ಪಾಪುವಾ ನ್ಯೂಗಿನಿಯಾ ಪಾಪುವಾ ನ್ಯೂಗಿನಿಯಾ 

ಪಾಪುವಾ ನ್ಯೂಗಿನಿಯಾ: ಕಥೋಲಿಕ ವಿಶ್ವಾಸದ 125 ವರ್ಷಗಳು

ಆಗಸ್ಟ್ 14ರಿಂದ 17, 2026ರವರೆಗೆ ಪಾಪುವಾ ನ್ಯೂಗಿನಿಯಾದ ಬೋಗನ್‌ವಿಲ್ ಧರ್ಮಕ್ಷೇತ್ರವು ದೇಶದ ಉತ್ತರ ಭಾಗದಲ್ಲಿ ಕಥೋಲಿಕ ಮಿಷನರಿ ಉಪಸ್ಥಿತಿಯ 125ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಯುದ್ಧ, ಬಿಕ್ಕಟ್ಟು ಮತ್ತು ಸಾಮಾಜಿಕ ಬದಲಾವಣೆಗಳ ನಡುವೆಯೂ ಕಥೋಲಿಕ ಸಭೆಯನ್ನು ಉಳಿಸಿ ಬೆಳೆಸಿದ ಪೀಳಿಗೆಯ ಮಿಷನರಿಗಳು, ಧರ್ಮಬೋಧಕರು ಹಾಗೂ ಸ್ಥಳೀಯ ವಿಶ್ವಾಸಿಗಳಿಗೆ ಈ ಸಂದರ್ಭದಲ್ಲಿ ಗೌರವ ಸಲ್ಲಿಸಲಾಗುತ್ತಿದೆ.

ಲೇಖಕರು: ಸಹೋದರಿ ಕ್ರಿಸ್ಟೀನ್ ಮಸಿವೊ, CPS

ಪಾಪುವಾ ನ್ಯೂಗಿನಿಯಾದ ಬೋಗನ್‌ವಿಲ್ ಧರ್ಮಕ್ಷೇತ್ರದಲ್ಲಿ ಮೊದಲ ಕಥೋಲಿಕ ಮಿಷನರಿಗಳು ಆಗಮಿಸಿ 125 ವರ್ಷಗಳು ಪೂರ್ಣಗೊಂಡಿರುವ ಈ ಐತಿಹಾಸಿಕ ಸಂದರ್ಭದಲ್ಲಿ ನಡೆಯುತ್ತಿರುವ ಆಚರಣೆ ಕೇವಲ ಗತಕಾಲದ ಸ್ಮರಣೆಯಲ್ಲ. ಒಂದು ಶತಮಾನಕ್ಕೂ ಹೆಚ್ಚಿನ ಕಾಲ ದೇಶದಲ್ಲಿ ಯುದ್ಧಗಳು ಮತ್ತು ಸಂಕಷ್ಟಗಳನ್ನು ಎದುರಿಸುತ್ತಾ ಕಥೋಲಿಕ ಸಭೆ ತನ್ನ ಪಯಣವನ್ನು ಮುಂದುವರಿಸಿದೆ. ಇಂದು ಅದು 35 ಧರ್ಮಕೇಂದ್ರಗಳಲ್ಲಿ 2 ಲಕ್ಷಕ್ಕೂ ಅಧಿಕ ವಿಶ್ವಾಸಿಗಳನ್ನು ಹೊಂದಿರುವ ಚೈತನ್ಯಮಯ ಸ್ಥಳೀಯ ಸಭೆಯಾಗಿ ಬೆಳೆದಿದೆ.

ಧರ್ಮಪ್ರಚಾರ ಕೇಂದ್ರಗಳಿಂದ ಧರ್ಮಕೇಂದ್ರಗಳವರೆಗೆ

1901ರಲ್ಲಿ ಪೊಕ್‌ಪೊಕ್ ಮತ್ತು 1903ರಲ್ಲಿ ಬುಯಿನ್‌ಗೆ ಮಾರಿಸ್ಟ್  ಮಿಷನರಿಗಳು ಆಗಮಿಸಿದ ದಿನಗಳಿಂದ ಆರಂಭವಾದ ಸ್ಥಳೀಯ ಕಥೋಲಿಕ ಸಭೆಯ ಬೆಳವಣಿಗೆ ಮಿಷನರಿಗಳು ಹಾಗೂ ಸಾಮಾನ್ಯ ಧರ್ಮಬೋಧಕರ ಸಮರ್ಪಣೆಯಿಂದ ಸಾಧ್ಯವಾಯಿತು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿಯೂ, 1988ರಿಂದ 1998ರವರೆಗೆ ಪಾಪುವಾ ನ್ಯೂಗಿನಿಯಾ ಸರ್ಕಾರ ಮತ್ತು ಬೋಗನ್‌ವಿಲ್ ದ್ವೀಪದ ಪ್ರತ್ಯೇಕತಾವಾದಿ ಪಡೆಗಳ ನಡುವೆ ನಡೆದ ಬೋಗನ್‌ವಿಲ್ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ವಿಶ್ವಾಸದ ಜ್ಯೋತಿ ನಂದಲಿಲ್ಲ.125ನೇ ವಾರ್ಷಿಕೋತ್ಸವದ ಪ್ರಧಾನ ಸಮಾರೋಪ ಸಮಾರಂಭವು 2026ರ ಆಗಸ್ಟ್ 14ರಿಂದ 17ರವರೆಗೆ ನಡೆಯಲಿದೆ. ಆಗಸ್ಟ್ 16ರಂದು ಹೆಹೆಲಾದಲ್ಲಿರುವ ಸ್ವರ್ಗಸ್ವೀಕೃತ ಮಾತೆಯ ಪ್ರಧಾನ ದೇವಾಲಯದಲ್ಲಿ ನಡೆಯುವ ಭವ್ಯ ಜಯಂತಿ ಬಲಿಪೂಜೆಯನ್ನುಪ್ರಧಾನ ಗುರು ಪೂಜ್ಯ ಲೂಯಿಸ್ ಆಂಟೋನಿಯೊ ಟ್ಯಾಗ್ಲೆ ಅವರು ನೆರವೇರಿಸಲಿದ್ದಾರೆ. ಅವರ ಭೇಟಿಯ ಸಂದರ್ಭದಲ್ಲಿ ಧರ್ಮಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿನ ಸೇವಾ ಕಾರ್ಯಗಳಲ್ಲಿ ಭಾಗವಹಿಸುವುದು, ಪ್ರಾದೇಶಿಕ ನಾಯಕರನ್ನು ಭೇಟಿ ಮಾಡುವುದು ಮತ್ತು ಹೊಸ ಧರ್ಮಕ್ಷೇತ್ರೀಯ ಕಟ್ಟಡವನ್ನು ಆಶೀರ್ವದಿಸುವ ಕಾರ್ಯಕ್ರಮವೂ ನಡೆಯಲಿದೆ.

ಸ್ಥಳೀಯ ನಾಯಕತ್ವದತ್ತ ಸಾಗುವ ಪಯಣ

ಪಾಂಟಿಫಿಕಲ್ ಮಿಷನ್ ಸೊಸೈಟೀಸ್‌ನ ರಾಷ್ಟ್ರೀಯ ನಿರ್ದೇಶಕರಾದ ವಂ. ಕ್ರಿಸ್ಟಿಯನ್ ಸೀಲಾಂಡ್ ಅವರು ಪಾಪುವಾ ನ್ಯೂಗಿನಿಯಾದಲ್ಲೇ ಬೆಳೆದವರು. ವ್ಯಾಟಿಕನ್‌ನ ಫಿಡೆಸ್ ಸುದ್ದಿ ಸಂಸ್ಥೆಯ ಪ್ರಕಾರ, ಅವರು ಬೆಳೆದ ಕಾಲದಲ್ಲಿ ಸ್ಥಳೀಯ ಕಥೋಲಿಕ ಸಭೆಯ ಸುಮಾರು ಶೇ.90ರಷ್ಟು ಸೇವೆಯನ್ನು ವಿದೇಶಿ ಮಿಷನರಿಗಳು ನಿರ್ವಹಿಸುತ್ತಿದ್ದರು.“ನನ್ನ ತಂದೆ ಜರ್ಮನಿಯ ಮಿಸೆರಿಯೊರ್ ಸಂಸ್ಥೆಯ ಮೂಲಕ ನೇಮಕಗೊಂಡ ಸಾಮಾನ್ಯ ಮಿಷನರಿಯಾಗಿದ್ದರು. ಅವರು 20 ವರ್ಷಕ್ಕೂ ಹೆಚ್ಚು ಕಾಲ ಯಾಜಕರು ಹಾಗೂ ಧಾರ್ಮಿಕ ಸಹೋದರರು ಮತ್ತು ಸಹೋದರಿಯರೊಂದಿಗೆ ಸೇವೆ ಸಲ್ಲಿಸಿದರು,” ಎಂದು ಅವರು ಹೇಳಿದರು.ಇಂದು ವಂ. ಸೀಲಾಂಡ್ ಸ್ವತಃ ಸ್ಥಳೀಯ ಯಾಜಕರಾಗಿದ್ದು, ಮಿಷನರಿ ಸಭೆಯಿಂದ ಸಂಪೂರ್ಣವಾಗಿ ಸ್ಥಳೀಯ ಸಭೆಯತ್ತ ಸಾಗುತ್ತಿರುವ ಮಹತ್ವದ ಪರಿವರ್ತನೆಯ ಹಂತದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. “ನಾನು ಪರಂಪರೆಯಿಂದ ಪಡೆದ ಅತ್ಯಂತ ಮಹತ್ವದ ಮೌಲ್ಯಗಳು ಗೌರವ ಮತ್ತು ಕೃತಜ್ಞತೆಯ ಮನೋಭಾವ ಎಂದು ನಾನು ನಂಬುತ್ತೇನೆ,” ಎಂದು ಅವರು ಹೇಳಿದರು. “ನನ್ನ ಕರೆಯು ಕುಟುಂಬದ ಸಾಕ್ಷ್ಯ ಮತ್ತು ಮಿಷನರಿಗಳ ಸಾಕ್ಷ್ಯ ಎರಡರಿಂದಲೂ ರೂಪುಗೊಂಡಿತು.”

1999ರಿಂದ 2000ರವರೆಗೆ ಪಾಪುವಾ ನ್ಯೂಗಿನಿಯಾದಲ್ಲಿ ಸೊಸೈಟಿ ಆಫ್ ದ ಡಿವೈನ್ ವರ್ಡ್ (SVD) ಜೊತೆ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಮಿಷನರಿಗಳೊಂದಿಗಿನ ಅವರ ಸ್ನೇಹವು ಯಾಜಕತ್ವದ ಕರೆಯತ್ತ ಅವರನ್ನು ಮುನ್ನಡೆಸಿತು.

ವಿಶ್ವಾಸ, ಸಂಸ್ಕೃತಿ ಮತ್ತು ಸಾಮರಸ್ಯ

ಪಾಪುವಾ ನ್ಯೂಗಿನಿಯಾದ ಕಥೋಲಿಕ ಸಭೆ ಹಲವು ಪೀಳಿಗೆಗಳ ಮಿಷನರಿ ಸೇವೆಯ ಮೂಲಕ ತನ್ನ ಪಯಣವನ್ನು ಮುಂದುವರಿಸಿದೆ. 1990ರ ಮತ್ತು 2000ರ ದಶಕಗಳಲ್ಲಿ ಸ್ಥಳೀಯ ಯುವಕರಲ್ಲಿ ಧಾರ್ಮಿಕ ಕರೆಯು ಗಣನೀಯವಾಗಿ ಹೆಚ್ಚಾಯಿತು. ಇದರ ಫಲವಾಗಿ ಇಂದು ಸ್ಥಳೀಯ ಕಥೋಲಿಕ ನಾಯಕತ್ವದ ಹೊಸ ಪೀಳಿಗೆ ರೂಪುಗೊಂಡಿದೆ. ಪಾಪುವಾ ನ್ಯೂಗಿನಿಯಾ ವಿಶ್ವದ ಅತ್ಯಂತ ಸಾಂಸ್ಕೃತಿಕ ವೈವಿಧ್ಯಮಯ ರಾಷ್ಟ್ರಗಳಲ್ಲಿ ಒಂದಾಗಿದೆ. ಇಲ್ಲಿ 800ಕ್ಕೂ ಹೆಚ್ಚು ಭಾಷೆಗಳಿದ್ದು, ಅನೇಕ ಜನಾಂಗೀಯ ಮತ್ತು ಬುಡಕಟ್ಟು ಸಮುದಾಯಗಳು ಅಸ್ತಿತ್ವದಲ್ಲಿವೆ. ಈ ವೈವಿಧ್ಯತೆ ಕೆಲವೊಮ್ಮೆ ವಿಭಜನೆಗೆ ಕಾರಣವಾಗಬಹುದಾದರೂ, ಅದು ಆಳವಾದ ಏಕತೆಯ ಮೂಲವಾಗಿಯೂ ಪರಿಣಮಿಸಬಹುದು.ಶಾಲೆಗಳನ್ನು ಸ್ಥಾಪಿಸುವುದು, ಆರೋಗ್ಯ ಸೇವೆಗಳನ್ನು ಒದಗಿಸುವುದು ಮತ್ತು ವಿವಿಧ ಬುಡಕಟ್ಟು ಸಮುದಾಯಗಳ ಜನರನ್ನು ಒಂದೇ ವಿಶ್ವಾಸದ ಕುಟುಂಬವಾಗಿ ಒಗ್ಗೂಡಿಸುವ ಧರ್ಮಪಾಲನಾ ಸಮುದಾಯಗಳನ್ನು ನಿರ್ಮಿಸುವ ಮೂಲಕ ಕಥೋಲಿಕ ಸಭೆ ಈ ಏಕತೆಯನ್ನು ಬೆಳೆಸಲು ನೆರವಾಗಿದೆ.

“ಧರ್ಮಕೇಂದ್ರದ ಧರ್ಮಪಾಲನಾ ಮಂಡಳಿಗಳಲ್ಲಿ, ಹಿಂದೆ ಪರಸ್ಪರ ವಿರೋಧಿಗಳಾಗಿದ್ದ ಸಮುದಾಯಗಳ ಸದಸ್ಯರು ಒಂದೇ ಕಥೋಲಿಕ ಕ್ರೈಸ್ತ ಕುಟುಂಬದಂತೆ ಒಟ್ಟಾಗಿ ಸೇವೆ ಸಲ್ಲಿಸುವುದನ್ನು ಕಾಣುವುದು ಅಸಾಮಾನ್ಯವಲ್ಲ,” ಎಂದು ವಂ. ಸೀಲಾಂಡ್ ಹೇಳಿದರು. ಆದಾಗ್ಯೂ, ಗಂಭೀರ ಸವಾಲುಗಳು ಇನ್ನೂ ಉಳಿದಿವೆ. ಸಣ್ಣಪುಟ್ಟ ಸಂಘರ್ಷಗಳು, ರಾಜಕೀಯ ವಿಭಜನೆಗಳು, ವಾಮಾಚಾರದ ಆರೋಪಗಳು, ಹಿಂಸಾಚಾರ ಮತ್ತು ಪ್ರತೀಕಾರದ ಸಾಂಪ್ರದಾಯಿಕ ಪದ್ಧತಿಗಳು ಕೆಲವು ಸಮುದಾಯಗಳಲ್ಲಿ ಇನ್ನೂ ನೋವನ್ನು ಉಂಟುಮಾಡುತ್ತಿವೆ.

“ಕ್ರೈಸ್ತ ವಿಶ್ವಾಸಕ್ಕೆ ಹೊಂದಿಕೆಯಾಗದ ಆಚರಣೆಗಳ ಕುರಿತು ಸ್ಪಷ್ಟತೆಯನ್ನು ಕಾಪಾಡಿಕೊಂಡೇ, ಕಥೋಲಿಕ ಸಭೆ ಈ ವಾಸ್ತವಗಳನ್ನು ಧರ್ಮಪಾಲನಾ ಸೂಕ್ಷ್ಮತೆ ಮತ್ತು ಕಾಳಜಿಯಿಂದ ಎದುರಿಸಲು ಪ್ರಯತ್ನಿಸುತ್ತಿದೆ,” ಎಂದು ಅವರು ವಿವರಿಸಿದರು.

ಧರ್ಮಪಾಲನಾ ಕೇಂದ್ರಗಳಲ್ಲಿ ಸಂಘರ್ಷ ಪರಿಹಾರ, ಶಾಂತಿ ಮಧ್ಯಸ್ಥಿಕೆ ಹಾಗೂ ಕೌಟುಂಬಿಕ ಹಿಂಸಾಚಾರ ಮತ್ತು ವಾಮಾಚಾರದ ಆರೋಪಗಳಿಗೆ ಒಳಗಾದವರ ನೆರವಿಗಾಗಿ ತರಬೇತಿಗಳನ್ನು ನೀಡಲಾಗುತ್ತಿದೆ. ಬುಡಕಟ್ಟು ಸಂಘರ್ಷಗಳು ನಡೆಯುತ್ತಿರುವ ಪ್ರದೇಶಗಳಿಗೂ ಕಥೋಲಿಕ ಸಭೆಯಿಂದ ತರಬೇತಿ ಪಡೆದ ಮಧ್ಯಸ್ಥರು ಕೆಲವೊಮ್ಮೆ ತೆರಳಿ ಸೇವೆ ಸಲ್ಲಿಸುತ್ತಾರೆ. ಇಂತಹ ಕಾರ್ಯಗಳ ಮೂಲಕ ಶುಭಸಂದೇಶವು ಕೇವಲ ಪ್ರವಚನ ವೇದಿಕೆಯಿಂದ ಘೋಷಿಸಲ್ಪಡುವ ಸಂದೇಶವಾಗಿರದೆ, ಗುಣಪಡಿಸುವಿಕೆ ಮತ್ತು ಸಾಮರಸ್ಯಕ್ಕೆ ಕಾರಣವಾಗುವ ಪ್ರಾಯೋಗಿಕ ಶಕ್ತಿಯಾಗುತ್ತದೆ ಎಂದು ವಂ. ಸೀಲಾಂಡ್ ಒತ್ತಿಹೇಳಿದರು.

ಮೆಲೇನೇಶಿಯಾದ ಕಥೋಲಿಕ ಸಭೆಯ ಭವಿಷ್ಯ

ಪಾಪುವಾ ನ್ಯೂಗಿನಿಯಾದಲ್ಲಿ ಬುಡಕಟ್ಟುಗಳು ಮತ್ತು ಸಂಸ್ಕೃತಿಗಳ ಅಪಾರ ವೈವಿಧ್ಯವಿದೆ. ಆದ್ದರಿಂದ ಸ್ಥಳೀಯ ಸಂಸ್ಕೃತಿಯೊಂದಿಗೆ ಶುಭಸಂದೇಶವನ್ನು ಅರ್ಥಪೂರ್ಣವಾಗಿ ಬೆಸೆಯುವ ಸಂಸ್ಕೃತಿ ಸಮ್ಮಿಲನದ ಪಯಣ ಇನ್ನೂ ಮುಂದುವರಿಯುತ್ತಿದೆ.“ನಮ್ಮ ಜನರು ತಮ್ಮ ಭಾಷೆಗಳು, ಸಾಂಸ್ಕೃತಿಕ ಪರಂಪರೆ ಮತ್ತು ಮೌಲ್ಯಗಳನ್ನು ಸಂರಕ್ಷಿಸುವಂತೆ ಪ್ರೋತ್ಸಾಹಿಸಬೇಕು. ಅದೇ ಸಂದರ್ಭದಲ್ಲಿ ಶುಭಸಂದೇಶವನ್ನು ತಮ್ಮದೇ ಆದ ವಿಶ್ವಾಸದ ಅನುಭವವನ್ನಾಗಿ ಮಾಡಿಕೊಳ್ಳಬೇಕು,” ಎಂದು ವಂ. ಸೀಲಾಂಡ್ ಹೇಳಿದರು.ವಿಶ್ವಾಸವು ಸಮಾಜದ ಆಳದಲ್ಲಿ ಬೇರೂರಬೇಕಾದರೆ ಭೂತಕಾಲದ ಬಗ್ಗೆ ಗೌರವ ಮತ್ತು ಕೃತಜ್ಞತೆ ಅತ್ಯಗತ್ಯವೆಂದು ಅವರು ತಿಳಿಸಿದರು.

“ಪಾಪುವಾ ನ್ಯೂಗಿನಿಯಾ ತನ್ನ ರಾಷ್ಟ್ರೀಯ ಸಂತನಾದ ಸಂತ ಪೀಟರ್ ಟೊರೊಟ್ ಅವರಿಂದ ಆಶೀರ್ವದಿತವಾಗಿದೆ. ಅವರು ಈ ಏಕತೆಯ ಶಕ್ತಿಯುತ ಸಂಕೇತ,” ಎಂದು ವಂ. ಸೀಲಾಂಡ್ ಹೇಳಿದರು. ರಾಬೌಲ್ ಪ್ರದೇಶದವರಾಗಿದ್ದರೂ, ದೇಶದಾದ್ಯಂತದ ಕಥೋಲಿಕರು ಸಂತ ಪೀಟರ್ ಟೊರೊಟ್ ಅವರನ್ನು ತಮ್ಮದೇ ಸಂತನಾಗಿ ಗೌರವಿಸುತ್ತಾರೆ. ಅವರು ಧರ್ಮಬೋಧಕರಾಗಿ, ಹುತಾತ್ಮರಾಗಿ ಮತ್ತು ನಿಷ್ಠಾವಂತ ಕಥೋಲಿಕ ವಿಶ್ವಾಸಿಯಾಗಿ ಸ್ಮರಿಸಲ್ಪಡುತ್ತಾರೆ. “ನಿಜವಾದ ಸಭಾ ಐಕ್ಯತೆಯನ್ನು ನಿರ್ಮಿಸಲು ನಮಗೆ ದೊರೆತಿರುವ ಅದ್ಭುತ ಅವಕಾಶಗಳನ್ನು ಇದು ತೋರಿಸುತ್ತದೆ,” ಎಂದು ಹೇಳಿದರು.

ಬೋಗನ್‌ವಿಲ್‌ನಲ್ಲಿ 125 ವರ್ಷಗಳ ಕಥೋಲಿಕ ಉಪಸ್ಥಿತಿ ಮತ್ತು ಪಾಪುವಾ ನ್ಯೂಗಿನಿಯಾದ ಇತರ ಭಾಗಗಳಲ್ಲಿ ಒಂದು ಶತಮಾನಕ್ಕೂ ಹೆಚ್ಚಿನ ಶುಭಸಂದೇಶ ಸಾರುವ ಸೇವೆಯ ನಂತರ, ಕಥೋಲಿಕ ಸಭೆ ಇಂದು ಹೊಸ ಹಂತದ ಅಂಚಿನಲ್ಲಿ ನಿಂತಿದೆ. ಹಿಂದಿನ ಮಿಷನರಿಗಳು ಅಡಿಪಾಯವನ್ನು ಹಾಕಿದ್ದಾರೆ. ಈಗಿನ ಸ್ಥಳೀಯ ಕಥೋಲಿಕ ಸಭೆಯ ಕರ್ತವ್ಯ ಆ ಅಡಿಪಾಯದ ಮೇಲೆ ಭವಿಷ್ಯದ ಕಟ್ಟಡವನ್ನು ನಿರ್ಮಿಸುವುದಾಗಿದೆ.

ಈ ಸವಾಲು ದೊಡ್ಡದಾಗಿದೆ. ಆದರೆ ನಿರೀಕ್ಷೆಯೂ ಅಷ್ಟೇ ದೊಡ್ಡದಾಗಿದೆ. ವಿಶ್ವಾಸ, ಸಂಸ್ಕೃತಿ, ಸಾಮರಸ್ಯ ಮತ್ತು ಸ್ಥಳೀಯ ನಾಯಕತ್ವ ಪರಸ್ಪರ ಬೆಳೆದುಬಂದರೆ, ಮುಂದಿನ ಪೀಳಿಗೆಗೆ ಕೇವಲ ತನ್ನ ಇತಿಹಾಸವನ್ನು ದಾಟಿ ಉಳಿದುಕೊಂಡ ಸಭೆಯೊಂದನ್ನು ಮಾತ್ರವಲ್ಲ, ಭವಿಷ್ಯವನ್ನು ಪರಿವರ್ತಿಸುವ ಸಾಮರ್ಥ್ಯ ಹೊಂದಿರುವ ಜೀವಂತ ಸ್ಥಳೀಯ ಕಥೋಲಿಕ ಸಭೆಯೊಂದನ್ನು ಹಸ್ತಾಂತರಿಸಲು ಸಾಧ್ಯವಾಗುತ್ತದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

14 ಆಗಸ್ಟ್ 2026, 18:21