ತಾಂಜಾನಿಯಾ: ದೂರದರ್ಶನ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಧರ್ಮಪ್ರಚಾರ ಮಾಡುತ್ತಿರುವ ಭಗಿನಿಯರು
ಲೇಖಕರು: ಸಹೋದರಿ ಎರ್ನೆಸ್ಟಿನಾ ಪ್ಯಾಟ್ರಿಕ್ ಲಾಸ್ವೇ SAC ಮತ್ತು ಸಹೋದರಿ ಕ್ರಿಸ್ಟಿನ್ ಮಸಿವೊ CPS
1954ರಲ್ಲಿ ರೋಸ್ಮಿನಿಯನ್ ಯಾಜಕರ ಮಾನ್ಸಿನೋರ್ ಯೂಜೆನ್ ಆರ್ಥರ್ಸ್ ಅವರಿಂದ ಸ್ಥಾಪಿಸಲ್ಪಟ್ಟ ಉಸಂಬರಾ ಮಾತೆಯ ಧರ್ಮಭಗಿನಿಯರ ಸಭೆ (COLU), ಧರ್ಮಪ್ರಚಾರ ಮತ್ತು ಶಿಕ್ಷಣದಲ್ಲಿ ಬೇರೂರಿರುವ ಧರ್ಮಕ್ಷೇತ್ರದ ಧಾರ್ಮಿಕ ಸಭೆಯಾಗಿದೆ. 1958ರಲ್ಲಿ ಮಾನ್ಸಿನೋರ್ ಆರ್ಥರ್ಸ್ ತಾಂಜಾನಿಯಾದ ಟಾಂಗಾ ಕಥೋಲಿಕ ಧರ್ಮಕ್ಷೇತ್ರದ ಮೊದಲ ಧರ್ಮಾಧ್ಯಕ್ಷರಾದರು. ಭಗಿನಿಯರಿಗೆ ಆರಂಭಿಕ ತರಬೇತಿಯನ್ನು ಅಮೂಲ್ಯ ರಕ್ತದ ಮಿಷನರಿ ಭಗಿನಿಯರು (CPS) ನೀಡಿದರು. ಅವರ ಮೊದಲ ಪ್ರಧಾನಾಧಿಕಾರಿಣಿ ಸಹೋದರಿ ವಿಲಿಬಾಲ್ಡಾ ಗೀಬರ್ಸ್ ಆಗಿದ್ದರು.
ಈ ಧಾರ್ಮಿಕ ಸಭೆಯ ಧರ್ಮಪ್ರಚಾರ ಕಾರ್ಯವು ರಾಂಗ್ವಿಯಲ್ಲಿ ಆರಂಭಗೊಂಡು ನಂತರ ಟಾಂಗಾ ಪ್ರದೇಶದ ಕೋರೊಗ್ವೆ, ಕ್ವಾಮಂಡೋಲ್ವಾಗೆ ಸ್ಥಳಾಂತರಗೊಂಡಿತು. ಆದರೆ ರಾಂಗ್ವಿಯೇ ಅದರ ಮೂಲ ಮಾತೃಮಠವಾಗಿ ಉಳಿಯಿತು. ಕಾಲಕ್ರಮೇಣ ಅವರ ಧರ್ಮಪ್ರಚಾರ ಕಾರ್ಯವು ಶಿಶುವಿಹಾರದಿಂದ ಮಹಾವಿದ್ಯಾಲಯದವರೆಗೆ ಎಲ್ಲ ಹಂತಗಳ ಶಿಕ್ಷಣ, ಧರ್ಮಶಿಕ್ಷಣ ಮತ್ತು ಯುವಜನರ ಆಧ್ಯಾತ್ಮಿಕ ತರಬೇತಿಯನ್ನು ಒಳಗೊಂಡಿದೆ.
ಧರ್ಮಪ್ರಚಾರಕ್ಕೆ ಹೊಸ ಮಾರ್ಗ
ಕಾಲ ಬದಲಾಗುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ, ಆಧುನಿಕ ಸಂವಹನ ಮಾಧ್ಯಮಗಳ ಮೂಲಕ ಜನರನ್ನು ತಲುಪುವ ಅಗತ್ಯವನ್ನು ಧರ್ಮಭಗಿನಿಯರು ಅರಿತುಕೊಂಡರು. ಇದರ ಫಲವಾಗಿ 2024ರ ಜುಲೈನಲ್ಲಿ ಟಾಂಗಾ ಪ್ರದೇಶದ ಲುಶೋಟೊದಲ್ಲಿ ಉಸಂಬರಾ ಮೌಂಟನ್ ಟಿವಿ (UMTV) ಸ್ಥಾಪಿಸಲಾಯಿತು. ಧರ್ಮಪ್ರಚಾರ, ಶಿಕ್ಷಣ ಮತ್ತು ನಂಬಿಕೆಗೆ ಸಂಬಂಧಿಸಿದ ವಿಷಯಗಳ ಕುರಿತು ಸಂವಾದಕ್ಕೆ ಸಹಾಯ ಮಾಡುವ ಕಾರ್ಯಕ್ರಮಗಳನ್ನು ನೀಡುವುದು ಇದರ ಉದ್ದೇಶವಾಗಿದೆ.
“ದೂರದರ್ಶನ ಮತ್ತು ಅಂತರ್ಜಾಲದ ಮೂಲಕ ನಮ್ಮ ಸುತ್ತಮುತ್ತಲಿನ ಸಮುದಾಯಗಳನ್ನು ಮೀರಿ ಬಹುದೂರದಲ್ಲಿರುವ ಜನರನ್ನು ತಲುಪಲು ನಮಗೆ ಸಾಧ್ಯವಾಗುತ್ತಿದೆ,” ಎಂದು UMTV ನಿರ್ದೇಶಕಿ ಸಹೋದರಿ ಪಾಲಿನಾ ಟಿ. ಮ್ಶಾನಾ ಹೇಳಿದರು. “ಇದು ಶುಭಸಂದೇಶವನ್ನು ಹಂಚಿಕೊಳ್ಳುವ ಮತ್ತು ವಿಶೇಷವಾಗಿ ಯುವಜನರು ದೇವರನ್ನು ಹೆಚ್ಚು ತಿಳಿದುಕೊಳ್ಳುವಂತೆ ಹಾಗೂ ಪ್ರೀತಿಸುವಂತೆ ಪ್ರೋತ್ಸಾಹಿಸುವ ನಮ್ಮ ಧರ್ಮಪ್ರಚಾರ ಕಾರ್ಯವನ್ನು ಬಲಪಡಿಸುತ್ತದೆ.”
ಅನೇಕ ಯುವಜನರು ಸಾಮಾಜಿಕ ಜಾಲತಾಣಗಳು ಮತ್ತು ಯೂಟ್ಯೂಬ್ ಮೂಲಕ UMTVಯನ್ನು ಅನುಸರಿಸುತ್ತಿದ್ದಾರೆ. ಯುವಜನರು, ನಂಬಿಕೆ ಮತ್ತು ಸಾಮಾಜಿಕ ವಿಷಯಗಳನ್ನು ಕೇಂದ್ರೀಕರಿಸಿದ ಕಾರ್ಯಕ್ರಮಗಳನ್ನು ವಾಹಿನಿ ಪ್ರಸಾರ ಮಾಡುತ್ತದೆ. ಇವುಗಳಲ್ಲಿ ಡಾನ್ ಬಾಸ್ಕೊ ಅವರ ಆಧ್ಯಾತ್ಮಿಕತೆಯಿಂದ ಪ್ರೇರಣೆ ಪಡೆದ ಕಾರ್ಯಕ್ರಮಗಳೂ ಸೇರಿವೆ.
ಕಾರ್ಯಕ್ರಮಗಳು ಮತ್ತು ಜನರನ್ನು ತಲುಪುವಿಕೆ
UMTV ವಿವಿಧ ರೀತಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಅವುಗಳಲ್ಲಿ ಧರ್ಮಶಿಕ್ಷಣ, ನಂಬಿಕೆಯ ಕುರಿತ ಚಿಂತನೆಗಳು ಮತ್ತು ಯುವಜನರು ಹಾಗೂ ಸಮಾಜಕ್ಕೆ ಸಂಬಂಧಿಸಿದ ಚರ್ಚೆಗಳು ಸೇರಿವೆ. ಈ ಪ್ರಯತ್ನಗಳ ಮೂಲಕ, ದಿನನಿತ್ಯದ ಬದುಕನ್ನು ಹೆಚ್ಚು ಹೆಚ್ಚು ರೂಪಿಸುತ್ತಿರುವ ಮಾಧ್ಯಮ ಕ್ಷೇತ್ರದಲ್ಲಿ ತಮ್ಮ ಧಾರ್ಮಿಕ ಸಭೆಯ ಧರ್ಮಪ್ರಚಾರದ ಕರಿಸ್ಮಾ ಮತ್ತು ಧ್ಯೇಯವನ್ನು ಹೆಚ್ಚು ಸ್ಪಷ್ಟವಾಗಿ ಜನರಿಗೆ ತಲುಪಿಸಲು ಭಗಿನಿಯರು ಪ್ರಯತ್ನಿಸುತ್ತಿದ್ದಾರೆ. ಆರಂಭವಾದಂದಿನಿಂದ ಈ ಮಾಧ್ಯಮ ವೇದಿಕೆಯು ಸ್ಥಳೀಯವಾಗಿ ಮಾತ್ರವಲ್ಲದೆ ಅಂತಾರಾಷ್ಟ್ರೀಯವಾಗಿಯೂ, ವಿಶೇಷವಾಗಿ ಅಂತರ್ಜಾಲವನ್ನು ಬಳಸುವ ಯುವಜನರ ನಡುವೆ, ಹೆಚ್ಚಿನ ಸಂಖ್ಯೆಯ ಜನರನ್ನು ತಲುಪಿದೆ.
ಶಿಕ್ಷಣ, ಚಿಂತನೆ ಮತ್ತು ಸುಲಭವಾಗಿ ಅರ್ಥವಾಗುವ ಸಂವಹನವನ್ನು ಒಟ್ಟುಗೂಡಿಸುವ ವಿಷಯಗಳಿಗಾಗಿ ಜನರಲ್ಲಿ ಹೆಚ್ಚುತ್ತಿರುವ ಆಸಕ್ತಿಯನ್ನು ಈ ಬೆಳವಣಿಗೆ ತೋರಿಸುತ್ತದೆ.ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವುದರಿಂದ ತಮ್ಮ ಧಾರ್ಮಿಕ ಸಭೆಯ ಸದಸ್ಯರು ದೈಹಿಕವಾಗಿ ತಲುಪಲು ಸಾಧ್ಯವಾಗದ ಸಮುದಾಯಗಳನ್ನೂ ತಲುಪಲು ಸಾಧ್ಯವಾಗುತ್ತಿದೆ ಎಂದು ಸಹೋದರಿ ಪಾಲಿನಾ ಹೇಳುತ್ತಾರೆ.
“ಈ ಕಾರ್ಯದಲ್ಲಿ ಭಾಗವಹಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಕ್ಯಾಮೆರಾ ನಡೆಸುವುದು ಪುರುಷರ ಕೆಲಸ ಎಂದು ಇನ್ನೂ ಅನೇಕರು ಭಾವಿಸುತ್ತಾರೆ. ಆದರೆ ಭಗಿನಿಯರೂ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಬಹುದು ಮತ್ತು ವಿಶಾಲ ಸಮುದಾಯಕ್ಕೆ ಶುಭಸಂದೇಶವನ್ನು ತಲುಪಿಸಬಹುದು,” ಎಂದು ಅವರು ಹೇಳಿದರು.
ಸಹಕಾರ ಮತ್ತು ಪರಿಣಾಮ
ಈ ಉಪಕ್ರಮಕ್ಕೆ ಧರ್ಮಸಭೆಯ ಇತರ ಸದಸ್ಯರ ಸಹಕಾರವೂ ದೊರೆತಿದೆ. UMTVಯ ಸಹಯೋಗಿಗಳಲ್ಲಿ ಒಬ್ಬರಾದ ಸಹೋದರ ಲೂಕಾಸ್ ಮಸಾಸಿ OFM Cap, ನಂಬಿಕೆಯನ್ನು ಆಧರಿಸಿದ ವಿಷಯಗಳನ್ನು ಉತ್ತೇಜಿಸುವಲ್ಲಿ ಮತ್ತು ವಿವಿಧ ಹಂತಗಳಲ್ಲಿ ಕಲಿಕೆಯನ್ನು ಬೆಂಬಲಿಸುವಲ್ಲಿ ಈ ಯೋಜನೆಯ ಮಹತ್ವವನ್ನು ಒತ್ತಿಹೇಳಿದರು. ಸರಳವಾದ ಯೂಟ್ಯೂಬ್ ವಾಹಿನಿಯಿಂದ ಹೆಚ್ಚು ವ್ಯವಸ್ಥಿತವಾದ ದೂರದರ್ಶನ ವೇದಿಕೆಯಾಗಿ UMTV ಬೆಳೆದಿರುವುದನ್ನು ಅವರು ಗಮನಿಸಿದ್ದಾರೆ.
ತನ್ನ ವಿವಿಧ ಕಾರ್ಯಕ್ರಮಗಳ ಮೂಲಕ UMTV ಸ್ಥಳೀಯ ಸಮುದಾಯಗಳ ಶಿಕ್ಷಣಕ್ಕೂ ಕೊಡುಗೆ ನೀಡುತ್ತಿದೆ. ಸಂಸ್ಕೃತಿ, ಸಂಗೀತ, ಆಧ್ಯಾತ್ಮಿಕತೆ ಮತ್ತು ಮೂಲಭೂತ ಜೀವನ ಕೌಶಲ್ಯಗಳಂತಹ ವಿಷಯಗಳ ಕುರಿತು ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಇವುಗಳನ್ನು ಜನರು ತಮ್ಮ ಮನೆಗಳಿಂದಲೇ ವೀಕ್ಷಿಸಬಹುದಾಗಿದೆ.
ಸವಾಲುಗಳು ಮತ್ತು ಮಿತಿಗಳು
ಅನೇಕ ಹೊಸ ಉಪಕ್ರಮಗಳಂತೆ UMTVಯೂ ಪ್ರಾಯೋಗಿಕ ಸವಾಲುಗಳನ್ನು ಎದುರಿಸುತ್ತಿದೆ. ಸೀಮಿತ ಉಪಕರಣಗಳು ಮತ್ತು ಆರ್ಥಿಕ ಸಂಪನ್ಮೂಲಗಳಿಂದಾಗಿ ಪ್ರತಿದಿನ ಕಾರ್ಯಕ್ರಮಗಳನ್ನು ತಯಾರಿಸುವುದು ಕಷ್ಟಕರವಾಗಿದೆ. ವಿಶ್ವಾಸಾರ್ಹ ಅಂತರ್ಜಾಲದ ಲಭ್ಯತೆ ಮತ್ತು ಡಿಜಿಟಲ್ ಸಾಧನಗಳ ವೆಚ್ಚವೂ ಅನೇಕ ವೀಕ್ಷಕರಿಗೆ ಅಡ್ಡಿಯಾಗಿವೆ.ವಿದ್ಯುತ್ ಕಡಿತಗಳು ಕಾರ್ಯಕ್ರಮಗಳ ನಿಯಮಿತ ಪ್ರಸಾರಕ್ಕೂ ಪರಿಣಾಮ ಬೀರುತ್ತವೆ. ಸಾಕಷ್ಟು ಪರ್ಯಾಯ ವಿದ್ಯುತ್ ವ್ಯವಸ್ಥೆಗಳ ಕೊರತೆಯಿಂದಾಗಿ ಕೆಲವೊಮ್ಮೆ ಕಾರ್ಯಾಚರಣೆಗಳು ಸ್ಥಗಿತಗೊಳ್ಳುತ್ತವೆ.ಇದಲ್ಲದೆ, ಆರಂಭದಲ್ಲಿ ಸಭೆಯ ಎಲ್ಲ ಸದಸ್ಯರೂ ಧರ್ಮಪ್ರಚಾರದಲ್ಲಿ ಮಾಧ್ಯಮದ ಮಹತ್ವವನ್ನು ಗುರುತಿಸಿರಲಿಲ್ಲ. ಆದ್ದರಿಂದ ಸಮುದಾಯದೊಳಗೆ ನಿರಂತರ ತರಬೇತಿ ಮತ್ತು ಜಾಗೃತಿ ಮೂಡಿಸುವ ಅಗತ್ಯವೂ ಎದುರಾಗಿದೆ.
ಮುಂದಿನ ದೃಷ್ಟಿಕೋನ
ಈ ಸವಾಲುಗಳ ನಡುವೆಯೂ, ಧರ್ಮಪ್ರಚಾರ ಮತ್ತು ಆಧ್ಯಾತ್ಮಿಕ ರೂಪುಗೊಳಿಸುವಿಕೆಯ ವೇದಿಕೆಯಾಗಿ ಮಾಧ್ಯಮವನ್ನು ಬಳಸುವ ತಮ್ಮ ಬದ್ಧತೆಯನ್ನು ಭಗಿನಿಯರು ಮುಂದುವರಿಸಿದ್ದಾರೆ. ವಿಶಾಲವಾದ ಜನಸಮುದಾಯವನ್ನು ತಲುಪುವುದು ಮತ್ತು ಅರ್ಥಪೂರ್ಣ ಜೀವನ ಹಾಗೂ ನಂಬಿಕೆಯ ಹುಡುಕಾಟದಲ್ಲಿ ಯುವಜನರು ಡಿಜಿಟಲ್ ಸಾಧನಗಳನ್ನು ಹೆಚ್ಚು ಜಾಗೃತಿಯಿಂದ ಬಳಸುವಂತೆ ಸಹಾಯ ಮಾಡುವುದು ಅವರ ಉದ್ದೇಶವಾಗಿದೆ.
“ಬೆಳೆಯೇನೋ ಹೇರಳವಾಗಿದೆ; ಕೊಯ್ಲುಗಾರರೊ ವಿರಳ. ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಬೇಡಿಕೊಳ್ಳಿ.” (ಲೂಕ 10:2) ಶುಭಸಂದೇಶದ ಈ ಮಾತುಗಳಿಂದ ಪ್ರೇರಣೆ ಪಡೆದು, ಭಗಿನಿಯರು ದೂರದರ್ಶನ, ಸಾಮಾಜಿಕ ಮಾಧ್ಯಮಗಳು ಮತ್ತು ಶೈಕ್ಷಣಿಕ ವಿಷಯಗಳ ಮೂಲಕ ಕ್ರಿಸ್ತನನ್ನು ಜನರಿಗೆ ಪರಿಚಯಿಸುವ ತಮ್ಮ ಧರ್ಮಪ್ರಚಾರದ ಧ್ಯೇಯವನ್ನು ಮುಂದುವರಿಸುತ್ತಿದ್ದಾರೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).