ಪೋಲಿಷ್ ಭಗಿನಿಯೋರ್ವರ ಸೇವಾ ಬದುಕು ಮತ್ತು ಆಧ್ಯಾತ್ಮಿಕ ಪರಂಪರೆಯ ಪ್ರಚಾರ
ಸಹೋದರಿ ಕ್ರಿಸ್ಟಿನ್ ಮಾಸಿವೊ, CPS
ಸಹೋದರಿ ಮರಿಯಾ ಮಾಲ್ಗೊರ್ಜಾತಾ ಕುರ್ ತಮ್ಮ ಬಾಲ್ಯದಲ್ಲಿ ಫ್ರಾನ್ಸಿಸ್ಕನ್ ಸನ್ಯಾಸಿನಿಯರೊಂದಿಗೆ ಹೊಂದಿದ್ದ ಸಂಪರ್ಕವು ತಮ್ಮ ಜೀವನ ರೂಪುಗೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿತು ಎಂದು ಸ್ಮರಿಸುತ್ತಾರೆ. ಅವರ ಸಾನ್ನಿಧ್ಯ ಕೇವಲ ಧಾರ್ಮಿಕ ಕರ್ತವ್ಯಗಳನ್ನು ನೆರವೇರಿಸುವುದಕ್ಕೆ ಸೀಮಿತವಾಗಿರಲಿಲ್ಲ. ಬದಲಾಗಿ, ಅದು ನಂಬಿಕೆ, ವಿನಯ ಮತ್ತು ನಿಸ್ವಾರ್ಥ ಪ್ರೀತಿಯ ಜೀವಂತ ಸಾಕ್ಷಿಯಾಗಿತ್ತು. ಅವರು ಧರ್ಮಶಿಕ್ಷಣ ಬೋಧಿಸುವುದು, ಧರ್ಮಕೇಂದ್ರದ ಸೇವೆ ಮಾಡುವುದು ಮತ್ತು ಅಗತ್ಯದಲ್ಲಿದ್ದ ಕುಟುಂಬಗಳಿಗೆ ವೈದ್ಯಕೀಯ ನೆರವು ನೀಡುವುದು ಸೇರಿದಂತೆ ನೈಜ ಸೇವಾ ಕಾರ್ಯಗಳ ಮೂಲಕ ಬಾಲಕಿಯರಿಗೆ ಪ್ರೇರಣೆಯಾಗಿದ್ದರು. ಎಲ್ಲರನ್ನೂ ಅವರು ಆತ್ಮೀಯವಾಗಿ ಸ್ವಾಗತಿಸುತ್ತಿದ್ದರು ಮತ್ತು ಮಕ್ಕಳು ಹಾಗೂ ಸಮುದಾಯದ ಸದಸ್ಯರು ತಮ್ಮದೇ ಮನೆಯಲ್ಲಿರುವಂತೆ ಭಾವಿಸುವಂತಹ ವಾತಾವರಣವನ್ನು ಸೃಷ್ಟಿಸಿದ್ದರು. ಆಟಗಳು ಮತ್ತು ತೋಟಗಾರಿಕೆಯ ಮೂಲಕ ಅವರು ಮಕ್ಕಳಲ್ಲಿ ವಿಶ್ವಾಸ, ಸಂತೋಷ ಮತ್ತು ಸೇರಿದವರಾಗಿರುವ ಭಾವನೆಯನ್ನು ಬೆಳೆಸಿದರು. ಈ ಬಾಲ್ಯದ ಅನುಭವಗಳೇ ಅವರ ಧಾರ್ಮಿಕ ಕರೆಯ ಅಡಿಪಾಯವನ್ನು ರೂಪಿಸಿದವು. ಈ ಆಂತರಿಕ ವಿವೇಚನೆಯ ಮಾರ್ಗದರ್ಶನದಲ್ಲಿ ಸಹೋದರಿ ಮರಿಯಾ ಮಾಲ್ಗೊರ್ಜಾತಾ ಮೇರಿ ಇಮ್ಮಾಕ್ಯುಲೇಟ್ ಸಹೋದರಿಯರ ಸಭೆಗೆ ಸೇರಿದರು. ಅಲ್ಲಿ ಅವರು ಮರಿಯಮ್ಮನ ಆಧ್ಯಾತ್ಮಿಕತೆಯೊಂದಿಗೆ ಆಳವಾದ ಸಂಬಂಧವನ್ನು ಕಂಡುಕೊಂಡರು. ಸಹೋದರತ್ವದ ಭಾವನೆಯನ್ನು ಬೆಳೆಸಿದ ಈ ಧಾರ್ಮಿಕ ಸಮುದಾಯವು ಪರಸ್ಪರ ಬೆಂಬಲದೊಂದಿಗೆ ಆಧ್ಯಾತ್ಮಿಕವಾಗಿ ಬೆಳೆಯಲು ಅವರಿಗೆ ಅವಕಾಶ ನೀಡಿತು.
ಶಿಕ್ಷಣ, ಧರ್ಮಶಿಕ್ಷಣ ಮತ್ತು ಧರ್ಮಸೇವೆಯ ಕಾರ್ಯ
ಅವರ ಆರಂಭಿಕ ಧಾರ್ಮಿಕ ತರಬೇತಿಯಲ್ಲಿ ಶಿಕ್ಷಣ ಮತ್ತು ಧರ್ಮಶಾಸ್ತ್ರದ ಅಧ್ಯಯನವೂ ಸೇರಿತ್ತು. ಇದು ಅವರಿಗೆ ಧರ್ಮಸೇವೆಗೆ ಅಗತ್ಯವಾದ ಸಿದ್ಧತೆಯನ್ನು ನೀಡಿತು. ಸಹೋದರಿ ಮರಿಯಾ ಮಾಲ್ಗೊರ್ಜಾತಾ ಧರ್ಮಶಿಕ್ಷಕಿಯಾಗಿ ಮತ್ತು ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. ವಿಶೇಷವಾಗಿ ಆರೈಕೆ ಕೇಂದ್ರಗಳಲ್ಲಿ ಮಕ್ಕಳ, ಯುವಜನರ ಮತ್ತು ವಯಸ್ಕರೊಂದಿಗೆ ಕೆಲಸ ಮಾಡಿದರು. ಅವರ ಧರ್ಮಸೇವೆ ಕೇವಲ ಬೋಧನೆಗೆ ಸೀಮಿತವಾಗಿರಲಿಲ್ಲ. ಸಹಾನುಭೂತಿ ಮತ್ತು ಸೂಕ್ಷ್ಮ ಮನೋಭಾವದಿಂದ ಜನರ ದೈನಂದಿನ ಬದುಕಿನೊಂದಿಗೆ ಹೆಜ್ಜೆ ಹಾಕುವುದೂ ಅವರ ಸೇವೆಯ ಪ್ರಮುಖ ಭಾಗವಾಗಿತ್ತು.
ನಂತರ ಅವರ ಧರ್ಮಸೇವೆ ನಾಯಕತ್ವದ ಜವಾಬ್ದಾರಿಗಳಿಗೂ ವಿಸ್ತರಿಸಿತು. ಅಸ್ವಸ್ಥ ಮಕ್ಕಳ ಆರೈಕೆ ಕೇಂದ್ರ ಮತ್ತು ಬಿಕ್ಕಟ್ಟು ಪರಿಹಾರ ಕೇಂದ್ರದ ನಿರ್ವಹಣೆಯ ಜವಾಬ್ದಾರಿಯನ್ನೂ ಅವರು ವಹಿಸಿಕೊಂಡರು. ಈ ಅನುಭವಗಳು ದುರ್ಬಲ ಸ್ಥಿತಿಯಲ್ಲಿರುವವರ ಆರೈಕೆಯಲ್ಲಿ ವಿನಯ, ತಾಳ್ಮೆ ಮತ್ತು ಆಳವಾದ ಜವಾಬ್ದಾರಿಯ ಪ್ರಜ್ಞೆಯನ್ನು ಅವರಿಗೆ ಕಲಿಸಿತು. ಪ್ರತಿಯೊಬ್ಬ ಮಗುವಿನ ವೈಯಕ್ತಿಕತೆಯನ್ನು ಸಹೋದರಿ ಮರಿಯಾ ಮಾಲ್ಗೊರ್ಜಾತಾ ವಿಶೇಷವಾಗಿ ಗಮನಿಸುತ್ತಾರೆ. ಮಕ್ಕಳು ತಮ್ಮ ಸ್ವಂತ ಮೌಲ್ಯ ಮತ್ತು ಘನತೆಯನ್ನು ಅರಿತುಕೊಳ್ಳಲು ಅವರು ಸಹಾಯ ಮಾಡುತ್ತಾರೆ. ಪ್ರಾರ್ಥನೆ, ಆಟ ಮತ್ತು ದೈನಂದಿನ ಚಟುವಟಿಕೆಗಳ ಮೂಲಕ ದುರ್ಬಲ ಸ್ಥಿತಿಯಲ್ಲಿರುವ ಮಕ್ಕಳಲ್ಲಿ ವಿಶ್ವಾಸ ಮತ್ತು ಆತ್ಮಸ್ಥೈರ್ಯವನ್ನು ಬೆಳೆಸುತ್ತಾರೆ. ಹೀಗೆ ತಮ್ಮ ಸಭೆಯ ಧರ್ಮಸೇವೆಯ ಧ್ಯೇಯವನ್ನು ಅವರು ನೈಜ ಬದುಕಿನಲ್ಲಿ ಸಾಕಾರಗೊಳಿಸುತ್ತಾರೆ.
ಆತ್ಮಗಳನ್ನು ರಕ್ಷಿಸುವ ಧಾರ್ಮಿಕ ಕರಿಸ್ಮಾ
“ಆತ್ಮಗಳನ್ನು ರಕ್ಷಿಸುವುದು” ಎಂಬ ಅವರ ಧಾರ್ಮಿಕ ಸಭೆಯ ಮೂಲ ಧ್ಯೇಯವು ಅದರ ಸಂಸ್ಥಾಪಕರಾದ ಜಾನ್ ಶ್ನೈಡರ್ ಅವರ ದೃಷ್ಟಿಕೋನದಲ್ಲಿ ಬೇರೂರಿದೆ. ಅವರ ಸೇವೆಯು ಸಂಕಷ್ಟದಲ್ಲಿರುವ ಬಾಲಕಿಯರು ಮತ್ತು ಮಹಿಳೆಯರಿಗೆ ಆಧ್ಯಾತ್ಮಿಕ ಮಾರ್ಗದರ್ಶನದ ಜೊತೆಗೆ ಪ್ರಾಯೋಗಿಕ ನೆರವು ನೀಡುವುದರ ಮೇಲೆ ಕೇಂದ್ರೀಕೃತವಾಗಿತ್ತು. ಸಹೋದರಿ ಮರಿಯಾ ಮಾಲ್ಗೊರ್ಜಾತಾ ತಮ್ಮ ಬಳಿಗೆ ಒಪ್ಪಿಸಲ್ಪಟ್ಟ ಪ್ರತಿಯೊಬ್ಬರನ್ನೂ ಸೂಕ್ಷ್ಮತೆ ಮತ್ತು ಕರುಣೆಯಿಂದ ಸ್ವೀಕರಿಸುವ ಮೂಲಕ ಈ ಕರಿಸ್ಮಾವನ್ನು ಬದುಕಲು ಪ್ರಯತ್ನಿಸುತ್ತಾರೆ. ತಮ್ಮ ಸಾನ್ನಿಧ್ಯ, ಗಮನ ಮತ್ತು ಇತರರಿಗೆ ಭರವಸೆ ನೀಡುವ ಸಿದ್ಧತೆಯ ಮೂಲಕ ಅವರು ಈ ಧ್ಯೇಯವನ್ನು ಸಾಕಾರಗೊಳಿಸುತ್ತಾರೆ.
ಸಹೋದರಿ ದುಲ್ಚಿಸಿಮಾ ಹಾಫ್‌ಮನ್ ಅವರ ಆಧ್ಯಾತ್ಮಿಕ ಪರಂಪರೆಯ ಪ್ರಚಾರ
ಸಹೋದರಿ ಮರಿಯಾ ಮಾಲ್ಗೊರ್ಜಾತಾ ಅವರ ಧರ್ಮಸೇವೆಯ ಪ್ರಮುಖ ಭಾಗವೆಂದರೆ ಸಹೋದರಿ ದುಲ್ಚಿಸಿಮಾ ಹಾಫ್‌ಮನ್ ಅವರ ಆಧ್ಯಾತ್ಮಿಕ ಪರಂಪರೆಯನ್ನು ಜನರಿಗೆ ಪರಿಚಯಿಸುವುದು. ಅವರು “ದುಲ್ಚಿಸಿಮಾ ಅವರೊಂದಿಗೆ ಭಾನುವಾರಗಳು” ಎಂಬ ಕಾರ್ಯಕ್ರಮಗಳು, ಮಕ್ಕಳು ಮತ್ತು ಯುವಜನರಿಗಾಗಿ ಧ್ಯಾನ ಶಿಬಿರಗಳನ್ನು ಆಯೋಜಿಸುತ್ತಾರೆ. ಸಹೋದರಿ ದುಲ್ಚಿಸಿಮಾ ಅವರ ಜೀವನ ಮತ್ತು ಆಧ್ಯಾತ್ಮಿಕತೆಯನ್ನು ಹಂಚಿಕೊಳ್ಳಲು ಮಾಧ್ಯಮಗಳ ಮೂಲಕವೂ ಸೇವೆ ಸಲ್ಲಿಸುತ್ತಾರೆ. ಯಾತ್ರಿಕರು ಮತ್ತು ಸಂದರ್ಶಕರನ್ನು ಸ್ವಾಗತಿಸುವುದರ ಜೊತೆಗೆ ರೇಡಿಯೋ ಪ್ರಸಾರಗಳು, ಪ್ರಕಟಣೆಗಳು, ವಿಚಾರ ಸಂಕಿರಣಗಳು, ಸಂಗೀತ ಕಾರ್ಯಕ್ರಮಗಳು ಮತ್ತು ಸಮುದಾಯದ ಸಭೆಗಳನ್ನು ಸಹ ಸಂಯೋಜಿಸುತ್ತಾರೆ. ಈ ಪ್ರಯತ್ನಗಳ ಮೂಲಕ ಸಹೋದರಿ ದುಲ್ಚಿಸಿಮಾ ಅವರ ಸಾಕ್ಷಿಯನ್ನು ವಿಶ್ವಾಸಿಗಳಿಗೆ ಇನ್ನಷ್ಟು ಹತ್ತಿರವಾಗಿಸುತ್ತಾರೆ.
ಸಹೋದರಿ ಮರಿಯಾ ಮಾಲ್ಗೊರ್ಜಾತಾ ಅವರು ಸಹೋದರಿ ದುಲ್ಚಿಸಿಮಾ ಅವರೊಂದಿಗೆ ವೈಯಕ್ತಿಕವಾದ ಆಧ್ಯಾತ್ಮಿಕ ಸಂಬಂಧವನ್ನುಅನುಭವಿಸುವುದನ್ನು ಹಂಚಿಕೊಂಡ ಅವರು ಅದು ತಮ್ಮ ಧಾರ್ಮಿಕ ಕರೆಯನ್ನು ದೇವರಿಗೂ ಇತರರಿಗೂ ಪ್ರೀತಿಯಿಂದ ಬದುಕಲು ನೆರವಾಗುವ ನಿಶ್ಶಬ್ದ ಮಾರ್ಗದರ್ಶನದಂತೆ ಇದೆ ಎಂದು ಅವರು ವಿವರಿಸುತ್ತಾರೆ.
ಆಧ್ಯಾತ್ಮಿಕ ಕುಟುಂಬವನ್ನು ನಿರ್ಮಿಸುವ ದುಲ್ಚಿಸಿಮಾ ದಿನಗಳು
ಪ್ರತಿವರ್ಷ ನಡೆಯುವ ದುಲ್ಚಿಸಿಮಾ ದಿನಗಳು ಮತ್ತು ಧ್ಯಾನ ಶಿಬಿರಗಳು ಬೆಳೆಯುತ್ತಿರುವ ಆಧ್ಯಾತ್ಮಿಕ ಸಮುದಾಯವನ್ನು ಬಲಪಡಿಸುತ್ತವೆ. ಭಾಗವಹಿಸುವವರು ಪ್ರಾರ್ಥನೆ, ಪವಿತ್ರ ಬಲಿಪೂಜೆ, ಧ್ಯಾನ ಮತ್ತು ಪರಸ್ಪರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ದೈನಂದಿನ ಜೀವನದಲ್ಲಿ ನಂಬಿಗಸ್ತಿಕೆಯಿಂದ ಬದುಕುವ ಮೂಲಕ ಪಾವಿತ್ರ್ಯವನ್ನು ಹೇಗೆ ಸಾಧಿಸಬಹುದು ಎಂಬುದನ್ನು ಅವರು ಕಲಿಯುತ್ತಾರೆ. ಈ ಸಮಾಗಮಗಳು ಆಧ್ಯಾತ್ಮಿಕ ಕುಟುಂಬದ ಭಾವನೆಯನ್ನು ಬೆಳೆಸುತ್ತವೆ. ಅನುಗ್ರಹ, ಮಧ್ಯಸ್ಥ ಪ್ರಾರ್ಥನೆ ಮತ್ತು ಸಮುದಾಯದೊಂದಿಗೆ ಆಧ್ಯಾತ್ಮಿಕವಾಗಿ ಬೆಳೆಯುವ ಅನುಭವಗಳ ಕುರಿತು ಭಾಗವಹಿಸುವವರು ತಮ್ಮ ಸಾಕ್ಷ್ಯಗಳನ್ನು ಹಂಚಿಕೊಳ್ಳುತ್ತಾರೆ.
ಸ್ವಂತ ಧಾರ್ಮಿಕ ಕರೆಯನ್ನು ಇನ್ನಷ್ಟು ಆಳಗೊಳಿಸುವುದು
ಸಹೋದರಿ ದುಲ್ಚಿಸಿಮಾ ಅವರ ಪರಂಪರೆಯನ್ನು ಜನರಿಗೆ ಪರಿಚಯಿಸುವ ಕಾರ್ಯವು ಸಹೋದರಿ ಮಾಲ್ಗೊರ್ಜಾತಾ ಅವರ ಸ್ವಂತ ಆಧ್ಯಾತ್ಮಿಕ ಜೀವನವನ್ನೂ ಮತ್ತಷ್ಟು ಆಳಗೊಳಿಸಿದೆ. ಈ ಆಧ್ಯಾತ್ಮಿಕ ಸಂಬಂಧವು ಅವರ ದೈನಂದಿನ ನಿರ್ಧಾರಗಳಿಗೆ ಮಾರ್ಗದರ್ಶನ ನೀಡುತ್ತದೆ, ಅವರ ನಂಬಿಕೆಯನ್ನು ಬಲಪಡಿಸುತ್ತದೆ ಮತ್ತು ಸೇವೆಯ ಕುರಿತ ಅವರ ಅರಿವನ್ನು ಶ್ರೀಮಂತಗೊಳಿಸುತ್ತದೆ.
ಪ್ರಾರ್ಥನೆ, ತ್ಯಾಗ ಮತ್ತು ದೇವರಿಗೆ ನಿಷ್ಠೆಯ ವಿಷಯದಲ್ಲಿ ಸಹೋದರಿ ದುಲ್ಚಿಸಿಮಾ ಅವರ ಮಾದರಿಯಿಂದ ಅವರು ಪ್ರೇರಣೆ ಪಡೆಯುತ್ತಾರೆ. ಈ ಗುಣಗಳಲ್ಲಿ ಲಿಸಿಯೂನ ಸಂತ ತೆರೇಸಾ ಅವರ ಜೀವನದೊಂದಿಗೆ ಸಾಮ್ಯವನ್ನೂ ಅವರು ಗುರುತಿಸುತ್ತಾರೆ—ವಿಶೇಷವಾಗಿ ದೈನಂದಿನ ಸಣ್ಣ ಸಣ್ಣ ಕಾರ್ಯಗಳ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುವ ವಿಷಯದಲ್ಲಿ.
ಧರ್ಮಸಭೆಯ ಮೇಲೆ ಶಾಶ್ವತ ಪರಿಣಾಮ
ಸಹೋದರಿ ದುಲ್ಚಿಸಿಮಾ ಅವರ ಮರಣದ 90ನೇ ವಾರ್ಷಿಕೋತ್ಸವ ಸಮೀಪಿಸುತ್ತಿರುವ ಸಂದರ್ಭದಲ್ಲಿ, ಅವರ ಪರಂಪರೆಯನ್ನು ಮುಂದುವರಿಸುವ ತನ್ನ ಧರ್ಮಸೇವೆಯು ಧರ್ಮಸಭೆಯ ಮೇಲೆ ಶಾಶ್ವತ ಪರಿಣಾಮ ಬೀರುವಂತೆ ಮಾಡುವುದು ಸಹೋದರಿ ಮಾಲ್ಗೊರ್ಜಾತಾ ಅವರ ಆಶಯವಾಗಿದೆ. ದೈನಂದಿನ ಜೀವನದಲ್ಲಿಯೇ ಪಾವಿತ್ರ್ಯವನ್ನು ಸಾಧಿಸಲು ಸಾಧ್ಯ ಎಂಬ ಅರಿವನ್ನು ಜನರಲ್ಲಿ ಬೆಳೆಸುವ ಮೂಲಕ, ಪ್ರಾರ್ಥನೆ, ತ್ಯಾಗ ಮತ್ತು ಇತರರ ಕಾಳಜಿಯ ಮೂಲಕ ದೇವರಿಗೆ ನಿಷ್ಠೆಯಿಂದ ಬದುಕುವಂತೆ ಅವರು ಪ್ರೋತ್ಸಾಹಿಸುತ್ತಾರೆ. ಅವರ ಸೇವೆಯು ಪ್ರಾರ್ಥನೆ, ಪರಸ್ಪರ ಬೆಂಬಲ ಮತ್ತು ಹಂಚಿಕೊಂಡ ನಂಬಿಕೆಯ ಮೂಲಕ ಬಲವಾದ ಆಧ್ಯಾತ್ಮಿಕ ಸಮುದಾಯವನ್ನು ನಿರ್ಮಿಸುವ ಜೀವಂತ ಧರ್ಮಸಭೆಯ ಸಾಕ್ಷಿಯನ್ನು ನೀಡುತ್ತದೆ.
ಸಹೋದರಿ ಮರಿಯಾ ಮಾಲ್ಗೊರ್ಜಾತಾ ಕುರ‍್ ಅವರ ಜೀವನವು ನಂಬಿಕೆ, ಶಿಕ್ಷಣ, ಸೇವೆ ಮತ್ತು ಆಧ್ಯಾತ್ಮಿಕ ಪರಂಪರೆಯ ಪ್ರಚಾರ ಇವುಗಳ ಆಳವಾದ ಸಮನ್ವಯವನ್ನು ಪ್ರತಿಬಿಂಬಿಸುತ್ತದೆ. ಧರ್ಮಶಿಕ್ಷಣ, ನಾಯಕತ್ವ ಮತ್ತು ಸಹೋದರಿ ದುಲ್ಚಿಸಿಮಾ ಹಾಫ್‌ಮನ್ ಅವರ ಪರಂಪರೆಯನ್ನು ಹರಡುವ ಸಮರ್ಪಣೆಯ ಮೂಲಕ ಅವರು “ಆತ್ಮಗಳನ್ನು ರಕ್ಷಿಸುವ” ದೈವಿಕ ಕೃಪಾಶಕ್ತಿಯನ್ನು ತಮ್ಮ ಜೀವನದಲ್ಲಿ ಸಾಕಾರಗೊಳಿಸುತ್ತಿದ್ದಾರೆ. ಅವರ ಸಾಕ್ಷಿಯು ಪಾವಿತ್ರ್ಯವು ಕೇವಲ ಅಸಾಧಾರಣ ಕಾರ್ಯಗಳಲ್ಲಿ ಮಾತ್ರವಲ್ಲ, ಪ್ರತಿದಿನದ ಪ್ರೀತಿ, ಸಾನ್ನಿಧ್ಯ, ಕಾಳಜಿ ಮತ್ತು ಸೇವೆಯ ಸಣ್ಣ ಸಣ್ಣ ಕಾರ್ಯಗಳಲ್ಲಿಯೂ ಬದುಕಬಹುದಾದದ್ದು ಎಂಬುದನ್ನು ತೋರಿಸುತ್ತದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).