ಹುಡುಕಿ

ಧರ್ಮಕ್ಷೇತ್ರದಲ್ಲಿ  ಕಳೆದ 30 ವರ್ಷಗಳಲ್ಲಿ ಆರಂಭವಾದ ಮೊದಲ ಧರ್ಮಸಭೆ-ಸಂಯೋಜಿತ ಶಾಲೆಯಾದ 'ಅವೆ ಮಾರಿಯಾ ಅಕಾಡೆಮಿ'ಯ ಉದ್ಘಾಟನಾ ಸಮಾರಂಭದಲ್ಲಿ ಕುಟುಂಬಗಳೊಂದಿಗೆ ಮಾತನಾಡುತ್ತಿರುವ ಪೂಜ್ಯ ಧರ್ಮಾಧ್ಯಕ್ಷ ಫರ್ನಾಂಡಿಸ್. ಧರ್ಮಕ್ಷೇತ್ರದಲ್ಲಿ ಕಳೆದ 30 ವರ್ಷಗಳಲ್ಲಿ ಆರಂಭವಾದ ಮೊದಲ ಧರ್ಮಸಭೆ-ಸಂಯೋಜಿತ ಶಾಲೆಯಾದ 'ಅವೆ ಮಾರಿಯಾ ಅಕಾಡೆಮಿ'ಯ ಉದ್ಘಾಟನಾ ಸಮಾರಂಭದಲ್ಲಿ ಕುಟುಂಬಗಳೊಂದಿಗೆ ಮಾತನಾಡುತ್ತಿರುವ ಪೂಜ್ಯ ಧರ್ಮಾಧ್ಯಕ್ಷ ಫರ್ನಾಂಡಿಸ್. 

ಅಮೆರಿಕದ ಓಹಿಯೋದಲ್ಲಿ ಕಥೋಲಿಕ ಶಾಲೆಗಳತ್ತ ಹೆಚ್ಚುತ್ತಿರುವ ಒಲವು; ಯುವಜನರ ರೂಪಣೆಗೆ ಕ್ರಮ ಕೈಗೊಳ್ಳುವಂತೆ ಧರ್ಮಾಧ್ಯಕ್ಷರ ಕರೆ

ಕೊಲಂಬಸ್ ಧರ್ಮಕ್ಷೇತ್ರದಲ್ಲಿ ಕಥೋಲಿಕ ಶಾಲೆಗಳು ತಮ್ಮ ಗರಿಷ್ಠ ಸಾಮರ್ಥ್ಯದ ಸಮೀಪಕ್ಕೆ ತಲುಪುತ್ತಿದ್ದು, 30 ವರ್ಷಗಳ ಬಳಿಕ ಮೊದಲ ಹೊಸ ಪ್ರಾಥಮಿಕ ಶಾಲೆ ಆರಂಭವಾಗುತ್ತಿರುವ ಸಂದರ್ಭದಲ್ಲಿ, ಶಿಕ್ಷಣವು ಭರವಸೆಯ ಕಾರ್ಯವಾಗಿದೆ ಎಂದು ಪ್ರತಿಪಾದಿಸುವ ಧರ್ಮಾಧ್ಯಕ್ಷ ಅರ್ಲ್ ಫೆರ್ನಾಂಡಿಸ್ ಅವರು ಹೊಸ ಪಾಲನಾ ಪತ್ರವನ್ನು ಹೊರಡಿಸಿದ್ದಾರೆ.

ಲೇಖಕರು:ಕರೋಲ್ ಡಾರ್ಮೊರೋಸ್ ಮತ್ತು ವಂ. ಗುರು ಪಾವೆಲ್ ರಿಟೆಲ್-ಆಂಡ್ರಿಯಾನಿಕ್

ಹೊಸ ಶೈಕ್ಷಣಿಕ ವರ್ಷದ ಆರಂಭದಲ್ಲಿ, ಶಿಕ್ಷಣದ ವಿಶ್ವದ ಜಯಂತಿ ಮತ್ತು ಪೂಜ್ಯ ಜಗದ್ಗುರು 14ನೇ ಲಿಯೋ ಅವರ ‘ಭರವಸೆಯ ಹೊಸ ನಕ್ಷೆಗಳು”  (Drawing New Maps of Hope) ಎಂಬ ಪ್ರೇಷಿತ ಪತ್ರದ ಹಿನ್ನೆಲೆಯಲ್ಲಿ, ಧರ್ಮಾಧ್ಯಕ್ಷ ಅರ್ಲ್ ಫೆರ್ನಾಂಡಿಸ್ ಅವರು “ಕಥೋಲಿಕಶಿಕ್ಷಣ: ಭರವಸೆಯ ಒಂದು ಕಾರ್ಯ” ಎಂಬ ಪಾಲನಾ ಪತ್ರವನ್ನು ಬರೆದಿದ್ದಾರೆ.

ವ್ಯಾಟಿಕನ್ ನ್ಯೂಸ್‌ನೊಂದಿಗೆ ಮಾತನಾಡಿದ ಅಮೆರಿಕದ ಕೊಲಂಬಸ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅರ್ಲ್ ಕೆ. ಫೆರ್ನಾಂಡಿಸ್ ಅವರು, ತಮ್ಮ ಧರ್ಮಕ್ಷೇತ್ರದಲ್ಲಿ ಕಥೋಲಿಕ ಶಾಲೆಗಳು ಅದ್ಭುತವಾದ ಬೆಳವಣಿಗೆ ಕಾಣುತ್ತಿವೆ ಎಂದು ಹೇಳಿದರು. ಮೂರು ದಶಕಗಳ ಬಳಿಕ ಧರ್ಮಕ್ಷೇತ್ರದಲ್ಲಿ ಮೊದಲ ಹೊಸ ಪ್ರಾಥಮಿಕ ಶಾಲೆ ಆರಂಭವಾಗುತ್ತಿದೆ. ಇದರ ಜೊತೆಗೆ ಹೊಸ ಪ್ರೌಢಶಾಲೆಯೊಂದನ್ನು ನಿರ್ಮಿಸುವ ಯೋಜನೆಯೂ ಇದೆ. ಈ ಬೆಳವಣಿಗೆಯು ಧರ್ಮಸಭೆಗೆ ಒಂದು ಮಹತ್ವದ ಶುಭ ಸಂದೇಶ ಸಾರುವ ಅವಕಾಶವನ್ನು ಒದಗಿಸುತ್ತದೆ ಎಂದು ಧರ್ಮಾಧ್ಯಕ್ಷ ಫೆರ್ನಾಂಡಿಸ್ ಹೇಳಿದರು.

“ನಮ್ಮ ಯುವಜನರ ಹೃದಯ, ಮನಸ್ಸು ಮತ್ತು ಆತ್ಮಗಳನ್ನು ಶಿಕ್ಷಣಗೊಳಿಸಿ ರೂಪಿಸುವ ಅವಕಾಶ ಅಪಾರವಾಗಿದೆ,  ಎಲ್ಲರಿಗೂ ಶುಭಸಂದೇಶದ ಆನಂದವನ್ನು ತಲುಪಿಸಲು ಮತ್ತು ಯುವಜನರು ತಮ್ಮ ನಂಬಿಕೆಯ ಪಯಣದಲ್ಲಿ ಮುಂದುವರಿಯುವಾಗ ಅವರೊಂದಿಗೆ ಜೊತೆಯಾಗಿ ನಡೆಯಲು ನಾವು ಬಯಸುತ್ತೇವೆ.”

ಹಂಚಿಕೊಂಡ ಕರೆ

ಯುವಜನರಿಗೆ ಶುಭಸಂದೇಶವನ್ನು ಸಾರುವ ಜವಾಬ್ದಾರಿಯನ್ನು ಧರ್ಮಾಧ್ಯಕ್ಷರು, ಧರ್ಮಗುರುಗಳು, ಶಾಲಾ ಮುಖ್ಯಸ್ಥರು, ಶಿಕ್ಷಕರು ಮತ್ತು ಕುಟುಂಬಗಳು ಒಟ್ಟಾಗಿ ಹಂಚಿಕೊಳ್ಳಬೇಕು ಎಂದು ಧರ್ಮಾಧ್ಯಕ್ಷ ಫೆರ್ನಾಂಡಿಸ್ ಒತ್ತಿಹೇಳಿದರು. ಪೋಷಕರು ತಮ್ಮ ಮಕ್ಕಳಿಗೆ ನಂಬಿಕೆಯ ಮಾರ್ಗದಲ್ಲಿ ಮೊದಲ ಶಿಕ್ಷಣ ನೀಡುವವರು, ಅದೇ ಸಮಯದಲ್ಲಿ, ಶಿಕ್ಷಕರು ತಮ್ಮ ಕೆಲಸವನ್ನು ಕೇವಲ ವೃತ್ತಿಯಾಗಿ ನೋಡದೆ, ಒಂದು ಕರೆಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು. “ನಮ್ಮ ಯುವಜನರಿಗೆ ಶುಭಸಂದೇಶವನ್ನು ಸಾರುವ ಕಾರ್ಯದಲ್ಲಿ ನಾವು ನಿಜವಾಗಿಯೂ ಸಹ-ಜವಾಬ್ದಾರರಾಗಿದ್ದೇವೆ,” ಎಂದು ಅವರು ಹೇಳಿದರು.

ಕ್ರಿಸ್ತನ ಪರಿಚಯ

ಸಮಾಜವು ವೇಗವಾಗಿ ಬದಲಾಗುತ್ತಿರುವ ಸಂದರ್ಭದಲ್ಲಿ, ಹಿಂಸೆ ಅಥವಾ ಕೇವಲ ಉತ್ಪಾದಕತೆಯ ಮೇಲೆ ಆಧಾರಿತ ಪ್ರತಿಕ್ರಿಯೆಗಿಂತ, ಯುವಜನರ ಹೃದಯಗಳನ್ನು ರೂಪಿಸುವ ದೃಢವಾದ ಶಿಕ್ಷಣದ ಅಗತ್ಯವಿದೆ ಎಂದು ಧರ್ಮಾಧ್ಯಕ್ಷರು ಹೇಳಿದರು. ಇದರ ಮೂಲಕ ಅವರು “ಕ್ರಿಸ್ತನಲ್ಲಿ ಪೂರ್ಣತೆಯ ಬೆಳವಣಿಗೆ” ಹೊಂದಬೇಕು ಎಂಬುದು ಅವರ ಆಶಯವಾಗಿದೆ.

ಅವರ ಕೇಂದ್ರ ಪ್ರಸ್ತಾವನೆಯಲ್ಲಿ ಕ್ರೈಸ್ತ ಜೀವನದ ದೃಷ್ಟಿಕೋನದ ಕುರಿತಾದ ಸ್ಪಷ್ಟ ನಂಬಿಕೆಯಿದೆ-“ಯೇಸು ಕ್ರಿಸ್ತನೇ ಮಾರ್ಗ, ಸತ್ಯ ಮತ್ತು ಜೀವ.” “ನಾವು ಅವರನ್ನು ಯಾರ ಮೇಲೂ ಹೇರಲು ಸಾಧ್ಯವಿಲ್ಲ. ಆದರೆ ಕ್ರಿಸ್ತನನ್ನು ಮತ್ತು ಅವರು ತರುವ ಎಲ್ಲಾ ಹೊಸತನವನ್ನು ನಾವು ಪರಿಚಯಿಸಬೇಕು.”

ಕಮ್ಯೂನಿಯನ್ ಅಂಡ್ ಲಿಬರೇಷನ್ ಚಳವಳಿಯ ಸ್ಥಾಪಕರಾದ ವಂ. ಗುರು ಲೂಯಿಜಿ ಜುಸ್ಸಾನಿಯವರ ಶಿಕ್ಷಣ ವಿಧಾನವು ಇಂದಿನ ಕಾಲದಲ್ಲಿ ವಿಶೇಷವಾಗಿ ಪರಿಣಾಮಕಾರಿಯಾಗಿದೆ ಎಂದು ಧರ್ಮಾಧ್ಯಕ್ಷ ಫೆರ್ನಾಂಡಿಸ್ ಹೇಳಿದರು. ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ಧರ್ಮನಿರಪೇಕ್ಷತೆ ಮತ್ತು ತಂತ್ರಜ್ಞಾನಕೇಂದ್ರಿತ ದೃಷ್ಟಿಕೋನದಿಂದ ಮಾನವ ವ್ಯಕ್ತಿತ್ವವನ್ನು ರಕ್ಷಿಸುವ ಅತ್ಯುತ್ತಮ ಮಾರ್ಗವೆಂದರೆ ಕಥೋಲಿಕಶಿಕ್ಷಣ ವ್ಯವಸ್ಥೆ ಎಂದು ಅವರು ಅಭಿಪ್ರಾಯಪಟ್ಟರು.

ಜೀವನದ ಸಮಸ್ಯೆಗಳಿಗೆ ಉತ್ತರವು “ನಿನ್ನೆ, ಇಂದು ಮತ್ತು ಎಂದೆಂದಿಗೂ ಒಂದೇ ಆಗಿರುವ ಯೇಸು ಕ್ರಿಸ್ತನಲ್ಲಿ” ದೊರೆಯುತ್ತದೆ ಎಂದು ಧರ್ಮಾಧ್ಯಕ್ಷರು ಸಮಾಪಿಸಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

21 ಆಗಸ್ಟ್ 2026, 20:24