ಹುಡುಕಿ

ಆಸ್ಪತ್ರೆಯ ಆವಾರದಲ್ಲಿ ಸಹೋದರಿ ಜುಡಿತಾ ಆಸ್ಪತ್ರೆಯ ಆವಾರದಲ್ಲಿ ಸಹೋದರಿ ಜುಡಿತಾ 

ಸಿರಿಯಾ: ಯುದ್ಧ ಮತ್ತು ಸಂಕಷ್ಟಗಳ ನಡುವೆ ದೇವರಿಗೂ ಜನರಿಗೂ ಸೇವೆ

ಡಮಾಸ್ಕಸ್‌ನಲ್ಲಿ ಅವರನ್ನು “ಫ್ರೆಂಚ್ ಆಸ್ಪತ್ರೆ”ಯನ್ನು ನಡೆಸುವ ಸಹೋದರಿ ಎಂದೇ ಗುರುತಿಸಲಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಸಹೋದರಿ ಜುಡಿತಾ ಸಿರಿಯಾದಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರು ಮತ್ತು ಅವರ ಸಮುದಾಯವು ಕಥೋಲಿಕ ಆಸ್ಪತ್ರೆಯೊಂದನ್ನು ನಿರ್ವಹಿಸುತ್ತಿದ್ದಾರೆ. ಕ್ರೈಸ್ತರ ಭಯಗಳು, ಯುವಜನರ ವಲಸೆ ಮತ್ತು ಪ್ರತಿದಿನ ರೋಗಿಗಳಿಗೆ ಭರವಸೆ ನೀಡಲು ಅವರು ನಡೆಸುತ್ತಿರುವ ಪ್ರಯತ್ನಗಳ ಕುರಿತು ಮಾತನಾಡಿದ್ದಾರೆ.

ಲೇಖಕರು:ಸಹೋದರಿ ಜಾನಾ ಪಾವ್ಲಾ ಹಾಲ್ಚಿನೋವಾ, DC

ಕಳೆದ 33 ವರ್ಷಗಳಿಂದ ಸಹೋದರಿ ಜುಡಿತಾ ಸಾಕೋವಾ ಅವರು ಸಂತ ವಿನ್ಸೆಂಟ್ ಡಿ ಪಾಲ್ ಅವರ ಡಾಟರ್ಸ್ ಆಫ್ ಚಾರಿಟಿ ಸಭೆಯ ಸದಸ್ಯೆಯಾಗಿದ್ದಾರೆ. ತರಬೇತಿ ಪಡೆದ ದಾದಿಯಾಗಿರುವ ಅವರು, ಡಮಾಸ್ಕಸ್‌ಗೆ ಬರುವ ಮೊದಲು ನಿರಾಶ್ರಿತರ ಶಿಬಿರಗಳು ಮತ್ತು ಸಂಘರ್ಷಪೀಡಿತ ಪ್ರದೇಶಗಳು ಸೇರಿದಂತೆ ವಿಶ್ವದ ಅನೇಕ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ತಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವ ಒಂದು ಭೇಟಿಯನ್ನು ಅವರು ನೆನಪಿಸಿಕೊಳ್ಳುತ್ತಾರೆ. “ನಮಗೆ ಸಹಾಯ ಮಾಡುತ್ತಿರುವ ಈ ಮಹಿಳೆ ಯಾರು?” ಎಂದು ಜನರು ಕೇಳಿದಾಗ, ಭಾಷಾಂತರಕಾರರೊಬ್ಬರು ಸರಳವಾಗಿ, “ಅವರು ದೇವರನ್ನೂ ಜನರನ್ನೂ ಪ್ರೀತಿಸುವ ಮಹಿಳೆ” ಎಂದು ಉತ್ತರಿಸಿದ್ದರು. ಅಂದಿನಿಂದ ಆ ಮಾತುಗಳು ಅವರ ಮನಸ್ಸಿನಲ್ಲಿ ಉಳಿದುಕೊಂಡಿವೆ. ಮಾನವೀಯ ಸೇವಾ ಕಾರ್ಯಗಳಲ್ಲಿ ಸ್ವಯಂಸೇವಕರಾಗಿ ತೊಡಗಿಸಿಕೊಳ್ಳುವ ಅವರ ನಿರ್ಧಾರಕ್ಕೆ, ಅವರನ್ನು ಆಳವಾಗಿ ಸ್ಪರ್ಶಿಸಿದ ಲೇಖನವೊಂದು ಪ್ರೇರಣೆಯಾಗಿತ್ತು. “ಯುದ್ಧ ಮತ್ತು ಹಿಂಸಾಚಾರದಿಂದ ಏನನ್ನೂ ತೆಗೆದುಕೊಂಡು ಬರಲಾಗದೆ ಪಲಾಯನ ಮಾಡಿದ ಜನರ ತೀವ್ರ ಬಡತನ ಮತ್ತು ಅತ್ಯಂತ ಮೂಲಭೂತ ನೆರವಿಗೂ ಅವರು ಪರದಾಡುತ್ತಿದ್ದ ಸ್ಥಿತಿ ನನ್ನ ಮನಸ್ಸನ್ನು ಆಳವಾಗಿ ತಟ್ಟಿತು,” ಎಂದು ಅವರು ಹೇಳುತ್ತಾರೆ. ಇಂದು ಅವರ ಸೇವಾ ಧ್ಯೇಯವು ವಿಭಿನ್ನ ಸ್ವರೂಪವನ್ನು ಪಡೆದುಕೊಂಡಿದೆ. “ಬಡವರ ಸೇವೆ ಮಾಡುವ ನಮ್ಮ ಧ್ಯೇಯಕ್ಕೆ ನಿಷ್ಠರಾಗಿದ್ದುಕೊಂಡೇ, ಆಸ್ಪತ್ರೆಯು ಆರ್ಥಿಕವಾಗಿ ಸುಸ್ಥಿರವಾಗಿರುವಂತೆ ಅದನ್ನು ನಿರ್ವಹಿಸುವುದು ನನ್ನ ಜವಾಬ್ದಾರಿಯಾಗಿದೆ.”

ಡಮಾಸ್ಕಸ್‌ನಲ್ಲಿ ಫ್ರೆಂಚ್ ಆಸ್ಪತ್ರೆ ಎಂದೇ ವ್ಯಾಪಕವಾಗಿ ಪರಿಚಿತವಾಗಿರುವ ಈ ಆಸ್ಪತ್ರೆ ಸಂತ ವಿನ್ಸೆಂಟ್ ಡಿ ಪಾಲ್ ಅವರ ಡಾಟರ್ಸ್ ಆಫ್ ಚಾರಿಟಿ ಸಭೆಗೆ ಸೇರಿದೆ. ಸಹೋದರಿಯರು ಆಸ್ಪತ್ರೆಯ ಆಡಳಿತವನ್ನು ನೋಡಿಕೊಳ್ಳುತ್ತಿದ್ದರೂ, ಅದರ ಬಹುತೇಕ ಉದ್ಯೋಗಿಗಳು ವಿವಿಧ ಧಾರ್ಮಿಕ ಹಿನ್ನೆಲೆಗಳಿಗೆ ಸೇರಿದ ವೃತ್ತಿಪರರಾಗಿದ್ದಾರೆ.

ಸವಾಲಿನ ಆರಂಭ

ಸಹೋದರಿ ಜುಡಿತಾ ಮೊದಲ ಬಾರಿಗೆ ಸಿರಿಯಾಕ್ಕೆ ಬಂದಾಗ ಅವರಿಗೆ ಅರೇಬಿಕ್ ಭಾಷೆ ತಿಳಿದಿರಲಿಲ್ಲ ಮತ್ತು ಸಂಪೂರ್ಣ ವಿಭಿನ್ನವಾದ ಆರೋಗ್ಯ ಸೇವಾ ವ್ಯವಸ್ಥೆಗೆ ಹೊಂದಿಕೊಳ್ಳಬೇಕಾಯಿತು. “ನನಗೆ ಸ್ವಲ್ಪ ಫ್ರೆಂಚ್ ಮತ್ತು ಇಂಗ್ಲಿಷ್ ತಿಳಿದಿತ್ತು,” ಎಂದು ನಗುತ್ತಾ ನೆನಪಿಸಿಕೊಳ್ಳುವ ಅವರು, “ಆದರೆ ಎಲ್ಲ ಭಾಷೆಗಳೂ ನನ್ನ ತಲೆಯಲ್ಲಿ ಬೆರೆತುಹೋಗಿದ್ದವು” ಎನ್ನುತ್ತಾರೆ. ಕ್ರಮೇಣ ಅವರು ಸಂವಹನ ನಡೆಸುವ ಮಾರ್ಗಗಳನ್ನು ಕಂಡುಕೊಂಡರು ಮತ್ತು ಶಸ್ತ್ರಚಿಕಿತ್ಸಾ ಕೊಠಡಿಯ ಕೆಲಸಕ್ಕೆ ಹೊಂದಿಕೊಂಡರು. “ವಿಶೇಷವಾಗಿ ಸಿಸೇರಿಯನ್ ಶಸ್ತ್ರಚಿಕಿತ್ಸೆಗಳಲ್ಲಿ ಸಹಾಯ ಮಾಡುವುದನ್ನು ನಾನು ಇಷ್ಟಪಡುತ್ತಿದ್ದೆ, ಏಕೆಂದರೆ ಅದರ ವಿಧಾನ ಒಂದೇ ಆಗಿತ್ತು.” ರಷ್ಯಾದಲ್ಲಿ ಅಧ್ಯಯನ ಮಾಡಿದ್ದ ಇಬ್ಬರು ವೈದ್ಯರು ಅವರಿಗೆ ಅಮೂಲ್ಯ ಮಾರ್ಗದರ್ಶಕರಾದರು. “ಅದು ನನಗೆ ಬಹಳ ಸಹಾಯವಾಯಿತು. ಏಕೆಂದರೆ ನಾನು ಪ್ರಶ್ನೆಗಳನ್ನು ಕೇಳಬಹುದಾಗಿತ್ತು ಮತ್ತು ಅವರು ತಾಳ್ಮೆಯಿಂದ ಎಲ್ಲವನ್ನೂ ವಿವರಿಸುತ್ತಿದ್ದರು.”

ಇಂದು ಆಸ್ಪತ್ರೆಯು ಅತ್ಯಂತ ಕಠಿಣ ಪರಿಸ್ಥಿತಿಗಳ ನಡುವೆ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ 108 ಹಾಸಿಗೆಗಳು, ಸುಮಾರು 250 ಉದ್ಯೋಗಿಗಳು ಮತ್ತು ಸುಮಾರು 130 ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. “ಸಿಬ್ಬಂದಿಗೆ ನಿಯಮಿತವಾಗಿ ವೇತನ ದೊರೆಯುವಂತೆ ಮತ್ತು ಅವರಿಗೆ ಉತ್ತಮ ಕೆಲಸದ ಪರಿಸ್ಥಿತಿಗಳು ಇರುವಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ.”

ಆಸ್ಪತ್ರೆಯ ಧ್ಯೇಯಕ್ಕೆ ನಿಷ್ಠರಾಗಿದ್ದುಕೊಂಡೇ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ನಿರಂತರ ಸವಾಲಾಗಿದೆ. “ನಾವು ಬಡವರಿಗೆ ಮಾತ್ರ ಸೇವೆ ನೀಡಲು ಸಾಧ್ಯವಿಲ್ಲ. ಏಕೆಂದರೆ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸುವಂತಹ ಯಾವುದೇ ಸಂಸ್ಥೆ ನಮ್ಮ ಬಳಿ ಇಲ್ಲ. ಆದ್ದರಿಂದ ಚಿಕಿತ್ಸೆಗಾಗಿ ಹಣ ಪಾವತಿಸಲು ಸಾಧ್ಯವಿರುವ ರೋಗಿಗಳನ್ನೂ ನಾವು ಸ್ವೀಕರಿಸುತ್ತೇವೆ. ಇದರಿಂದ ಹಣ ಪಾವತಿಸಲು ಸಾಧ್ಯವಿಲ್ಲದವರಿಗೆ ಚಿಕಿತ್ಸೆ ನೀಡಲು ನಮಗೆ ಸಾಧ್ಯವಾಗುತ್ತದೆ.”

ಅಂತರರಾಷ್ಟ್ರೀಯ ದಾನಿಗಳ ಬೆಂಬಲ ಹೊಂದಿರುವ ಕರಿತಸ್ ಮತ್ತು ಸಿರಿಯಾದ ಹಲವಾರು ದತ್ತಿ ಸಂಸ್ಥೆಗಳೊಂದಿಗೆ ಆಸ್ಪತ್ರೆ ನಿಕಟವಾಗಿ ಸಹಕರಿಸುತ್ತಿದೆ. ಹಿಂದಿನ ವರ್ಷಗಳಲ್ಲಿ ಪ್ರೇಷಿತ ರಾಯಭಾರಿ ಕಾರ್ಡಿನಲ್ ಮಾರಿಯೋ ಝೆನಾರಿ ನೇತೃತ್ವದ ವ್ಯಾಟಿಕನ್‌ನ ಓಪನ್ ಹಾಸ್ಪಿಟಲ್ ಉಪಕ್ರಮದ ಮೂಲಕವೂ ಆಸ್ಪತ್ರೆಗೆ ಮಹತ್ವದ ನೆರವು ದೊರೆತಿತ್ತು. “ಈ ನೆರವಿನಿಂದಾಗಿ ತುರ್ತು ಪರಿಸ್ಥಿತಿಗಳಲ್ಲಿಯೂ ಅನೇಕ ಜನರು ಜೀವ ಉಳಿಸುವ ಶಸ್ತ್ರಚಿಕಿತ್ಸೆಗಳನ್ನು ಪಡೆಯಲು ಸಾಧ್ಯವಾಯಿತು.”

ಹೆಚ್ಚುತ್ತಿರುವ ಅನಿಶ್ಚಿತತೆ

ಸಹೋದರಿ ಜುಡಿತಾ ಅವರ ಪ್ರಕಾರ, 2011ರಲ್ಲಿ ಯುದ್ಧ ಆರಂಭವಾದ ನಂತರ ಸಿರಿಯಾದ ಸಮಾಜವು ಬಹಳಷ್ಟು ಬದಲಾಗಿದೆ. “ಅನೇಕ ಜನರು ಬದುಕು ಸಾಗಿಸಲು ಎರಡು ಕೆಲಸಗಳನ್ನು ಮಾಡುತ್ತಿದ್ದಾರೆ. ವಿದ್ಯಾವಂತರು, ವಿಶೇಷವಾಗಿ ಕ್ರೈಸ್ತರು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ಯುರೋಪ್, ಅಮೆರಿಕ ಮತ್ತು ಆಸ್ಟ್ರೇಲಿಯಾಗೆ ದೊಡ್ಡ ಪ್ರಮಾಣದಲ್ಲಿ ವಲಸೆ ಹೋಗಿದ್ದಾರೆ.” ಉಳಿದುಕೊಂಡಿರುವವರು ಹೆಚ್ಚಾಗಿ ದೇಶವನ್ನು ತೊರೆಯಲು ಯಾವುದೇ ಅವಕಾಶವಿಲ್ಲದವರು ಎಂದು ಅವರು ಹೇಳುತ್ತಾರೆ. ಪ್ರಾದೇಶಿಕ ಉದ್ವಿಗ್ನತೆಗಳು ಮತ್ತಷ್ಟು ಅನಿಶ್ಚಿತತೆಯನ್ನು ತಂದಿವೆ: ಸ್ಫೋಟಗಳು ಮತ್ತು ರಾಕೆಟ್ ದಾಳಿಗಳು ದೈನಂದಿನ ಜೀವನದ ಭಾಗವಾಗಿವೆ.

ಒಂದು ದಾಳಿ ಅವರ ನೆನಪಿನಲ್ಲಿ ವಿಶೇಷವಾಗಿ ಉಳಿದಿದೆ. ಆರ್ಥೊಡಾಕ್ಸ್ ದೇವಾಲಯವೊಂದರ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಹಲವರು ಮೃತಪಟ್ಟ ನಂತರ, ಗಾಯಗೊಂಡವರಲ್ಲಿ ಹೆಚ್ಚಿನವರನ್ನು ಫ್ರೆಂಚ್ ಆಸ್ಪತ್ರೆಗೆ ಕರೆತರಲಾಗಿತ್ತು. “ಅವರಲ್ಲಿ ಸುಮಾರು ಶೇ. 80ರಷ್ಟು ಜನರಿಗೆ ನಾವು ಚಿಕಿತ್ಸೆ ನೀಡಿದ್ದೇವೆ.” ಗಾಯಾಳುಗಳಲ್ಲಿ ಅನೇಕರು ಯುವಜನರಾಗಿದ್ದರು. “ಶಸ್ತ್ರಚಿಕಿತ್ಸೆಯ ನಂತರ ನಾವು ಅವರಿಗೆ ಹೇಗೆ ಸಹಾಯ ಮಾಡಬಹುದು ಎಂದು ಕೇಳಿದಾಗ, ಬಹುತೇಕ ಎಲ್ಲರೂ ಒಂದೇ ಉತ್ತರ ನೀಡಿದರು: ಅವರು ದೇಶವನ್ನು ತೊರೆಯಲು ಬಯಸಿದ್ದರು.”

ಶಾಂತಿ ಮತ್ತು ಸ್ವಾಗತದ ತಾಣ

ಸುತ್ತಮುತ್ತ ಹಿಂಸಾಚಾರ ನಡೆಯುತ್ತಿದ್ದರೂ, ಆಸ್ಪತ್ರೆಯು ಭರವಸೆಯ ತಾಣವಾಗಿ ಉಳಿಯಲು ಪ್ರಯತ್ನಿಸುತ್ತಿದೆ. “ನಮ್ಮ ಸಂಸ್ಥೆಯಲ್ಲಿ ಕ್ರೈಸ್ತ ವಾತಾವರಣವಿದೆ—ಪರಸ್ಪರ ಗೌರವ, ಸಹಕಾರ ಮತ್ತು ಇತರರಿಗೆ ಸೇವೆ ಸಲ್ಲಿಸಬೇಕೆಂಬ ನೈಜ ಮನೋಭಾವ ಇಲ್ಲಿದೆ.” ಪ್ರತಿಯೊಬ್ಬ ವ್ಯಕ್ತಿಯಲ್ಲೂ ಕ್ರಿಸ್ತನನ್ನು ಕಾಣುವಂತೆ ಮತ್ತು ಪ್ರತಿಯೊಬ್ಬ ರೋಗಿಯನ್ನು ಘನತೆ ಹಾಗೂ ಸಹಾನುಭೂತಿಯಿಂದ ಕಾಣುವಂತೆ ಸಿಬ್ಬಂದಿಯನ್ನು ಪ್ರೋತ್ಸಾಹಿಸಲಾಗುತ್ತದೆ. “ಜನರು ಇಲ್ಲಿ ಸುರಕ್ಷಿತವಾಗಿದ್ದೇವೆ ಎಂದು ಭಾವಿಸಲು ಇದೂ ಒಂದು ಕಾರಣ.”

ಹೆಚ್ಚಿನ ಆರೋಗ್ಯ ಸೇವಾ ಸಂಸ್ಥೆಗಳು ಸರ್ಕಾರದಿಂದ ನಡೆಸಲ್ಪಡುವ ದೇಶದಲ್ಲಿ, ಫ್ರೆಂಚ್ ಆಸ್ಪತ್ರೆಯು ಅನೇಕ ಕುಟುಂಬಗಳಿಗೆ ವಿಶ್ವಾಸದ ಸಂಕೇತವಾಗಿ ಪರಿಣಮಿಸಿದೆ. ಆಸ್ಪತ್ರೆಯು ತನ್ನ ಸೇವೆಗಳನ್ನು ವಿಸ್ತರಿಸುತ್ತಲೂ ಇದೆ. ಇತ್ತೀಚೆಗೆ ಹೃದಯದ ಕ್ಯಾಥೆಟರೈಸೇಶನ್ ಮತ್ತು ತೆರೆದ ಹೃದಯ ಶಸ್ತ್ರಚಿಕಿತ್ಸೆಗಳನ್ನು ಒದಗಿಸುವ ಹೊಸ ಹೃದ್ರೋಗ ವಿಭಾಗವನ್ನು ಆರಂಭಿಸಲಾಗಿದೆ. “ಕ್ರೈಸ್ತರು ಸೇರಿದಂತೆ ಪ್ರತಿಯೊಬ್ಬರಿಗೂ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯುವುದು ಬಹಳ ಮುಖ್ಯ.”

ಆಸ್ಪತ್ರೆಯ ಸೇವೆ ಅನೇಕ ಬಾರಿ ಆರೋಗ್ಯ ಸೇವೆಯನ್ನೂ ಮೀರಿ ವಿಸ್ತರಿಸುತ್ತದೆ. ಸಂಕಷ್ಟದ ಅವಧಿಯಲ್ಲಿ ಏಕಾಏಕಿ ತಮ್ಮ ಮನೆಗಳನ್ನೂ ಉದ್ಯೋಗಗಳನ್ನೂ ಕಳೆದುಕೊಂಡ ಆರೋಗ್ಯ ಕಾರ್ಯಕರ್ತರಿಗೆ ಆಸ್ಪತ್ರೆಯು ವಸತಿ ವ್ಯವಸ್ಥೆ ಕಲ್ಪಿಸಿತ್ತು. ಕತ್ತಲಾದ ನಂತರ ಡಮಾಸ್ಕಸ್‌ನಲ್ಲಿ ಪ್ರಯಾಣಿಸುವುದು ಹೆಚ್ಚು ಅಪಾಯಕಾರಿಯಾಗಿದ್ದರಿಂದ ಉದ್ಯೋಗಿಗಳಿಗೆ ಸಾರಿಗೆ ವ್ಯವಸ್ಥೆಯನ್ನೂ ಮಾಡಿತ್ತು. “ವಿದ್ಯುತ್ ಇಲ್ಲ. ನಗರ ಕತ್ತಲೆಯಲ್ಲಿದೆ ಮತ್ತು ಜನರು ಭಯಭೀತರಾಗಿದ್ದಾರೆ.”

ಉಳಿದುಕೊಂಡಿರುವ ಭರವಸೆ

ಆಸ್ಪತ್ರೆಯು ಅಂತರರಾಷ್ಟ್ರೀಯ ನೆರವಿನ ಮೇಲೆ ಬಹಳಷ್ಟು ಅವಲಂಬಿತವಾಗಿದೆ ಎಂಬುದನ್ನು ಸಹೋದರಿ ಜುಡಿತಾ ಒಪ್ಪಿಕೊಳ್ಳುತ್ತಾರೆ. “ಆರ್ಥಿಕವಾಗಿರಲಿ ಅಥವಾ ವಸ್ತುಗಳ ರೂಪದಲ್ಲಿರಲಿ, ಪ್ರತಿಯೊಂದು ರೀತಿಯ ನೆರವನ್ನೂ ನಾವು ಸ್ವಾಗತಿಸುತ್ತೇವೆ. ನಮಗೆ ತುರ್ತಾಗಿ ಹೊಸ ಆಂಬುಲೆನ್ಸ್ ಅಗತ್ಯವಿದೆ. ಬಡ ರೋಗಿಗಳ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಭರಿಸಲು ಸಹ ನಮಗೆ ನೆರವು ಬೇಕಾಗಿದೆ.” ಆದರೂ ಯುದ್ಧ, ಸಂಕಷ್ಟ ಮತ್ತು ಅನಿಶ್ಚಿತತೆಯ ನಡುವೆಯೂ ಬದಲಾಗಿರುವ ಜನರ ಬದುಕುಗಳೇ ಅವರ ಭರವಸೆಯನ್ನು ಜೀವಂತವಾಗಿರಿಸುತ್ತವೆ. ಕೇವಲ ಆರು ತಿಂಗಳ ಗರ್ಭಾವಸ್ಥೆಯಲ್ಲಿಯೇ ಅವಧಿಪೂರ್ವವಾಗಿ ಜನಿಸಿದ ಒಂದು ಹೆಣ್ಣು ಮಗುವನ್ನು ಅವರು ನೆನಪಿಸಿಕೊಳ್ಳುತ್ತಾರೆ. “ಅವಳು ಸಂತ ಮೈಕೆಲ್ ಅವರ ಹಬ್ಬದ ದಿನದಂದು ಜನಿಸಿದ್ದಳು. ಆದ್ದರಿಂದ ನಾವು ಅವಳಿಗೆ ‘ಮೀಶಾ’ ಎಂದು ಹೆಸರಿಡುವಂತೆ ಸೂಚಿಸಿದ್ದೆವು.” ಇಂದು ಆ ಪುಟ್ಟ ಮಗು ಆರೋಗ್ಯವಂತ ಎರಡು ವರ್ಷದ ಬಾಲಕಿಯಾಗಿದ್ದಾಳೆ. “ಇಂತಹ ಕ್ಷಣಗಳು ನಮಗೆ ಅಪಾರ ಸಂತೋಷವನ್ನು ನೀಡುತ್ತವೆ,” ಎಂದು ಸಹೋದರಿ ಜುಡಿತಾ ಹೇಳುತ್ತಾರೆ. “ನಾವು ಏಕೆ ಈ ಸೇವೆಯನ್ನು ಮುಂದುವರಿಸುತ್ತಿದ್ದೇವೆ ಎಂಬುದನ್ನು ಅವು ನಮಗೆ ನೆನಪಿಸುತ್ತವೆ.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

01 ಆಗಸ್ಟ್ 2026, 18:04