪ್ರಾರ್ಥನೆಯ ಸಮಯದೊಂದಿಗೆ ನಡೆಯಿತು. “ವಿಯೆಟ್ನಾಂನಲ್ಲಿ ಲಾ ವಾಂಗ್ ಎಂದರೆ ಲೂರ್ದು ಪುಣ್ಯಕ್ಷೇತ್ರದಂತೆ,” ಎಂದು ಪ್ಯಾರಿಸ್ ವಿದೇಶಿ ಮಿಷನ್‌ಗಳ ವಿಯೆಟ್ನಾಂ ಮೂಲದ ಗುರುವಾದ ವಂ.ಗುರು ಲ್ಯಾಂಡ್ರಿ ವರೆನ್ ಹೇಳುತ್ತಾರೆ. ವಿಶೇಷವಾಗಿ ಮರಿಯಮ್ಮನವರ ಸ್ವರ್ಗಸ್ವೀಕಾರ ಮಹೋತ್ಸವದ ಸಂದರ್ಭದಲ್ಲಿ ನಡೆಯುವ ಭವ್ಯ ತೀರ್ಥಯಾತ್ರೆಗಳನ್ನು ಉಲ್ಲೇಖಿಸಿ ಅವರು ಈ ಮಾತನ್ನು ಹೇಳಿದರು.

ಲೇಖಕರು: ಪಾವ್ಲೊ ಅಫ್ಫತಾತೊ

ಆಗಸ್ಟ್ 13ರಿಂದ 15ರವರೆಗೆ, ವಿಯೆಟ್ನಾಂನ ಹ್ಯೂ ಧರ್ಮಕ್ಷೇತ್ರದಲ್ಲಿರುವ ಲಾ ವಾಂಗ್‌ನ ಮಾತೆಯ ರಾಷ್ಟ್ರೀಯ ಪುಣ್ಯಕ್ಷೇತ್ರದಲ್ಲಿ ಸಾಂತ್ವನ ಪಡೆಯಲು ಹಾಗೂ ಕ್ರಿಸ್ತನ ನಿಜವಾದ ಶಿಷ್ಯರಾಗಲು ಮತ್ತು ಧರ್ಮಪ್ರಚಾರಕರಾಗಲು ಕಲಿಯುವ ಉದ್ದೇಶದಿಂದ, ಮೇರಿ ಮಾತೆಯ ಬಳಿ ಅಂದರೆ "ಮಾತೆಯ ಮನೆಗೆ" ತೆರಳುವ ವಿಷಯದ ಅಡಿಯಲ್ಲಿ ಭವ್ಯ ಆಚರಣೆಗಳು ನಡೆದವು.

“ವಿಯೆಟ್ನಾಂ ಜನರ ನಂಬಿಕೆಯ ಹೃದಯಭಾಗದಲ್ಲಿಯೇ ಈ ಪುಣ್ಯಕ್ಷೇತ್ರವಿದೆ. ಐತಿಹಾಸಿಕ ಮತ್ತು ಸಾಂಸ್ಕೃತಿಕ ಕಾರಣಗಳಿಂದ ವಿಯೆಟ್ನಾಂ ಜನರು ಲಾ ವಾಂಗ್‌ನ ಮಾತೆಯ ಬಗ್ಗೆ ವಿಶೇಷ ಭಕ್ತಿಯನ್ನು ಹೊಂದಿದ್ದಾರೆ. ವಿಯೆಟ್ನಾಂನಲ್ಲಿ ಲಾ ವಾಂಗ್ ಎಂದರೆ ಲೂರ್ದು ಪುಣ್ಯಕ್ಷೇತ್ರದಂತಿದೆ,” ಎಂದು ಪ್ಯಾರಿಸ್ ವಿದೇಶಿ ಮಿಷನ್‌ಗಳ ವಿಯೆಟ್ನಾಂ ಮೂಲದ ಗುರುವಾದ ವಂ.ಗುರು ಲ್ಯಾಂಡ್ರಿ ವರೆನ್ ಹೇಳುತ್ತಾರೆ. ಮರಿಯಮ್ಮನ ಸ್ವರ್ಗಸ್ವೀಕಾರ ಮಹೋತ್ಸವದ ಸಂದರ್ಭದಲ್ಲಿ ನಡೆಯುವ ಭವ್ಯ ತೀರ್ಥಯಾತ್ರೆಗಳನ್ನು ಅವರು ಉಲ್ಲೇಖಿಸುತ್ತಾರೆ.

ಉತ್ತರ, ದಕ್ಷಿಣ ಮತ್ತು ಮಧ್ಯ ವಿಯೆಟ್ನಾಂನಿಂದ ಮಾತ್ರವಲ್ಲದೆ, ವಿದೇಶಗಳಲ್ಲಿ ನೆಲೆಸಿರುವ ವಿಯೆಟ್ನಾಂ ಸಮುದಾಯಗಳಿಂದಲೂ ತೀರ್ಥಯಾತ್ರಿಕರು ಆಗಮಿಸಿದರು. ಸ್ಥಳೀಯ ಧರ್ಮಸಭೆಯ ಅಂದಾಜಿನ ಪ್ರಕಾರ, ಈ ವರ್ಷ ತೀರ್ಥಯಾತ್ರಿಕರ ಸಂಖ್ಯೆ 2 ಲಕ್ಷಕ್ಕೂ ಅಧಿಕವಾಗಿತ್ತು.

ವಿಯೆಟ್ನಾಂ ಜನರಿಗೆ ಒಂದು ಮಾದರಿ

ವಂ.ಗುರು ಫ್ರಾನ್ಸಿಸ್ ಜನರ ನಂಬಿಕೆಯನ್ನು ಕುರಿತು ಹೀಗೆ ಹೇಳುತ್ತಾರೆ: “1789ರಲ್ಲಿ ನಮ್ಮ ಪೂರ್ವಜರಿಗೆ ಮರಿಯಮ್ಮ ನೀಡಿದ ಸಂದೇಶವನ್ನು ಎಲ್ಲರೂ ನಂಬುತ್ತಾರೆ—ಅವರು ಎಂದಿಗೂ ನಮ್ಮನ್ನು ತೊರೆಯುವುದಿಲ್ಲ. ನಮ್ಮ ತಾಯಿಯು ನಮ್ಮ ಪ್ರಾರ್ಥನೆಗಳನ್ನು ಕೇಳುತ್ತಾರೆ ಎಂಬ ನಂಬಿಕೆ ನಮಗಿದೆ. ದೇಶಕ್ಕಾಗಿ, ವಿಯೆಟ್ನಾಂನ ಧರ್ಮಸಭೆಗಾಗಿ ಮತ್ತು ಶಾಂತಿಗಾಗಿ ನಾವು ಮಾಡುವ ಪ್ರಾರ್ಥನೆಗಳನ್ನು ಅವರು ಕೇಳುತ್ತಾರೆ.”

ಅವರ ಭಕ್ತಿ ಪವಿತ್ರ ಬಲಿಪೂಜೆ, ಪಾಪನಿವೇದನೆಯ ಸಂಸ್ಕಾರ, ಶಿಲುಬೆಯ ಹಾದಿಯ ಪ್ರಾರ್ಥನೆ ಮತ್ತು ಕರುಣೆಯ ಘಳಿಗೆಯ ಆಚರಣೆ ಮೊದಲಾದ ಧಾರ್ಮಿಕ ಆಚರಣೆಗಳ ಮೂಲಕ ವ್ಯಕ್ತವಾಗುತ್ತದೆ. “ವಿಶ್ವಾಸಿಗಳು ತಾಯಿಯ ಹೃದಯದಲ್ಲಿಯೇ, ಆಕೆಯ ರಕ್ಷಣೆಯ ಹೊದಿಕೆಯ ಅಡಿಯಲ್ಲಿ ಇರುವ ಅನುಭವವನ್ನು ಪಡೆಯುತ್ತಾರೆ; ಮರಿಯಮ್ಮ ಅವರ ಆಶ್ರಯವಾಗಿದ್ದಾರೆ,” ಎಂದು ಅವರು ಒತ್ತಿಹೇಳಿದರು.

ಇದರೊಂದಿಗೆ ಮಿಷನರಿ ಆಯಾಮವೂ ಇದೆ. ಈ ವರ್ಷದ ತೀರ್ಥಯಾತ್ರಾ ಮಹಾಸಭೆಯಲ್ಲಿ ಇದಕ್ಕೆ ವಿಶೇಷ ಮಹತ್ವ ನೀಡಲಾಯಿತು. “ಮರಿಯಮ್ಮನ ಮಾದರಿಯನ್ನು ಅನುಸರಿಸಿ, ಪ್ರಭುವನ್ನೂ ಅವರ ಪ್ರೀತಿಯನ್ನೂ ಇತರರಿಗೆ ಕೊಂಡೊಯ್ಯಲು ಜನರು ಕಲಿಯುತ್ತಾರೆ,” ಎಂದು ಅವರು ವಿವರಿಸಿದರು.

ಭಕ್ತಿಯ ಮೂಲಗಳು

ಲಾ ವಾಂಗ್‌ನ ಮರಿಯಮ್ಮನ ಮೇಲಿನ ಭಕ್ತಿಯ ಮೂಲಗಳು 1798ನೇ ವರ್ಷಕ್ಕೆ ಸೇರಿವೆ. ಅದು ವಿಯೆಟ್ನಾಂನ ಕ್ರೈಸ್ತರ ಇತಿಹಾಸದಲ್ಲಿನ ಅತ್ಯಂತ ಕಠಿಣ ಹಿಂಸೆಯ ಕಾಲಗಳಲ್ಲಿ ಒಂದಾಗಿತ್ತು. ಚಕ್ರವರ್ತಿ ಕ್ಯಾನ್ ಥಿನ್ ದೇವಾಲಯಗಳನ್ನು ನಾಶಪಡಿಸುವಂತೆ ಮತ್ತು ಕಥೋಲಿಕರನ್ನು ಹಿಂಸಿಸುವಂತೆ ಆದೇಶಿಸಿದ್ದನು. ಅವರನ್ನು “ವಿದೇಶಿ ಧರ್ಮದ” ಅನುಯಾಯಿಗಳೆಂದು ಪರಿಗಣಿಸಲಾಗುತ್ತಿತ್ತು. ಅನೇಕರು ತಮ್ಮ ಮನೆಗಳನ್ನು ತೊರೆದು ಓಡಿಹೋಗಬೇಕಾಯಿತು. ಅವರು ಲಾ ವಾಂಗ್‌ನ ದಟ್ಟ ಕಾಡಿನಲ್ಲಿ ಆಶ್ರಯ ಪಡೆದರು. ಅಲ್ಲಿ ಹಸಿವು, ಅನಾರೋಗ್ಯ ಮತ್ತು ಚಳಿಯನ್ನು ಸಹಿಸಿಕೊಂಡು, ತಾವು ಪತ್ತೆಯಾಗಬಹುದು ಮತ್ತು ಕೊಲ್ಲಲ್ಪಡಬಹುದು ಎಂಬ ಭಯದಲ್ಲಿದ್ದರು.

ಪ್ರತಿದಿನ ಸಂಜೆ ನಿರಾಶ್ರಿತರು ಒಂದು ದೊಡ್ಡ ಆಲದ ಮರದ ಕೆಳಗೆ ಸೇರಿ, ಬೆಂಕಿ ಹಚ್ಚಿ, ಜಪಸರ ಪ್ರಾರ್ಥನೆ ಮಾಡುತ್ತಿದ್ದರು. ಅಂತಹ ಒಂದು ರಾತ್ರಿ ಪ್ರಾರ್ಥನೆಯ ಸಂದರ್ಭದಲ್ಲಿ, ಬೆಳಕಿನಿಂದ ಆವೃತಳಾದ ಒಬ್ಬ ಮಹಿಳೆ ಕಾಣಿಸಿಕೊಂಡಳು. ಸಾಂಪ್ರದಾಯಿಕ ವಿಯೆಟ್ನಾಂ ಉಡುಪನ್ನು ಧರಿಸಿದ್ದ ಆಕೆ ತನ್ನ ತೋಳುಗಳಲ್ಲಿ ಬಾಲ ಯೇಸುವನ್ನು ಹಿಡಿದುಕೊಂಡಿದ್ದಳು ಮತ್ತು ಇಬ್ಬರು ದೇವದೂತರು ಆಕೆಯೊಂದಿಗೆ ಇದ್ದರು.

ಆಕೆಯ ಸಂದೇಶವು ಮುಖ್ಯವಾಗಿ ಸಾಂತ್ವನದ ಸಂದೇಶವಾಗಿತ್ತು: “ನನ್ನ ಮಕ್ಕಳೇ, ಧೈರ್ಯವಾಗಿರಿ ಮತ್ತು ನಂಬಿಕೆಯಲ್ಲಿ ಸ್ಥಿರರಾಗಿರಿ. ನಿಮ್ಮ ಪ್ರಾರ್ಥನೆಗಳನ್ನು ನಾನು ಕೇಳಿದ್ದೇನೆ.” ಮರಿಯಮ್ಮ ವಿಯೆಟ್ನಾಂ ಮಹಿಳೆಯ ಸ್ವರೂಪ ಮತ್ತು ಉಡುಪಿನಲ್ಲಿಯೇ ಕಾಣಿಸಿಕೊಂಡದ್ದು ಮಹತ್ವದ್ದಾಗಿದೆ. ವಿಶೇಷವಾಗಿ 20ನೇ ಶತಮಾನದ ಅಂತ್ಯದಿಂದ ಸ್ಥಳೀಯ ಧರ್ಮಸಭೆಯ ಮೂಲಕ ವ್ಯಾಪಕವಾಗಿ ಪ್ರಸಾರವಾದ ಆಕೆಯ ಚಿತ್ರವು ನಂಬಿಕೆ ಮತ್ತು ಜನರ ಅಸ್ತಿತ್ವದ ನಡುವಿನ ಆಳವಾದ ಸಂಬಂಧವನ್ನು ವ್ಯಕ್ತಪಡಿಸುತ್ತದೆ. ಶತಮಾನಗಳ ಕಾಲ ಕಥೋಲಿಕರು “ವಿದೇಶಿ ಧರ್ಮದ” ಅನುಯಾಯಿಗಳೆಂದು ಆರೋಪಿಸಲ್ಪಟ್ಟ ನಂತರ, ಲಾ ವಾಂಗ್ ಇಂದು “ಒಬ್ಬ ವ್ಯಕ್ತಿ ಸಂಪೂರ್ಣವಾಗಿ ಕಥೋಲಿಕನಾಗಿಯೂ, ಅದೇ ಸಮಯದಲ್ಲಿ ಸಂಪೂರ್ಣವಾಗಿ ವಿಯೆಟ್ನಾಂನವನಾಗಿಯೂ ಇರಲು ಸಾಧ್ಯವಿದೆ ಎಂಬುದಕ್ಕೆ ಸಾಕ್ಷಿಯಾಗಿದೆ” ಎಂದು ಧರ್ಮಾಧ್ಯಕ್ಷರು ಹೇಳುತ್ತಾರೆ.

ಜೀವಂತ ಸ್ಮರಣೆಯಾಗಿರುವ ನಂಬಿಕೆ

ಎಲ್ಲಕ್ಕಿಂತ ಮುಖ್ಯವಾಗಿ, ಇದು ತನ್ನ ಮಕ್ಕಳ ನೋವಿನಲ್ಲಿ ಪಾಲುಗೊಳ್ಳುವ ತಾಯಿಯ ಚಿತ್ರವಾಗಿದೆ. ಹಿಂಸೆಗೆ ಒಳಗಾದವರು, ಅನಾರೋಗ್ಯದಿಂದ ಬಳಲಿದವರು ಮತ್ತು ರಕ್ಷಣೆಯಿಲ್ಲದೆ ನಿರಾಶ್ರಿತರಾದವರ ಮುಂದೆ ಮರಿಯಮ್ಮ ಪ್ರತ್ಯಕ್ಷಳಾದಳು. ಈ ಕಾರಣದಿಂದ ಲಾ ವಾಂಗ್‌ನ ಮಾತೆ “ನಿರಾಶ್ರಿತರ ತಾಯಿ”ಯಾಗಿ ಪರಿಚಿತಳಾಗಿದ್ದಾಳೆ. ಯುದ್ಧಗಳು, ಆಕ್ರಮಣಗಳು ಮತ್ತು ಹಿಂಸೆಗಳಿಂದ ಗಾಯಗೊಂಡ ಜನರಿಗೆ ಆಕೆಯ ಸಾನ್ನಿಧ್ಯ ಸಾಂತ್ವನವನ್ನು ನೀಡುತ್ತದೆ.

ಇಂದಿಗೂ ತೀರ್ಥಯಾತ್ರಿಕರು ಈ ಸ್ಮರಣೆಯನ್ನು ಜೀವಂತವಾಗಿರಿಸಲು ಪ್ರಯತ್ನಿಸುತ್ತಾರೆ. ಅವರು ಆಲದ ಮರಗಳ ನೆರಳಿನಡಿಯಲ್ಲಿ ಗುಡಾರಗಳಲ್ಲಿ ನೆಲೆಸುತ್ತಾರೆ, ಜಪಸರ ಪ್ರಾರ್ಥನೆ ಮಾಡುತ್ತಾರೆ ಮತ್ತು ಆಚರಣೆಗಳ ಸಂದರ್ಭದಲ್ಲಿ ನಾಟಕೀಯ ಪ್ರದರ್ಶನಗಳ ಮೂಲಕ 1798ರ ನಿರಾಶ್ರಿತರ ಪಲಾಯನ ಹಾಗೂ ಕನ್ಯಾಮರಿಯಮ್ಮನ ದರ್ಶನದ ಘಟನೆಯನ್ನು ಸ್ಮರಿಸುತ್ತಾರೆ. ಹೀಗೆ ಮರಿಯಮ್ಮನ ಮೇಲಿನ ಭಕ್ತಿ ನಂಬಿಕೆಯ ಇತಿಹಾಸವನ್ನು ಸ್ಥಳೀಯ ಸಮುದಾಯಗಳ ನೈಜ ಜೀವನದೊಂದಿಗೆ ಸಂಪರ್ಕಿಸುವ ಜೀವಂತ ಸ್ಮರಣೆಯಾಗಿ ಮುಂದುವರಿಯುತ್ತಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

18 ಆಗಸ್ಟ್ 2026, 23:46