ಹುಡುಕಿ

ವಂದನೀಯ ಸ್ಟಾನಿಸ್ಲಾಸ್ ಜುಮಾರ್ ಸೂಡಿಯಾನ ವಂದನೀಯ ಸ್ಟಾನಿಸ್ಲಾಸ್ ಜುಮಾರ್ ಸೂಡಿಯಾನ 

ಪೂರ್ವ ಫ್ಲೋರೆಸ್‌ನ ಲೆವೂರಾನ್‌ಗೆ ಸಂತ ಪೇತ್ರರ ಎರಡು ಪವಿತ್ರ ಅವಶೇಷಗಳ ಆಗಮನ: ತೀರ್ಥಯಾತ್ರಾ ಕೇಂದ್ರಕ್ಕೆ ಭರವಸೆಯ ದಾರಿದೀಪ

ಲೆವೂರಾನ್ ಅನ್ನು ಪ್ರಾರ್ಥನೆ ಮತ್ತು ತೀರ್ಥಯಾತ್ರೆಯ ಕೇಂದ್ರವನ್ನಾಗಿ ರೂಪಿಸುವ ಆಶಯದೊಂದಿಗೆ ವಂದನೀಯ ಮಾರ್ಕಸ್ ಸೋಲೊ ಕೆವುಟೊ ಅವರು ಸಂತ ಪೇತ್ರರ ಪ್ರಧಾನ ದೇವಾಲಯದಿಂದ ಎರಡು ಪವಿತ್ರ ಅವಶೇಷಗಳನ್ನು ತಂದಿದ್ದಾರೆ.

ವ್ಯಾಟಿಕನ್ ವರದಿ

ಇಂಡೋನೇಷ್ಯಾದ ಪೂರ್ವ ಫ್ಲೋರೆಸ್‌ನ ಲೆವೊಟೊಬಿ ಪರ್ವತದ ತಪ್ಪಲಿನಲ್ಲಿರುವ ಲೆವೂರಾನ್ ಗ್ರಾಮವು ಆಗಸ್ಟ್ 3ರಂದು ಮಹತ್ವದ ಆಧ್ಯಾತ್ಮಿಕ ಕ್ಷಣವೊಂದಕ್ಕೆ ಸಾಕ್ಷಿಯಾಯಿತು. ಅಂದು ವಂದನೀಯ ಮಾರ್ಕಸ್ ಸೋಲೊ ಕೆವುಟಾ, SVD ಅವರು ಸಂತ ಪೇತ್ರರ ಪ್ರಧಾನ ದೇವಾಲಯದಿಂದ ಎರಡು ಅಮೂಲ್ಯ ಪವಿತ್ರ ಅವಶೇಷಗಳನ್ನು ಹೊತ್ತು ತಮ್ಮ ಹುಟ್ಟೂರಿಗೆ ಮರಳಿದರು.

ತಮ್ಮ ಊರಿನ ಮಗನ ಮನೆಮರಳುವಿಕೆಯ ಆತ್ಮೀಯತೆಯೊಂದಿಗೆ ಆಳವಾದ ಧಾರ್ಮಿಕ ಭಕ್ತಿಯೂ ಬೆರೆತಿತ್ತು. ಸಂತ ಪೇತ್ರ ಪ್ರೇಷಿತ ಮಿಷನ್ ಕೇಂದ್ರದ ದೇವಾಲಯಕ್ಕೆ ಸಾಗುವ ರಸ್ತೆಯುದ್ದಕ್ಕೂ ನೂರಾರು ವಿಶ್ವಾಸಿಗಳು ಸಾಲಾಗಿ ನಿಂತಿದ್ದರು. ಪ್ರೀತಿಯಿಂದ ‘ಪಾದ್ರೆ ಮಾರ್ಕೊ’ ಎಂದು ಕರೆಯಲ್ಪಡುವ ವಂದನೀಯ ಮಾರ್ಕಸ್ ಅವರು ರೋಮ್‌ನಿಂದ ತಮಗೆ ಒಪ್ಪಿಸಲಾದ ಪವಿತ್ರ ಅವಶೇಷಗಳನ್ನು ಹೊತ್ತು ಬರುತ್ತಿದ್ದಾಗ, ಸ್ಥಳೀಯ ಕಥೋಲಿಕ ಸಮುದಾಯದವರು ಮಂಡಿಯೂರಿ, ಶಿರಬಾಗಿ ಅವರನ್ನು ಸ್ವಾಗತಿಸಿದರು.

ಈ ಮನೆಮರಳುವಿಕೆಯ ಸಂದರ್ಭದಲ್ಲಿ ಪೂರ್ವ ಫ್ಲೋರೆಸ್‌ನ ಸಾಂಪ್ರದಾಯಿಕ ಆತಿಥ್ಯವೂ ಎದ್ದು ಕಾಣಿಸಿತು. ಗ್ರಾಮದ ಹಿರಿಯರು ವಂದನೀಯ ಮಾರ್ಕಸ್ ಅವರಿಗೆ ಸಾಂಪ್ರದಾಯಿಕ ಕೈಮಗ್ಗದ ವಸ್ತ್ರವನ್ನು (ಕೈನ್ ತೆನುನ್) ಹೊದಿಸಿ, ಅಡಿಕೆ ಮತ್ತು ಸಾಂಪ್ರದಾಯಿಕ ಪಾನೀಯಗಳನ್ನು ನೀಡಿದರು. ಪವಿತ್ರ ಪೀಠದಲ್ಲಿ ವಿಶ್ವವ್ಯಾಪಿ ಧರ್ಮಸಭೆಯ ಸೇವೆಯಲ್ಲಿ ಹಲವು ವರ್ಷಗಳನ್ನು ಕಳೆದ ಧರ್ಮಗುರುವಿಗೆ ಸಲ್ಲಿಸಿದ ಆಳವಾದ ಗೌರವ ಮತ್ತು ಸ್ವಾಗತದ ಸಾಂಕೇತಿಕ ಅಭಿವ್ಯಕ್ತಿ ಇದಾಗಿತ್ತು.

ಸ್ಥಳೀಯ ಮತ್ತು ವಿಶ್ವವ್ಯಾಪಿ ಧರ್ಮಸಭೆಯ ನಡುವೆ ಸೇತುವೆ

ಪ್ರಸ್ತುತ ಜಗದ್ಗುರುಗಳ ಅಧಿಕಾರ ಪೀಠದ ಅಂತರ್ಧರ್ಮೀಯ ಸಂವಾದದ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಪಾದ್ರೆ ಮಾರ್ಕೊ ಅವರು ತಮ್ಮ ತವರು ಧರ್ಮಕೇಂದ್ರಕ್ಕೆ ಎರಡು ಮಹತ್ವದ ಕೊಡುಗೆಗಳನ್ನು ತಂದಿದ್ದಾರೆ. ಸುಮಾರು 25 ವರ್ಷಗಳ ಹಿಂದೆ ಸ್ಥಳೀಯ ವಿಶ್ವಾಸಿಗಳ ಸಾಮೂಹಿಕ ಶ್ರಮದ ಮೂಲಕ ಈ ದೇವಾಲಯವನ್ನು ನಿರ್ಮಿಸಲಾಗಿತ್ತು.

ಈ ಎರಡು ಪವಿತ್ರ ಅವಶೇಷಗಳಲ್ಲಿ ಒಂದು ಸಂತ ಪೇತ್ರ ಅಪೊಸ್ತಲರ ಸಮಾಧಿಯಿಂದ ತಂದ ಮಣ್ಣು ಮತ್ತು ಇನ್ನೊಂದು ಸಂತ ಪೇತ್ರರ ಪ್ರಧಾನ ದೇವಾಲಯದ ಪವಿತ್ರ ದ್ವಾರದ ಕಲ್ಲಿನ ತುಣುಕಾಗಿದೆ. ಇವೆರಡಕ್ಕೂ ವ್ಯಾಟಿಕನ್ ನೀಡಿರುವ ಅಧಿಕೃತ ದೃಢೀಕರಣ ಪ್ರಮಾಣಪತ್ರಗಳಿವೆ.

“ಕಥೋಲಿಕ ಸಂಪ್ರದಾಯದಲ್ಲಿ ಪವಿತ್ರ ಅವಶೇಷಗಳು ಆರಾಧನೆಯ ವಸ್ತುಗಳಲ್ಲ. ಬದಲಾಗಿ, ಅವು ನಮ್ಮನ್ನು ಸಂತರ ಜೀವನ ಮತ್ತು ಅವರ ಸಾಕ್ಷ್ಯಜೀವನದೊಂದಿಗೆ ಬೆಸೆಯುವ ಸ್ಪಷ್ಟ ಸಂಕೇತಗಳಾಗಿವೆ,” ಎಂದು ವಂದನೀಯ ಮಾರ್ಕಸ್ ತಮ್ಮ ಭೇಟಿಯ ಸಂದರ್ಭದಲ್ಲಿ ವಿವರಿಸಿದರು. “ಲೆವೂರಾನ್‌ನಲ್ಲಿ ಸಂತ ಪೇತ್ರರ ಪವಿತ್ರ ಅವಶೇಷಗಳ ಉಪಸ್ಥಿತಿಯು ಪೂರ್ವ ಫ್ಲೋರೆಸ್‌ನ ನಮ್ಮ ಸ್ಥಳೀಯ ಧರ್ಮಸಭೆ ಮತ್ತು ವಿಶ್ವವ್ಯಾಪಿ ಧರ್ಮಸಭೆಯ ನಡುವಿನ ಆಳವಾದ ಅನ್ಯೋನ್ಯತೆಯನ್ನು ಸೂಚಿಸುತ್ತದೆ.”

ಧರ್ಮಕೇಂದ್ರದ ಸರಳ ಆರಂಭದ ದಿನಗಳನ್ನು ನೆನಪಿಸಿಕೊಂಡ ವಂದನೀಯ ಮಾರ್ಕಸ್, ಸುಮಾರು 2001ರಲ್ಲಿ ಈ ದೇವಾಲಯವನ್ನು ನಿರ್ಮಿಸಿದ ಸಂದರ್ಭವನ್ನು ಸ್ಮರಿಸಿದರು. “ಕಾಲು ಶತಮಾನದ ಹಿಂದೆ ನಾವು ಈ ಪ್ರಾರ್ಥನಾ ಮಂದಿರವನ್ನು ನಿರ್ಮಿಸುತ್ತಿದ್ದಾಗ, ರೋಮ್‌ನಿಂದ ಪವಿತ್ರ ಅವಶೇಷಗಳು ಒಂದು ದಿನ ಇಲ್ಲಿಗೆ ಬಂದು ನೆಲೆಸುತ್ತವೆ ಎಂದು ನಾವು ಎಂದಿಗೂ ಊಹಿಸಿರಲಿಲ್ಲ. ಆಗಲೇ ಈ ಸ್ಥಳವು ಆಧ್ಯಾತ್ಮಿಕ ಬೆಳವಣಿಗೆಯ ಕೇಂದ್ರವಾಗಿ ರೂಪುಗೊಂಡು ಅನೇಕ ತೀರ್ಥಯಾತ್ರಿಗಳನ್ನು ಸ್ವಾಗತಿಸಲಿ ಎಂಬ ಆಶಯವನ್ನು ನಾನು ವ್ಯಕ್ತಪಡಿಸಿದ್ದೆ. ಇಂದು ಆ ಕನಸು ನಿಧಾನವಾಗಿ ಸಾಕಾರಗೊಳ್ಳುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.”

ಪವಿತ್ರ ಅವಶೇಷಗಳ ಆಗಮನವು ಕೇವಲ ಹೆಮ್ಮೆಯ ವಿಷಯವಲ್ಲ, ಬದಲಾಗಿ ಆಧ್ಯಾತ್ಮಿಕ ನವೀಕರಣದ ಆಹ್ವಾನವಾಗಿದೆ ಎಂದು ಅವರು ಒತ್ತಿಹೇಳಿದರು. “ಇದು ನಮ್ಮ ವಿಶ್ವಾಸವನ್ನು ಇನ್ನಷ್ಟು ಆಳಗೊಳಿಸಲು, ಸಹೋದರತ್ವದ ಭಾವನೆಯನ್ನು ಬಲಪಡಿಸಲು ಮತ್ತು ಇತರರ ಸೇವೆ ಮಾಡಲು ನಮಗೆ ನೀಡಲಾಗಿರುವ ಕರೆ. ಈ ದೇವಾಲಯವು ಪ್ರಾರ್ಥನೆ, ತೀರ್ಥಯಾತ್ರೆ ಮತ್ತು ಭರವಸೆಯ ಪವಿತ್ರ ತಾಣವಾಗಲಿ ಎಂಬುದೇ ನನ್ನ ಪ್ರಾರ್ಥನೆ.”

ಸ್ಫೂರ್ತಿಯ ಮೂಲ

ಸ್ಥಳೀಯ ನಾಗರಿಕ ಮುಖಂಡರೂ ಈ ಸಂದರ್ಭವನ್ನು ಸಂಭ್ರಮಿಸಿದರು. ಇಲೆ ಬುರಾ ಜಿಲ್ಲೆಯ ಮುಖ್ಯಸ್ಥ ಯೊಹಾನೆಸ್ ಕ್ಲೆಡೆನ್, ಪಾದ್ರೆ ಮಾರ್ಕೊ ಅವರನ್ನು ಮತ್ತೆ ತವರಿಗೆ ಸ್ವಾಗತಿಸುತ್ತಿರುವುದಕ್ಕೆ ಸಮುದಾಯದ ಹೆಮ್ಮೆಯನ್ನು ವ್ಯಕ್ತಪಡಿಸಿದರು. “ಪೂರ್ವ ಫ್ಲೋರೆಸ್‌ನವರೇ ಆದ ಒಬ್ಬರು ವ್ಯಾಟಿಕನ್‌ನಲ್ಲಿ ಇಂತಹ ಮಹತ್ವದ ಜವಾಬ್ದಾರಿಯಲ್ಲಿ ಸೇವೆ ಸಲ್ಲಿಸುತ್ತಿರುವುದು ನಮ್ಮ ಇಡೀ ಸಮುದಾಯಕ್ಕೆ ಸ್ಫೂರ್ತಿಯಾಗಿದೆ,” ಎಂದು ಕ್ಲೆಡೆನ್ ಹೇಳಿದರು. “ಇದು ನಮ್ಮ ಯುವಜನರಿಗೆ ಕನಸು ಕಾಣಲು ಮತ್ತು ಇತರರ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳಲು ಪ್ರೇರಣೆ ನೀಡುತ್ತದೆ.”

ತಮ್ಮ ವಾಸ್ತವ್ಯದ ಅವಧಿಯಲ್ಲಿ ವಂದನೀಯ ಮಾರ್ಕಸ್ ಕೃತಜ್ಞತಾ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ. ತಮ್ಮ ಮಾರ್ಗದರ್ಶನದಲ್ಲಿರುವ ಸ್ಥಳೀಯ ಶಿಕ್ಷಣ ಸಂಸ್ಥೆಗಳು ಮತ್ತು ವಸತಿನಿಲಯಗಳಿಗೆ ಭೇಟಿ ನೀಡಲಿದ್ದಾರೆ. ಬಳಿಕ ಪವಿತ್ರ ಅವಶೇಷಗಳನ್ನು ಅಧಿಕೃತವಾಗಿ ಸಂತ ಪೇತ್ರರ ಮಿಷನ್ ಕೇಂದ್ರದ ದೇವಾಲಯಕ್ಕೆ ಒಪ್ಪಿಸಿ, ರೋಮ್‌ನಲ್ಲಿನ ತಮ್ಮ ಸೇವೆಗೆ ಮರಳಲಿದ್ದಾರೆ.

1968ರಲ್ಲಿ ಲೆವೂರಾನ್‌ನಲ್ಲಿ ಜನಿಸಿದ ವಂದನೀಯ ಮಾರ್ಕಸ್ ಅವರು ಸೊಸೈಟಿ ಆಫ್ ದ ಡಿವೈನ್ ವರ್ಡ್ (SVD) ಧಾರ್ಮಿಕ ಸಭೆಯನ್ನು ಸೇರಿದರು. 2015ರಲ್ಲಿ ರೋಮನ್ ಕ್ಯೂರಿಯಾದಲ್ಲಿ ಸೇವೆ ಸಲ್ಲಿಸಿದ ಮೊದಲ ಇಂಡೋನೇಷ್ಯಾದ ಧರ್ಮಗುರು ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2024ರ ಸೆಪ್ಟೆಂಬರ್‌ನಲ್ಲಿ ಜಗದ್ಗುರು ಫ್ರಾನ್ಸಿಸ್ ಅವರ ಇಂಡೋನೇಷ್ಯಾ ಪ್ರೇಷಿತ ಪ್ರವಾಸದ ಸಂದರ್ಭದಲ್ಲಿ ಜಗದ್ಗುರುಗಳ ಅಧಿಕೃತ ಭಾಷಾಂತರಕಾರರಾಗಿ ಸೇವೆ ಸಲ್ಲಿಸುವ ಮೂಲಕ ಇಂಡೋನೇಷ್ಯಾದಾದ್ಯಂತ ವ್ಯಾಪಕವಾಗಿ ಗುರುತಿಸಿಕೊಂಡರು.

ಲೆವೂರಾನ್ ಜನರಿಗೆ ಸಂತ ಪೇತ್ರರ ಪವಿತ್ರ ಅವಶೇಷಗಳ ಪ್ರತಿಷ್ಠಾಪನೆಯು ಒಂದು ಸರಳ ಗ್ರಾಮದ ದೇವಾಲಯವನ್ನು ಮುಂದಿನ ಪೀಳಿಗೆಗಳಿಗೂ ವಿಶ್ವಾಸ, ಪ್ರಾರ್ಥನೆ ಮತ್ತು ತೀರ್ಥಯಾತ್ರೆಯ ದಾರಿದೀಪವನ್ನಾಗಿ ರೂಪಿಸಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

04 ಆಗಸ್ಟ್ 2026, 19:27