ತಲೆಮಾರುಗಳನ್ನು ಒಗ್ಗೂಡಿಸುವ ಮಾತೆ ಮರಿಯಮ್ಮನ ಸನ್ನಿಧಿಯಲ್ಲಿ ಮಹಿಳೆಯರ ತೀರ್ಥಯಾತ್ರೆ
ಲೇಖಕರು: ವಂ.ಗುರು ಲೂಕಾಸ್ ಬ್ಯಾಂಕೋವ್ಸ್ಕಿ
ತೀರ್ಥಯಾತ್ರೆಯಲ್ಲಿ ಭಾಗವಹಿಸಿದ ಡೊಮಿನಿಕಾ ಶ್ಚಾವಿನ್ಸ್ಕಾ ವ್ಯಾಟಿಕನ್ ನ್ಯೂಸ್‌ಗೆ ಹೀಗೆ ಹೇಳಿದರು: “ನಾನು ಯುವಪತ್ನಿಯಾಗಿದ್ದಾಗ ಮಗುವಿಗಾಗಿ ಪ್ರಾರ್ಥಿಸುತ್ತಾ ಇಲ್ಲಿಗೆ ಬರುತ್ತಿದ್ದೆ. ನಂತರ ಯುವತಾಯಿಯಾಗಿ ಬಂದೆ. ಇಂದು ನಾನು ಹದಿಹರೆಯದ ಮಕ್ಕಳ ತಾಯಿ.”
“ಮಹಿಳೆಯರಿಗೆ ಒಬ್ಬರೊಬ್ಬರ ಅಗತ್ಯವಿದೆ,” ಎಂದು ಡೊಮಿನಿಕಾ ಶ್ಚಾವಿನ್ಸ್ಕಾ ವ್ಯಾಟಿಕನ್ ನ್ಯೂಸ್‌ಗೆ ತಿಳಿಸಿದರು. ಅವರು 20 ವರ್ಷಗಳಿಗೂ ಹೆಚ್ಚು ಕಾಲ ಪೀಕಾರಿಯ್ ತೀರ್ಥಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಅವರ ಪಾಲಿಗೆ ತೀರ್ಥಯಾತ್ರೆ ಎಂದರೆ ಎಲ್ಲಕ್ಕಿಂತ ಹೆಚ್ಚಾಗಿ ಸಮುದಾಯದ ಅನುಭವ. ಮಹಿಳೆಯರ ಪರಸ್ಪರ ಬೆಂಬಲ, ಸೂಕ್ಷ್ಮ ಸಂವೇದನೆ ಮತ್ತು ಸಹಾನುಭೂತಿ ಆಧ್ಯಾತ್ಮಿಕ ಜೀವನದಲ್ಲಿಯೂ ದೈನಂದಿನ ಬದುಕಿನಲ್ಲಿಯೂ ಮಹತ್ವದ್ದಾಗಿದೆ. “ಅಜ್ಜಿಯರು, ತಾಯಂದಿರು, ಹೆಣ್ಣುಮಕ್ಕಳು, ಮೊಮ್ಮಕ್ಕಳು ಮತ್ತು ಸ್ನೇಹಿತೆಯರು ಇಲ್ಲಿ ಒಟ್ಟಾಗಿ ಸೇರುತ್ತಾರೆ. ಹದಿಹರೆಯದ ಹುಡುಗಿಯರೂ ಬರುತ್ತಾರೆ,” ಎಂದು ಅವರು ಹೇಳಿದರು.
ಎರಡು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ಶ್ಚಾವಿನ್ಸ್ಕಾ ಅವರು ತಮ್ಮ ಜೀವನದ ವಿವಿಧ ಹಂತಗಳನ್ನು ಇದೇ ಸನ್ನಿಧಿಯಲ್ಲಿ ಅನುಭವಿಸಿದ್ದಾರೆ—ವಿವಾಹದಿಂದ ಆರಂಭಿಸಿ ಮಗುವಿಗಾಗಿ ಮಾಡಿದ ಪ್ರಾರ್ಥನೆ, ನಂತರ ಮಾತೃತ್ವದ ಅನುಭವದವರೆಗೆ. ಅವರ ಪಾಲಿಗೆ ಪೀಕಾರಿಯ್ ಎಂದರೆ ಕೃತಜ್ಞತೆ ಸಲ್ಲಿಸುವ, ಸಹಾಯ ಮತ್ತು ಕ್ಷಮೆ ಕೋರುವ ಹಾಗೂ ಇತರ ಮಹಿಳೆಯರೊಂದಿಗೆ ಸಮಯ ಕಳೆಯುವ ಪವಿತ್ರ ಸ್ಥಳವಾಗಿದೆ.
ಸಿಲೇಶಿಯಾದ ಇತಿಹಾಸದಲ್ಲಿ ಹೆಣೆದುಕೊಂಡಿರುವ ಪರಂಪರೆ
ಮಹಿಳೆಯರು ಮತ್ತು ಪುರುಷರು ಪ್ರತ್ಯೇಕವಾಗಿ ಕೈಗೊಳ್ಳುವ ತೀರ್ಥಯಾತ್ರೆಗಳು ಹಲವು ದಶಕಗಳಿಂದ ಮೇಲ್ಸಿಲೇಶಿಯಾದ ಧಾರ್ಮಿಕ ಅಸ್ತಿತ್ವದ ಪ್ರಮುಖ ಭಾಗವಾಗಿವೆ. ಕಟೋವಿಸ್ ಧರ್ಮಕ್ಷೇತ್ರದ ವಕ್ತಾರ ವಂ.ಗುರು ರಫಾಲ್ ಸ್ಕಿತೆಕ್ ಅವರು ಧರ್ಮಾಧ್ಯಕ್ಷ ಆಗಸ್ಟ್ ಹ್ಲೊಂಡ್ ಅವರ ಮಾತುಗಳನ್ನು ಸ್ಮರಿಸಿದರು. ಸಿಲೇಶಿಯಾ ಜನರ ಆತ್ಮ ಮತ್ತು ನಂಬಿಕೆಯನ್ನು ಅರ್ಥಮಾಡಿಕೊಳ್ಳಲು ಬಯಸುವವರು ಅವರ್ ಲೇಡಿ ಆಫ್ ಪೀಕಾರಿಯ್ ಸನ್ನಿಧಿಗೆ ಬರಬೇಕು ಎಂದು ಅವರು ಹೇಳಿದ್ದರು.
ಎರಡನೇ ಜಾನ್ ಪಾಲ್ ಅವರಿಗೆ ಈ ಮರಿಯಮ್ಮನ ಸನ್ನಿಧಿಯೊಂದಿಗೆ ವಿಶೇಷವಾದ ನಂಟಿತ್ತು. ಕ್ರಾಕೋವ್‌ನ ಧರ್ಮಾಧ್ಯಕ್ಷರಾಗಿದ್ದಾಗ ಅವರು ಅನೇಕ ಬಾರಿ ಪೀಕಾರಿಯ್‌ಗೆ ಭೇಟಿ ನೀಡಿ, ಧರ್ಮೋಪದೇಶಗಳನ್ನು ನೀಡಿದರು ಮತ್ತು ತೀರ್ಥಯಾತ್ರಿಕರನ್ನು ಭೇಟಿಯಾದರು. ಬಳಿಕ ಎರಡನೇ ಜಾನ್ ಪಾಲ್ ಆಗಿಯೂ ಅವರು ವ್ಯಾಟಿಕನ್‌ನಿಂದ ತೀರ್ಥಯಾತ್ರೆಯಲ್ಲಿ ಭಾಗವಹಿಸುವವರಿಗೆ ನಿರಂತರವಾಗಿ ಶುಭಾಶಯಗಳನ್ನು ಕಳುಹಿಸುತ್ತಿದ್ದರು.
“ದಶಕಗಳಿಂದ ಇಲ್ಲಿ ಕೆಲಸದ ಶುಭಸಂದೇಶವನ್ನು ಸಾರಲಾಗುತ್ತಿದೆ,” ಎಂದು ವಂ.ಗುರು ಸ್ಕಿತೆಕ್ ಹೇಳಿದರು. ಕಮ್ಯುನಿಸ್ಟ್ ಆಡಳಿತದ ಅವಧಿಯಲ್ಲಿ ಪೀಕಾರಿಯ್ ಕಾರ್ಮಿಕರ ಘನತೆ, ಅವರ ಹಕ್ಕುಗಳು ಮತ್ತು ಕರ್ತವ್ಯಗಳು ಹಾಗೂ ಕಥೋಲಿಕ ಸಾಮಾಜಿಕ ಬೋಧನೆಯ ತತ್ವಗಳನ್ನು ಬೋಧಿಸುವ ಪ್ರಮುಖ ಸ್ಥಳವಾಗಿ ಬೆಳೆದಿತ್ತು.
ಮಹತ್ತರವಾದ ಕರೆಯೊಂದಿಗೆ ಕರೆಯಲ್ಪಟ್ಟವರು
ತೀರ್ಥಯಾತ್ರಿಕರನ್ನು ಸ್ವಾಗತಿಸಿದ ಕಟೋವಿಸ್‌ನ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಆಂದ್ರೆಜ್ ಪ್ರಿಶಿಬಿಲ್ಸ್ಕಿ ಅವರು ಮಾತೆ ಮರಿಯಮ್ಮನವರನ್ನು ಮಹಿಳಾ ಘನತೆಯ ಮಾದರಿಯಾಗಿ ಪರಿಚಯಿಸಿದರು. “ನಿಮ್ಮನ್ನು ನೋಯಿಸುವ ಅಥವಾ ಅವಮಾನಿಸುವ ಹಕ್ಕು ಯಾರಿಗೂ ಇಲ್ಲ. ನಿಮ್ಮಲ್ಲಿ ಪ್ರತಿಯೊಬ್ಬರೂ ಮಹತ್ತರವಾದ ಕಾರ್ಯಗಳಿಗೆ, ಎಲ್ಲಕ್ಕಿಂತ ಹೆಚ್ಚಾಗಿ ಪವಿತ್ರತೆಗೆ ಕರೆಯಲ್ಪಟ್ಟಿದ್ದೀರಿ,” ಎಂದು ಅವರು ಮಹಿಳೆಯರಿಗೆ ಹೇಳಿದರು.
ಈ ವರ್ಷದ ತೀರ್ಥಯಾತ್ರೆಯ ಕೇಂದ್ರ ಆಚರಣೆಯಾಗಿ ಪೊಝ್ನಾನ್‌ನ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಝ್ಬಿಗ್ನಿಯೆವ್ ಝೆಲಿನ್ಸ್ಕಿ ಅವರ ಅಧ್ಯಕ್ಷತೆಯಲ್ಲಿ ಭಕ್ತಿಪೂರ್ಣ ಪವಿತ್ರ ಬಲಿಪೂಜೆ ನೆರವೇರಿತು. ಮತ್ತೊಮ್ಮೆ ವಿವಿಧ ವಯೋಮಾನದ ಮಹಿಳೆಯರು ಮಾತೆ ಮರಿಯಮ್ಮನ ಸನ್ನಿಧಿಯತ್ತ ತೀರ್ಥಯಾತ್ರೆ ಕೈಗೊಂಡರು. ತಮ್ಮ ವೈಯಕ್ತಿಕ ಪ್ರಾರ್ಥನೆಗಳನ್ನು ಹೊತ್ತುಕೊಂಡು ಬಂದ ಅವರು, ದಶಕಗಳಿಂದ ಮೇಲ್ಸಿಲೇಶಿಯಾದ ಧಾರ್ಮಿಕ ಬದುಕನ್ನು ರೂಪಿಸಿರುವ ಜೀವಂತ ಪರಂಪರೆಯೊಂದಿಗೂ ತಮ್ಮನ್ನು ಜೋಡಿಸಿಕೊಂಡರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).