2025ರ ನವೆಂಬರ್‌ನಲ್ಲಿ ನಡೆದ ಮೂವತ್ತಮೂರರ ಮಾತೆಯ ರಾಷ್ಟ್ರೀಯ ತೀರ್ಥಯಾತ್ರೆ 2025ರ ನವೆಂಬರ್‌ನಲ್ಲಿ ನಡೆದ ಮೂವತ್ತಮೂರರ ಮಾತೆಯ ರಾಷ್ಟ್ರೀಯ ತೀರ್ಥಯಾತ್ರೆ 

ಉರುಗ್ವೆಯ ಧರ್ಮಸಭೆ: ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಭೇಟಿ ವಿಶ್ವಾಸ ಮತ್ತು ಭರವಸೆಯನ್ನು ಬಲಪಡಿಸಲಿದೆ

ನವೆಂಬರ್ 6ರಿಂದ 8ರವರೆಗೆ ನಡೆಯಲಿರುವ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಪ್ರೇಷಿತ ಭೇಟಿಯು ದೇಶಕ್ಕೆ ದೊರೆಯುವ ಅಮೂಲ್ಯ ಕೊಡುಗೆಯಾಗಿದ್ದು, ಶುಭಸಂದೇಶ ಪ್ರಚಾರವನ್ನು ಬಲಪಡಿಸಲು, ಭರವಸೆಯನ್ನು ನವೀಕರಿಸಲು ಮತ್ತು ಉರುಗ್ವೆ ಜನರ ಕ್ರೈಸ್ತ ಬೇರುಗಳನ್ನು ಪುನರುಚ್ಚರಿಸಲು ಇದೊಂದು ಮಹತ್ವದ ಅವಕಾಶವಾಗಿದೆ ಎಂದು ಉರುಗ್ವೆ ಧರ್ಮಾಧ್ಯಕ್ಷರ ಸಮ್ಮೇಳನದ ಅಧ್ಯಕ್ಷ ಧರ್ಮಾಧ್ಯಕ್ಷ ಮಿಲ್ಟನ್ ಟ್ರೊಕೊಲಿ ಹೇಳಿದ್ದಾರೆ.

ಲೇಖಕರು: ಸೆಬಾಸ್ಟಿಯನ್ ಸಾನ್ಸೋನ್ ಫೆರಾರಿ

ಲ್ಯಾಟಿನ್ ಅಮೆರಿಕ ಭೇಟಿಯ ಮೊದಲ ಹಂತವಾಗಿ ನವೆಂಬರ್ 6ರಿಂದ 8ರವರೆಗೆ ನಡೆಯಲಿರುವ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಪ್ರೇಷಿತ ಪ್ರಯಾಣದ ಘೋಷಣೆಯನ್ನು ಉರುಗ್ವೆಯ ಧರ್ಮಸಭೆ ಅಪಾರ ಸಂತೋಷದಿಂದ ಸ್ವಾಗತಿಸಿದೆ. ಉರುಗ್ವೆ ಧರ್ಮಾಧ್ಯಕ್ಷರ ಸಮ್ಮೇಳನದ ಅಧ್ಯಕ್ಷ ಧರ್ಮಾಧ್ಯಕ್ಷ ಮಿಲ್ಟನ್ ಟ್ರೊಕೊಲಿ ಅವರ ಪ್ರಕಾರ, ಪೂಜ್ಯ ಜಗದ್ಗುರುಗಳ ಆಗಮನವು ಬಹುಕಾಲದಿಂದ ನಿರೀಕ್ಷಿಸಲಾಗಿದ್ದ ಕೃಪೆಯಾಗಿದೆ. ಇದು ಕಥೋಲಿಕ ಸಮುದಾಯಕ್ಕೆ ಉತ್ತೇಜನ ನೀಡುವುದರ ಜೊತೆಗೆ, ಅದರ ಶುಭಸಂದೇಶ ಪ್ರಚಾರದ ಧ್ಯೇಯವನ್ನು ಬಲಪಡಿಸಿ, ಇಡೀ ದೇಶಕ್ಕೆ ನವೀಕೃತ ಭರವಸೆಯ ಸಂದೇಶವನ್ನು ನೀಡಲಿದೆ.

ವ್ಯಾಟಿಕನ್ ವಾರ್ತಾ ಸಂಸ್ಥೆಯೊಂದಿಗೆ ಮಾತನಾಡಿದ ಮಾಲ್ಡೊನಾಡೊ–ಪುಂಟಾ ಡೆಲ್ ಎಸ್ಟೆ–ಮಿನಾಸ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು, ಪೇತ್ರರ ಉತ್ತರಾಧಿಕಾರಿಯ ಭೇಟಿಗಾಗಿ ಬಹುಕಾಲದಿಂದ ಕಾದಿದ್ದ ಧರ್ಮಸಭೆಯು ಈ ಸುದ್ದಿಯನ್ನು ಅಪಾರ ಉತ್ಸಾಹದಿಂದ ಸ್ವಾಗತಿಸಿದೆ ಎಂದು ಹೇಳಿದರು. “ನಾವು ಇದನ್ನು ನಿಜವಾಗಿಯೂ ಒಂದು ಕೊಡುಗೆಯಾಗಿ, ಆಶೀರ್ವಾದವಾಗಿ ಸ್ವೀಕರಿಸುತ್ತೇವೆ” ಎಂದು ಅವರು ಹೇಳಿದರು. ಪೂಜ್ಯ ಜಗದ್ಗುರುಗಳ ಉಪಸ್ಥಿತಿಯು ಎಲ್ಲ ವಿಶ್ವಾಸಿಗಳಿಗೆ ಸಾಮೀಪ್ಯ ಮತ್ತು ಅನ್ಯೋನ್ಯತೆಯ ಸಂಕೇತವಾಗಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.

ವಿಶ್ವಾಸಿಗಳನ್ನು ಬಲಪಡಿಸುವ ಕುರುಬ

ಪ್ರತಿಯೊಂದು ಪೂಜ್ಯ ಜಗದ್ಗುರುಗಳ ಭೇಟಿಯ ಆಳವಾದ ಪಾಲನಾ ಮಹತ್ವವನ್ನು ಧರ್ಮಾಧ್ಯಕ್ಷ ಟ್ರೊಕೊಲಿ ಒತ್ತಿಹೇಳಿದರು. ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಉರುಗ್ವೆಗೆ ಆಗಮಿಸಿ, ವಿಶ್ವಾಸದ ಪಯಣದಲ್ಲಿ ಧರ್ಮಸಭೆಯನ್ನು ಬಲಪಡಿಸಲಿದ್ದಾರೆ, ಶುಭಸಂದೇಶವನ್ನು ಸಾರುವುದನ್ನು ಮುಂದುವರಿಸಲು ಪ್ರೋತ್ಸಾಹಿಸಲಿದ್ದಾರೆ ಮತ್ತು ವಿಶ್ವಾಸಿಗಳನ್ನು ಧ್ಯೇಯನಿರತ ಶಿಷ್ಯರಾಗಿ ಅವರ ಕರೆಯಲ್ಲಿ ದೃಢಪಡಿಸಲಿದ್ದಾರೆ ಎಂದು ಅವರು ಹೇಳಿದರು. “ಅವರು ನಮ್ಮೆಲ್ಲರನ್ನೂ ಪ್ರೋತ್ಸಾಹಿಸಲಿದ್ದಾರೆ, ಶುಭಸಂದೇಶ ಪ್ರಚಾರದ ಹಾದಿಯಲ್ಲಿ ಮುಂದುವರಿಯಲು ನಮಗೆ ನೆರವಾಗಲಿದ್ದಾರೆ ಮತ್ತು ವಿಶ್ವಾಸದಲ್ಲಿ ನಮ್ಮನ್ನು ಬಲಪಡಿಸಲಿದ್ದಾರೆ” ಎಂದು ಅವರು ಹೇಳಿದರು.

ಅದೇ ಸಮಯದಲ್ಲಿ, ಈ ಭೇಟಿಯ ಪರಿಣಾಮವು ಧರ್ಮಸಭೆಯ ಗಡಿಗಳನ್ನು ಮೀರಿ ಉರುಗ್ವೆಯ ಇಡೀ ಸಮಾಜವನ್ನು ತಲುಪಲಿದೆ ಎಂದು ಧರ್ಮಾಧ್ಯಕ್ಷರು ತಿಳಿಸಿದರು. ಆತ್ಮವಿಶ್ವಾಸ ಮತ್ತು ಭರವಸೆಯನ್ನು ತುಂಬುವ ಸಂದೇಶಗಳ ಅಗತ್ಯವಿರುವ ಈ ಸಂದರ್ಭದಲ್ಲಿ, ಪೂಜ್ಯ ಜಗದ್ಗುರುಗಳ ಭೇಟಿ ಇಡೀ ದೇಶಕ್ಕೆ ಶುಭಸುದ್ದಿಯಾಗಲಿದೆ ಎಂದರು.

ಜಗದ್ಗುರುಗಳು ಶಾಂತಿ, ಸಂಧಾನ ಮತ್ತು ಏಕತೆಯ ನಿಜವಾದ ಸಂದೇಶವಾಹಕರಾಗಿ ಸ್ವಾಗತಿಸಲ್ಪಡಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು. “ಅವರು ನಮಗೆ ಮುಂದೆ ನೋಡಲು ಮತ್ತು ಇನ್ನೂ ವಿಶಾಲವಾಗಿ ನೋಡಲು ನೆರವಾಗಲಿದ್ದಾರೆ; ಹೊಸ ಮತ್ತು ಭರವಸೆಯ ದಿಗಂತವನ್ನು ತೆರೆಯಲಿದ್ದಾರೆ” ಎಂದು ಧರ್ಮಾಧ್ಯಕ್ಷ ಟ್ರೊಕೊಲಿ ಹೇಳಿದರು.

ಜಾತ್ಯತೀತ ಸಮಾಜದಲ್ಲಿ ಶುಭಸಂದೇಶ ಪ್ರಚಾರ

ಜಾತ್ಯತೀತತೆಯಿಂದ ಆಳವಾಗಿ ಪ್ರಭಾವಿತವಾಗಿರುವ ದೇಶದಲ್ಲಿ ಈ ಭೇಟಿಯ ಮಹತ್ವದ ಕುರಿತು ಕೇಳಿದಾಗ, ಪೂಜ್ಯ ಜಗದ್ಗುರುಗಳೊಂದಿಗಿನ ಭೇಟಿ ಧರ್ಮಸಭೆಯ ಗುರುತು ಮತ್ತು ಧ್ಯೇಯವನ್ನು ಬಲಪಡಿಸಲಿದೆ ಎಂಬ ವಿಶ್ವಾಸವನ್ನು ಉರುಗ್ವೆ ಧರ್ಮಾಧ್ಯಕ್ಷರ ಸಮ್ಮೇಳನದ ಅಧ್ಯಕ್ಷರು ವ್ಯಕ್ತಪಡಿಸಿದರು.

ತಮ್ಮ ಜಗದ್ಗುರು ಸೇವೆಯ ಆರಂಭದಿಂದಲೇ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಸಮಕಾಲೀನ ಜಗತ್ತಿನೊಂದಿಗೆ ಸಂವಾದ ನಡೆಸುವ ಮತ್ತು ವಿಶ್ವಾಸ ಹಾಗೂ ಸಮಾಜದ ನಡುವೆ ಮುಖಾಮುಖಿಯನ್ನು ಉತ್ತೇಜಿಸುವ ವಿಶೇಷ ಸಾಮರ್ಥ್ಯವನ್ನು ತೋರಿದ್ದಾರೆ.ಸಂವಾದ, ಗೌರವ ಮತ್ತು ಸೇವೆಯ ಮೂಲಕ ಶುಭಸಂದೇಶವನ್ನು ಸಾರಲು ಕರೆಯಲ್ಪಟ್ಟಿರುವ ಉರುಗ್ವೆಯ ಧರ್ಮಸಭೆಗೆ ಈ ವಿಧಾನವು ವಿಶೇಷವಾಗಿ ಮೌಲ್ಯಯುತವಾಗಲಿದೆ ಎಂದು ಅವರು ಹೇಳಿದರು.

ಪ್ರತಿಯೊಬ್ಬ ವ್ಯಕ್ತಿಯ ಘನತೆ ಮತ್ತು ಸಾಮಾನ್ಯ ಒಳಿತಿಗೆ ಬದ್ಧವಾಗಿರುವ ಹೆಚ್ಚು ಮಾನವೀಯ ಸಮಾಜದ ಅಡಿಪಾಯವಾಗಿ ಶುಭಸಂದೇಶದ ಮೌಲ್ಯಗಳನ್ನು ಉತ್ತೇಜಿಸಲು ಪೂಜ್ಯ ಜಗದ್ಗುರುಗಳ ಸಂದೇಶ ನೆರವಾಗಲಿದೆ ಎಂದು ಧರ್ಮಾಧ್ಯಕ್ಷ ಟ್ರೊಕೊಲಿ ಹೇಳಿದರು.

“ವಿಭಿನ್ನ ದೃಷ್ಟಿಕೋನಗಳು ಮತ್ತು ಸಂವೇದನೆಗಳಿದ್ದರೂ, ಇಡೀ ದೇಶವು ಪೂಜ್ಯ ಜಗದ್ಗುರುಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಅವರ ಸಂದೇಶವನ್ನು ಆಸಕ್ತಿಯಿಂದ ಆಲಿಸಲಿದೆ ಎಂದು ನಾನು ನಂಬುತ್ತೇನೆ.”

ಸಂತ ದ್ವಿತೀಯ ಜಾನ್ ಪಾಲರ ಹೆಜ್ಜೆಗುರುತುಗಳಲ್ಲಿ

ಉರುಗ್ವೆಗೆ ಎರಡು ಬಾರಿ ಭೇಟಿ ನೀಡಿದ್ದ ಸಂತ ದ್ವಿತೀಯ ಜಾನ್ ಪಾಲರ ನಂತರ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ದೇಶಕ್ಕೆ ಭೇಟಿ ನೀಡುವ ಎರಡನೇ ಜಗದ್ಗುರುಗಳಾಗಲಿದ್ದಾರೆ. ಧರ್ಮಾಧ್ಯಕ್ಷ ಟ್ರೊಕೊಲಿ ಅವರ ಪ್ರಕಾರ, ಈ ಭೇಟಿಗಳ ನಡುವೆ ಸ್ಪಷ್ಟವಾದ ನಿರಂತರತೆ ಇದೆ. ಏಕೆಂದರೆ ಇವೆರಡೂ ಉರುಗ್ವೆಯ ಧರ್ಮಸಭೆಯ ಮೇಲಿನ ಪೇತ್ರರ ಉತ್ತರಾಧಿಕಾರಿಯ ನಿರಂತರ ಪ್ರೀತಿಯನ್ನು ವ್ಯಕ್ತಪಡಿಸುತ್ತವೆ. ಸಂತ ದ್ವಿತೀಯ ಜಾನ್ ಪಾಲರ ಭೇಟಿಗಳು ಇಂದಿಗೂ ಅನೇಕ ವಿಶ್ವಾಸಿಗಳ ನೆನಪಿನಲ್ಲಿ ಜೀವಂತವಾಗಿವೆ ಎಂದು ಅವರು ಸ್ಮರಿಸಿದರು. ಹೊಸ ಪ್ರೇಷಿತ ಪ್ರಯಾಣವು ವಿಶ್ವವ್ಯಾಪಿ ಧರ್ಮಸಭೆಯೊಂದಿಗಿನ ಅನ್ಯೋನ್ಯತೆಯ ಆ ಅನುಭವವನ್ನು ಮತ್ತೆ ಜೀವಂತಗೊಳಿಸಲಿದೆ ಎಂದರು.

“ನಮ್ಮದು ಸಣ್ಣ ಧರ್ಮಸಭೆ. ಆದರೆ ರೋಮ್‌ನ ಧರ್ಮಸಭೆಯೊಂದಿಗೆ ಸದಾ ನಿಷ್ಠೆಯಿಂದ ಮತ್ತು ಅನ್ಯೋನ್ಯತೆಯಿಂದ ಉಳಿಯಲು ಪ್ರಯತ್ನಿಸುವ ಧರ್ಮಸಭೆ. ಪೂಜ್ಯ ಜಗದ್ಗುರುಗಳ ಉಪಸ್ಥಿತಿಯು ಸಮಾಜದೊಳಗೆ “ಬೆಳಕು, ಉಪ್ಪು ಮತ್ತು ಹುಳಿ”ಯಾಗಿ ಮುಂದುವರಿಯಲು ಧರ್ಮಸಭೆಯನ್ನು ಪ್ರೋತ್ಸಾಹಿಸಲಿದೆ ಎಂದು ಅವರು ಹೇಳಿದರು.

ಭೇಟಿಯ ಆಧ್ಯಾತ್ಮಿಕ ಕೇಂದ್ರದಲ್ಲಿ ಮೂವತ್ತಮೂರ ಮಾತೆ

ನವೆಂಬರ್ 8ರಂದು ನಡೆಯಲಿರುವ ಉರುಗ್ವೆಯ ಪಾಲಕಿಯಾದ ಮೂವತ್ತಮೂರು ಮಾತೆಯ ಮಹೋತ್ಸವದಲ್ಲಿ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಪಾಲ್ಗೊಳ್ಳುವುದು ಈ ಭೇಟಿಯ ಅತ್ಯಂತ ಮಹತ್ವದ ಕ್ಷಣಗಳಲ್ಲಿ ಒಂದಾಗಲಿದೆ. ಈ ವರ್ಷ ಮಹೋತ್ಸವವು ಭಾನುವಾರದಂದು ಬರುವುದರಿಂದ, ಪ್ರತಿವರ್ಷ ಮಹೋತ್ಸವದ ದಿನಕ್ಕೆ ಸಮೀಪದ ಭಾನುವಾರದಂದು ನಡೆಯುವ ಸಾಂಪ್ರದಾಯಿಕ ರಾಷ್ಟ್ರೀಯ ತೀರ್ಥಯಾತ್ರೆಗೆ ಇನ್ನಷ್ಟು ಮಹತ್ವ ದೊರೆಯಲಿದೆ ಎಂದು ಧರ್ಮಾಧ್ಯಕ್ಷ ಟ್ರೊಕೊಲಿ ಹೇಳಿದರು.

ಉರುಗ್ವೆಯ ರಾಷ್ಟ್ರೀಯ ಗುರುತು ಮತ್ತು ಇತಿಹಾಸದೊಂದಿಗೆ ನಿಕಟ ಸಂಬಂಧ ಹೊಂದಿರುವ ಮೂವತ್ತಮೂರು ಮಾತೆಯ ಪುಣ್ಯಕ್ಷೇತ್ರದಲ್ಲಿರುವ ಐತಿಹಾಸಿಕ ಮಾತೆಯ ಪ್ರತಿಮೆಯ ಮುಂದೆ ಪೂಜ್ಯ ಜಗದ್ಗುರುಗಳು ಪ್ರಾರ್ಥಿಸಲಿರುವುದಕ್ಕೆ ಧರ್ಮಾಧ್ಯಕ್ಷರು ಸಂತೋಷ ವ್ಯಕ್ತಪಡಿಸಿದರು. ಈ ಪ್ರಾರ್ಥನೆಯು ಮಾತೆ ಮರಿಯಮ್ಮನವರನ್ನು ತಾಯಿ ಮತ್ತು ಮಧ್ಯಸ್ಥಿಕೆಯವರಾಗಿ ಗೌರವಿಸುವ ಭಕ್ತಿಯನ್ನು ನವೀಕರಿಸುವುದರ ಜೊತೆಗೆ, ಉರುಗ್ವೆಯ ಕ್ರೈಸ್ತ ಬೇರುಗಳನ್ನು ನೆನಪಿಸಿ, ಇಂದಿನ ಕಾಲದಲ್ಲಿಯೂ ಅವುಗಳನ್ನು ಪೋಷಿಸುವ ಅಗತ್ಯವನ್ನು ಒತ್ತಿಹೇಳಲಿದೆ ಎಂದರು.

“ಪೂಜ್ಯ ಜಗದ್ಗುರುಗಳ ಉಪಸ್ಥಿತಿಯು ಎಲ್ಲ ತೀರ್ಥಯಾತ್ರಿಕರಿಗೂ ವಿಶೇಷ ಕೊಡುಗೆಯಾಗಲಿದೆ."

ಜನಭಕ್ತಿಯ ಜೀವಂತ ಮುಖ

ಉರುಗ್ವೆ ಜನರ ನಡುವೆ ಇಂದಿಗೂ ಜೀವಂತವಾಗಿರುವ ವಿಶ್ವಾಸದ ಅಭಿವ್ಯಕ್ತಿಯಾದ ಜನಭಕ್ತಿಯನ್ನು ನೇರವಾಗಿ ಕಾಣುವ ಅವಕಾಶವನ್ನು ಈ ಭೇಟಿ ಪವಿತ್ರ ತಂದೆಯವರಿಗೆ ನೀಡಲಿದೆ ಎಂದು ಧರ್ಮಾಧ್ಯಕ್ಷ ಟ್ರೊಕೊಲಿ ಹೇಳಿದರು. ಉರುಗ್ವೆಯನ್ನು ಈ ಪ್ರದೇಶದ ಅತ್ಯಂತ ಜಾತ್ಯತೀತ ರಾಷ್ಟ್ರಗಳಲ್ಲಿ ಒಂದೆಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತಿದ್ದರೂ, ಮಾತೆ ಮರಿಯಮ್ಮನವರ ಮೇಲಿನ ಭಕ್ತಿ ನಿರಂತರವಾಗಿ ಬೆಳೆಯುತ್ತಿದ್ದು, ಅನೇಕ ಜನರಿಗೆ ಭರವಸೆಯ ಮೂಲವಾಗಿ ಉಳಿದಿದೆ ಎಂದು ಅವರು ತಿಳಿಸಿದರು.

ಮಾತೆ ಮರಿಯಮ್ಮನವರು “ಸದಾ ತಮ್ಮ ಪುತ್ರನ ಕಡೆಗೆ ನೋಡುವಂತೆ ನಮ್ಮನ್ನು ಪ್ರೋತ್ಸಾಹಿಸುತ್ತಾರೆ” ಮತ್ತು ಜೀವನದ ಪಯಣದಲ್ಲಿ ಯಾರೂ ಏಕಾಂಗಿಗಳಲ್ಲ ಎಂಬುದನ್ನು ನೆನಪಿಸುತ್ತಾ ಜನರೊಂದಿಗೆ ಸಾಗುತ್ತಾರೆ ಎಂದು ಅವರು ವಿವರಿಸಿದರು. ಈ ಕಾರಣದಿಂದ, ತೀರ್ಥಯಾತ್ರಿಕರೊಂದಿಗೆ ಪೂಜ್ಯ ಜಗದ್ಗುರುಗಳ ಭೇಟಿ ಈ ಪ್ರಯಾಣದ ಅತ್ಯಂತ ಆಧ್ಯಾತ್ಮಿಕವಾಗಿ ಪ್ರಭಾವಶಾಲಿ ಕ್ಷಣಗಳಲ್ಲಿ ಒಂದಾಗಲಿದೆ ಎಂದು ಅವರು ಹೇಳಿದರು.

ಇಡೀ ಧರ್ಮಸಭೆಗೆ ಒಂದು ಪಾಲನಾ ಅವಕಾಶ

ಪೂಜ್ಯ ಜಗದ್ಗುರುಗಳ ಭೇಟಿಗಾಗಿ ಆಧ್ಯಾತ್ಮಿಕವಾಗಿ ಸಿದ್ಧರಾಗುವಂತೆ ಮತ್ತು ಅದನ್ನು ನಿಜವಾದ ಪಾಲನಾ ಅವಕಾಶವಾಗಿ ಸ್ವೀಕರಿಸುವಂತೆ ಧರ್ಮಾಧ್ಯಕ್ಷ ಟ್ರೊಕೊಲಿ ಉರುಗ್ವೆಯ ಇಡೀ ಧರ್ಮಸಭೆಗೆ ಆಹ್ವಾನ ನೀಡಿದರು. ತನ್ನ ಧ್ಯೇಯದಲ್ಲಿ ಜೊತೆಗಾರಿಕೆ ಮತ್ತು ಬಲವರ್ಧನೆಯ ಅಗತ್ಯವಿರುವ “ಚಿಕ್ಕ ಹಿಂಡಿಗೆ” ಬೆಂಬಲ ನೀಡಲು ಪೂಜ್ಯ ಜಗದ್ಗುರುಗಳು ವಿಶ್ವವ್ಯಾಪಿ ಕುರುಬರಾಗಿ ಆಗಮಿಸುತ್ತಿದ್ದಾರೆ ಎಂದು ಅವರು ಹೇಳಿದರು.ಪೂಜ್ಯ ಜಗದ್ಗುರುಗಳಿಗೆ ದೊರೆಯುವ ಸಾರ್ವಜನಿಕ ಸ್ವಾಗತವು ಸಾಮಾನ್ಯವಾಗಿ ಕಣ್ಣಿಗೆ ಕಾಣದ ಉರುಗ್ವೆಯ ವಿಶ್ವಾಸದ ಮತ್ತೊಂದು ಆಯಾಮವನ್ನು ಬಹಿರಂಗಪಡಿಸಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.

“ಅವರಿಗೆ ಅತ್ಯಂತ ಆತ್ಮೀಯ ಸ್ವಾಗತ ದೊರೆಯಲಿದೆ ಎಂಬುದು ನನಗೆ ಖಚಿತವಾಗಿದೆ. ಅವರನ್ನು ಭೇಟಿಯಾಗಲು, ಅವರನ್ನು ನೋಡಲು ಮತ್ತು ಅವರ ಮಾತುಗಳನ್ನು ಆಲಿಸಲು ಎಲ್ಲರೂ ಮುಂದೆ ಬರಲಿದ್ದಾರೆ” ಎಂದು ಅವರು ಹೇಳಿದರು.

ಕೊನೆಯಲ್ಲಿ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಭೇಟಿಯನ್ನು ವಿಶ್ವಾಸ, ಪ್ರಾರ್ಥನೆ ಮತ್ತು ಕ್ರಿಸ್ತನ ಸಂದೇಶದತ್ತ ತೆರೆದ ಮನಸ್ಸಿನಿಂದ ಸ್ವೀಕರಿಸಬೇಕು ಎಂದು ಧರ್ಮಾಧ್ಯಕ್ಷ ಟ್ರೊಕೊಲಿ ಪುನರುಚ್ಚರಿಸಿದರು. ಈ ಭೇಟಿ ಧರ್ಮಸಭೆಯ ಜೀವನಕ್ಕೆ ಹೊಸ ಚೈತನ್ಯವನ್ನು ನೀಡುವುದರ ಜೊತೆಗೆ, ದೇಶಕ್ಕೆ ನವೀಕೃತ ಭರವಸೆಯ ದಿಗಂತವನ್ನು ತೆರೆದಿಡಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

05 ಆಗಸ್ಟ್ 2026, 17:50