ಜನರ ನಡುವಿನ ಸ್ನೇಹದ ಸಂಕೇತವಾಗಿ ಪೂಜ್ಯ ಜಗದ್ಗುರು ಫ್ರಾನ್ಸ್‌ನ ಗಡಿನಗರ ಮೆಟ್ಜ್‌ಗೆ ಭೇಟಿ ನೀಡಲಿದ್ದಾರೆ
ಲೇಖಕರು: ಜಾನ್-ಚಾರ್ಲ್ಸ್ ಪುಟ್ಜೊಲು
ಇನ್ನೊಂದು ತಿಂಗಳಿನಲ್ಲಿ ಪೂಜ್ಯ ಜಗದ್ಗುರು 14ನೇ ಲಿಯೋ ಅವರು ತಮ್ಮ ಮೊದಲ ಫ್ರಾನ್ಸ್ ಪ್ರೇಷಿತ ಭೇಟಿಯನ್ನು ಆರಂಭಿಸಲಿದ್ದಾರೆ. ಸೆಪ್ಟೆಂಬರ್ 25ರಿಂದ 28ರವರೆಗೆ ನಡೆಯಲಿರುವ ಈ ಭೇಟಿಯಲ್ಲಿ ಪೂಜ್ಯ ಜಗದ್ಗುರು ಪ್ಯಾರಿಸ್‌ಗೆ ತೆರಳಿ, ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ UNESCO ಪ್ರಧಾನ ಕಚೇರಿಗೂ ಭೇಟಿ ನೀಡಲಿದ್ದಾರೆ. ಸೆಪ್ಟೆಂಬರ್ 27, ಭಾನುವಾರ, ಅವರು ಮರಿಯಮ್ಮನ ಪುಣ್ಯಕ್ಷೇತ್ರವಾದ ಲೂರ್ಡ್‌ಗೆ ತೆರಳಲಿದ್ದಾರೆ. ನಂತರದ ದಿನ, ಸೆಪ್ಟೆಂಬರ್ 28ರಂದು, ಪೂರ್ವ ಫ್ರಾನ್ಸ್‌ನ ಜರ್ಮನ್ ಗಡಿಯ ಸಮೀಪದಲ್ಲಿರುವ ಮೆಟ್ಜ್‌ನಲ್ಲಿ ತಮ್ಮ ಪ್ರೇಷಿತ ಪ್ರಯಾಣವನ್ನು ಪೂರ್ಣಗೊಳಿಸಲಿದ್ದಾರೆ.
ಕಳೆದ ಶತಮಾನದಲ್ಲಿ ಸಂಘರ್ಷದ ಮೂಲವಾಗಿದ್ದ ಈ ಗಡಿ, ಇಂದು ಎರಡು ಸ್ನೇಹಪರ ಜನರ ನಡುವಿನ ಸೇತುವೆಯಾಗಿ ಹಾಗೂ ಯುದ್ಧದಿಂದ ಛಿದ್ರಗೊಂಡಿರುವ, ರಾಷ್ಟ್ರೀಯತಾವಾದಿ ಪ್ರವೃತ್ತಿಗಳು, ಪ್ರಾಬಲ್ಯದ ಆಕಾಂಕ್ಷೆಗಳು ಮತ್ತು ಭವಿಷ್ಯದ ದೃಷ್ಟಿಯ ಕೊರತೆಯಿಂದ ಹೆಚ್ಚು ಗುರುತಿಸಲ್ಪಡುತ್ತಿರುವ ಜಗತ್ತಿನಲ್ಲಿ ಭರವಸೆಯ ಸಂಕೇತವಾಗಿ ಮಾರ್ಪಟ್ಟಿದೆ. ಪೂಜ್ಯ ಜಗದ್ಗುರು ಅವರ ಭೇಟಿಗೆ ಮುನ್ನ ಮೆಟ್ಜ್‌ನ ಧರ್ಮಾಧ್ಯಕ್ಷ ಫಿಲಿಪ್ ಬಲ್ಲೋಟ್ ಅವರು ಈ ಗಡಿ ಪ್ರದೇಶದಿಂದ ವ್ಯಾಟಿಕನ್ ನ್ಯೂಸ್ ಜೊತೆ ಮಾತನಾಡಿ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.
ಪ್ರಶ್ನೆ: ಧರ್ಮಾಧ್ಯಕ್ಷರೇ, ಪೂಜ್ಯ ಜಗದ್ಗುರು 14ನೇ ಲಿಯೋ ಅವರು ಸೆಪ್ಟೆಂಬರ್ 28, ಸೋಮವಾರ, ಫ್ರಾನ್ಸ್‌ಗೆ ತಮ್ಮ ಪ್ರೇಷಿತ ಪ್ರಯಾಣವನ್ನು ನಿಮ್ಮ ಧರ್ಮಕ್ಷೇತ್ರಕ್ಕೆ ಭೇಟಿ ನೀಡುವ ಮೂಲಕ ಮುಕ್ತಾಯಗೊಳಿಸಲಿದ್ದಾರೆ. ಪ್ಯಾರಿಸ್ ಮತ್ತು ಲೂರ್ದು ಜೊತೆಗೆ ಮೆಟ್ಜ್ ಕೂಡ ಅವರ ರಾಷ್ಟ್ರೀಯ ಪ್ರವಾಸದ ಮೂರು ತಾಣಗಳಲ್ಲಿ ಒಂದಾಗಲಿದೆ ಎಂದು ತಿಳಿದಾಗ ನಿಮಗೆ ಹೇಗನಿಸಿತು?
ನನಗೆ ಬಹಳ ಸಂತೋಷವಾಯಿತು. ಜೊತೆಗೆ, ಮೆಟ್ಜ್ ಮತ್ತು ಮೊಸೆಲ್‌ನ ಜನರ ಪರವಾಗಿ ಸ್ವಲ್ಪ ಹೆಮ್ಮೆಯೂ ಉಂಟಾಯಿತು, ಏಕೆಂದರೆ ಅವರ ಇತಿಹಾಸವೇ ಅದಕ್ಕೆ ಕಾರಣ. ಇದು ಮೂರು ಯುದ್ಧಗಳನ್ನು, ಅವುಗಳಲ್ಲಿ ಎರಡು ವಿಶ್ವಯುದ್ಧಗಳನ್ನು, ಮತ್ತು ಎರಡು ಬಾರಿ ವಿಲೀನಗೊಳ್ಳುವಿಕೆಯನ್ನು ಅನುಭವಿಸಿದ ಭೂಮಿ. ಆದರೆ ಇಂದು ಇದು ಭೇಟಿಯ ಮತ್ತು ಭ್ರಾತೃತ್ವದ ಭೂಮಿಯಾಗಿ ತನ್ನನ್ನು ತೋರಿಸಿಕೊಳ್ಳುತ್ತಿದೆ. ಹಿಂದಿನ ಶತ್ರುಗಳು ಸ್ನೇಹಿತರಾಗಿದ್ದಾರೆ. ಅವರು ಪರಸ್ಪರ ಸಂಘರ್ಷಿಸುವ ಬದಲು ಸಹಕರಿಸುತ್ತಾರೆ. ಗಡಿ ಈಗ ವಿಭಜನೆಯ ಸ್ಥಳವಲ್ಲ; ಅದು ಭೇಟಿಯ ಸ್ಥಳವಾಗಿದೆ. ಜರ್ಮನಿಯೊಂದಿಗಿನ ಸಂಬಂಧಗಳು ಅತ್ಯಂತ ಬಲವಾಗಿವೆ.
ಆದ್ದರಿಂದ ಇಲ್ಲಿ ಅತ್ಯಂತ ಪ್ರಬಲವಾದ ಸಂದೇಶವಿದೆ. ತಮ್ಮ ಅಧಿಕಾರಾವಧಿಯ ಆರಂಭದಿಂದಲೇ “ನಿಶಸ್ತ್ರೀಕೃತ ಮತ್ತು ನಿಶಸ್ತ್ರೀಕರಿಸುವ” ಶಾಂತಿಯನ್ನು ಪ್ರತಿಪಾದಿಸುತ್ತಿರುವ ಪೂಜ್ಯ ಜಗದ್ಗುರು ಅವರನ್ನು ಸ್ವಾಗತಿಸುವುದು, ಎರಡನೇ ವಿಶ್ವಯುದ್ಧದ ಅಂತ್ಯದಿಂದ ಹಲವು ವರ್ಷಗಳಿಂದ ನಾವು ಪ್ರಯತ್ನಿಸುತ್ತಿರುವ ಕಾರ್ಯವನ್ನು ಮುಂದುವರಿಸಲು ಅವರು ನಮ್ಮನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂಬ ಭಾವನೆಯನ್ನು ನೀಡುತ್ತದೆ: ಶಾಂತಿಯಲ್ಲಿ ಬದುಕುವ ಮತ್ತು ಶಾಂತಿಯನ್ನು ನಿರ್ಮಿಸುವ ಜನರಾಗುವುದು.
ಪ್ರಶ್ನೆ: ಇದು ಯುರೋಪಿಗೆ ನಿಜವಾದ ಸಂದೇಶವಾಗಿದೆ, ವಿಶೇಷವಾಗಿ ಯುರೋಪ್ ಖಂಡವು ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳನ್ನು ಮತ್ತು ಗುರುತು ಆಧಾರಿತ ರಾಜಕೀಯದತ್ತ ಹಿಂತಿರುಗುವ ಪ್ರವೃತ್ತಿಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ. ನೀವು ವಿವರಿಸಿದಂತೆ ಗಡಿ ಮತ್ತು ಸೌಹಾರ್ದತೆಯ ಈ ಭೂಮಿಯಲ್ಲಿ ಪೂಜ್ಯ ಜಗದ್ಗುರು ಯಾವ ಏಕತೆಯ ಸಂದೇಶವನ್ನು ನೀಡಬೇಕೆಂದು ನೀವು ಆಶಿಸುತ್ತೀರಿ?
ನಾವು ಆಲಿಸುವ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ಪೂಜ್ಯ ಜಗದ್ಗುರು ಅವರು ತಮ್ಮ ಆಯ್ಕೆಯ ದಿನದಂದು ಬಾಲ್ಕನಿಯಿಂದ “ನಿಮಗೆ ಶಾಂತಿ ಇರಲಿ” ಎಂದು ಹೇಳಿದಾಗ, ಶಾಂತಿ ಎಷ್ಟು ಅಗತ್ಯವೆಂಬುದನ್ನು ನಾವು ನೋಡುತ್ತೇವೆ. ಅದು “ಪುನರುತ್ಥಾನಿ ಕ್ರಿಸ್ತನ ಶಾಂತಿ.” ಮರಣವನ್ನು ಜಯಿಸಿದ ದೇವರ ಪುತ್ರನಾದ ಒಬ್ಬ ವ್ಯಕ್ತಿಯಿಂದ ಈ ಶಾಂತಿ ನಮಗೆ ಬರುತ್ತದೆ ಎಂದು ನಮಗೆ ತಿಳಿಸುತ್ತಾರೆ. ಇದು ದೈವಿಕ ಶಾಂತಿ; ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಶಾಂತಿ.
ಇದನ್ನುಅವರು ಈಗಾಗಲೇ ತಾವು ಹೇಳಿರುವ ಅನೇಕ ಮಾತುಗಳ ಮೂಲಕ ವಿವರಿಸಿದ್ದಾರೆ. ಇತರರೊಂದಿಗೆ ಕೆಲಸ ಮಾಡಲು, ಅವರೊಂದಿಗೆ ಮಾತನಾಡಲು, ಅವರನ್ನು ಅರ್ಥಮಾಡಿಕೊಳ್ಳಲು, ಅವರನ್ನು ಸ್ವೀಕರಿಸಲು ಮತ್ತು ಅವರ ಮೇಲೆ ವಿಶ್ವಾಸವಿಡಲು ನಿರ್ಧರಿಸುವ ಜನರ ಹೃದಯಗಳಲ್ಲಿ ಈ ಶಾಂತಿ ಆರಂಭವಾಗುತ್ತದೆ.ಈ ಪ್ರೇಷಿತ ಪ್ರಯಾಣದ ವಿಷಯ “ಜಗತ್ತು ಜೀವವನ್ನು ಹೊಂದುವಂತೆ” ಎಂಬುದಾಗಿದೆ. ಇದರಿಂದ ಜೀವನವೂ ಈ ಭೇಟಿಯ ಪ್ರಮುಖ ವಿಷಯಗಳಲ್ಲಿ ಒಂದಾಗಲಿದೆ ಎಂಬುದು ಸ್ಪಷ್ಟವಾಗುತ್ತದೆ. ವಿಶೇಷವಾಗಿ ಸಹಾಯದಿಂದ ಮರಣವನ್ನು ಅನುಮತಿಸುವ ಕಾನೂನನ್ನು ಫ್ರಾನ್ಸ್ ಅಂಗೀಕರಿಸಿ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಇದು ಬಹಳ ಪ್ರಸ್ತುತವಾದ ವಿಷಯವಾಗಿದೆ.
ಜೀವನದ ಕುರಿತು ಪೂಜ್ಯ ಜಗದ್ಗುರು ಅವರು ಈಗಾಗಲೇ ಹೇಳಿರುವ ಮಾತುಗಳ ಮೂಲಕ, ಜೀವನದ ವಿಷಯದಲ್ಲಿ ಎಲ್ಲವೂ ಪರಸ್ಪರ ಸಂಬಂಧ ಹೊಂದಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರು ನಮಗೆ ಸಹಾಯ ಮಾಡಬಲ್ಲರು ಎಂಬುದು ಸ್ಪಷ್ಟವಾಗುತ್ತದೆ. ನಾವು ಜೀವನಕ್ಕೆ ಸೇವೆ ಸಲ್ಲಿಸಬೇಕು ಮತ್ತು ಅದರ ಘನತೆಯನ್ನು ಗೌರವಿಸಬೇಕು. ಈ ಘನತೆ ಮಾನವ ವ್ಯಕ್ತಿಯ ಅಂತರಂಗದಲ್ಲಿಯೇ ಇದೆ. ಮಾನವ ಜೀವನ ಇರುವ ಎಲ್ಲೆಡೆ ಘನತೆಯೂ ಇರುತ್ತದೆ. ಜೀವವನ್ನು ಕಸಿದುಕೊಳ್ಳುವುದು ಘನತೆಯನ್ನು ಕಸಿದುಕೊಳ್ಳುವುದಾಗಿದೆ—ಜೀವನದ ಆರಂಭದಲ್ಲಾಗಲಿ, ಅಂತ್ಯದಲ್ಲಾಗಲಿ, ಅಥವಾ ಜೀವನದ ಮಧ್ಯದಲ್ಲಾಗಲಿ. ಉದಾಹರಣೆಗೆ, ಸಮುದ್ರದಾಚೆಗೆ ದೋಣಿಗಳು ಸಾಗಲು ನಾವು ಅವಕಾಶ ನೀಡುವಾಗ, ಆ ಸಮುದ್ರವು ಒಂದು ಸ್ಮಶಾನವಾಗಿ ಮಾರ್ಪಡುತ್ತಿರುವುದನ್ನೂ ನೋಡುತ್ತೇವೆ.
ಪ್ರಶ್ನೆ: ಸ್ವಲ್ಪ ಪ್ರಾಯೋಗಿಕವಾಗಿ ನೋಡಿದರೆ, ಜಗದ್ಗುರುಗಳ ಭೇಟಿಯನ್ನು ಆಯೋಜಿಸುವುದು ಒಂದು ಧರ್ಮಕ್ಷೇತ್ರಕ್ಕೆ ದೊಡ್ಡ, ಬಹುಶಃ ಅಪಾರವಾದ, ವ್ಯವಸ್ಥಾಪನಾ ಕಾರ್ಯವಾಗಿದೆ. ಇಲ್ಲಿ ಮೊಸೆಲ್‌ನಲ್ಲಿ ಈ ಭೇಟಿಯನ್ನು ಆಯೋಜಿಸಲು ಸಮುದಾಯ ಹೇಗೆ ಒಟ್ಟಾಗಿ ಬರುತ್ತಿದೆ ಎಂಬುದರ ಕುರಿತು ಏನು ಹೇಳಬಹುದು?
ಇಡೀ ಸಮುದಾಯವೇ ಇದರಲ್ಲಿ ಪಾಲ್ಗೊಳ್ಳುತ್ತಿದೆ. ನಮಗೆ ಸುಮಾರು 1,000 ಸ್ವಯಂಸೇವಕರ ಅಗತ್ಯವಿತ್ತು. ಈಗಾಗಲೇ ಆ ಸಂಖ್ಯೆಯನ್ನು ಮೀರಿದ್ದೇವೆ. ಜನರು ತಮ್ಮ ಧಾರ್ಮಿಕ ನಂಬಿಕೆಗಳನ್ನು ಲೆಕ್ಕಿಸದೆ ಪಾಲ್ಗೊಳ್ಳಲು ಬಯಸುತ್ತಿದ್ದಾರೆ. ಇತರ ಧರ್ಮಗಳ ಸದಸ್ಯರೂ ಪೂಜ್ಯ ಜಗದ್ಗುರು ಬರುತ್ತಿರುವುದಕ್ಕೆ ಸಂತೋಷಪಟ್ಟಿದ್ದಾರೆ ಮತ್ತು ಅವರ ಭೇಟಿಯನ್ನು ಗೌರವವೆಂದು ಪರಿಗಣಿಸುತ್ತಿದ್ದಾರೆ. ಈ ಭೇಟಿ ಜನರ ಮನಸ್ಸನ್ನು ನಿಜವಾಗಿಯೂ ಸ್ಪರ್ಶಿಸಿದೆ ಎಂಬುದನ್ನು ನೀವು ಅನುಭವಿಸಬಹುದು.
ಅದೇ ಸಮಯದಲ್ಲಿ, ಭದ್ರತೆ ಮತ್ತು ಸಂಘಟನೆಯ ಕುರಿತಾದ ವಿಷಯಗಳನ್ನೂ ಪರಿಹರಿಸಬೇಕಾಗಿದೆ. ಮೆಟ್ಜ್ 1,40,000 ನಿವಾಸಿಗಳನ್ನು ಹೊಂದಿರುವ ಸಣ್ಣ ನಗರ; ಮಹಾನಗರ ಪ್ರದೇಶವನ್ನು ಸೇರಿಸಿದರೆ 2,50,000 ಜನರು. ನಮ್ಮಲ್ಲಿ ದೊಡ್ಡ ಸ್ಥಳಗಳಿಲ್ಲ. ಆದ್ದರಿಂದ ಜನರು ಸಂಪೂರ್ಣವಾಗಿ ಪಾಲ್ಗೊಳ್ಳಲು ಮತ್ತು ಪೂಜ್ಯ ಜಗದ್ಗುರು ಸಾಗುವ ಮಾರ್ಗದ ಉದ್ದಕ್ಕೂ ಸೇರಲು ಸಾಧ್ಯವಾಗುವಂತಹ ವ್ಯವಸ್ಥೆ ಮಾಡಬೇಕಾಗಿದೆ.
ಪೂಜ್ಯ ಜಗದ್ಗುರು ಅವರನ್ನು ಸ್ವಾಗತಿಸಲು ಜನರು ಬರಬೇಕೆಂದು ನಾವು ಆಹ್ವಾನಿಸುತ್ತಿದ್ದೇವೆ. ಅವರ ಉಪಸ್ಥಿತಿ ವಿಶಿಷ್ಟವೂ ಪ್ರೇರಣಾದಾಯಕವೂ ಆಗಿರಲಿದೆ. ಕೊನೆಯದಾಗಿ, ಅವರು ಇಲ್ಲಿಂದಲೇ ಫ್ರಾನ್ಸ್ ಅನ್ನು ತೊರೆಯಲಿದ್ದಾರೆ. ಇದರಿಂದ ನಮ್ಮಲ್ಲಿ ಅಪಾರ ಉತ್ಸಾಹ ಮೂಡಿದೆ.
ಪ್ರಶ್ನೆ: ಸಮುದಾಯದ ಈ ಪ್ರತಿಕ್ರಿಯೆ ಫ್ರಾನ್ಸ್‌ನ ಧರ್ಮಸಭೆಯ ಬೆಳವಣಿಗೆಯ ಕುರಿತು ಏನು ಹೇಳುತ್ತದೆ? ಇತ್ತೀಚಿನ ವರ್ಷಗಳಲ್ಲಿ ಫ್ರಾನ್ಸ್‌ನಲ್ಲಿ, ವಿಶೇಷವಾಗಿ ಧರ್ಮೋಪದೇಶ ಪಡೆಯಲು ಬರುವವರ ಸಂಖ್ಯೆ ಹೆಚ್ಚುತ್ತಿರುವ ಮೂಲಕ, ನಂಬಿಕೆಯ ಜ್ವಾಲೆ ಮತ್ತೆ ಬಲಗೊಳ್ಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ...
ಏನೋ ಒಂದು ನಡೆಯುತ್ತಿದೆ. ನಾಲ್ಕು ವರ್ಷಗಳ ಹಿಂದೆ ನಾನು ನನ್ನ ಧರ್ಮಕ್ಷೇತ್ರಕ್ಕೆ ಬಂದಾಗ 60 ಧರ್ಮೋಪದೇಶಾರ್ಥಿಗಳಿದ್ದರು. ಮುಂದಿನ ವರ್ಷ 80 ಮಂದಿ ಇದ್ದರು ಮತ್ತು ಕಳೆದ ವರ್ಷ 200 ಮಂದಿ ಇದ್ದರು. ನಾವು ಜನರೊಂದಿಗೆ ಹತ್ತಿರವಾಗಿದ್ದಾಗ, ಇಂದು ಅವರನ್ನು ಆವರಿಸಿರುವ ಆಳವಾದ ಪ್ರಶ್ನೆಗಳನ್ನು ನಾವು ಸ್ಪರ್ಶಿಸುತ್ತೇವೆ. ಉದಾಹರಣೆಗೆ ಹವಾಮಾನ ಬದಲಾವಣೆ ಮತ್ತು ಕೃತಕ ಬುದ್ಧಿಮತ್ತೆಯಂತಹ ವಿಷಯಗಳು. ಅನೇಕ ಯುವಜನರು—25ರಿಂದ 30 ವರ್ಷ ವಯಸ್ಸಿನವರೆಗೂ—ನನ್ನ ಬಳಿಗೆ ಬಂದು, ಈ ಪ್ರಶ್ನೆಗಳಿಗೆ ತಾವೊಬ್ಬರೇ ಉತ್ತರಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.
ಇದು ತಮ್ಮ ಜೀವನದ ಧಾರ್ಮಿಕ ಆಯಾಮದ ಬಗ್ಗೆ ಅರಿವು ಪಡೆಯುತ್ತಿರುವ ಒಂದು ಪೀಳಿಗೆಯಾಗಿದೆ. ಅವರಿಗೆ ಜೊತೆಯಾಗಿ ನಡೆಯುವವರ ಅಗತ್ಯವಿದೆ. ನಾವು ಅದನ್ನು ಗೌರವಿಸಬೇಕು. ಪೂಜ್ಯ ಜಗದ್ಗುರು ಫ್ರಾನ್ಸಿಸ್ ಹೇಳುತ್ತಿದ್ದಂತೆ, ನಾವು ಅವರೊಂದಿಗೆ ಜೀವನಯಾತ್ರೆ ಮಾಡಬೇಕು. ಈ ಯುವಜನರು ನಾವು ಅವರಿಗೆ ಏನು ಹೇಳುತ್ತೇವೆ ಮತ್ತು ಅವರ ಸ್ವಂತ ಜೀವನಯಾತ್ರೆಗೆ ನಾವು ತೋರಿಸುವ ಗೌರವದ ಬಗ್ಗೆ ಅತ್ಯಂತ ಗಮನಹರಿಸುತ್ತಾರೆ.
ಪ್ರಶ್ನೆ: ಈ ಸಣ್ಣ ಜ್ವಾಲೆಯನ್ನು ನಂದಿಸದೆ, ಅದನ್ನು ಆರಿಸದೆ ಪೋಷಿಸುವುದು ಧರ್ಮಪಾಲಕರಿಗೆ ಇರುವ ಪ್ರಮುಖ ಸವಾಲಲ್ಲವೇ?
ಖಂಡಿತವಾಗಿಯೂ. ಅಪಾಯವೆಂದರೆ ನಾವು ಅದನ್ನು ಅತಿಯಾಗಿ ನಿಯಂತ್ರಿಸಲು ಪ್ರಯತ್ನಿಸುವುದು.ನಾವು ಈ ಯುವಜನರೊಂದಿಗೆ ಜೊತೆಯಾಗಿ ನಡೆಯಬೇಕು, ಅವರಿಗೆ ತಮ್ಮದೇ ಆದ ಸ್ಥಾನವನ್ನು ಕಂಡುಕೊಳ್ಳಲು ಅವಕಾಶ ನೀಡಬೇಕು ಮತ್ತು ನಮ್ಮ ಸಿದ್ಧಪಡಿಸಿದ ವ್ಯವಸ್ಥೆಗಳಿಗೆ ಅವರನ್ನು ಸಂಪೂರ್ಣವಾಗಿ ಹೊಂದಿಸಲು ಪ್ರಯತ್ನಿಸಬಾರದು.
ನಾನು ಆಗಾಗ್ಗೆ ಹೇಳುವುದೇನೆಂದರೆ, ನಮ್ಮ ಧರ್ಮಪಾಲನಾ ವಿಧಾನವು ಉಪಸ್ಥಿತಿ ಮತ್ತು ಸಂಬಂಧಗಳ ಮೇಲೆ ಆಧಾರಿತವಾಗಿರಬೇಕು. ನಾವು ಯಾರೊಂದಿಗಾದರೂ ಉಪಸ್ಥಿತರಿದ್ದಾಗ, ಒಂದು ಸಂಬಂಧ ಬೆಳೆಯುತ್ತದೆ; ಒಂದು ಭೇಟಿ ಸಂಭವಿಸುತ್ತದೆ; ನಂತರ ಸಂವಾದ ಆರಂಭವಾಗಬಹುದು. ಇದು ಪ್ರತಿಫಲವನ್ನು ನಿರೀಕ್ಷಿಸದೆ ಮುಕ್ತವಾಗಿ ನೀಡಲಾಗುವ ಸಂಬಂಧವಾಗಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).