ಶೋಷಣೆಗೆ ಒಳಗಾದ ಮಹಿಳೆಯರ ಗೌರವವನ್ನು ಪುನಃಸ್ಥಾಪಿಸಲು ಸೇವೆ ಸಲ್ಲಿಸುತ್ತಿರುವ ಭಗಿನಿಯರು
ಲೇಖಕರು: ಸಹೋದರಿ ಕ್ರಿಸ್ಟಿನ್ ಮಸಿವೋ, CPS
ಕಳೆದ 30 ವರ್ಷಗಳಿಂದ ಸ್ವರ್ಗರಾಣಿ ಮಾತೆಯ ಸೇವಕಿಯರು, ಲೈಂಗಿಕ ಶೋಷಣೆ ಅಥವಾ ಮಾನವ ಕಳ್ಳಸಾಗಣೆಗೆ ಒಳಗಾದ ಮಹಿಳೆಯರಿಗೆ ಆಶ್ರಯ, ಸಮಾಲೋಚನೆ, ಶಿಕ್ಷಣ ಮತ್ತು ವೃತ್ತಿಪರ ತರಬೇತಿಯನ್ನು ಒದಗಿಸುವ ಮೂಲಕ ಅವರು ತಮ್ಮ ಜೀವನವನ್ನು ಪುನರ್‌ನಿರ್ಮಿಸಿಕೊಳ್ಳಲು ಹಾಗೂ ತಮ್ಮ ಮಾನವ ಘನತೆಯನ್ನು ಮರಳಿ ಪಡೆಯಲು ನೆರವಾಗುತ್ತಿದೆ.
ಕರುಣೆ ಮತ್ತು ಸಹಾನುಭೂತಿಯ ಸೇವೆ
ಸ್ವರ್ಗರಾಣಿ ಮಾತೆಯ ಸೇವಕಿಯರ ಸಂಸ್ಥಾಪಕಿ ಹಾಗೂ ಮುಖ್ಯಭಗಿನಿ ಸಹೋದರಿ ಕೊರಜೋನ್ ಜೆ. ಸಲಾಜಾರ್ ಅವರು, ಫಿಲಿಪ್ಪೀನ್ಸ್‌ನಲ್ಲಿ ಬಡತನದಲ್ಲಿ ಬದುಕುತ್ತಿದ್ದ ದುರ್ಬಲ ಬಾಲಕಿಯರು ಮತ್ತು ಯುವತಿಯರ ಹೆಚ್ಚುತ್ತಿರುವ ಲೈಂಗಿಕ ಶೋಷಣೆ ಹಾಗೂ ಮಾನವ ಕಳ್ಳಸಾಗಣೆಗೆ ಪ್ರತಿಕ್ರಿಯೆಯಾಗಿ, 1996ರಲ್ಲಿ ಇತರ ಆರು ಸನ್ಯಾಸಿನಿಯರೊಂದಿಗೆ ಈ ಧಾರ್ಮಿಕ ಸಮುದಾಯವನ್ನು ಸ್ಥಾಪಿಸಿದರು.
ತಮ್ಮ ಅಪೋಸ್ತಲಿಕ ಸೇವೆಯ ಮೂಲಕ ಭಗಿನಿಯರು ದೌರ್ಜನ್ಯ ಮತ್ತು ಶೋಷಣೆಯಿಂದ ಬದುಕುಳಿದವರಿಗೆ ಭರವಸೆಯನ್ನೂ ಭವಿಷ್ಯವನ್ನೂ ಪುನರ್‌ನಿರ್ಮಿಸಲು ಗಮನಹರಿಸುತ್ತಾರೆ. ಎಂಟು ವರ್ಷ ವಯಸ್ಸಿನಷ್ಟು ಚಿಕ್ಕವರಾದ ಬಾಲಕಿಯರು ಮತ್ತು ಯುವತಿಯರನ್ನು ವೇಶ್ಯಾವಾಟಿಕೆ ಹಾಗೂ ಮಾನವ ಕಳ್ಳಸಾಗಣೆಯಿಂದ ರಕ್ಷಿಸಿ, ಅವರಿಗೆ ಸುರಕ್ಷಿತವಾದ ಮನೆ, ಆರೈಕೆ ಮತ್ತು ಪ್ರೀತಿಪೂರ್ವಕ ಕಾಳಜಿಯನ್ನು ಒದಗಿಸುವುದು ಈ ಸೇವೆಯ ಉದ್ದೇಶವಾಗಿದೆ. ಬಡತನದ ಚಕ್ರವನ್ನು ಮುರಿಯುವ ಉದ್ದೇಶದಿಂದ, ಸಮುದಾಯವು ದೌರ್ಜನ್ಯಕ್ಕೆ ಒಳಗಾದವರಿಗೆ ಮಾತ್ರವಲ್ಲದೆ ಬಡ ಗ್ರಾಮೀಣ ಪ್ರದೇಶಗಳ ಮಕ್ಕಳಿಗೂ ಶೈಕ್ಷಣಿಕ ನೆರವನ್ನು ಒದಗಿಸುತ್ತದೆ. ಬಾಲಕಿಯರು ತಮ್ಮ ಆತ್ಮವಿಶ್ವಾಸವನ್ನು ಮರಳಿ ಪಡೆದು ಸ್ವಾವಲಂಬಿಗಳಾಗುವವರೆಗೆ ಸನ್ಯಾಸಿನಿಯರು ಅವರಿಗೆ ಸುರಕ್ಷಿತ ವಾತಾವರಣ, ಆರೈಕೆ ಮತ್ತು ನಿರಂತರ ಬೆಂಬಲವನ್ನು ಒದಗಿಸುತ್ತಾರೆ.
ಗುಣಮುಖತೆ ಮತ್ತು ಹೊಸ ಆರಂಭ
ಸೆಬು ಸಮೀಪದ ಟುಬುರಾನ್‌ನಲ್ಲಿ ಸಮುದಾಯವು ‘ಹೌಸ್ ಆಫ್ ಲವ್’ ಎಂಬ ಕೇಂದ್ರವನ್ನು ನಡೆಸುತ್ತಿದ್ದು, ವೇಶ್ಯಾವಾಟಿಕೆ ಮತ್ತು ಲೈಂಗಿಕ ಮಾನವ ಕಳ್ಳಸಾಗಣೆಗೆ ಒಳಗಾದವರಿಗೆ ಪುನರ್ವಸತಿ ಹಾಗೂ ಬೆಂಬಲವನ್ನು ಒದಗಿಸುತ್ತದೆ. ವ್ಯಾಟಿಕನ್‌ನ ಫೀಡೆಸ್ ವಾರ್ತಾ ಸಂಸ್ಥೆಯ ವರದಿ ಪ್ರಕಾರ, ಇತ್ತೀಚೆಗೆ ಈ ಕೇಂದ್ರಕ್ಕೆ ಭೇಟಿ ನೀಡಿದ ಸೆಬು ಮಹಾಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅಲ್ಬರ್ಟೊ ಎಸ್. ಉಯ್ ಅವರು, “ಸ್ವರ್ಗರಾಣಿ ಮಾತೆಯ ಸೇವಕಿಯರ ಸೇವೆಯನ್ನು ನೇರವಾಗಿ ಕಂಡದ್ದು ನನ್ನ ಹೃದಯವನ್ನು ಆಳವಾಗಿ ಸ್ಪರ್ಶಿಸಿತು. ಇದು ಜೀವವನ್ನು ನೀಡುವ ಸೇವೆಯಾಗಿದೆ” ಎಂದು ಹೇಳಿದರು. ದುರ್ಬಲ ಮಕ್ಕಳು ಮತ್ತು ಯುವತಿಯರಿಗಾಗಿ ಈ ಸೇವೆಯನ್ನು ವಿಸ್ತರಿಸಲು ಹಾಗೂ ಸಂಸ್ಥೆಯ ಸೌಲಭ್ಯಗಳನ್ನು ಪೂರ್ಣಗೊಳಿಸಲು ಹೆಚ್ಚಿನ ನೆರವು ಅಗತ್ಯವಿದೆ ಎಂದು ಅವರು ಕರೆ ನೀಡುತ್ತಾ, ಭಗಿನಿಯರ ಸೇವೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
ಭಗಿನಿಯರು ನಡೆಸುತ್ತಿರುವ ಮತ್ತೊಂದು ಕೇಂದ್ರವು ಸಾನ್ ಜೋಸೆ ಪುರಸಭೆಯ ಪುರೋಕ್‌ನಲ್ಲಿರುವ ‘ಮೈ ಬೊನಿಟಾ ಗರ್ಲ್ಸ್ ಹೋಮ್’ ಆಗಿದೆ. ಈ ಕೇಂದ್ರವು ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ವಯಸ್ಕ ಬಾಲಕಿಯರಿಗೆ ನೆರವು ನೀಡುತ್ತದೆ. ಈ ಎರಡೂ ಕೇಂದ್ರಗಳು ಬದುಕುಳಿದವರಿಗೆ ಸಮಾಜದಲ್ಲಿ ಪುನಃ ಬೆರೆತು ಗೌರವಯುತ ಜೀವನ ನಡೆಸಲು ನೆರವಾಗುವಂತೆ ಪುನರ್ವಸತಿ ಮತ್ತು ಸಮಾಲೋಚನೆ, ಶಿಕ್ಷಣ ಹಾಗೂ ವೃತ್ತಿಪರ ತರಬೇತಿಯನ್ನು ಒದಗಿಸುತ್ತವೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಅನೇಕ ಮಹಿಳೆಯರು ಈಗಾಗಲೇ ಸಮಾಜದಲ್ಲಿ ಪುನಃ ನೆಲೆಸಿದ್ದಾರೆ ಎಂದು ಸಹೋದರಿ ಕೊರಜೋನ್ ತಿಳಿಸಿದ್ದಾರೆ. ದೀರ್ಘಕಾಲದ ಬೆಂಬಲವು ಎಷ್ಟು ಮಹತ್ವದ್ದಾಗಿದೆ ಎಂಬುದಕ್ಕೆ ಅವರೇ ಜೀವಂತ ಉದಾಹರಣೆಗಳಾಗಿದ್ದಾರೆ.
ಮಾನವ ಕಳ್ಳಸಾಗಣೆಯ ವಿರುದ್ಧ ಶಿಕ್ಷಣವೇ ರಕ್ಷಾಕವಚ
ಮಾನವ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆಯನ್ನು ತಡೆಯುವ ಭಗಿನಿಯರ ಸೇವೆಯು ಈ ಸಾಮಾಜಿಕ ಸಮಸ್ಯೆಗಳ ಪ್ರಮುಖ ಮೂಲವಾದ ಬಡತನವನ್ನು ಎದುರಿಸುವುದರ ಮೇಲೆ ಕೇಂದ್ರೀಕೃತವಾಗಿದೆ. ‘ರೆಜಿನಾ ಕೋಯೆಲಿ ಶಿಕ್ಷಣ ನೆರವು ಕಾರ್ಯಕ್ರಮ’ವು ಬಡ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳು ಮತ್ತು ಕುಟುಂಬಗಳಿಗೆ ಶಿಕ್ಷಣ ಹಾಗೂ ತರಬೇತಿಯ ಮೂಲಕ ನೆರವು ನೀಡುತ್ತದೆ. ತಮ್ಮ ಸಮುದಾಯಗಳಲ್ಲಿ ಕಾರ್ಯನಿರ್ವಹಿಸುವ ಅಕ್ರಮ ನೇಮಕಾತಿದಾರರಿಂದ ಯುವಜನರನ್ನು ರಕ್ಷಿಸುವುದು ಇದರ ಉದ್ದೇಶವಾಗಿದೆ. ಇಂತಹ ನೇಮಕಾತಿದಾರರು ನಕಲಿ ಉದ್ಯೋಗಗಳ ಭರವಸೆ ನೀಡಿ ಪೋಷಕರನ್ನು ಮೋಸಗೊಳಿಸುತ್ತಾರೆ ಮತ್ತು ತಮ್ಮ ಮಕ್ಕಳನ್ನು ಅವರೊಂದಿಗೆ ಕಳುಹಿಸುವಂತೆ ಪ್ರೇರೇಪಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಈ ಸಮಸ್ಯೆಯ ಸ್ವರೂಪವೂ ಬದಲಾಗಿದೆ. ಇದು ಭೌತಿಕ ಸ್ಥಳಗಳಿಗೆ ಮಾತ್ರ ಸೀಮಿತವಾಗದೆ, ಹೆಚ್ಚಾಗಿ ಡಿಜಿಟಲ್ ವೇದಿಕೆಗಳಿಗೂ ವಿಸ್ತರಿಸುತ್ತಿದೆ.
ಎಲ್ಲರಿಗೂ ಒಂದು ಮನೆ
ಸೆಬು ದೀರ್ಘಕಾಲದಿಂದಲೇ ಮಾನವ ಕಳ್ಳಸಾಗಣೆಯ ಸಂತ್ರಸ್ತರ ಮೂಲಸ್ಥಳ, ಸಾಗಣೆ ಮಾರ್ಗ ಮತ್ತು ಗಮ್ಯಸ್ಥಾನವಾಗಿ ಗುರುತಿಸಿಕೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಬಡತನ ಮತ್ತು ಬಲವಾದ ಪ್ರವಾಸೋದ್ಯಮ ಚಟುವಟಿಕೆಗಳು ಈ ಪರಿಸ್ಥಿತಿಗೆ ಕಾರಣವಾಗಿವೆ. ಅಂತರರಾಷ್ಟ್ರೀಯ ಅಂದಾಜುಗಳ ಪ್ರಕಾರ, ಪ್ರತಿವರ್ಷ ಫಿಲಿಪ್ಪೀನ್ಸ್‌ನಲ್ಲಿ ಸುಮಾರು 60,000ರಿಂದ 1,00,000 ಮಕ್ಕಳು ವೇಶ್ಯಾವಾಟಿಕೆ ಅಥವಾ ಲೈಂಗಿಕ ಮಾನವ ಕಳ್ಳಸಾಗಣೆಗೆ ಬಲವಂತವಾಗಿ ಒಳಗಾಗುತ್ತಾರೆ. ಫಿಲಿಪ್ಪೀನ್ಸ್ ನ್ಯಾಯಾಂಗ ಇಲಾಖೆಯ ಪ್ರಕಾರ, ಲೈಂಗಿಕ ಶೋಷಣೆಯೇ ಮಾನವ ಕಳ್ಳಸಾಗಣೆಯ ಅತ್ಯಂತ ವ್ಯಾಪಕ ರೂಪವಾಗಿದೆ. ದೇಶಾದ್ಯಂತ ಗುರುತಿಸಲ್ಪಟ್ಟ ಸಂತ್ರಸ್ತರಲ್ಲಿ ಮಹಿಳೆಯರು ಮತ್ತು ಬಾಲಕಿಯರು ಬಹುಪಾಲು ಪ್ರಕರಣಗಳನ್ನು ಹೊಂದಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಮಾನವ ಕಳ್ಳಸಾಗಣೆಗೆ ಸಂಬಂಧಿಸಿದ ಅಪರಾಧ ಸಾಬೀತಾದ ಪ್ರಕರಣಗಳಲ್ಲಿ 70 ಪ್ರತಿಶತಕ್ಕೂ ಹೆಚ್ಚು ವಾಣಿಜ್ಯ ಲೈಂಗಿಕ ಶೋಷಣೆಗೆ ನೇರವಾಗಿ ಸಂಬಂಧಿಸಿವೆ.
ಸ್ವರ್ಗರಾಣಿ ಮಾತೆಯ ಸೇವಕಿಯರುಗಾಗಿ ಪ್ರತಿಕ್ರಿಯೆ ಕೇವಲ ಸಂತ್ರಸ್ತರನ್ನು ರಕ್ಷಿಸುವುದಕ್ಕೆ ಸೀಮಿತವಾಗಿಲ್ಲ. ಆಶ್ರಯ, ಗುಣಮುಖತೆಗೆ ಅಗತ್ಯವಾದ ಆರೈಕೆ, ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ಮೂಲಕ, ಬದುಕುಳಿದವರು ತಮ್ಮ ಜೀವನವನ್ನು ಪುನರ್‌ನಿರ್ಮಿಸಿಕೊಳ್ಳಲು ಅಗತ್ಯವಾದ ಸಾಮರ್ಥ್ಯ ಮತ್ತು ಸಾಧನಗಳನ್ನು ಪಡೆಯುವಂತೆ ಭಗಿನಿಯರು ನೆರವಾಗುತ್ತಿದ್ದಾರೆ. ಜೊತೆಗೆ, ಶೋಷಣೆ ಸಂಭವಿಸುವ ಮೊದಲೇ ದುರ್ಬಲ ಸಮುದಾಯಗಳನ್ನು ರಕ್ಷಿಸುವ ಮೂಲಕ ಅದರ ಮೂಲ ಕಾರಣಗಳನ್ನು ಎದುರಿಸಲು ಅವರು ಪ್ರಯತ್ನಿಸುತ್ತಿದ್ದಾರೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).