ಸಮಾರೋಪಗೊಂಡ ಯುವ ಸಾಮಾಜಿಕ ಹ್ಯಾಕಥಾನ್: ಮಾನಸಿಕ ಆರೋಗ್ಯ, ಪರಿಸರ ಕುರಿತ ಪರಿಹಾರಗಳ ಪ್ರಸ್ತಾವನೆ
ಲೇಖಕರು:ಚೈನಾರೊಂಗ್ ಮೊಂಥಿಯೆನ್ವಿಚಿಯೆಂಚೈ ಮತ್ತು ಜೂನ್ ನತ್ತಾ ನುಚ್ಸುವಾನ್
ಸಾಮಾಜಿಕ ಬದಲಾವಣೆಯ ಪ್ರಮುಖ ಸಾಧನವಾಗಿ ಅಗತ್ಯಕ್ಕೆ ತಕ್ಕಂತೆ ರೂಪಿಸಲಾದ ಡಿಜಿಟಲ್ ವೇದಿಕೆಗಳನ್ನು ಆಯ್ಕೆ ಮಾಡಿಕೊಂಡ ಯುವ ಪರಿವರ್ತಕರು, ದೇಶದಲ್ಲಿ ದೀರ್ಘಕಾಲದಿಂದ ಮುಂದುವರಿದಿರುವ ಕೆಲವು ಸಾಮಾಜಿಕ, ಪರಿಸರ ಮತ್ತು ಮಾನವೀಯ ಸವಾಲುಗಳಿಗೆ ಪರಿಹಾರ ನೀಡುವ ನವೀನ ಲಾಭರಹಿತ ಯೋಜನೆಗಳನ್ನು ಮಂಡಿಸಿದರು.
ಥಾಯ್ಲೆಂಡ್‌ನ ಕಥೋಲಿಕ ಶಿಕ್ಷಣ ಮಂಡಳಿ ಮತ್ತು ಲೈಕಾಸ್ ಸುದ್ದಿ ಸಂಸ್ಥೆ ಜಂಟಿಯಾಗಿ, ಥಾಯ್ಲೆಂಡ್‌ನ ಪ್ರವಾಸಿ ನಗರವಾದ ಹುವಾ ಹಿನ್‌ನ ಸಲೇಶಿಯನ್ ಧ್ಯಾನ ಕೇಂದ್ರ ಮತ್ತು ಹುವಾ ಹಿನ್ ವಿತ್ತಯಾಲೈ ಶಾಲೆಯಲ್ಲಿ “Together We Make a Better World Possible”(ಒಟ್ಟಾಗಿ ಉತ್ತಮ ಜಗತ್ತಿನ ನಿರ್ಮಾಣ ನಮ್ಮಿಂದ ಸಾಧ್ಯ) ಎಂಬ ಧ್ಯೇಯದಡಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು.
2024 ಮತ್ತು 2025ರ ಆವೃತ್ತಿಗಳ ಮುಂದುವರಿದ ಭಾಗವಾಗಿ ನಡೆದ ಈ ಯುವ ಸಾಮಾಜಿಕ ಹ್ಯಾಕಥಾನ್, ಪ್ರತಿಯೊಂದು ತಂಡದ ಐದು ನಿಮಿಷಗಳ “mic-off” ಯೋಜನಾ ಮಂಡನೆಯೊಂದಿಗೆ ಮುಕ್ತಾಯಗೊಂಡಿತು. ಮಹತ್ವದ ಆರಂಭಿಕ ಹಣಕಾಸು ನೆರವಿಗಾಗಿ ಸ್ಪರ್ಧಿಸಿದ ವಿದ್ಯಾರ್ಥಿ “ಹ್ಯಾಕರ್‌ಗಳು”, ವಾಣಿಜ್ಯ ಲಾಭ ಗಳಿಸುವ ಬದಲು ಸಾಮಾನ್ಯ ಒಳಿತಿಗಾಗಿ ಸೇವೆ ಸಲ್ಲಿಸುವ ಉದ್ದೇಶದ ಯೋಜನೆಗಳನ್ನು ಮಂಡಿಸಿದರು.
ಕಾರ್ಯರೂಪದ ವಿಶ್ವಾಸ ಮತ್ತು ಸಿನೊಡಲ್ ಕರೆ
ಅಂತಿಮ ದಿನವು ಸುರತ್ ಥಾನಿಯ ನಿವೃತ್ತ ಧರ್ಮಾಧ್ಯಕ್ಷರು ಹಾಗೂ ಥಾಯ್ಲೆಂಡ್‌ನ ಸಾಮಾಜಿಕ ಸಂವಹನ ಆಯೋಗದ ಮಾಜಿ ಅಧ್ಯಕ್ಷರಾದ ಧರ್ಮಾಧ್ಯಕ್ಷ ಜೋಸೆಫ್ ಪ್ರಥಾನ್ ಶ್ರೀದರುನ್ಸಿಲ್ ಅವರ ನೇತೃತ್ವದಲ್ಲಿ ನಡೆದ ದಿವ್ಯ ಬಲಿಪೂಜೆಯೊಂದಿಗೆ ಆರಂಭವಾಯಿತು. ತಮ್ಮ ಪ್ರಬೋಧನೆಯಲ್ಲಿ ಧರ್ಮಾಧ್ಯಕ್ಷರು, ಸಮಾಜದಲ್ಲಿನ ಒಳಿತನ್ನು ಕಾಪಾಡುವ ಮತ್ತು ಹೊಸ ಹಾದಿಗಳನ್ನು ತೆರೆಯುವ ಪರಿಹಾರಗಳನ್ನು ರೂಪಿಸುವ ಮೂಲಕ “ಧರೆಗೆ ಉಪ್ಪು ಮತ್ತು ಲೋಕಕ್ಕೆ ಬೆಳಕು” ಆಗಬೇಕೆಂಬ ಶುಭಸಂದೇಶದ ಕರೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮಾನವನ ಪ್ರಯತ್ನವು ದೈವಿಕ ಕೃಪೆಯಲ್ಲಿ ತನ್ನ ಪರಮ ಶಕ್ತಿಯನ್ನು ಪಡೆಯುತ್ತದೆ ಎಂಬುದನ್ನು ಪ್ರತಿನಿಧಿಗಳಿಗೆ ನೆನಪಿಸಿದ ಧರ್ಮಾಧ್ಯಕ್ಷ ಪ್ರಥಾನ್, “ದೇವರು ನಿಮ್ಮೊಂದಿಗಿದ್ದರೆ, ಅಸಾಧ್ಯವಾದ ಧ್ಯೇಯವೂ ‘Mission Possible’ ಆಗುತ್ತದೆ” ಎಂದು ಭರವಸೆ ನೀಡಿದರು.
ಕಾರ್ಯಕ್ರಮದುದ್ದಕ್ಕೂ, ತಮ್ಮ ತಾಂತ್ರಿಕ ಮಾದರಿಗಳು ಸಿನೊಡಾಲಿಟಿಯನ್ನು—ಅಂದರೆ ಆಳವಾಗಿ ಆಲಿಸುವುದು, ಒಟ್ಟಾಗಿ ನಡೆಯುವುದು ಮತ್ತು ಸಮಾಜದ ಅಂಚಿನಲ್ಲಿರುವ ಜನರನ್ನು ಒಳಗೊಳ್ಳುವುದನ್ನು—ಬೆಳೆಸುವಂತಿರಬೇಕು ಎಂದು ಆಯೋಜಕರು ತಂಡಗಳಿಗೆ ಪದೇಪದೇ ಸವಾಲು ಹಾಕಿದರು.
ವಿದ್ಯಾರ್ಥಿಗಳು ವಿಭಿನ್ನ ಧಾರ್ಮಿಕ ಸಂಪ್ರದಾಯಗಳಿಂದ ಬಂದಿದ್ದರೂ, ಬಹುಪಾಲು ಬೌದ್ಧ ಧರ್ಮೀಯರಿದ್ದ ಈ ಗುಂಪು ಪಾಲನಾ ದೃಷ್ಟಿಕೋನವನ್ನು ಸ್ವೀಕರಿಸಿತು. “ಇದು ಕೇವಲ ತಾಂತ್ರಿಕ ನಾವೀನ್ಯತೆಯನ್ನು ಬೆಳೆಸುವ ಕಾರ್ಯಕ್ರಮವಾಗಿರಲಿಲ್ಲ. ಯುವಜನರನ್ನು ಆಲಿಸುವ, ಅವರ ಮೇಲೆ ವಿಶ್ವಾಸವಿಡುವ ಮತ್ತು ಅವರನ್ನು ಸಬಲೀಕರಿಸುವ ಧರ್ಮಸಭೆಯ ಜೀವಂತ ಅನುಭವವಾಗಿತ್ತು. ಜೊತೆಗೆ, ವಾಸ್ತವ ಜಗತ್ತಿನಲ್ಲಿ ನೈಜ ಪರಿಣಾಮ ಉಂಟುಮಾಡಬಲ್ಲ ಕಾರ್ಯರೂಪಕ್ಕೆ ತರಬಹುದಾದ ಒಳನೋಟಗಳನ್ನು ಇದು ಸೃಷ್ಟಿಸಿತು,” ಎಂದು ಕಾರ್ಯಕ್ರಮದ ಮಾರ್ಗದರ್ಶಕರೊಬ್ಬರು ಹೇಳಿದರು.
ಮಾನಸಿಕ ಆರೋಗ್ಯ ಮತ್ತು ಪರಿಸರ ಘನತೆಗಾಗಿ ಪ್ರಶಸ್ತಿ ಪಡೆದ ಪರಿಹಾರಗಳು
ಬ್ಯಾಂಕಾಕ್‌ನ ಸೇಂಟ್ ಪಾಲ್ ಡಿ ಚಾರ್ಟ್ರೆಸ್‌ನ ಸಿಸ್ಟರ್ಸ್ ನಡೆಸುವ ಅಸಂಪ್ಷನ್ ಕಾನ್ವೆಂಟ್ ಶಾಲೆಯ ಸಂಪೂರ್ಣ ಬಾಲಕಿಯರ ತಂಡಕ್ಕೆ 110,000 ಥಾಯ್ ಬಹ್ತ್, ಅಂದರೆ ಸುಮಾರು 3,200 ಅಮೆರಿಕನ್ ಡಾಲರ್‌ಗಳ ಅತ್ಯುನ್ನತ ಆರಂಭಿಕ ಅನುದಾನದ “ಹೊಣೆ ಮತ್ತು ಜವಾಬ್ದಾರಿ” ನೀಡಲಾಯಿತು. ಥಾಯ್ ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಬಿಕ್ಕಟ್ಟನ್ನು ಈ ತಂಡದ ಯೋಜನೆ ಉದ್ದೇಶಿಸಿದೆ. ಶೈಕ್ಷಣಿಕ ಒತ್ತಡ, ಡಿಜಿಟಲ್ ಸಂಪರ್ಕ, ಆರ್ಥಿಕ ಆತಂಕ ಮತ್ತು ಇತರ ವೈಯಕ್ತಿಕ ತೊಂದರೆಗಳಿಂದ ಈ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳುತ್ತಿದೆ. ಅಸಂಪ್ಷನ್ ಕಾನ್ವೆಂಟ್ ಶಾಲೆಯ 11ನೇ ತರಗತಿ ವಿದ್ಯಾರ್ಥಿನಿ ಪ್ರಾಂಚಲೀ ಚಿತ್ವಿಮೋಲ್ರತ್, ತಮ್ಮ ತಂಡವು ನಿರ್ದಿಷ್ಟ ವಿಷಯದ ಮೇಲೆ ಗಮನ ಕೇಂದ್ರೀಕರಿಸುವ ಮೊದಲು ಎರಡು ತಿಂಗಳಿಗೂ ಹೆಚ್ಚು ಕಾಲ ಪ್ರತಿ ವಾರ ಚರ್ಚೆ ನಡೆಸಿತ್ತು ಎಂದು ವಿವರಿಸಿದರು.
“ನಮ್ಮ ಶಾಲೆ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುತ್ತದೆ ಮತ್ತು ಮನೋವೈದ್ಯರಿಂದ ನೇರ ಸಮಾಲೋಚನೆಯನ್ನೂ ಒದಗಿಸುತ್ತದೆ. ಆದರೂ ಮಕ್ಕಳಲ್ಲಿ ಖಿನ್ನತೆಯ ಬಿಕ್ಕಟ್ಟು ಮುಂದುವರಿಯುತ್ತಿದೆ,” ಎಂದು ಅನುದಾನ ಪಡೆದ ನಂತರ ಪ್ರಾಂಚಲೀ ಮಂದಹಾಸದೊಂದಿಗೆ ಹೇಳಿದರು. “ಸಣ್ಣದಾದರೂ ಮಹತ್ವದ ಭಾವನೆಗಳನ್ನು ನಿರ್ಲಕ್ಷಿಸಲಾಗುತ್ತಿದೆ; ಅವು ತೀವ್ರ ಒತ್ತಡ ಅಥವಾ ಸ್ವಯಂಹಾನಿಯ ಮಟ್ಟಕ್ಕೆ ಏರುವವರೆಗೂ ಗಮನಕ್ಕೆ ಬರುತ್ತಿಲ್ಲ ಎಂಬುದನ್ನು ನಾವು ಅರಿತುಕೊಂಡೆವು. ಸಮಸ್ಯೆಯ ಮೂಲ ಕಾರಣವನ್ನು ಆರಂಭದಲ್ಲೇ ಗುರುತಿಸಲು ನಾವು ಬಯಸಿದ್ದೇವೆ,” ಎಂದು ಹೇಳಿದರು.
ಈ ಆರಂಭಿಕ ಅನುದಾನವನ್ನು ಬಳಸಿಕೊಂಡು, ಸುಲಭವಾಗಿ ಬಳಸಬಹುದಾದ ಆರಂಭಿಕ ಹಂತದ ಭಾವನಾತ್ಮಕ ಸ್ಥಿತಿಯ ಮೇಲ್ವಿಚಾರಣೆಗೆ ಅನುಕೂಲವಾಗುವ ವಿಶೇಷ ಮೊಬೈಲ್ ಅಪ್ಲಿಕೇಶನ್ ರೂಪಿಸಲು ತಂಡ ಯೋಜಿಸಿದೆ. ಸಹಪಾಠಿಗಳ ಬೆಂಬಲದ ಮೂಲಕ ಅಗತ್ಯವಾದ ಮಾನವೀಯ ಸಂಪರ್ಕವನ್ನು ಒದಗಿಸಲು ಡಿಜಿಟಲ್ ಸಾಧನವನ್ನು ಬಳಸಲಾಗುತ್ತದೆ. ಅಪ್ಲಿಕೇಶನ್‌ಗೆ ಕೋಡ್ ರೂಪಿಸಲು ವಿದ್ಯಾರ್ಥಿಗಳು ವೃತ್ತಿಪರ ಡೆವಲಪರ್‌ಗಳೊಂದಿಗೆ ಕೆಲಸ ಮಾಡಲಿದ್ದರೂ, ಅದರ ಪರಿಕಲ್ಪನಾ ದೃಷ್ಟಿಕೋನ ಮತ್ತು ಬಳಕೆದಾರರ ಅನುಭವದ ವಿನ್ಯಾಸ ಸಂಪೂರ್ಣವಾಗಿ ತಮ್ಮ ತಂಡದ ಕೈಯಲ್ಲೇ ಉಳಿಯಲಿದೆ ಎಂದು ಪ್ರಾಂಚಲೀ ಒತ್ತಿಹೇಳಿದರು.
ದಕ್ಷಿಣ ಥಾಯ್ಲೆಂಡ್‌ನ ಸುರತ್ ಥಾನಿಯ ಥೆಪ್ಪಮಿತ್ ಸುಕ್ಸಾ ಶಾಲೆಯ ತಂಡಕ್ಕೆ 75,000 ಥಾಯ್ ಬಹ್ತ್, ಅಂದರೆ ಸುಮಾರು 2,200 ಅಮೆರಿಕನ್ ಡಾಲರ್‌ಗಳ ಮುಂದಿನ ಆರಂಭಿಕ ಅನುದಾನ ದೊರೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಲು ತಂಡದ ಸದಸ್ಯರು ದಕ್ಷಿಣ ಥಾಯ್ಲೆಂಡ್‌ನಿಂದ ಏಳು ಗಂಟೆಗಳ ಪ್ರಯಾಣ ಮಾಡಿದ್ದರು. ಅವರ ಯೋಜನೆಯು ತ್ಯಾಜ್ಯ ನಿರ್ವಹಣೆ ಮತ್ತು ಅಸಂಘಟಿತ ಕಾರ್ಮಿಕ ಆರ್ಥಿಕತೆಗೆ ಸಿನೊಡಾಲಿಟಿಯ ತತ್ವಗಳನ್ನು ಅನ್ವಯಿಸುತ್ತದೆ.
“ಆರಂಭದಲ್ಲಿ ವಿಭಿನ್ನ ಆಲೋಚನೆಗಳಿಂದ ನಾವು ಹಲವು ದಿಕ್ಕುಗಳಿಗೆ ಎಳೆಯಲ್ಪಟ್ಟಿದ್ದೆವು,” ಎಂದು 11ನೇ ತರಗತಿಯ ತಂಡದ ಸದಸ್ಯ ಕ್ರಿಟಾಪೊಬ್ ಕೇವ್ಹಿಟ್ನುಯಿ ಹೇಳಿದರು. “ಆದರೆ ನಮ್ಮ ತಂಡದಲ್ಲಿರುವ ಪ್ರತಿಯೊಬ್ಬರ ಮಾತನ್ನೂ—ಸಮಾಜದ ಅಂಚಿನಲ್ಲಿರುವವರ ದೃಷ್ಟಿಕೋನಗಳನ್ನೂ ಸೇರಿಸಿ—ಎಚ್ಚರಿಕೆಯಿಂದ ಆಲಿಸಿದ ನಂತರ, ‘ಕಸ’ದ ಸಮಸ್ಯೆಯನ್ನು ಕೈಗೆತ್ತಿಕೊಳ್ಳಲು ನಾವು ನಿರ್ಧರಿಸಿದೆವು,” ಎಂದು ಕೇವ್ಹಿಟ್ನುಯಿ ಹೇಳಿದರು. ಸ್ಥಳೀಯ ಅಸಂಘಟಿತ ತ್ಯಾಜ್ಯ ಸಂಗ್ರಹಕಾರರನ್ನು ಮನೆಮಟ್ಟದ ತ್ಯಾಜ್ಯ ಮಾರಾಟಗಾರರೊಂದಿಗೆ ಸಂಪರ್ಕಿಸುವ ಸರಳ, ಅಗತ್ಯಕ್ಕೆ ತಕ್ಕಂತೆ ರೂಪಿಸಲಾದ ಮೊಬೈಲ್ ಅಪ್ಲಿಕೇಶನ್ ಅನ್ನು ತಂಡ ಪ್ರಸ್ತಾಪಿಸಿತು. ಈ ಡಿಜಿಟಲ್ ವೇದಿಕೆಯು ತ್ಯಾಜ್ಯ ಸಂಗ್ರಹ ಮಾರ್ಗಗಳನ್ನು ಸುಗಮಗೊಳಿಸುವುದು, ಕುಟುಂಬಗಳ ತ್ಯಾಜ್ಯ ವಿಲೇವಾರಿ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಸಾಮಾನ್ಯವಾಗಿ ಕಡೆಗಣಿಸಲ್ಪಡುವ ಅಸಂಘಟಿತ ನೈರ್ಮಲ್ಯ ಕಾರ್ಮಿಕರಿಗೆ ಹೆಚ್ಚು ನ್ಯಾಯಯುತ ಹಾಗೂ ಸ್ಥಿರವಾದ ಆದಾಯವನ್ನು ಒದಗಿಸುವ ಉದ್ದೇಶ ಹೊಂದಿದೆ.
ಈ ಆವೃತ್ತಿಯಲ್ಲಿ ಭಾಗವಹಿಸಿದ ಏಕೈಕ ವೃತ್ತಿಪರ ಶಾಲೆಯಾದ ಡಾನ್ ಬಾಸ್ಕೋ ತಾಂತ್ರಿಕ ಶಾಲೆಗೆ 40,000 ಥಾಯ್ ಬಹ್ತ್, ಅಂದರೆ ಸುಮಾರು 1,200 ಅಮೆರಿಕನ್ ಡಾಲರ್‌ಗಳ ಆರಂಭಿಕ ಅನುದಾನ ನೀಡಲಾಯಿತು. ಥಾಯ್ಲೆಂಡ್‌ನ ವೃತ್ತಿಪರ ಶಿಕ್ಷಣದ ವಿದ್ಯಾರ್ಥಿಗಳನ್ನು ಸಮಾಜವು ಕಡಿಮೆ ಶಿಕ್ಷಣ ಪಡೆದವರು ಮತ್ತು ಕಡಿಮೆ ಶಿಸ್ತಿನವರು ಎಂದು ನೋಡುವುದರಿಂದ ಅವರು ಅನುಭವಿಸುವ ನಿರಾಶೆಯೇ ಅವರ ಯೋಜನಾ ಮಂಡನೆಯ ಮೂಲವಾಗಿತ್ತು. ತಮ್ಮ ಶಾಲೆಯ ಸ್ವಯಂಸೇವಕ ವಿದ್ಯಾರ್ಥಿಗಳೊಂದಿಗೆ ಕಾರುಗಳು ಮತ್ತು ಇತರ ಯಂತ್ರೋಪಕರಣಗಳ ನಿರ್ವಹಣಾ ವೆಚ್ಚವನ್ನು ಭರಿಸಲು ಸಾಧ್ಯವಾಗದ ಜನರನ್ನು ಸಂಪರ್ಕಿಸುವ ಡಿಜಿಟಲ್ ವೇದಿಕೆಯ ಮೂಲಕ ಈ ಮನೋಭಾವವನ್ನು ಬದಲಾಯಿಸುವ ಆಶಯವನ್ನು ಅವರು ಹೊಂದಿದ್ದಾರೆ. ಮುಂದಿನ ಹಂತದಲ್ಲಿ ಇದನ್ನು ದೇಶದಾದ್ಯಂತ ಇರುವ ವೃತ್ತಿಪರ ಶಾಲೆಗಳಿಗೆ ವಿಸ್ತರಿಸಲು ಅವರು ಯೋಜಿಸಿದ್ದಾರೆ.
ರೋಮ್ ಮತ್ತು ರಾಜತಾಂತ್ರಿಕ ವಲಯದಿಂದ ಪ್ರೋತ್ಸಾಹ
ಕಾರ್ಯಕ್ರಮದ ಆರಂಭಿಕ ಅಧಿವೇಶನಗಳಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಧರ್ಮಸಭೆಯ ನಾಯಕರಿಂದಲೂ ಭಾಗವಹಿಸಿದವರಿಗೆ ಬೆಂಬಲದ ಸಂದೇಶಗಳು ದೊರೆತವು. ವ್ಯಾಟಿಕನ್‌ನಿಂದ ಕಳುಹಿಸಿದ ವೀಡಿಯೊ ಸಂದೇಶದಲ್ಲಿ, ಜಗದ್ಗುರುಗಳ ಅಧಿಕಾರ ಪೀಠದಪತ್ರಿಕಾ ಕಚೇರಿಯ ಉಪನಿರ್ದೇಶಕಿ ಸಹೋದರಿ ನೀನಾ ಬೆನೆಡಿಕ್ಟಾ ಕ್ರಾಪಿಚ್, MVZ, ಮಾನವ ಕಾಳಜಿಯ ದೃಷ್ಟಿಕೋನದಿಂದ ನಾವೀನ್ಯತೆಯನ್ನು ನೋಡುತ್ತಿರುವ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ಮೊದಲ ಎರಡು ಆವೃತ್ತಿಗಳಲ್ಲಿ ಖುದ್ದಾಗಿ ಭಾಗವಹಿಸಿದ್ದ ಸಹೋದರಿ ಕ್ರಾಪಿಚ್, ವಿದ್ಯಾರ್ಥಿಗಳ ನಡುವೆ ಬೆಳೆದ ಸಂಬಂಧಗಳು ತಾಂತ್ರಿಕ ಸಾಧನೆಗಳಿಗಿಂತ ಬಹಳ ಹೆಚ್ಚಿನ ಮೌಲ್ಯ ಹೊಂದಿವೆ ಎಂದು ಹೇಳಿದರು.
“ನಿಮ್ಮ ಆಲೋಚನೆಗಳನ್ನು ಆಲಿಸುವುದು ಮತ್ತು ನಿಮ್ಮ ಸೃಜನಶೀಲತೆಯನ್ನು ಗಮನಿಸುವುದು ಭವಿಷ್ಯದ ಬಗ್ಗೆ ನನಗೆ ಅಪಾರ ಭರವಸೆಯನ್ನು ನೀಡುತ್ತದೆ,” “ಮಾನವ ಘನತೆಯನ್ನು ದೃಢವಾಗಿ ರಕ್ಷಿಸುವ ವಿಷಯದಲ್ಲಿ ನೀವು ಅನೇಕ ಬಾರಿ ವಯಸ್ಕರಿಗಿಂತಲೂ ಹೆಚ್ಚು ಧೈರ್ಯಶಾಲಿಗಳಾಗಿದ್ದೀರಿ,” ಎಂದು ಸಂವಹನ ತಜ್ಞೆಯಾದ ಸಹೋದರಿ ಕ್ರಾಪಿಚ್ ಹೇಳಿದರು.
ಕಥೋಲಿಕ ಸಾಮಾಜಿಕ ಬೋಧನೆಯ ಆಧಾರದಲ್ಲಿ ಮಾತನಾಡಿದ ಸಹೋದರಿ ಕ್ರಾಪಿಚ್, ಜಗದ್ಗುರುಗಳ ಅವರ Magnifica Humanitas ಸುತ್ತೋಲೆಯನ್ನು ಉಲ್ಲೇಖಿಸಿ, “ಒಂದು ನಾಗರಿಕತೆಯ ಗುಣಮಟ್ಟವನ್ನು ಅದರ ಸಾಧನಗಳ ಶಕ್ತಿಯಿಂದ ಅಳೆಯುವುದಿಲ್ಲ; ಅದು ನೀಡಬಲ್ಲ ಕಾಳಜಿಯಿಂದ ಅಳೆಯಲಾಗುತ್ತದೆ” ಎಂಬುದನ್ನು ವಿದ್ಯಾರ್ಥಿಗಳಿಗೆ ನೆನಪಿಸಿದರು. ಥಾಯ್ಲೆಂಡ್‌ನ ಪ್ರೇಷಿತ ರಾಯಭಾರಿ ಕಚೇರಿಯ ವಂ. ಗುರು ಫ್ರಾಂಸ್ವಾ-ಕ್ಸೇವಿಯರ್ ಕೊಲಿನ್ ಕೂಡ ಈ ಹ್ಯಾಕಥಾನ್ ಕೇವಲ ಶೈಕ್ಷಣಿಕ ಅಥವಾ ತಾಂತ್ರಿಕ ಸ್ಪರ್ಧೆಯಲ್ಲ ಎಂದು ಪ್ರತಿನಿಧಿಗಳಿಗೆ ನೆನಪಿಸಿದರು. “ಹೃದಯದ ಮನೋಭಾವಗಳನ್ನು” ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದ ವಂ. ಗುರು ಕೊಲಿನ್, ಸಮಾಜದ ಗಾಯಗಳನ್ನು ಗುರುತಿಸುವಾಗ ಪ್ರಾಮಾಣಿಕರಾಗಿರಬೇಕು ಮತ್ತು ಪರಸ್ಪರ ಆಳವಾಗಿ ಹಾಗೂ ಗಮನವಿಟ್ಟು ಆಲಿಸಬೇಕು ಎಂದು ಹೇಳಿದರು. “ನೀವು ಪ್ರಾಮಾಣಿಕತೆಯಿಂದ ಮತ್ತು ಹೃದಯದಿಂದ ಸತ್ಯವನ್ನು ಮಾತನಾಡಿದರೆ, ದೇವರು ನಿಮ್ಮ ಮೂಲಕ ನಮ್ಮೊಂದಿಗೂ ಇಡೀ ಜಗತ್ತಿನೊಂದಿಗೂ ಮಾತನಾಡಬಲ್ಲರು,” ಎಂದು ವಂ. ಗುರು ಕೊಲಿನ್ ಒತ್ತಿಹೇಳಿದರು.
2026ರ MISSION POSSIBLE Youth Social Hackathon ಮುಕ್ತಾಯಗೊಂಡಾಗ, 70 ಮಂದಿ ಪ್ರಶಸ್ತಿಗಳು, ತಾಂತ್ರಿಕ ಮಾದರಿಗಳು ಮತ್ತು ತಮ್ಮ ಸಮುದಾಯಗಳಲ್ಲಿ ಅನುಷ್ಠಾನಗೊಳಿಸಲು ರೂಪಿಸಿದ ಕಾರ್ಯಯೋಜನೆಗಳೊಂದಿಗೆ ಕರಾವಳಿ ವಿಶ್ರಾಂತಿ ತಾಣದಿಂದ ಹೊರಟರು. ಅವರು ಮಂಡಿಸಿದ ಭರವಸೆಯ ಯೋಜನೆಗಳು ತಂತ್ರಜ್ಞಾನವನ್ನು ಸಹಾನುಭೂತಿಯ ಆಲಿಸುವಿಕೆ, ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ದುರ್ಬಲ ಸಮುದಾಯಗಳ ಸೇವೆಯೊಂದಿಗೆ ಜೋಡಿಸುವ ಕಾರ್ಯಕ್ರಮದ ಉದ್ದೇಶವನ್ನು ಪ್ರತಿಬಿಂಬಿಸಿದವು.
MISSION POSSIBLE ಎಂಬುದು LiCAS Newsನ ಪ್ರಮುಖ ಯುವಜನರ ಭಾಗವಹಿಸುವಿಕೆಯ ಕಾರ್ಯಕ್ರಮವಾಗಿದ್ದು, ಕಥೋಲಿಕ ಶೈಕ್ಷಣಿಕ ಸಂಸ್ಥೆಗಳು ಮತ್ತು ಯುವಜನಕೇಂದ್ರಿತ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಲಾಗುತ್ತದೆ. ಮೊದಲ MISSION POSSIBLE Youth Social Hackathon ಥಾಯ್ಲೆಂಡ್‌ನಲ್ಲಿ 2024ರಲ್ಲಿ ನಡೆಯಿತು. 2025ರಲ್ಲಿ ಈ ಉಪಕ್ರಮದ ಫಿಲಿಪ್ಪೀನ್ಸ್ ಆವೃತ್ತಿಯನ್ನು ಆರಂಭಿಸಲಾಯಿತು. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಆಗ್ನೇಯ ಏಷ್ಯಾದ ಇತರ ದೇಶಗಳಿಗೂ ವಿಸ್ತರಿಸಲು ಆಯೋಜಕರು ಯೋಜಿಸಿದ್ದಾರೆ.
ಈ ಲೇಖನವು ಮೂಲತಃ LiCAS Newsನಲ್ಲಿ ಪ್ರಕಟಗೊಂಡಿದೆ. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಮೂರನೇ ವ್ಯಕ್ತಿಗಳಿಂದ ಅನಧಿಕೃತ ಮರುಪ್ರಕಟಣೆಗೆ ಅನುಮತಿ ಇಲ್ಲ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).