ಹುಡುಕಿ

ಪ್ರಧಾನ ಧರ್ಮಾಧ್ಯಕ್ಷ ಸವ್ಯಾತೋಸ್ಲಾವ್ ಶೆವ್ಚುಕ್ ಪ್ರಧಾನ ಧರ್ಮಾಧ್ಯಕ್ಷ ಸವ್ಯಾತೋಸ್ಲಾವ್ ಶೆವ್ಚುಕ್  

ಪ್ರಧಾನ ಧರ್ಮಾಧ್ಯಕ್ಷ ಶೆವ್ಚುಕ್: ‘ಸ್ವಾತಂತ್ರ್ಯವನ್ನು ಎಂದಿಗೂ ಲಘುವಾಗಿ ಪರಿಗಣಿಸಬಾರದು’

ದೇಶವು ಸ್ವಾತಂತ್ರ್ಯದ 35ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಉಕ್ರೇನಿಯನ್ ಗ್ರೀಕ್ ಕಥೋಲಿಕ ಧರ್ಮಸಭೆಯ ಮುಖ್ಯಸ್ಥರಾದ ಪ್ರಧಾನ ಧರ್ಮಾಧ್ಯಕ್ಷ ಸವ್ಯಾತೋಸ್ಲಾವ್ ಶೆವ್ಚುಕ್ ಅವರು ಯುದ್ಧದಿಂದ ಜನರ ಮೇಲೆ ಉಂಟಾಗಿರುವ ನೋವನ್ನು ವ್ಯಾಟಿಕನ್ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ. ಜಗತ್ತಿನ ಎಲ್ಲ ರಾಷ್ಟ್ರಗಳಿಗೂ ಒಗ್ಗಟ್ಟಿಗಾಗಿ ಅವರು ಮತ್ತೊಮ್ಮೆ ಹೃದಯಪೂರ್ವಕ ಮನವಿಯನ್ನು ಮಾಡಿದ್ದಾರೆ.

ಲೇಖಕರು: ವಂ. ಗುರು ತಾರಸ್ ಕೊತ್ಸುರ್ 

ಉಕ್ರೇನಿಯನ್ ಗ್ರೀಕ್ ಕಥೋಲಿಕ ಧರ್ಮಸಭೆಯ ಪ್ರಧಾನ ಧರ್ಮಾಧ್ಯಕ್ಷರಾದ ಪರಮಪೂಜ್ಯ ಸವ್ಯಾತೋಸ್ಲಾವ್ ಶೆವ್ಚುಕ್ ಅವರು, ಈಗಾಗಲೇ ನಾಲ್ಕೂವರೆ ವರ್ಷಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಅಸಂಖ್ಯಾತ ಜೀವಗಳು ಮತ್ತು ಅಪಾರ ವಿನಾಶವನ್ನು ಉಂಟುಮಾಡಿರುವ 2026ರ ಜುಲೈ ತಿಂಗಳನ್ನು “ಅತ್ಯಂತ ರಕ್ತಪಾತದ ತಿಂಗಳು” ಎಂದು ವಿವರಿಸುತ್ತಾ ಅದರ ಅಂಕಿಅಂಶಗಳನ್ನು ನೀಡಿದ್ದಾರೆ.

ವ್ಯಾಟಿಕನ್ ನ್ಯೂಸ್‌ನೊಂದಿಗಿನ ಈ ಸಂದರ್ಶನದಲ್ಲಿ ಅವರು ಯುದ್ಧದ ಕ್ರೌರ್ಯವನ್ನು ಖಂಡಿಸಿದ ಧರ್ಮಾಧ್ಯಕ್ಷರು, ಜೊತೆಗೆ ತಂತ್ರಜ್ಞಾನದ ಬಳಕೆಯಿಂದ ಉಂಟಾಗುತ್ತಿರುವ ನೈತಿಕ ಪರಿಣಾಮಗಳ ಬಗ್ಗೆಯೂ ಮಾತನಾಡಿದ್ದಾರೆ. ನಿರ್ದಿಷ್ಟವಾಗಿ ದಾಳಿ ಮಾಡಲಿರುವ ವ್ಯಕ್ತಿಯನ್ನು ನಿಖರವಾಗಿ ನೋಡಬಲ್ಲ ಕ್ಯಾಮೆರಾವನ್ನು ಹೊಂದಿರುವ ಡ್ರೋನ್‌ನ ಕಣ್ಣಿನ ಮೂಲಕ ದಾಳಿ ನಡೆಸುತ್ತಿರುವ ಸಂದರ್ಭದಲ್ಲಿ, ನಾಗರಿಕರ “ಆಕಸ್ಮಿಕ” ಸಾವು ಎಂಬ ಕಲ್ಪನೆಯೇ ಕೇವಲ ದುರಂತವಲ್ಲ, ಅದು ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದರು.

ಸೋವಿಯತ್ ಸರ್ವಾಧಿಕಾರಿ ಆಡಳಿತದಿಂದ ಉಕ್ರೇನ್ ಸ್ವಾತಂತ್ರ್ಯ ಪಡೆದ 35ನೇ ವರ್ಷವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಅವರು ವ್ಯಾಟಿಕನ್ ಮಾಧ್ಯಮದೊಂದಿಗೆ ಮಾತನಾಡಿ ಸ್ವಾತಂತ್ರ್ಯದ ಮೌಲ್ಯವನ್ನು ಒತ್ತಿಹೇಳಿದರು.

ಪೂಜ್ಯರೇ, ವಿಶೇಷವಾಗಿ ನಿಮ್ಮ ಪ್ರಧಾನ ದೇವಾಲಯ ಮತ್ತು ನಿವಾಸವಿರುವ ನಗರದ ಭಾಗವೂ ದಾಳಿಗೆ ಒಳಗಾಗುತ್ತಿರುವ ಈ ಸಂದರ್ಭದಲ್ಲಿ, ಪ್ರತಿದಿನ ಉಕ್ರೇನ್ ರಾಜಧಾನಿಯ ಮೇಲೆ ನಡೆಯುತ್ತಿರುವ ತೀವ್ರ ದಾಳಿಗಳ ಸುದ್ದಿಯನ್ನು ಕೇಳುತ್ತಿರುವಾಗ ನಿಮ್ಮನ್ನು ಮತ್ತೊಮ್ಮೆ ಮಾತನಾಡಿಸುವುದು ಸಂತೋಷದ ಸಂಗತಿ. ಪ್ರಸ್ತುತ ಪರಿಸ್ಥಿತಿಯನ್ನು ನೀವು ಹೇಗೆ ಅನುಭವಿಸುತ್ತಿದ್ದೀರಿ?

ನಾವು ಎಲ್ಲರೂ ಈ ರಾತ್ರಿಯನ್ನೂ ವಾಯುದಾಳಿ ಆಶ್ರಯಕೇಂದ್ರದಲ್ಲಿಯೇ ಕಳೆದಿದ್ದೇವೆ. ಹಿಂದಿನ ರಾತ್ರಿಗಳಲ್ಲಿಯೂ ಹಾಗೆಯೇ ಮಾಡಿದ್ದೇವೆ. ಏಕೆಂದರೆ ದುರದೃಷ್ಟವಶಾತ್, ನಮ್ಮ ತಲೆಯ ಮೇಲಿನಿಂದ ಉಡಾಯಿಸಲಾಗುತ್ತಿರುವ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ತಿಂಗಳೂ ಹಿಂದಿನ ತಿಂಗಳಿಗಿಂತ ಹೆಚ್ಚು ರಕ್ತಪಾತದಿಂದ ಕೂಡಿದೆ. ಉದಾಹರಣೆಗೆ, ವಿಶ್ವಸಂಸ್ಥೆಯ ಮೇಲ್ವಿಚಾರಣಾ ಕಾರ್ಯಾಚರಣೆಯ ಪ್ರಕಾರ, 2022ರ ಮಾರ್ಚ್ ನಂತರ ಜುಲೈ ತಿಂಗಳು ಅತ್ಯಂತ ರಕ್ತಪಾತದ ತಿಂಗಳಾಗಿತ್ತು. ಈ ನಾಲ್ಕೂವರೆ ವರ್ಷಗಳ ಯುದ್ಧದಲ್ಲಿ ಅತಿ ಹೆಚ್ಚು ಸಾವುನೋವುಗಳು ಸಂಭವಿಸಿದ್ದು 2022ರ ಮಾರ್ಚ್‌ನಲ್ಲಿತ್ತು. ಅಧಿಕೃತ ಅಂಕಿಅಂಶಗಳ ಪ್ರಕಾರ, ಜುಲೈ ತಿಂಗಳೊಂದರಲ್ಲೇ 437 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 2,610 ಮಂದಿ ಗಾಯಗೊಂಡಿದ್ದಾರೆ. 2022ರ ಏಪ್ರಿಲ್ ನಂತರ ಅತಿ ಹೆಚ್ಚು ಸಂಖ್ಯೆಯ ಮಕ್ಕಳು ಸಾವನ್ನಪ್ಪಿರುವುದು ಮತ್ತು ಗಾಯಗೊಂಡಿರುವುದೂ ಇದೇ ಅವಧಿಯಲ್ಲಿ.

ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಎಲ್ಲ ತಜ್ಞರೂ ಈ ಯುದ್ಧವು ಅತ್ಯಂತ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒಳಗೊಂಡಿರುವ ಉನ್ನತ ತಂತ್ರಜ್ಞಾನಾಧಾರಿತ ಯುದ್ಧವಾಗಿ ರೂಪಾಂತರಗೊಳ್ಳುತ್ತಿದೆ ಎಂದು ಹೇಳುತ್ತಾರೆ. ಕೆಲವರು ಇದನ್ನು “ನಗರಗಳ ಯುದ್ಧ” ಎಂದು ಕರೆಯುತ್ತಾರೆ. ಏಕೆಂದರೆ ವಾಸ್ತವವಾಗಿ ಯುದ್ಧದ ಮುಂಚೂಣಿ ರೇಖೆಯಲ್ಲಿ ಮುಂದುವರಿಯುವ ಸಾಧ್ಯತೆ ಬಹುತೇಕ ಸ್ಥಗಿತಗೊಂಡಿದೆ. ಮುಂಚೂಣಿಯಲ್ಲಿ ಮುಂದುವರಿಯುವುದು ರಷ್ಯಾದ ಸೇನೆಗೆ ಹೆಚ್ಚು ಕಷ್ಟಕರ ಮತ್ತು ಅತ್ಯಂತ ದುಬಾರಿಯಾಗುತ್ತಿದೆ. ಆದ್ದರಿಂದ ಅವರು ನಾಗರಿಕರ ಮೇಲೆ ದಾಳಿ ನಡೆಸಲು ಪ್ರಯತ್ನಿಸುತ್ತಿದ್ದಾರೆ. ವಿಶೇಷವಾಗಿ ದೊಡ್ಡ ನಗರಗಳಲ್ಲಿ ವಾಸಿಸುವ ಜನರ ಸಂಕಷ್ಟವನ್ನು ಹೆಚ್ಚಿಸುತ್ತಿದ್ದಾರೆ.

ಇದಕ್ಕಾಗಿಯೇ ಉಕ್ರೇನ್‌ನ ರಾಜಧಾನಿ ಪ್ರಮುಖ ಗುರಿಯಾಗಿದೆ. ಇತಿಹಾಸದಲ್ಲಿ ಇದಕ್ಕೆ ಸಮಾನವಾದ ಘಟನೆಗಳನ್ನು ಹುಡುಕುವಾಗ, ಉಕ್ರೇನ್‌ನಲ್ಲಿ ನಡೆಯುತ್ತಿರುವುದು 1980ರ ದಶಕದ ಇರಾನ್–ಇರಾಕ್ ಯುದ್ಧಕ್ಕೆ ಬಹಳ ಹೋಲುತ್ತದೆ ಎಂದು ಅನೇಕರು ಹೇಳುತ್ತಾರೆ. ಆ ಯುದ್ಧದಲ್ಲಿ ಎರಡು ಜನಾಂಗಗಳು ಯುದ್ಧದ ಮುಂಚೂಣಿಯಲ್ಲಿ ಜಯ ಸಾಧಿಸಲು ಸಾಧ್ಯವಾಗದೆ, ನಾಗರಿಕರ ಸಂಕಷ್ಟವನ್ನು ಹೆಚ್ಚಿಸಲು ಪ್ರಯತ್ನಿಸಿದ್ದವು.

ನೈತಿಕ ಮತ್ತು ಧರ್ಮನೈತಿಕ ದೃಷ್ಟಿಯಿಂದ ಮತ್ತೊಂದು ಅತ್ಯಂತ ಗಂಭೀರ ಸಂಗತಿಯೆಂದರೆ, ಅಭಿವೃದ್ಧಿಪಡಿಸಲಾಗುತ್ತಿರುವ ಉನ್ನತ ತಂತ್ರಜ್ಞಾನವು ಡ್ರೋನ್‌ಗಳ ದಾಳಿ ಸ್ಥಳವನ್ನು ನಿರ್ಧರಿಸಲು ಕೃತಕ ಬುದ್ಧಿಮತ್ತೆಯನ್ನು ಮಾತ್ರ ಬಳಸುವುದಿಲ್ಲ. ಇಂದು ಈ ಮಾರಕ ಡ್ರೋನ್‌ಗಳು ಮತ್ತು ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವಲ್ಲಿ ಹೆಚ್ಚು ನಿಖರವಾಗುತ್ತಿರುವ ಕ್ಷಿಪಣಿಗಳಲ್ಲಿಯೂ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದ್ದರಿಂದ ಕ್ಷಿಪಣಿ ಅಥವಾ ಡ್ರೋನ್‌ ಅನ್ನು ನೈಜ ಸಮಯದಲ್ಲಿ ನಿಯಂತ್ರಿಸುವ ವ್ಯಕ್ತಿಯು ತಾನು ಕೊಲ್ಲುತ್ತಿರುವ ಜನರನ್ನು ಕಣ್ಣಾರೆ ನೋಡಬಲ್ಲನು.

ನಾಗರಿಕರ ಸಾವುಗಳು ಆಕಸ್ಮಿಕವಾಗಿದ್ದವು ಅಥವಾ ಉದ್ದೇಶಪೂರ್ವಕವಾಗಿರಲಿಲ್ಲ ಎಂದು ಹೇಳುವುದು ಅಸಾಧ್ಯ. ಉದಾಹರಣೆಗೆ, ಇತ್ತೀಚೆಗೆ ಖೆರ್ಸೋನ್ ನಗರದಲ್ಲಿ ಒಂದು ಬಸ್ಸಿನ ಮೇಲೆ ದಾಳಿ ನಡೆಯಿತು. ಆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಜನರು ಮಾತ್ರವಲ್ಲದೆ, ಅದರ ಸಮೀಪದಲ್ಲಿದ್ದವರೂ ಸಹ ಕೊಲ್ಲಲ್ಪಟ್ಟರು. ಆ ಡ್ರೋನ್ ಅನ್ನು ನಿಯಂತ್ರಿಸುತ್ತಿದ್ದ ವ್ಯಕ್ತಿಗೆ ತಾನು ಕೊಲ್ಲುತ್ತಿದ್ದ ಜನರು ಕಾಣಿಸುತ್ತಿದ್ದರು ಎಂಬುದು ಸ್ಪಷ್ಟವಾಗಿದೆ. ಇದು ನಿಜವಾಗಿಯೂ ಅತ್ಯಂತ ಗಂಭೀರವಾದ ನೈತಿಕ ಸಮಸ್ಯೆಯಾಗಿದೆ. ಇಂದು ರಷ್ಯಾ ನಾಗರಿಕರ ಸಂಕಷ್ಟವನ್ನೂ, ಭಯವನ್ನೂ ಸಹ ಒಂದು ಶಸ್ತ್ರವಾಗಿ ಬಳಸಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ. ಯುದ್ಧಭೂಮಿಯಲ್ಲಿ ಸಾಧಿಸಲು ಸಾಧ್ಯವಾಗದ್ದನ್ನು ಪ್ರಮುಖ ನಗರಗಳ ಮೇಲೆ ಭಯೋತ್ಪಾದನೆ ಹರಡುವ ಮೂಲಕ ಸಾಧಿಸಲು ಅವರು ಪ್ರಯತ್ನಿಸುತ್ತಿದ್ದಾರೆ.

ಈ ಯುದ್ಧವು ಜನರ ದಣಿವು, ಅವರ ನೋವು ಮತ್ತು ಅವರ ಆಧ್ಯಾತ್ಮಿಕ ಸಂಕಷ್ಟವನ್ನೂ ರಾಜಕೀಯ ಒತ್ತಡದ ಸಾಧನವಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ. ಇದು ಯುದ್ಧದ ಸ್ವರೂಪವನ್ನೇ ಬದಲಾಯಿಸುತ್ತಿದೆ. ಆದರೆ ಎಲ್ಲ ದೃಷ್ಟಿಗಳಲ್ಲಿಯೂ ಇದು ದೇವನಿಂದಿತ ಯುದ್ಧವಾಗಿಯೇ ಉಳಿದಿದೆ. ಇಂತಹ ಪ್ರತಿಯೊಂದು ಕೃತ್ಯವೂ ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ವಿರುದ್ಧದ ಅಪರಾಧವಾಗಿರುವುದರ ಜೊತೆಗೆ, ಸಶಸ್ತ್ರ ಸಂಘರ್ಷಗಳನ್ನು ನಿಯಂತ್ರಿಸುವ ನೈತಿಕ ಕಾನೂನಿನ ವಿರುದ್ಧವೂ ಅಪರಾಧವಾಗಿದೆ. ಕಳೆದ ಕೆಲವು ತಿಂಗಳುಗಳು ಮತ್ತು ದಿನಗಳಲ್ಲಿ, ವಿಶೇಷವಾಗಿ ರಾಜಧಾನಿಯಲ್ಲಿ ನಾವು ಅನುಭವಿಸುತ್ತಿರುವ ಪರಿಸ್ಥಿತಿ ಇದೇ.

ನಾಲ್ಕೂವರೆ ವರ್ಷಗಳ ಈ ಭೀಕರ ಆಕ್ರಮಣದ ಅವಧಿಯಲ್ಲೇ ಉಕ್ರೇನ್‌ನ ಸ್ವಾತಂತ್ರ್ಯದ 35ನೇ ವಾರ್ಷಿಕೋತ್ಸವ ಬಂದಿದೆ. ಇಂತಹ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸುವುದರ ಅರ್ಥವೇನು?

ನಮಗೆ ಉಕ್ರೇನ್‌ನ ಸ್ವಾತಂತ್ರ್ಯ ದಿನವನ್ನು ಆಚರಿಸುವುದೆಂದರೆ, ಮೊದಲನೆಯದಾಗಿ ಸ್ವತಂತ್ರ ಉಕ್ರೇನ್ ರಾಷ್ಟ್ರವು ಖಾತರಿಪಡಿಸುವ ಸ್ವಾತಂತ್ರ್ಯದ ವರಕ್ಕಾಗಿ ಪ್ರಭುವಿಗೆ ಕೃತಜ್ಞತೆ ಸಲ್ಲಿಸುವುದು. ಕ್ರೈಸ್ತರಿಗೆ ತಾಯ್ನಾಡಿನ ಮೇಲಿನ ಪ್ರೀತಿ ಎಂದಿಗೂ ರಾಜ್ಯದ ಆರಾಧನೆಯಾಗಿ ಪರಿವರ್ತನೆಯಾಗಬಾರದು. ಕಾನೂನಿನ ಆಳ್ವಿಕೆಗೆ ಒಳಪಟ್ಟ ರಾಜ್ಯವು ಮಾನವ ಘನತೆ, ಸ್ವಾತಂತ್ರ್ಯ, ಸಾಮಾನ್ಯ ಹಿತ ಮತ್ತು ಜನರ ಜೀವಿಸುವ ಹಕ್ಕನ್ನು ರಕ್ಷಿಸುವ ಪ್ರಮುಖ ಸಾಧನವಾಗಿದೆ. ತಾಯ್ನಾಡಿನ ಮೇಲಿನ ಪ್ರೀತಿ ಎಂದರೆ ಇತರರ ಮೇಲಿನ ದ್ವೇಷವಲ್ಲ. ಬದಲಾಗಿ, ತನ್ನ ಜನರಿಗಾಗಿ ಜವಾಬ್ದಾರಿಯನ್ನು ಸ್ವೀಕರಿಸುವ ಮತ್ತು ಅವರಿಗೆ ಸೇವೆ ಸಲ್ಲಿಸುವ ಸಿದ್ಧತೆಯಾಗಿದೆ.

ಆದ್ದರಿಂದ ಉಕ್ರೇನ್‌ನ ಸ್ವಾತಂತ್ರ್ಯವನ್ನು ಸ್ಮರಿಸುವ ಈ ದಿನವು ಪ್ರಾರ್ಥನೆ ಮತ್ತು ಆತ್ಮಾವಲೋಕನದ ದಿನವಾಗಿದೆ. ಇಂದು ನಾವು ನಮ್ಮ ಸ್ವಾತಂತ್ರ್ಯವನ್ನು ಕೇವಲ ರಕ್ಷಿಸುವುದಷ್ಟೇ ಅಲ್ಲದೆ, ನಮ್ಮ ಭವಿಷ್ಯವನ್ನು ಸಕಾರಾತ್ಮಕವಾಗಿ ಹೇಗೆ ನಿರ್ಮಿಸಬೇಕು ಎಂಬುದರ ಕುರಿತು ಚಿಂತಿಸಬೇಕು.

ಈ ದಿನಗಳಲ್ಲಿ ನಾವು ರಾಷ್ಟ್ರೀಯ ಏಕತೆಯ ಬಗ್ಗೆಯೂ ನಿರಂತರವಾಗಿ ಮಾತನಾಡುತ್ತಿದ್ದೇವೆ. ಏಕೆಂದರೆ ಅದು ಕೆಲವು ಮೂಲಭೂತ ಮೌಲ್ಯಗಳ ಸುತ್ತಲಿನ ಏಕತೆಯಾಗಿದೆ. ರಾಜ್ಯವು ಸಾಮಾನ್ಯ ಹಿತ ಮತ್ತು ಮಾನವ ವ್ಯಕ್ತಿಯ ಘನತೆಗೆ ಸೇವೆ ಸಲ್ಲಿಸುವ, ಜನರ ಬದುಕುಳಿಯುವಿಕೆಯನ್ನು ಖಚಿತಪಡಿಸುವ, ಸ್ವತಂತ್ರವಾಗಿ ಬದುಕಲು ಮತ್ತು ಶಾಂತಿಯುತವಾಗಿ ನಮ್ಮ ಸಮಾಜವನ್ನು ನಿರ್ಮಿಸಲು ಸಹಾಯ ಮಾಡುವ ಸಾಧನವಾಗಿದೆ.

ನಿಸ್ಸಂದೇಹವಾಗಿ, ಈ ದಿನ ನಾವೆಲ್ಲರೂ ಯುದ್ಧದ ಅಂತ್ಯಕ್ಕಾಗಿ ಪ್ರಾರ್ಥಿಸುತ್ತೇವೆ. ಉಕ್ರೇನ್‌ನ ಸ್ವಾತಂತ್ರ್ಯವು ದೇವರಿಂದ ದೊರೆತ ವರವಾಗಿರುವಂತೆ, ಶಾಂತಿಯೂ ದೇವರಿಂದ ದೊರೆತ ವರವಾಗಿದೆ ಎಂಬುದನ್ನು ನಾವು ಅರಿತಿದ್ದೇವೆ. ನಾವೆಲ್ಲರೂ ಪ್ರಾರ್ಥನೆಯಲ್ಲಿ ಒಂದಾಗುತ್ತೇವೆ. ಅದೇ ಸಮಯದಲ್ಲಿ ಸಾಮಾನ್ಯ ಹಿತಕ್ಕಾಗಿ ನಮ್ಮ ಸೇವೆಯಲ್ಲಿ, ಮಾನವ ಜೀವಗಳನ್ನು ಉಳಿಸುವ ನಮ್ಮ ಸೇವೆಯಲ್ಲಿ, ವಿಶೇಷವಾಗಿ ಇಂದು ನಾವು ಅನುಭವಿಸುತ್ತಿರುವ ಯುದ್ಧದ ಸಂದರ್ಭದಲ್ಲಿ, ಒಂದಾಗುತ್ತೇವೆ.

ನೀವು ಸ್ವಾತಂತ್ರ್ಯದ ವರದ ಕುರಿತು ಮಾತನಾಡಿದ್ದೀರಿ. ಈ ಸಂದರ್ಭದಲ್ಲಿ ವೈಯಕ್ತಿಕವಾದ ಒಂದು ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ. ನೀವು ಸರ್ವಾಧಿಕಾರಿ ಆಡಳಿತದ ಕಾಲದಲ್ಲಿ ಜನಿಸಿದವರು. ನಿಮ್ಮ ಗುರುತರಬೇತಿಯು ಗುಪ್ತ ಗುರುತರಬೇತಿ ಕೇಂದ್ರಗಳಲ್ಲಿ ಆರಂಭವಾಯಿತು. ವಿಶೇಷವಾಗಿ ಈಗ ಸ್ವಾತಂತ್ರ್ಯದ ಅವಧಿಯಲ್ಲಿ ಹುಟ್ಟಿದ ಎರಡನೇ ತಲೆಮಾರಿನ ಯುವಜನರನ್ನು ನೋಡುತ್ತಿರುವಾಗ, ಈ 35 ವರ್ಷಗಳ ಸ್ವಾತಂತ್ರ್ಯವು ವೈಯಕ್ತಿಕವಾಗಿ ನಿಮಗೆ ಏನನ್ನು ಅರ್ಥೈಸುತ್ತದೆ?

ಜನರ ಮನಸ್ಸು ಮತ್ತು ಇಚ್ಛಾಶಕ್ತಿಯನ್ನೂ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದ ಸರ್ವಾಧಿಕಾರಿ ಕಮ್ಯುನಿಸ್ಟ್ ರಾಜ್ಯವು ತುಂಡಾಗಿ ಕುಸಿದುಬಿದ್ದ ಕ್ಷಣವನ್ನು ನಾನು ಅನುಭವಿಸಿದ್ದೇನೆ. ಆ ಸಂದರ್ಭದಲ್ಲಿ ಸ್ವಾತಂತ್ರ್ಯ ಎಂದರೆ ಕೇವಲ ಹೊರಗಿನಿಂದ ಸ್ವತಂತ್ರವಾಗಿರುವ ಅವಕಾಶವಲ್ಲ ಎಂಬುದನ್ನು ನಾವು ಅರ್ಥಮಾಡಿಕೊಂಡೆವು. ಸ್ವಾತಂತ್ರ್ಯವು ಆಧ್ಯಾತ್ಮಿಕ ಮತ್ತು ನೈತಿಕ ಪರಿಕಲ್ಪನೆ ಎಂಬುದನ್ನು ನಾವು ಅರಿತುಕೊಂಡೆವು.

ಸೋವಿಯತ್ ಒಕ್ಕೂಟದಲ್ಲಿಯೇ, ಗುಪ್ತವಾಗಿ ಬದುಕುತ್ತಿದ್ದ ಕಥೋಲಿಕ ಕ್ರೈಸ್ತರಾದ ನಾವು ಕಮ್ಯುನಿಸ್ಟ್ ನಾಯಕರಿಗಿಂತ ಹೆಚ್ಚು ಸ್ವತಂತ್ರರಾಗಿದ್ದೆವು ಎಂಬುದು ನನಗೆ ನೆನಪಿದೆ. ಏಕೆಂದರೆ ದೇವರ ಮಕ್ಕಳ ಸ್ವಾತಂತ್ರ್ಯವನ್ನು ನಾವು ನಮ್ಮ ಹೃದಯದಲ್ಲಿ ಹೊತ್ತಿದ್ದೆವು. ರಾಜ್ಯವು ಹೇರಿದ್ದ ಕಮ್ಯುನಿಸ್ಟ್ ಸಿದ್ಧಾಂತಕ್ಕಿಂತ ಭಿನ್ನವಾಗಿ ಯೋಚಿಸುವ ಧೈರ್ಯ, ಸ್ವತಂತ್ರರಾಗಿರುವ ಸಾಮರ್ಥ್ಯ, ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ—ಆದರೆ ಯಾವಾಗಲೂ ಕ್ರೈಸ್ತ ವಿವೇಚನೆಯ ಮಾನದಂಡಗಳಿಗೆ ಅನುಗುಣವಾಗಿ ನಿರ್ಧರಿಸುವ ಸಾಮರ್ಥ್ಯ—ಇವೆಲ್ಲವೂ ಸೋವಿಯತ್ ಕಾಲದಲ್ಲಿ ನಮಗೆ ಸ್ವಾತಂತ್ರ್ಯದ ಆಧ್ಯಾತ್ಮಿಕ ಶಾಲೆಯಾಗಿತ್ತು.

ನಂತರ ಈ ಸರ್ವಾಧಿಕಾರಿ ರಾಜ್ಯ ಕುಸಿದಾಗ, ನಮ್ಮೊಳಗೆ ನಾವು ಹೊತ್ತುಕೊಂಡಿದ್ದ ಆಂತರಿಕ ಸ್ವಾತಂತ್ರ್ಯವನ್ನು ಉಕ್ರೇನಿನ ನಾಗರಿಕ ಸಮಾಜದೊಳಗೆ ನಾವು ತಂದುಕೊಡಲು ಸಾಧ್ಯವಾಯಿತು. ಹೀಗೆ ನಾವು ನಿಜವಾಗಿಯೂ ಹೊಸ ಸಮಾಜದ ಹುಳಿಯಾಗಿದ್ದೇವೆ. ನಮ್ಮ ಧರ್ಮಸಭೆಯು ಉಕ್ರೇನಿಯನ್ ಸಮಾಜವನ್ನು ಕಮ್ಯುನಿಸ್ಟ್ ನಂತರದ, ಸೋವಿಯತ್ ನಂತರದ ವಸಾಹತುಶಾಹಿ ದೇಶದಿಂದ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿ ಪರಿವರ್ತಿಸುವಲ್ಲಿ ನಿಜವಾದ ಪರಿವರ್ತನಾ ಶಕ್ತಿಯಾಯಿತು. ನಿಸ್ಸಂದೇಹವಾಗಿ, ಈ ಪ್ರಯಾಣವು ಎಂದಿಗೂ ಸಂಪೂರ್ಣಗೊಂಡಿದೆ ಎಂದು ಹೇಳಲಾಗುವುದಿಲ್ಲ. ಪ್ರತಿದಿನ ನಾವು ಈ ಕ್ರೈಸ್ತ ಸ್ವಾತಂತ್ರ್ಯವನ್ನು ಪ್ರದರ್ಶಿಸಬೇಕು ಮತ್ತು ನಮ್ಮ ಪ್ರಯಾಣವನ್ನು ಮುಂದುವರಿಸಬೇಕು.

ಆದರೆ ಇಲ್ಲಿ ನಾನು ಬೈಜಾಂಟೈನ್ ಆಧ್ಯಾತ್ಮಿಕ ಮತ್ತು ಧರ್ಮಶಾಸ್ತ್ರೀಯ ಪರಂಪರೆಗೆ ಸೇರಿದ ಅತ್ಯಂತ ಆಳವಾದ ಒಂದು ವಿಷಯವನ್ನು ಅರ್ಥಮಾಡಿಕೊಂಡೆ: ಸ್ವಾತಂತ್ರ್ಯವು ಕೇವಲ ಸ್ವತಂತ್ರ ಇಚ್ಛೆಗಿಂತ ಹೆಚ್ಚಿನದು. ಸ್ವಾತಂತ್ರ್ಯವು ಒಳ್ಳೆಯ ಆಯ್ಕೆಯ ಫಲವಾಗಿದೆ; ಸತ್ಯದ ಮೇಲೆ ಆಧಾರಿತವಾದ ಆಯ್ಕೆಯ ಫಲವಾಗಿದೆ. ನಾನು ಸರಿಯಾದ ಆಯ್ಕೆಯನ್ನು ಮಾಡಿದಾಗ, ಮೂಲಭೂತ ಮೌಲ್ಯಗಳನ್ನು ಆರಿಸಿಕೊಂಡಾಗ, ಒಳ್ಳೆಯದನ್ನು ಆರಿಸಿಕೊಂಡಾಗ, ಸ್ವಾತಂತ್ರ್ಯದ ಸಾಮರ್ಥ್ಯವಾಗಿರುವ ನನ್ನ ಸ್ವತಂತ್ರ ಇಚ್ಛೆಯು ಸ್ವಾತಂತ್ರ್ಯದ ಅನುಭವವಾಗಿ ಪರಿವರ್ತನೆಯಾಗುತ್ತದೆ. ಆದ್ದರಿಂದ ಜನರು ಸರಿಯಾದ ಆಯ್ಕೆಗಳನ್ನು ಮಾಡಲು ಸಹಾಯ ಮಾಡುವುದು ನಿಜವಾದ ಸ್ವಾತಂತ್ರ್ಯದತ್ತ ಸಾಗುವ ಮಾರ್ಗವಾಗಿದೆ. ಅದು ಸ್ವೇಚ್ಛಾಚಾರವಲ್ಲ, ಅರಾಜಕತೆಯಲ್ಲ. ಬದಲಾಗಿ, ಜವಾಬ್ದಾರಿ ಮತ್ತು ಸಾಮಾನ್ಯ ಹಿತದೊಂದಿಗೆ ಸದಾ ಸಂಬಂಧ ಹೊಂದಿರುವ ಸ್ವಾತಂತ್ರ್ಯವಾಗಿದೆ.ಈ ಸ್ವಾತಂತ್ರ್ಯದ ಅರಿವು ಇಂದು ಉಕ್ರೇನ್‌ನಲ್ಲಿ ಬಹಳ ಅಗತ್ಯವಾಗಿದೆ.

ರಷ್ಯಾದ ಸೆರೆಯಲ್ಲಿ ಭೀಕರ ಹಿಂಸೆಯನ್ನು ಅನುಭವಿಸಿ ನಂತರ ಬಿಡುಗಡೆಗೊಂಡ ನಮ್ಮ ಅನೇಕ ಯುವ ಸೈನಿಕರು, ತಮ್ಮ ಕೈಗಳನ್ನು ಕಟ್ಟಿಹಾಕಲಾಗಿದ್ದರೂ ತಮ್ಮನ್ನು ಹಿಂಸಿಸುತ್ತಿದ್ದವರಿಗಿಂತ ತಾವು ಹೆಚ್ಚು ಸ್ವತಂತ್ರರಾಗಿದ್ದೆವು ಎಂದು ಹೇಳಿರುವುದು ಗಮನಾರ್ಹವಾಗಿದೆ. ಏಕೆ?ಏಕೆಂದರೆ ಆ ರಷ್ಯನ್ ಅಧಿಕಾರಿಗಳು ತಮ್ಮದೇ ಬೌದ್ಧಿಕ ಚೌಕಟ್ಟುಗಳ ಕೈದಿಗಳಾಗಿದ್ದರು. ಅವರು ತಮ್ಮ ಮೇಲಧಿಕಾರಿಗಳಿಗೆ ಹೆದರುತ್ತಿದ್ದರು. ತಮಗೆ ನೀಡಿದ ಆದೇಶಗಳನ್ನು ಕುರುಡಾಗಿ ಪಾಲಿಸದಿದ್ದರೆ ತಾವೇ ಸೆರೆಮನೆಗೆ ಹೋಗಬೇಕಾಗಬಹುದು ಎಂಬ ಭಯ ಅವರಿಗಿತ್ತು. ಆದರೆ ಆ ಕ್ಷಣಗಳಲ್ಲಿ ನಮ್ಮ ಸೈನಿಕರು ತಮ್ಮ ಕೈಗಳನ್ನು ಕಟ್ಟಿಹಾಕಲಾಗಿದ್ದರೂ ಹೆಚ್ಚು ಸ್ವತಂತ್ರರಾಗಿದ್ದರು. ಏಕೆ? ಏಕೆಂದರೆ ಅವರು ತಮ್ಮ ಆಯ್ಕೆಯನ್ನು ಮಾಡಿಕೊಂಡಿದ್ದರು. ಸರಿಯಾದ ಆಯ್ಕೆಯನ್ನು. ಸತ್ಯದ ಮೇಲೆ ಮತ್ತು ಜನರ ಜೀವಗಳನ್ನು ರಕ್ಷಿಸುವುದರ ಮೇಲೆ ಆಧಾರಿತವಾದ ಆಯ್ಕೆಯನ್ನು ಮಾಡಿಕೊಂಡಿದ್ದರು.

ಇದು ಸೋವಿಯತ್ ಒಕ್ಕೂಟದ ಕಾಲದಿಂದಲೂ ನಮ್ಮ ಅನುಭವವಾಗಿದೆ. ರಾಜ್ಯದ ಸರ್ವಾಧಿಕಾರಿ ಆಡಳಿತ ಕುಸಿದ ನಂತರ ತನ್ನನ್ನು ತಾನು ಪುನರ್‌ನಿರ್ಮಿಸಿಕೊಳ್ಳುತ್ತಿರುವ ಸಮಾಜದ ನಮ್ಮ ಅನುಭವವೂ ಇದೇ. ಇದೇ ಸ್ವಾತಂತ್ರ್ಯವನ್ನು ಉಕ್ರೇನಿನ ಜನರು ತಮ್ಮ ಸ್ವತಂತ್ರ ಮತ್ತು ಮುಕ್ತ ದೇಶದಲ್ಲಿ ರಕ್ಷಿಸಲು ಮತ್ತು ಇನ್ನಷ್ಟು ಆಳವಾಗಿ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ.

ಪ್ರಜಾಸತ್ತಾತ್ಮಕ ಮೌಲ್ಯಗಳ ಒಂದು ರೀತಿಯ ಬಿಕ್ಕಟ್ಟನ್ನು ನಾವು ನೋಡುತ್ತಿರುವ ಇಂದಿನ ಜಗತ್ತಿಗೆ, ಪ್ರಪಂಚದ ವಿವಿಧ ಭಾಗಗಳಲ್ಲಿ ಸರ್ವಾಧಿಕಾರಿ ಪ್ರವೃತ್ತಿಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಉಕ್ರೇನಿನ ಜನರು ನೀಡಬಹುದಾದ ಸಂದೇಶವೇನು?

ಸ್ವತಂತ್ರರಾಗಿರುವುದರಿಂದ ಎಂದಿಗೂ ದಣಿಯಬೇಡಿ!

ನನ್ನ ದೃಷ್ಟಿಯಲ್ಲಿ, ಪ್ರಜಾಸತ್ತಾತ್ಮಕ ಮೌಲ್ಯಗಳ ಈ ಬಿಕ್ಕಟ್ಟು ತನ್ನದೇ ದೇಶದ ಬಗ್ಗೆ ವೈಯಕ್ತಿಕ ಜವಾಬ್ದಾರಿಯಲ್ಲಿರುವ ಒಂದು ರೀತಿಯ ಬಿಕ್ಕಟ್ಟಿಗೆ ಸಂಬಂಧಿಸಿದೆ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಮತ್ತೊಬ್ಬರ ಹೆಗಲಿಗೆ ವರ್ಗಾಯಿಸಲು ಬಯಸುತ್ತಾರೆ. ಕೆಲವೊಮ್ಮೆ ಜನರು ತಮ್ಮ ತಾಯ್ನಾಡು ಮತ್ತು ದೇಶದ ಬಗ್ಗೆ ಪ್ರತಿಯೊಬ್ಬರೂ ಹೊಂದಿರುವ ವೈಯಕ್ತಿಕ ಕರ್ತವ್ಯಗಳನ್ನು ತಮ್ಮ ಪರವಾಗಿ ನಿರ್ವಹಿಸಬಲ್ಲ ಒಬ್ಬ ರಾಜಕಾರಣಿ ಅಥವಾ ಸರ್ವಾಧಿಕಾರಿಯನ್ನು ಹುಡುಕುತ್ತಾರೆ. ಕೆಲವೊಮ್ಮೆ ಜನರು ಯೋಚಿಸುವ ಮತ್ತು ವಿವೇಚಿಸುವ ಅಗತ್ಯದಿಂದ ಮುಕ್ತರಾಗಲು ಬಯಸುತ್ತಾರೆ. ತಮ್ಮ ಬದಲಿಗೆ ಬೇರೆಯವರು ಯೋಚಿಸಲಿ, ವಿವೇಚಿಸಲಿ ಮತ್ತು ನಿರ್ಧರಿಸಲಿ ಎಂದು ಬಯಸುತ್ತಾರೆ.

ಇದು ಒಂದು ರೀತಿಯ ಬಾಲಿಶ ಮನೋಭಾವವಾಗಿದೆ. ಏಕೆಂದರೆ ತಮಗಾಗಿ ಉತ್ತಮ ಭವಿಷ್ಯವನ್ನು ನಿರ್ಮಿಸುವುದು ಯಾವಾಗಲೂ ಮತ್ತೊಬ್ಬರ ಕೆಲಸ ಎಂದು ಮಕ್ಕಳು ಭಾವಿಸುವ ರೀತಿಯೇ ಇದು. ನನ್ನ ದೃಷ್ಟಿಯಲ್ಲಿ, ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು ಆಧುನಿಕ ಪ್ರಜಾಸತ್ತಾತ್ಮಕ ವ್ಯವಸ್ಥೆಗಳ ಮಹಾ ಶಾಪಗಳಲ್ಲಿ ಒಂದಾಗಿದೆ.

ಆದ್ದರಿಂದ ಇಂದು ಧರ್ಮಸಭೆಯು ಪ್ರಜಾಸತ್ತಾತ್ಮಕ ಮೌಲ್ಯಗಳ ಖಾತರಿದಾರ ಮತ್ತು ರಕ್ಷಕವಾಗುತ್ತಿರುವುದನ್ನು ನಾನು ಗಮನಿಸುತ್ತಿರುವುದು ನನಗೆ ಬಹಳ ಅರ್ಥಪೂರ್ಣವಾಗಿದೆ. ಏಕೆಂದರೆ ಧರ್ಮಸಭೆಯು ಪ್ರತಿಯೊಬ್ಬ ಮಾನವ ವ್ಯಕ್ತಿಯ ಘನತೆಯನ್ನು ದೃಢಪಡಿಸುತ್ತದೆ. ಇಂದಿನ ಸಂಸ್ಕೃತಿಯಲ್ಲಿ ಮಾನವೀಯತೆಯನ್ನು ಕಳೆದುಕೊಳ್ಳುವ ಅಪಾಯದಿಂದ ಧರ್ಮಸಭೆಯೇ ಮಾನವನನ್ನು ರಕ್ಷಿಸುತ್ತಿದೆ. ಕೃತಕ ಬುದ್ಧಿಮತ್ತೆ ಒಡ್ಡುತ್ತಿರುವ ಸವಾಲಿನಿಂದ ಹಿಡಿದು ಪ್ರತಿಯೊಂದು ಹಂತದಲ್ಲಿಯೂ ಇದು ಅನ್ವಯಿಸುತ್ತದೆ.

ತಮ್ಮ ಸ್ವಂತ ಹಿತಾಸಕ್ತಿಗಾಗಿ ಇತರರ ಕನಸುಗಳು ಮತ್ತು ಭವಿಷ್ಯದ ಭರವಸೆಗಳನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇರಬಾರದು ಎಂದು ಧರ್ಮಸಭೆಯೇ ಹೇಳುತ್ತದೆ. ಇದಕ್ಕೆ ವಿರುದ್ಧವಾಗಿ, ನಮ್ಮ ಜೀವನ ಮತ್ತು ನಮ್ಮ ಭವಿಷ್ಯವನ್ನು ನಿರ್ಮಿಸುವವರು ನಾವೇ.

‘ಸ್ವತಂತ್ರರಾಗಲು ಹೆದರಬೇಡಿ.’ ಇದು ಇಂದು ಉಕ್ರೇನ್ ಇಡೀ ಜಗತ್ತಿಗೆ ನೀಡಬಹುದಾದ ಮೂಲಭೂತ ಸಂದೇಶವಾಗಿದೆ.

ಈ ಸ್ವಾತಂತ್ರ್ಯವನ್ನು ರಕ್ಷಿಸಬೇಕಾದರೂ ಸಹ . ಏಕೆಂದರೆ ಸ್ವಾತಂತ್ರ್ಯವನ್ನು ಎಂದಿಗೂ ಸಹಜವಾಗಿ ದೊರೆತದ್ದೆಂದು ಭಾವಿಸಬಾರದು. ಸ್ವಾತಂತ್ರ್ಯವನ್ನು ಸ್ವೀಕರಿಸುವ ಮತ್ತು ಸ್ವತಂತ್ರ ಪುರುಷರು ಹಾಗೂ ಮಹಿಳೆಯರಾಗಿ ಬದುಕುವ ಅಪಾಯವನ್ನು ತೆಗೆದುಕೊಳ್ಳಲು ಸಿದ್ಧರಿಲ್ಲದವರು, ಸ್ವಾತಂತ್ರ್ಯದ ಈ ವರಕ್ಕೆ ಅರ್ಹರಾಗಿರುವುದಿಲ್ಲ.

ಉಕ್ರೇನ್‌ನಲ್ಲಿಯೂ ಮತ್ತು ಜಗತ್ತಿನ ಇತರ ಭಾಗಗಳಲ್ಲಿಯೂ ವಿಶ್ವಾಸಿಗಳ ಒಂದು ಭಾಗದ ಧರ್ಮಪಾಲಕರಾಗಿ, ಸ್ವಾತಂತ್ರ್ಯದ ಈ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿಶ್ವವ್ಯಾಪಿ ಧರ್ಮಸಭೆಗೆ ನೀವು ಯಾವ ಮನವಿಯನ್ನು ಮಾಡಬಯಸುತ್ತೀರಿ?

ಸ್ವಾತಂತ್ರ್ಯದ ಅತ್ಯುನ್ನತ ಅಭಿವ್ಯಕ್ತಿ ದೇವರನ್ನು ಮತ್ತು ನೆರೆಯವರನ್ನು ಪ್ರೀತಿಸುವ ಮಾನವನ ಸಾಮರ್ಥ್ಯವಾಗಿದೆ. ಇಂದು ಉಕ್ರೇನ್‌ನಲ್ಲಿ, ರಾಷ್ಟ್ರೀಯ ಸ್ವಾತಂತ್ರ್ಯದತ್ತ ನಮ್ಮನ್ನು ಮುನ್ನಡೆಸಿದ ರಾಷ್ಟ್ರೀಯ ಏಕತೆಯನ್ನು ಕರುಣೆಯ ಮೂಲಕ ಮಾತ್ರ ರಕ್ಷಿಸಬಹುದು ಎಂಬುದನ್ನು ನಾವು ನೋಡುತ್ತಿದ್ದೇವೆ. ನೋವು ಅನುಭವಿಸುವವರೊಂದಿಗೆ ಸಹಾನುಭೂತಿ ಹೊಂದುವ ಸಾಮರ್ಥ್ಯ, ತಪ್ಪು ಮಾಡುವವರ ಕಡೆಗೆ ಕರುಣೆ ತೋರಿಸುವ ಸಾಮರ್ಥ್ಯ ಮತ್ತು ನಮ್ಮ ನೆರೆಯವರಿಗೆ ಒಳ್ಳೆಯದನ್ನು ಮಾಡುವ ಸಾಮರ್ಥ್ಯ—ಇವೆಲ್ಲವೂ ಅಗತ್ಯ.

ಆದ್ದರಿಂದ ದೇವರನ್ನು ಮತ್ತು ನಮ್ಮ ನೆರೆಯವರನ್ನು ಪ್ರೀತಿಸುವಾಗಲೇ ಸ್ವಾತಂತ್ರ್ಯದ ಅತ್ಯಂತ ಮಹತ್ತರ ಅನುಭವ ದೊರೆಯುತ್ತದೆ ಎಂಬುದನ್ನು ನಾವು ಮರೆಯಬಾರದು. ಆಗಸ್ಟ್ 24ರಂದು ಉಕ್ರೇನ್‌ನ ಸ್ವಾತಂತ್ರ್ಯ ದಿನದಂದು ನಮ್ಮೊಂದಿಗೆ ಪ್ರಾರ್ಥನೆಯಲ್ಲಿ ಸೇರುವ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ.

ಉಕ್ರೇನ್‌ನ ಎಲ್ಲ ಧರ್ಮಸಭೆಗಳು ಮತ್ತು ಧಾರ್ಮಿಕ ಸಂಘಟನೆಗಳ ಸಮಿತಿ ವಿಶ್ವ ಧರ್ಮಸಭೆಗಳ ಮಂಡಳಿಗೆ ಮನವಿಯನ್ನು ಮಾಡಿದೆ ಎಂಬುದನ್ನು ನಾನು ನೆನಪಿಸಲು ಬಯಸುತ್ತೇನೆ. ಹಾಗೆಯೇ ಪೂಜ್ಯ ಜಗದ್ಗುರು 14ನೇ ಲಿಯೋ ಅವರಿಗೆ ಮತ್ತು ಸಜ್ಜನರಿಗೆ ಪತ್ರ ಬರೆದು, ಆಗಸ್ಟ್ 24ರಂದು ಉಕ್ರೇನ್‌ನಲ್ಲಿ ಶಾಂತಿಗಾಗಿ ಪ್ರಾರ್ಥನೆಯ ದಿನವಾಗಿ ಆಚರಿಸುವಂತೆ ಮನವಿ ಮಾಡಿದ್ದಾರೆ.

ಆ ದಿನ ಉಕ್ರೇನ್‌ನಲ್ಲಿರುವ ನಾವೆಲ್ಲರೂ ಪ್ರಾರ್ಥನೆಯಲ್ಲಿ ಒಂದಾಗುತ್ತೇವೆ. ನಾವು ಧರ್ಮಸಭೆಗಳ ಮತ್ತು ಧಾರ್ಮಿಕ ಸಂಘಟನೆಗಳ ಮುಖ್ಯಸ್ಥರು, ಪೂರ್ವ ಯೂರೋಪಿನ ಅತ್ಯಂತ ಪ್ರಾಚೀನ ದೇವಾಲಯವಾದ ಕೀವ್‌ನ ಸಂತ ಸೋಫಿಯಾ ಪ್ರಧಾನ ದೇವಾಲಯದಲ್ಲಿ ಒಂದಾಗುತ್ತೇವೆ. ಅಲ್ಲಿ 11ನೇ ಶತಮಾನದ “ಒರಾಂತಾ” ಎಂಬ ಪ್ರಾರ್ಥನೆಯಲ್ಲಿ ತೊಡಗಿರುವ  ಕನ್ಯೆ ಮರಿಯಮ್ಮನ ಮೊಸಾಯಿಕ್ ಚಿತ್ರವಿದೆ. ಕೀವ್‌ನ ಒರಾಂತಾ ಮಾತೆಯ ಈ ಪವಿತ್ರ ಚಿತ್ರದ ಮುಂದೆ ನಾವು ಶಾಂತಿಗಾಗಿ ಪ್ರಾರ್ಥಿಸುತ್ತೇವೆ.

ನಿಮ್ಮ ಒಗ್ಗಟ್ಟು ಮತ್ತು ಪ್ರಾರ್ಥನೆಯಲ್ಲಿ ಏಕತೆಯನ್ನು ನಾವು ಕೇಳಿಕೊಳ್ಳುತ್ತೇವೆ. ಅದೇ ಸಮಯದಲ್ಲಿ ಮಾನವೀಯ ಕಾರ್ಯಗಳಲ್ಲಿಯೂ ನಮ್ಮೊಂದಿಗೆ ಕೈಜೋಡಿಸುವಂತೆ ಕೇಳಿಕೊಳ್ಳುತ್ತೇವೆ. ಏಕೆಂದರೆ ಇಂದು ನಮಗೆ ಮಾನವೀಯ ಸೇವೆಯೇ ದೇವರ ಮೇಲಿನ ಮತ್ತು ನಮ್ಮ ನೆರೆಯವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ಅತ್ಯುತ್ತಮ ಮಾರ್ಗವಾಗಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

24 ಆಗಸ್ಟ್ 2026, 00:48