ಪೆರುವಿಗೆ ಜಗದ್ಗುರುಗಳ ಭೇಟಿ: ಶಾಂತಿಯನ್ನು ಅರಸುತ್ತಿರುವ ಜನತೆಗೆ ಭರವಸೆಯ ಮೂಲ
ಲೇಖಕರು: ಪ್ಯಾಟ್ರಿಷಿಯಾ ಯೆನೆಸ್ಟ್ರೊಝಾ
ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ನವೆಂಬರ್ 6ರಿಂದ 17ರವರೆಗೆ ನಡೆಯಲಿರುವ ದಕ್ಷಿಣ ಅಮೆರಿಕದ ಪ್ರೇಷಿತ ಪ್ರವಾಸವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ಪ್ರವಾಸದಲ್ಲಿ ಜಗದ್ಗುರುಗಳು ದಕ್ಷಿಣ ಭಾಗದ ಉರುಗ್ವೆ, ಅರ್ಜೆಂಟೀನಾ ಮತ್ತು ಪೆರು ದೇಶಗಳಿಗೆ ಭೇಟಿ ನೀಡಲಿದ್ದಾರೆ. ನವೆಂಬರ್ 11ರಿಂದ 17ರವರೆಗೆ ನಡೆಯಲಿರುವ ಪೆರು ಭೇಟಿಯ ಸಂದರ್ಭದಲ್ಲಿ ಅವರು ಲಿಮಾ, ಚಿಕ್ಲಾಯೊ, ಕುಸ್ಕೊ ಮತ್ತು ಪುಕಾಲ್ಪಾ ಎಂಬ ನಾಲ್ಕು ನಗರಗಳಿಗೆ ಭೇಟಿ ನೀಡಲಿದ್ದಾರೆ.
ವ್ಯಾಟಿಕನ್ ವಾರ್ತಾ ಸಂಸ್ಥೆಯೊಂದಿಗೆ ಮಾತನಾಡಿದ ಲಿಮಾ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾದ ಪ್ರಧಾನ ಗುರು ಕಾರ್ಲೋಸ್ ಕಾಸ್ಟಿಲ್ಲೊ ಅವರು, ಈ ಘೋಷಣೆಯನ್ನು ಪೆರುವಿನ ಧರ್ಮಸಭೆ ಅಪಾರ ಸಂತಸ ಮತ್ತು ಭರವಸೆಯಿಂದ ಸ್ವಾಗತಿಸಿದೆ ಎಂದು ತಿಳಿಸಿದರು. ಜಗದ್ಗುರುಗಳನ್ನು ಸ್ವಾಗತಿಸಲಿರುವ ನಗರಗಳಲ್ಲಿ ನಡೆಯುತ್ತಿರುವ ಸಿದ್ಧತೆಗಳು, ದೇಶದ ಕಥೋಲಿಕರ ನಿರೀಕ್ಷೆಗಳು ಹಾಗೂ ಜಗದ್ಗುರುಗಳು ದೇಶಕ್ಕೆ ನೀಡಬೇಕೆಂದು ತಾವು ಆಶಿಸುವ ಸಹೋದರತ್ವ, ಏಕತೆ ಮತ್ತು ಶಾಂತಿಯ ಸಂದೇಶದ ಕುರಿತೂ ಅವರು ಮಾತನಾಡಿದರು.
“ಅಪಾರ ನಿರೀಕ್ಷೆ ಮತ್ತು ಭರವಸೆಯಿಂದ ಜಗದ್ಗುರುಗಳನ್ನು ಕಾಯುತ್ತಿದ್ದೇವೆ”
ಜಗದ್ಗುರುಗಳ ಅವರ ಭೇಟಿಯ ಅಧಿಕೃತ ಘೋಷಣೆಯನ್ನು ಪೆರುವಿನ ಧರ್ಮಸಭೆ ಅಪಾರ ಸಂತಸದಿಂದ ಸ್ವಾಗತಿಸಿದೆ. ಪ್ರಧಾನ ಗುರು ಕಾಸ್ಟಿಲ್ಲೊ ಅವರ ಪ್ರಕಾರ, ಈ ಭೇಟಿ ಪೆರುವಿನ ಜನರ ಹೃದಯಗಳಲ್ಲಿ ಬಹುಕಾಲದಿಂದ ಬೆಳೆಯುತ್ತಿದ್ದ ಆಳವಾದ ನಿರೀಕ್ಷೆಯೊಂದನ್ನು ಈಡೇರಿಸಿದೆ. “ಪೆರುವಿನ ಮಹಾಧರ್ಮಾಧ್ಯಕ್ಷ ಮತ್ತು ಪ್ರಧಾನ ಗುರುವಾಗಿ, ಹಾಗೆಯೇ ಲಿಮಾದ ಮಹಾಧರ್ಮಾಧ್ಯಕ್ಷನಾಗಿ, ಜಗದ್ಗುರುಗಳನ್ನು ಸ್ವಾಗತಿಸಲು ನಾವು ಸಿದ್ಧತೆ ನಡೆಸುತ್ತಿರುವ ಈ ಸಂದರ್ಭದಲ್ಲಿ ಜನರಲ್ಲಿ ಅಪಾರ ನಿರೀಕ್ಷೆ ಇದೆ ಎಂದು ನಾನು ಪೂರ್ಣ ಪ್ರಾಮಾಣಿಕತೆಯಿಂದ ಹೇಳಬಲ್ಲೆ” ಎಂದುಹೇಳಿದರು.
ಪೆರುವಿನ ಬಲವಾದ ಕಥೋಲಿಕ ಪರಂಪರೆಯನ್ನು ನೆನಪಿಸಿದ ಪ್ರಧಾನ ಗುರುಗಳು, ಜಗದ್ಗುರುಗಳನ್ನು “ಜನರ ಮತ್ತು ಇಡೀ ರಾಷ್ಟ್ರದ ನಿಜವಾದ ಸ್ನೇಹಿತ” ಎಂದು ಪರಿಗಣಿಸಲಾಗುತ್ತದೆ ಎಂದರು. ವಿಶೇಷವಾಗಿ ಚಿಕ್ಲಾಯೊ ಜನರೊಂದಿಗೆ ಪೋಪ್ ಹೊಂದಿರುವ ನಿಕಟ ಸಂಬಂಧವನ್ನು ಅವರು ಉಲ್ಲೇಖಿಸಿ, ಕಳೆದ ಕೆಲವು ತಿಂಗಳುಗಳಿಂದ ಜನರಲ್ಲಿ ಬೆಳೆಯುತ್ತಿದ್ದ ನಿರೀಕ್ಷೆಯನ್ನು ಅಧಿಕೃತ ಘೋಷಣೆ ಈಡೇರಿಸಿದೆ ಎಂದರು.
“ನಾವು ಈ ಸುದ್ದಿಯನ್ನು ಅಪಾರ ಸಂತಸದಿಂದ ಮಾತ್ರವಲ್ಲ, ಬಲವಾದ ಪ್ರೋತ್ಸಾಹದ ಮೂಲವಾಗಿಯೂ ಸ್ವೀಕರಿಸಿದ್ದೇವೆ. ಅವರನ್ನು ಸ್ವಾಗತಿಸಲು ಸಿದ್ಧರಾಗುತ್ತಿರುವಾಗ ನಮ್ಮ ವಿಶ್ವಾಸವನ್ನು ನವೀಕೃತ ಉದಾರತೆಯಿಂದ ಅಪ್ಪಿಕೊಳ್ಳಲು ಹಾಗೂ ನಮ್ಮ ಕ್ರೈಸ್ತ ಮತ್ತು ಕಥೋಲಿಕ ಜೀವನಕ್ಕೆ ಹೊಸ ಚೈತನ್ಯ ನೀಡಲು ಇದು ನಮ್ಮನ್ನು ಪ್ರೇರೇಪಿಸುತ್ತದೆ” ಎಂದುಹೇಳಿದರು.
ಪೆರು ಪ್ರಸ್ತುತ ಕಠಿಣ ಸಮಯವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಜಗದ್ಗುರುಗಳು ಆಗಮಿಸಲಿದ್ದಾರೆ ಎಂದು ಪ್ರಧಾನ ಗುರು ಕಾಸ್ಟಿಲ್ಲೊ ತಿಳಿಸಿದರು. ಅಪರಾಧ, ಸುಪಾರಿ ಹತ್ಯೆಗಳು ಮತ್ತು ಸುಲಿಗೆ ಸೇರಿದಂತೆ ಹಲವು ಸಾಮಾಜಿಕ ಸಮಸ್ಯೆಗಳಿಂದ ದೇಶ ತತ್ತರಿಸುತ್ತಿದ್ದು, ಇವು ಸಮಾಜದ ಅತ್ಯಂತ ದುರ್ಬಲ ವರ್ಗಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ ಎಂದರು. ಈ ಹಿನ್ನೆಲೆಯಲ್ಲಿ ಜಗದ್ಗುರುಗಳ ಉಪಸ್ಥಿತಿಯು ಜೀವನ, ನ್ಯಾಯ ಮತ್ತು ಒಗ್ಗಟ್ಟಿನ ಕುರಿತ ತನ್ನ ಬದ್ಧತೆಯನ್ನು ಮರುಪರಿಶೀಲಿಸಲು ಮತ್ತು ನವೀಕರಿಸಲು ಪೆರುವಿಗೆ ನೆರವಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.
“ಈಗಾಗಲೇ ಜೀವಂತಿಕೆಯನ್ನು ಹೊಂದಿರುವ ನಮ್ಮ ಜನರು ಮತ್ತಷ್ಟು ಚಿಂತನೆ ನಡೆಸಿ, ಹೊಸ ಚೈತನ್ಯ ಪಡೆಯಲು ಜಗದ್ಗುರುಗಳು ಉಪಸ್ಥಿತಿ ನೆರವಾಗಬಲ್ಲದು.”
ಲಿಮಾ, ಚಿಕ್ಲಾಯೊ, ಕುಸ್ಕೊ ಮತ್ತು ಪುಕಾಲ್ಪಾದಲ್ಲಿ ಸಿದ್ಧತೆಗಳು
ಜಗದ್ಗುರುಗಳ ಭೇಟಿಯ ಸಿದ್ಧತೆಗಳ ಕುರಿತು ಮಾತನಾಡಿದ ಲಿಮಾ ಮಹಾಧರ್ಮಾಧ್ಯಕ್ಷರು, ಜಗದ್ಗುರುಗಳನ್ನು ಸ್ವಾಗತಿಸಲಿರುವ ನಾಲ್ಕೂ ನಗರಗಳಲ್ಲಿ ಈಗಾಗಲೇ ಸಿದ್ಧತಾ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು. “ಸಿದ್ಧತಾ ಸಮಿತಿಗಳನ್ನು ಅತ್ಯಂತ ವ್ಯವಸ್ಥಿತವಾಗಿ ರಚಿಸಲಾಗಿದ್ದು, ಅಗತ್ಯವಿರುವ ಪ್ರತಿಯೊಂದು ವಿಷಯವನ್ನೂ ಸಮನ್ವಯಗೊಳಿಸಲು ಪ್ರತಿ ಸಮಿತಿಯೂ ತನಗೆ ವಹಿಸಲಾದ ಜವಾಬ್ದಾರಿಗಳ ಮೇಲೆ ಗಮನ ಹರಿಸುತ್ತಿದೆ” ಎಂದು ಅವರು ಹೇಳಿದರು. ಕಾರ್ಯಕ್ರಮ ನಡೆಯುವ ಸ್ಥಳಗಳು, ಪವಿತ್ರ ಬಲಿಪೂಜೆಗಳು, ಸಮಾಜದ ವಿವಿಧ ವರ್ಗಗಳ ಭಾಗವಹಿಸುವಿಕೆ ಹಾಗೂ ಪಾಲನಾ ಚಟುವಟಿಕೆಗಳ ಆಯೋಜನೆ ಸೇರಿದಂತೆ ಹಲವು ಕ್ಷೇತ್ರಗಳ ಸಿದ್ಧತೆಗಳನ್ನು ಈ ಸಮಿತಿಗಳು ನೋಡಿಕೊಳ್ಳುತ್ತಿವೆ.
ಯುವಜನರು, ಸ್ಥಳೀಯ ಸಮುದಾಯಗಳು, ಸಮುದಾಯ ಅಡುಗೆಮನೆಗಳನ್ನು ನಡೆಸಲು ನೆರವಾಗುವ ಮಹಿಳೆಯರು, ಮೂಲನಿವಾಸಿ ಸಮುದಾಯಗಳ ಉಪಕ್ರಮಗಳು ಹಾಗೂ ಪೆರುವಿನ ಶ್ರೀಮಂತ ಸಾಮಾಜಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ವಿವಿಧ ಗುಂಪುಗಳ ಭಾಗವಹಿಸುವಿಕೆಯನ್ನು ಪ್ರಧಾನ ಗುರುಗಳು ವಿಶೇಷವಾಗಿ ಉಲ್ಲೇಖಿಸಿದರು. “ಈ ಸಿದ್ಧತೆಗಳು ವಿಶೇಷವಾಗಿ ಉತ್ತೇಜನಕಾರಿಯಾಗಿವೆ. ಏಕೆಂದರೆ ಇವುಗಳಲ್ಲಿ ಅಪಾರ ಜನಸಹಭಾಗಿತ್ವ ಮತ್ತು ಸ್ವಯಂಪ್ರೇರಿತ ಉಪಕ್ರಮಗಳು ಕಂಡುಬರುತ್ತಿವೆ” ಎಂದು ಅವರು ಹೇಳಿದರು.
ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದ ಅವರು,ಜಗದ್ಗುರುಗಳ ಸಂಪೂರ್ಣ ಭೇಟಿಯುದ್ದಕ್ಕೂ ಅವರಿಗೆ ಆತ್ಮೀಯ ಮತ್ತು ಸುರಕ್ಷಿತ ಸ್ವಾಗತವನ್ನು ನೀಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಪೆರುವಿಗೆ ಸಹೋದರತ್ವ, ಏಕತೆ ಮತ್ತು ಶಾಂತಿಯ ಸಂದೇಶ
ಜಗದ್ಗುರು ಪೆರುವಿಗೆ ಯಾವ ಸಂದೇಶವನ್ನು ತರಬೇಕೆಂದು ತಾವು ಆಶಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಧಾನ ಗುರು ಕಾಸ್ಟಿಲ್ಲೊ, ಜಗದ್ಗುರುಗಳ ಸುತ್ತೋಲೆಯ ಸಂದೇಶ ಮತ್ತು ಅದನ್ನು ಪೆರುವಿನ ಜೀವನದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುವ ಮಹತ್ವವನ್ನು ಒತ್ತಿಹೇಳಿದರು.ಲಿಮಾ ಮಹಾಧರ್ಮಾಧ್ಯಕ್ಷರ ಪ್ರಕಾರ, ವೈವಿಧ್ಯತೆಯನ್ನು ಅಪ್ಪಿಕೊಂಡು ಏಕತೆಯನ್ನು ನಿರ್ಮಿಸಬಲ್ಲ ಸಾಮಾನ್ಯ ಮಾನವೀಯತೆಯನ್ನು ಮರುಕಂಡುಕೊಳ್ಳುವುದು ದೇಶ ಎದುರಿಸುತ್ತಿರುವ ಅತಿದೊಡ್ಡ ಸವಾಲುಗಳಲ್ಲಿ ಒಂದಾಗಿದೆ. “ಇಂದು ಪೆರುವಿನ ಅತ್ಯಂತ ಆಳವಾದ ಸಮಸ್ಯೆ ನಮ್ಮ ಮಾನವೀಯತೆಗೆ ಸಂಬಂಧಿಸಿದೆ ಎಂಬುದನ್ನು ನಾವು ಸ್ಪಷ್ಟವಾಗಿ ಅರಿತುಕೊಂಡಿದ್ದೇವೆ” ಎಂದು ಅವರು ಹೇಳಿದರು. ಪೆರುವಿನ ಜನರ ವೈವಿಧ್ಯತೆಯನ್ನು ಶ್ರೀಮಂತಿಕೆಯ ಮೂಲವಾಗಿ ನೋಡಬೇಕು ಮತ್ತು ಏಕತೆಯನ್ನು ನಿರ್ಮಿಸುವುದು ಎಲ್ಲರ ಸಾಮೂಹಿಕ ಜವಾಬ್ದಾರಿಯಾಗಬೇಕು ಎಂದು ಪ್ರಧಾನ ಗುರುಗಳು ವಿವರಿಸಿದರು. ಸಹೋದರತ್ವ ಮತ್ತು ಒಗ್ಗಟ್ಟಿನ ಕುರಿತ ತಮ್ಮ ಬೋಧನೆಯ ಬೆಳಕಿನಲ್ಲಿ ಜಗದ್ಗುರು ದೇಶದ ಪರಿಸ್ಥಿತಿಯ ಕುರಿತು ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲಿ ಎಂದು ಅವರು ಆಶಿಸಿದರು.
“ಪೆರುವಿನ ಜೀವನದಲ್ಲಿ ಸುತ್ತೋಲೆಯ ಸಂದೇಶವನ್ನು ಹೇಗೆ ಕಾರ್ಯರೂಪಕ್ಕೆ ತರಬಹುದು ಎಂಬುದನ್ನು ಪವಿತ್ರ ತಂದೆಯವರು ನಮಗೆ ತೋರಿಸಿಕೊಟ್ಟರೆ ಅದು ಅತ್ಯಂತ ಅರ್ಥಪೂರ್ಣವಾಗಿರುತ್ತದೆ” ಎಂದು ಅವರು ಹೇಳಿದರು. ದೇಶ ಎದುರಿಸುತ್ತಿರುವ ಸಂಕಷ್ಟಗಳನ್ನು ಜಗದ್ಗುರು ನೇರವಾಗಿ ತಿಳಿದಿದ್ದಾರೆ ಎಂದೂ ಅವರು ನೆನಪಿಸಿದರು.
ಅಸುರಕ್ಷತೆ, ಹಿಂಸಾಚಾರ ಹಾಗೂ ಬಡವರು ಮತ್ತು ಅತ್ಯಂತ ದುರ್ಬಲರ ಅಗತ್ಯಗಳನ್ನು ಪೂರೈಸುವಲ್ಲಿ ಎದುರಾಗಿರುವ ವೈಫಲ್ಯಗಳನ್ನು ಅವರು ಮತ್ತೊಮ್ಮೆ ದೇಶದ ಪ್ರಮುಖ ಸಮಸ್ಯೆಗಳಾಗಿ ಉಲ್ಲೇಖಿಸಿದರು. ಈ ಸವಾಲುಗಳಿಗೆ ಪ್ರತಿಕ್ರಿಯೆಯಾಗಿ, ಸಮಾಜವು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಪುನಃ ಪಡೆಯಬೇಕು ಮತ್ತು ಜನರು ಪರಸ್ಪರ ಭೇಟಿಯಾಗಿ ಸಂವಾದ ನಡೆಸಲು ಅವಕಾಶಗಳನ್ನು ಸೃಷ್ಟಿಸುವ ಸಿನೊಡಲ್ ಧರ್ಮಸಭೆಯನ್ನು ಬಲಪಡಿಸಬೇಕು ಎಂದು ಪ್ರಧಾನ ಗುರು ಕಾಸ್ಟಿಲ್ಲೊ ಒತ್ತಿಹೇಳಿದರು.
“ನಮ್ಮ ಧರ್ಮಸಭೆಯು ಹಿಂಸೆಯನ್ನು ಆಶ್ರಯಿಸದೆ ಏಕತೆಯನ್ನು ಹೇಗೆ ನಿರ್ಮಿಸಬಹುದು ಎಂಬುದನ್ನು ತನ್ನ ಮಾದರಿಯ ಮೂಲಕ ತೋರಿಸುವಂತೆ ನಾವು ಆ ಸಿನೊಡಲ್ ಆಯಾಮವನ್ನು ಬೆಳೆಸಬೇಕಾಗಿದೆ.”. ಕೊನೆಯಲ್ಲಿ, ಜಗದ್ಗುರುಗಳ ಭೇಟಿ ಸಂವಾದ ಮತ್ತು ಸಮನ್ವಯದ ಮೇಲೆ ಬೇರೂರಿದ ಶಾಂತಿಯನ್ನು ಬೆಳೆಸಲು ನೆರವಾಗಲಿ ಎಂದು ಅವರು ಆಶಿಸಿದರು.
“ಜಗದ್ಗುರು ನಮ್ಮನ್ನು ನಿರಸ್ತ್ರಗೊಳಿಸಲು ನೆರವಾಗಲಿ; ಶಸ್ತ್ರರಹಿತವಾಗಿರುವ ಮತ್ತು ಇತರರನ್ನೂ ನಿರಸ್ತ್ರಗೊಳಿಸುವ ಶಾಂತಿಯು ತನ್ನ ಸಂಪೂರ್ಣ ಸ್ಪಷ್ಟತೆಯಲ್ಲಿ ಹೊರಹೊಮ್ಮಲು ಅವರು ನೆರವಾಗಲಿ” ಎಂದು ಪ್ರಧಾನ ಗುರು ಕಾಸ್ಟಿಲ್ಲೊ ಹೇಳಿದರು. ಇದೇ ವೇಳೆ, ಪೆರುವಿನ ಜನತೆ ಜಗದ್ಗುರುಗಳ ಆಗಮನವನ್ನು ಅಪಾರ ಸಂತಸದಿಂದ ಎದುರು ನೋಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).