ಅಸ್ಸಿಸಿಯಲ್ಲಿ ಪ್ರಧಾನ ಗುರು ಪಿಜ್ಜಾಬಲ್ಲಾ: ಪವಿತ್ರ ಭೂಮಿಯ ಕ್ರೈಸ್ತರು ದಣಿದಿದ್ದಾರೆ; ಅವರಿಗೆ ಶಾಂತಿ ಬೇಕಾಗಿದೆ
ಲೇಖಕರು: ಡೇನಿಯೆಲೆ ಪಿಚ್ಚಿನಿ – ಅಸ್ಸಿಸಿ, ಇಟಲಿ
ಆಗಸ್ಟ್ 6ರಂದು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಪಾಲನಾ ಭೇಟಿಯ ಅಂಗವಾಗಿ ಹಾಗೂ ‘ವಿಶ್ವ ಸ್ನೇಹ ಮತ್ತು ಭರವಸೆಯ ಸದನ’ದ ಉದ್ಘಾಟನೆಗಾಗಿ ಅಸ್ಸಿಸಿಗೆ ಆಗಮಿಸಿರುವ ಜೆರುಸಲೇಮಿನ ಲ್ಯಾಟಿನ್ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರಾದ ಪ್ರಧಾನ ಗುರು ಕಾರ್ಡಿನಲ್ ಪಿಯರ್‌ಬತ್ತಿಸ್ತಾ ಪಿಜ್ಜಾಬಲ್ಲಾ, ಅಕ್ಟೋಬರ್ 27ರಂದು ನಡೆಯಲಿರುವ ಇಸ್ರಾಯೇಲ್ ಚುನಾವಣೆಯ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದರು.
“ಚುನಾವಣೆ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಿದೆ ಎಂಬಂತೆ ಪ್ರತಿಯೊಬ್ಬರೂ ಅದರತ್ತ ನೋಡುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಮಧ್ಯಪ್ರಾಚ್ಯದ ಸಮಸ್ಯೆಗಳು ಪರಿಹಾರವಾಗಲು ಬಹಳ ಸಮಯ ಬೇಕಾಗುತ್ತದೆ. ನಮಗೆ ಹೊಸ ಮುಖಗಳು, ಹೊಸ ನಾಯಕರು ಬೇಕಾಗಿದ್ದಾರೆ. ಅದನ್ನು ಮತದಾರರು ನಿರ್ಧರಿಸಲಿದ್ದಾರೆ” ಎಂದು ಅವರು ಹೇಳಿದರು. ವ್ಯಾಟಿಕನ್ ಮಾಧ್ಯಮದೊಂದಿಗೆ ಮಾತನಾಡಿದ ಪ್ರಧಾನ ಗುರು, ಜೆರುಸಲೇಮಿನ ಪ್ರಸ್ತುತ ಪರಿಸ್ಥಿತಿಯನ್ನು “ತೀವ್ರ ಉದ್ವಿಗ್ನತೆಯ ಸ್ಥಿತಿ” ಎಂದು ವಿವರಿಸಿದರು.
“ನಾವು ಈಗ ವಿವೇಚನೆಯಿಲ್ಲದ ಬಾಂಬ್ ದಾಳಿಗಳು ನಡೆಯುತ್ತಿರುವ ಯುದ್ಧದ ಸ್ಥಿತಿಯಲ್ಲಿಲ್ಲ. ಆದರೂ ಗಾಜಾ, ಪಶ್ಚಿಮ ದಂಡೆ, ಇಸ್ರಾಯೇಲ್ ಮತ್ತು ಪ್ಯಾಲೆಸ್ತೀನ್‌ನಲ್ಲಿ ಜನರ ನಡುವಿನ ಸಂಬಂಧಗಳನ್ನು ನೋಡುವ ಸಾಮಾನ್ಯ ದೃಷ್ಟಿಕೋನವೇ ಹಿಂಸೆಯಾಗಿ ಮಾರ್ಪಟ್ಟಿದೆ” ಎಂದು ಅವರು ಹೇಳಿದರು.
ಒಪ್ಪಂದ ಮತ್ತು ಮಾತುಕತೆಗಳ ಕುರಿತ ಭರವಸೆಗಳು ಪದೇಪದೇ ಹುಸಿಯಾಗುತ್ತಿರುವ ಈ ನಿರಂತರ ಪರಿಸ್ಥಿತಿಯನ್ನು ಕ್ರೈಸ್ತರು ಹೇಗೆ ಎದುರಿಸುತ್ತಿದ್ದಾರೆ?
ಎಲ್ಲರಂತೆಯೇ ಕ್ರೈಸ್ತರೂ ಬಹಳವಾಗಿ ದಣಿದಿದ್ದಾರೆ. ಒಂದರ ಹಿಂದೆ ಮತ್ತೊಂದು ಘೋಷಣೆ ಬರುತ್ತದೆ; ನಂತರ ನಡೆಯುವ ಘಟನೆಗಳೇ ಆ ಘೋಷಣೆಗಳಿಗೆ ವಿರುದ್ಧವಾಗಿರುತ್ತವೆ. ಈ ಅಂತ್ಯವಿಲ್ಲದ ಸ್ಥಿತಿಯಿಂದ ಜನರು ಬೇಸತ್ತಿದ್ದಾರೆ. ಈಗ ಇದು ಅವರ ದೈನಂದಿನ ಜೀವನದ ಭಾಗವೇ ಆಗಿಬಿಟ್ಟಿದೆ. ದುರದೃಷ್ಟವಶಾತ್, ಇದರಿಂದ ಜನರಲ್ಲಿ ಅಪನಂಬಿಕೆಯ ಭಾವನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಿಜವಾದ ವಿಷಯವನ್ನೂ ಜನರು ನಂಬದಂತಹ ಸ್ಥಿತಿಗೆ ತಲುಪಿದ್ದಾರೆ. ನಿಜವಾಗಿಯೂ ಒಳ್ಳೆಯ ಸಂಗತಿಯೊಂದು ಸಂಭವಿಸಿದರೂ ಅದನ್ನು ನಂಬಲು ಜನರಿಗೆ ಕಷ್ಟವಾಗುತ್ತಿದೆ, ಏಕೆಂದರೆ ಶುಭಸುದ್ದಿಗಳನ್ನು ಕೇಳುವುದೇ ಅವರಿಗೆ ಅಪರೂಪವಾಗಿದೆ. ಒಟ್ಟಿನಲ್ಲಿ ಇದು ಅತ್ಯಂತ ಭಾರವಾದ ಪರಿಸ್ಥಿತಿಯಾಗಿದೆ.
ಭರವಸೆಯ ಸಂಕೇತಗಳು ನಿಮಗೆ ಕಾಣಿಸುತ್ತಿವೆಯೇ?
ಹೌದು, ಭರವಸೆ ಇನ್ನೂ ಜೀವಂತವಾಗಿದೆ. ಏಕೆಂದರೆ ಗಾಜಾ, ಪಶ್ಚಿಮ ದಂಡೆ ಮತ್ತು ಇಸ್ರೇಲ್‌ನಲ್ಲಿ ಅನೇಕ ಜನರು ಇಂದಿಗೂ ಇತರರಿಗಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ನಾನು ನಿರಂತರವಾಗಿ ಯುವಜನರನ್ನು ಭೇಟಿಯಾಗುತ್ತೇನೆ. ಹಾಗೆಯೇ ಹಿರಿಯ ಪುರುಷರು ಮತ್ತು ಮಹಿಳೆಯರು, ಪ್ರಾಧ್ಯಾಪಕರು ಹಾಗೂ ತಮ್ಮ ಸಂಬಂಧಗಳು ಮತ್ತು ಬದುಕಿನಲ್ಲಿ ಕಳೆದುಕೊಳ್ಳಲು ಬಹಳಷ್ಟು ಇರುವ ಅನೇಕ ಜನರನ್ನೂ ಭೇಟಿಯಾಗುತ್ತೇನೆ. ಆದರೂ ಅವರು ಜನರ ನಡುವೆ ಮುಖಾಮುಖಿಯನ್ನು ಬೆಳೆಸಲು, ಇತರರನ್ನು ರಕ್ಷಿಸಲು ಮತ್ತು ಸಂಬಂಧಗಳನ್ನು ಕಟ್ಟಲು ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಹಿಂಸೆಯೆಂಬ ಈ ವಿಷಾಣು ಇಡೀ ಸಮಾಜವನ್ನು ಆವರಿಸದಂತೆ ತಡೆಯುವ ಪ್ರತಿರೋಧಕ ಶಕ್ತಿ ಆ ಸಮಾಜದೊಳಗೆ ಇನ್ನೂ ಜೀವಂತವಾಗಿದೆ.
ಕೆಲವು ತಿಂಗಳ ಹಿಂದೆ ಪವಿತ್ರ ಕುಟುಂಬ ಧರ್ಮಕೇಂದ್ರವು ಇಸ್ರಾಯೇಲಿ ರಾಕೆಟ್ ದಾಳಿಗೆ ಒಳಗಾದಾಗ ನಾವೆಲ್ಲರೂ ಕಳವಳದಿಂದ ನೋಡಿದ್ದೇವೆ. ಅಲ್ಲಿ ಅನೇಕ ವೃದ್ಧರು ಮತ್ತು ವಿಶೇಷಚೇತನರು ಆಶ್ರಯ ಪಡೆದಿದ್ದಾರೆ. ಆ ಸಣ್ಣ ಸಮುದಾಯ ಈಗ ಹೇಗಿದೆ?
ಅಲ್ಲಿ 541 ಜನರಿದ್ದಾರೆ. ಪ್ರತಿಯೊಬ್ಬರನ್ನೂ ನಾವು ಹೆಸರಿನಿಂದಲೇ ತಿಳಿದಿದ್ದೇವೆ. ತಮ್ಮಿಂದ ಸಾಧ್ಯವಾದ ರೀತಿಯಲ್ಲಿ ಅವರು ಮತ್ತೆ ಸಹಜ ಜೀವನಕ್ಕೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಶಾಲೆಯನ್ನು ಪುನರಾರಂಭಿಸಲು ನಾವು ಕೆಲಸ ಮಾಡುತ್ತಿದ್ದೇವೆ. ವೈದ್ಯಕೀಯ ಕೇಂದ್ರವೊಂದನ್ನು ತೆರೆದಿದ್ದೇವೆ. ಅಲ್ಲಿ ಗುರುಗಳಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅತ್ಯಂತ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಧಾರ್ಮಿಕ ಸಹೋದರಿಯರಿದ್ದಾರೆ. ಅವರು ಮಕ್ಕಳಿಗಾಗಿ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಅವು ಕ್ರೈಸ್ತ ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ. ಇಂತಹ ವಿನಾಶಕಾರಿ ಪರಿಸ್ಥಿತಿಯ ನಡುವೆಯೂ, ಸಾಧ್ಯವಾದಷ್ಟು ಆರೋಗ್ಯಕರ ಮತ್ತು ಶಾಂತಿಯುತ ವಾತಾವರಣವನ್ನು ಮತ್ತೆ ನಿರ್ಮಿಸಲು ನಾವು ಎಲ್ಲಕ್ಕಿಂತ ಹೆಚ್ಚಾಗಿ ಪ್ರಯತ್ನಿಸುತ್ತಿದ್ದೇವೆ.
ನೀವು ಭರವಸೆಯ ಸಂಕೇತಗಳ ಕುರಿತು ಮಾತನಾಡಿದ್ದೀರಿ. ಆದರೆ ನಿಮ್ಮನ್ನು ಹೆಚ್ಚು ಕಳವಳಗೊಳಿಸುವ ಸಂಗತಿ ಯಾವುದು?
ಈ ಕ್ಷಣದಲ್ಲಿ ನನ್ನನ್ನು ಅತ್ಯಂತ ಹೆಚ್ಚು ಕಳವಳಗೊಳಿಸುವುದು, ನಾವು “ಯುದ್ಧವೂ ಅಲ್ಲ, ಶಾಂತಿಯೂ ಅಲ್ಲ” ಎಂಬ ಸ್ಥಿತಿಯಲ್ಲೇ ಸಿಲುಕಿಕೊಂಡುಬಿಡಬಹುದೆಂಬ ಭಯ. ಇದು ಅತ್ಯಂತ ಅಸ್ಪಷ್ಟವಾದ ಪರಿಸ್ಥಿತಿ. ಜನರು ಪರಿಹಾರಗಳ ಕುರಿತು ನಿರಂತರವಾಗಿ ಮಾತನಾಡುತ್ತಾರೆ, ಆದರೆ ನಿಜವಾದ ಪರಿಹಾರಗಳನ್ನು ರೂಪಿಸುವುದಿಲ್ಲ. ಇದು ನನ್ನನ್ನು ಕಳವಳಗೊಳಿಸುತ್ತದೆ. ಏಕೆಂದರೆ ಇಂತಹ ಪರಿಸ್ಥಿತಿ ಜನರ ಹೃದಯಗಳಲ್ಲಿ ಹೆಚ್ಚುತ್ತಿರುವ ನಿರಾಶೆ, ಸಿನಿಕತೆ ಮತ್ತು ಅಪನಂಬಿಕೆಯನ್ನು ಹುಟ್ಟುಹಾಕುತ್ತದೆ. ಇಂದು ಜನಸಮುದಾಯದಲ್ಲಿ ನಾನು ಕಾಣುತ್ತಿರುವ ಅತಿದೊಡ್ಡ ಅಪಾಯ ಇದೇ. ಪೂಜ್ಯ ಜಗದ್ಗುರುಗಳು ಯುವಜನರನ್ನು ಭೇಟಿಯಾಗಲಿದ್ದಾರೆ—ಇಟಲಿಯವರು, ಇತರ ಯುರೋಪಿಯನ್ ದೇಶಗಳವರು, ವಿಶ್ವಾಸಿಗಳು ಮತ್ತು ವಿಶ್ವಾಸಿಗಳಲ್ಲದವರೂ ಅವರಲ್ಲಿರುತ್ತಾರೆ… ಖಂಡಿತವಾಗಿಯೂ, ಹಿರಿಯರು ನಮ್ಮ ಸ್ಮರಣೆ; ಆದರೆ ಯುವಜನರು ನಮ್ಮ ಭರವಸೆ.
ಆದ್ದರಿಂದ ನಾವು ಭವಿಷ್ಯದತ್ತ ವಿಶ್ವಾಸದಿಂದ ನೋಡಬೇಕು. ಮುಂದಿನ ಪೀಳಿಗೆಯ ಪ್ರಮುಖ ಪಾತ್ರಧಾರಿಗಳು ಅವರೇ ಆಗಲಿದ್ದಾರೆ. ನಾವು ಅವರಲ್ಲಿ ಹೂಡಿಕೆ ಮಾಡಬೇಕು. ನಮ್ಮ ತಪ್ಪುಗಳಿಂದ ಪಾಠ ಕಲಿತು, ನಾವು ಅವರಿಗೆ ಬಿಟ್ಟುಹೋಗಿರುವುದಕ್ಕಿಂತ ವಿಭಿನ್ನವಾದ ಮತ್ತು ಉತ್ತಮವಾದದ್ದನ್ನು ಅವರು ನಿರ್ಮಿಸಿ ಮುಂದಿನವರಿಗೆ ನೀಡುವಂತೆ ನೆರವಾಗಬೇಕು.
ನೀವು ಪೂಜ್ಯ ಜಗದ್ಗುರುಗಳೊಂದಿಗೆ ಮಾತನಾಡುವಾಗ ಅವರು ನಿಮಗೆ ಏನು ಹೇಳುತ್ತಾರೆ?
ಪೂಜ್ಯ ಜಗದ್ಗುರುಗಳು ನಮಗೆ ಅತ್ಯಂತ ಹತ್ತಿರವಾಗಿದ್ದಾರೆ. ಇಲ್ಲಿ ನಡೆಯುತ್ತಿರುವ ಪ್ರತಿಯೊಂದು ಘಟನೆಯ ಕುರಿತೂ ಅವರಿಗೆ ಉತ್ತಮ ಮಾಹಿತಿ ಇದೆ. ಇದು ನಮಗೆ ಅತ್ಯಂತ ಮಹತ್ವದ್ದಾಗಿದೆ. ಅವರು ನಮ್ಮೊಂದಿಗಿದ್ದಾರೆ. ಪೂಜ್ಯ ಜಗದ್ಗುರುಗಳ ಪವಿತ್ರ ಭೂಮಿಯ ಭೇಟಿಯ ಕುರಿತು ಹೇಳುವುದಾದರೆ, ಒಂದಲ್ಲ ಒಂದು ದಿನ ಅದು ಖಂಡಿತವಾಗಿಯೂ ನಡೆಯಲಿದೆ. ಆದರೆ ಆ ಭೇಟಿ ಶಾಂತ ಮತ್ತು ನೆಮ್ಮದಿಯ ವಾತಾವರಣದಲ್ಲಿ ನಡೆಯಬೇಕಾಗಿದೆ.
ಅಸ್ಸಿಸಿ, ಪೂಜ್ಯ ಜಗದ್ಗುರುಗಳು, ಶಾಂತಿ ಮತ್ತು ಅಂತರ್‌ಧರ್ಮೀಯ ಸಂವಾದ. 1986ರ ಅಕ್ಟೋಬರ್ 27ರಂದು ಸಂತ ಜಾನ್ ಪೌಲ್ ದ್ವಿತೀಯರು ವಿಶ್ವದ ವಿವಿಧ ಧರ್ಮಗಳ ಪ್ರತಿನಿಧಿಗಳನ್ನು ಮಹತ್ವದ ಪ್ರಾರ್ಥನಾ ಸಮಾಗಮಕ್ಕಾಗಿ ಒಂದೆಡೆ ಸೇರಿಸಿದ ಐತಿಹಾಸಿಕ ಉಪಕ್ರಮಕ್ಕೆ ಈ ಅಕ್ಟೋಬರ್‌ನಲ್ಲಿ 40 ವರ್ಷಗಳು ಪೂರ್ಣಗೊಳ್ಳಲಿವೆ. ಈ ವಾರ್ಷಿಕೋತ್ಸವವನ್ನು ಹೇಗೆ ಆಚರಿಸಬೇಕು?
ಈ ವಾರ್ಷಿಕೋತ್ಸವವು ಕೇವಲ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಕಾರ್ಯಕ್ರಮವಾಗಿ ಮಾರ್ಪಡಬಾರದು. ನಾವು ಹಿಂದಕ್ಕೆ ನೋಡುವುದಕ್ಕಿಂತ ಮುಂದಕ್ಕೆ ನೋಡಬೇಕು. ಕಳೆದ ನಲವತ್ತು ವರ್ಷಗಳಲ್ಲಿ ಬಹಳಷ್ಟು ಸಾಧಿಸಲಾಗಿದೆ. ಆದರೂ ಇಂದು ಜಗತ್ತನ್ನು, ವಿಶೇಷವಾಗಿ ಮಧ್ಯಪ್ರಾಚ್ಯವನ್ನು, ಕಾಡುತ್ತಿರುವ ಸಂಘರ್ಷಗಳ ಕಾರಣದಿಂದ ನಾವು ಮಹತ್ವದ ತಿರುವಿನಲ್ಲಿದ್ದೇವೆ. ಈ ವಾರ್ಷಿಕೋತ್ಸವವು ಹೊಸ ಪಯಣದ ಆರಂಭವಾಗಬಹುದು. ಇದುವರೆಗೆ ಸಾಧಿಸಲಾಗಿರುವ ಎಲ್ಲ ಒಳಿತನ್ನೂ ಮತ್ತು ಇಂದು ನಾವು ಎದುರಿಸುತ್ತಿರುವ ಸವಾಲುಗಳನ್ನೂ ಪರಿಗಣಿಸಿಕೊಂಡು ಮುಂದುವರಿಯುವ ಪಯಣ ಇದಾಗಬೇಕು.
ಆ ಪಯಣವು ನೈಜವಾಗಿರಬೇಕು, ಪ್ರಾಮಾಣಿಕವಾಗಿರಬೇಕು ಮತ್ತು ಫಲಪ್ರದವಾಗಿರಬೇಕು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).