ಹುಡುಕಿ

ಧರ್ಮಾಧ್ಯಕ್ಷ ಮಾರ್ಟಿನೆಲ್ಲಿ: ಯುದ್ಧ ಎಂದಿಗೂ ಪರಿಹಾರಗಳನ್ನು ತರುವುದಿಲ್ಲ ಧರ್ಮಾಧ್ಯಕ್ಷ ಮಾರ್ಟಿನೆಲ್ಲಿ: ಯುದ್ಧ ಎಂದಿಗೂ ಪರಿಹಾರಗಳನ್ನು ತರುವುದಿಲ್ಲ 

ಧರ್ಮಾಧ್ಯಕ್ಷ ಮಾರ್ಟಿನೆಲ್ಲಿ: ಯುದ್ಧ ಎಂದಿಗೂ ಪರಿಹಾರಗಳನ್ನು ತರುವುದಿಲ್ಲ

ದಕ್ಷಿಣ ಅರೇಬಿಯಾದ ಪ್ರೇಷಿತ ಪ್ರತಿನಿಧಿಯಾಗಿರುವ ಧರ್ಮಾಧ್ಯಕ್ಷ ಪಾವ್ಲೊ ಮಾರ್ಟಿನೆಲ್ಲಿ, OFM Cap., ಮಧ್ಯಪ್ರಾಚ್ಯವು ಯುದ್ಧ ಮತ್ತು ಉದ್ವಿಗ್ನತೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಪೂಜ್ಯ ಜಗದ್ಗುರು 14ನೇ ಲಿಯೋ ಅವರು ಶಾಂತಿಗಾಗಿ ನೀಡುತ್ತಿರುವ ಕರೆಯ ಕುರಿತು ವ್ಯಾಟಿಕನ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದಾರೆ.

ಲೇಖಕರು: ಆಂಡ್ರಿಯಾ ಟೊರ್ನಿಯೆಲ್ಲಿ – ರಿಮಿನಿ

“ಶಸ್ತ್ರಾಸ್ತ್ರಗಳು ಖಂಡಿತವಾಗಿಯೂ ಎಂದಿಗೂ ಪರಿಹಾರಗಳಿಗೆ ದಾರಿ ಮಾಡಿಕೊಡುವುದಿಲ್ಲ,” ಎಂದು 2022ರಿಂದ ದಕ್ಷಿಣ ಅರೇಬಿಯಾದ ಪ್ರೇಷಿತ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರುವ ಕಪುಚಿನ್ ಧರ್ಮಾಧ್ಯಕ್ಷ ಪಾವ್ಲೊ ಮಾರ್ಟಿನೆಲ್ಲಿ ಹೇಳಿದ್ದಾರೆ. ದಕ್ಷಿಣ ಅರೇಬಿಯಾದ ಪ್ರೇಷಿತ ಧರ್ಮಪ್ರಾಂತ್ಯ ಅರೇಬಿಯನ್ ಪರ್ಯಾಯದ್ವೀಪದ ಮೂರು ರಾಷ್ಟ್ರಗಳಾದ ಸಂಯುಕ್ತ ಅರಬ್ ಎಮಿರೇಟ್ಸ್, ಓಮನ್ ಮತ್ತು ಯೆಮನ್‌ಗಳನ್ನು ಒಳಗೊಂಡಿದೆ.

ವ್ಯಾಟಿಕನ್ ನ್ಯೂಸ್‌ನ ಆಂಡ್ರಿಯಾ ಟೊರ್ನಿಯೆಲ್ಲಿ ಅವರೊಂದಿಗೆ ನಡೆದ ಸಂದರ್ಶನದಲ್ಲಿ ಧರ್ಮಾಧ್ಯಕ್ಷ ಮಾರ್ಟಿನೆಲ್ಲಿ, ಆ ಪ್ರದೇಶಗಳಲ್ಲಿ ವಾಸಿಸುವ 10 ಲಕ್ಷಕ್ಕೂ ಹೆಚ್ಚು ಕ್ರೈಸ್ತರ ಜೀವನದ ಕುರಿತು ಹಾಗೂ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಆರಂಭವಾದ ನಂತರ ಅವರ ಜೀವನದಲ್ಲಿ ಉಂಟಾಗಿರುವ ಬದಲಾವಣೆಗಳ ಕುರಿತು ಮಾತನಾಡುತ್ತಾರೆ.

“ಕಳೆದ ಕೆಲವು ತಿಂಗಳುಗಳು ನಮ್ಮನ್ನು ಪರೀಕ್ಷೆಗೆ ಒಳಪಡಿಸಿದ ಕಠಿಣ ಅನುಭವವಾಗಿವೆ. ಆದರೆ ನಮ್ಮ ಕ್ರೈಸ್ತ ಸಮುದಾಯ, ನಮ್ಮ ವಿಶ್ವಾಸಿಗಳು, ಧರ್ಮಸಭೆಯ ಮೇಲಿನ ತಮ್ಮ ನಿಷ್ಠೆಗೆ ಅತ್ಯುತ್ತಮ ಸಾಕ್ಷ್ಯವನ್ನು ನೀಡಿದ್ದಾರೆ, ನಾವು ನೀಡಿದ ಎಲ್ಲ ಕಾರ್ಯಕ್ರಮಗಳಿಗೆ ಅವರು ಸದಾ ಅತ್ಯಂತ ನಿಷ್ಠೆಯಿಂದ ಹಾಜರಾಗಿದ್ದಾರೆ. ದಾಳಿಗಳು ಆರಂಭವಾದ ಮೊದಲ ದಿನವೇ ನಾನು ನಮ್ಮ ವಿಶ್ವಾಸಿಗಳಿಗೆ ಪತ್ರ ಬರೆದು, ಒಟ್ಟಾಗಿ ಪ್ರಾರ್ಥಿಸುವಂತೆ, ಸಂಕಷ್ಟದಲ್ಲಿರುವವರಿಗೆ—ವಿಶೇಷವಾಗಿ ಉದ್ಯೋಗ ಕಳೆದುಕೊಂಡವರಿಗೆ—ಸಹಾಯ ಮಾಡುವಂತೆ ಹಾಗೂ ಸ್ಥಳೀಯ ಅಧಿಕಾರಿಗಳು ನೀಡಿದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಆಹ್ವಾನಿಸಿದೆ. ಜನರು ಸಾಧ್ಯವಾದಷ್ಟು ಹೆಚ್ಚು ಪವಿತ್ರ ಬಲಿಪೂಜೆಯಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ, ಆದರೆ ದೊಡ್ಡ ಗುಂಪುಗಳಾಗಿ ಸೇರುವುದನ್ನು ತಪ್ಪಿಸುವ ರೀತಿಯಲ್ಲಿ, ನಾವು ಪವಿತ್ರ ಬಲಿಪೂಜೆಗಳ ಸಂಖ್ಯೆಯನ್ನು ಹೆಚ್ಚಿಸಿದೆವು. ಜನರು ನಂಬಿಗಸ್ತಿಕೆ, ಪ್ರಾರ್ಥನೆ ಮತ್ತು ಪರಸ್ಪರ ಸಹಕಾರದ ಅತ್ಯುತ್ತಮ ಮಾದರಿಯನ್ನು ತೋರಿಸಿದ್ದಾರೆ.”

ಅತಿದೊಡ್ಡ ಪ್ರಮಾಣದಲ್ಲಿ ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಮತ್ತು ಸಾರ್ವಜನಿಕವಾಗಿ ಶುಭಸಂದೇಶವನ್ನು ಘೋಷಿಸುವುದನ್ನು ನಿಷೇಧಿಸುವ ಕಾನೂನುಗಳ ನಡುವೆಯೂ, “ನಮ್ಮ ವಿಶ್ವಾಸೀಯ ಜೀವನವನ್ನು ಯಾರೂ ತಡೆಯಲು ಸಾಧ್ಯವಿಲ್ಲ—ಆದ್ದರಿಂದ ನಮ್ಮ ದೈನಂದಿನ ಜೀವನದಲ್ಲಿ, ನಿಜವಾದ ಸಂಬಂಧಗಳನ್ನು ಬೆಳೆಸುವ ಸಾಮರ್ಥ್ಯದ ಮೂಲಕ, ಸಂವಾದ ಮತ್ತು ಸಾಕ್ಷ್ಯದ ಮೂಲಕ ಸುವಾರ್ತೆಯ ಆನಂದಕ್ಕೆ ಸಾಕ್ಷಿಯಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ,” ಎಂದು ಧರ್ಮಾಧ್ಯಕ್ಷ ಮಾರ್ಟಿನೆಲ್ಲಿ ವಿವರಿಸುತ್ತಾರೆ.

ನಂತರ ರಿಮಿನಿ ಸಭೆಯಲ್ಲಿ ಪೂಜ್ಯ ಜಗದ್ಗುರು 14ನೇ ಲಿಯೋ ಅವರು ನೀಡಿದ ಮಾತುಗಳನ್ನು ಕುರಿತು ಚಿಂತಿಸಿದ ಪ್ರೇಷಿತ ಪ್ರತಿನಿಧಿ, “ಪೂಜ್ಯ ಜಗದ್ಗುರು ಅವರು ಕ್ರೈಸ್ತ ಜೀವನದ ಸಮಗ್ರತೆಯ ಮೂಲಭೂತ ವಿಷಯಗಳನ್ನು ಸ್ಪರ್ಶಿಸಿದರು. ಅದರ ಜೊತೆಗೆ ಧರ್ಮಸಭೆಯ ಮೇಲಿನ ಪ್ರೀತಿಯ ಮೌಲ್ಯ, ಧರ್ಮಸಭೆಯ ಏಕತೆಗಾಗಿ ಮಾಡುವ ಪ್ರಯತ್ನ ಮತ್ತು ಸ್ಥಾಪಕ ತತ್ವವಾಗಿ ಸಹಭಾಗಿತ್ವದ ಮೌಲ್ಯಗಳೂ ಇವೆ.ಅನೇಕ ವಿಭಿನ್ನ ಘಟಕಗಳು, ವಿವಿಧ ಸಂಸ್ಕೃತಿಗಳು, ಭಾಷೆಗಳು ಮತ್ತು ವಿಧಿವಿಧಾನಗಳನ್ನು ಹೊಂದಿರುವ ಧರ್ಮಸಭೆಯಾಗಿ, ಸಹಭಾಗಿತ್ವದ ಮೂಲ ಹಾಗೂ ಧರ್ಮಸಭೆಯ ಮೇಲಿನ ಪ್ರೀತಿಯತ್ತ ಮರಳುವ ಈ ಕರೆಯನ್ನು ಕೇಳುವುದು ನಮಗೆ ಬಹಳ ಮಹತ್ವದ್ದಾಗಿತ್ತು. ಇವು ಜಗತ್ತಿನ ಯಾವುದೇ ಭಾಗದಲ್ಲಿರುವ ಎಲ್ಲ ಕ್ರೈಸ್ತರಿಗೂ ಅತ್ಯಂತ ಪ್ರಮುಖವಾದ ಪದಗಳು ಎಂದು ನಾನು ನಂಬುತ್ತೇನೆ.”

ರಿಮಿನಿ ಸಭೆಯಲ್ಲಿ ಪೂಜ್ಯ ಜಗದ್ಗುರು 14ನೇ ಲಿಯೋ ಅವರು ಪದಗಳನ್ನು, ಮನಸ್ಸುಗಳನ್ನು ಮತ್ತು ರಾಷ್ಟ್ರಗಳನ್ನು ನಿಶಸ್ತ್ರೀಕರಿಸುವಂತೆ ನೀಡಿದ ಕರೆ ಹಾಗೂ ಶಸ್ತ್ರಾಸ್ತ್ರ ಸ್ಪರ್ಧೆಯ ಹುಚ್ಚುತನವನ್ನು ಖಂಡಿಸಿದ ಕುರಿತು ಕೇಳಿದಾಗ, ಧರ್ಮಾಧ್ಯಕ್ಷ ಮಾರ್ಟಿನೆಲ್ಲಿ ಅವರು, ಪೂಜ್ಯ ಜಗದ್ಗುರು ನಿರಂತರವಾಗಿ ಉಲ್ಲೇಖಿಸುವ ನಿಶಸ್ತ್ರೀಕೃತ ಮತ್ತು ನಿಶಸ್ತ್ರೀಕರಿಸುವ ಶಾಂತಿ “ಸಂಪೂರ್ಣವಾಗಿ ನಿರ್ಣಾಯಕ”ವಾಗಿದೆ ಎಂದು ಹೇಳಿದರು.

“ಇಲ್ಲಿ ನಾವು ಮುಂದೆ ಸಾಗಲು ಇರುವ ಏಕೈಕ ಮಾರ್ಗವು ಶಾಂತಿಯ ಉತ್ತೇಜನ ಮತ್ತು ಪರಸ್ಪರ ಸಂವಾದದ ತಾಳ್ಮೆಯ ಮೂಲಕವೇ ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ನೋಡಬಹುದು. ಖಂಡಿತವಾಗಿಯೂ ಶಸ್ತ್ರಾಸ್ತ್ರಗಳು ಎಂದಿಗೂ ಪರಿಹಾರಗಳಿಗೆ ದಾರಿ ಮಾಡಿಕೊಡುವುದಿಲ್ಲ. ಆದ್ದರಿಂದ ನಾವು ಸಂವಾದಕ್ಕಾಗಿ ತಾಳ್ಮೆಯನ್ನು ಹೊಂದಿರಬೇಕು ಮತ್ತು ಶಾಂತಿಯನ್ನು ಒಟ್ಟಾಗಿ ಉತ್ತೇಜಿಸಬೇಕು. ಹಂಚಿಕೊಂಡ ಮತ್ತು ಫಲಪ್ರದ ಸಹಬಾಳ್ವೆಗೆ ಸಾಧ್ಯವಿರುವ ಏಕೈಕ ಮಾರ್ಗ ಇದಾಗಿದೆ. ಆದ್ದರಿಂದ ನಿಶಸ್ತ್ರೀಕೃತ ಮತ್ತು ನಿಶಸ್ತ್ರೀಕರಿಸುವ ಶಾಂತಿಯನ್ನು ಉತ್ತೇಜಿಸುವ ಕುರಿತು ಪೂಜ್ಯ ಜಗದ್ಗುರು ಅವರು ನೀಡಿದ ಮಾತುಗಳು ಅತ್ಯಂತ ಅಗತ್ಯವಾದ ಮಾತುಗಳಾಗಿವೆ. ಅವುಗಳನ್ನು ನಾವು ಪ್ರತಿದಿನವೂ ನಮ್ಮ ಹೃದಯಕ್ಕೆ ಹತ್ತಿರವಾಗಿ ಮತ್ತು ನಮ್ಮ ಕಣ್ಣೆದುರಿಗೆ ಇಟ್ಟುಕೊಳ್ಳಬೇಕು.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

25 ಆಗಸ್ಟ್ 2026, 09:10