ಹುಡುಕಿ

2022ರಲ್ಲಿ ಯಾಂಗೋನ್‌ನಲ್ಲಿ ವಾಸೋ ಹುಣ್ಣಿಮೆ ಉತ್ಸವದ ಸಂದರ್ಭದಲ್ಲಿ ಶ್ವೇದಗೋನ್ ಪಗೋಡಾಕ್ಕೆ ಭೇಟಿ ನೀಡುತ್ತಿರುವ ಬೌದ್ಧ ಭಕ್ತರು (AFP ಅಥವಾ ಪರವಾನಗಿದಾರರು) 2022ರಲ್ಲಿ ಯಾಂಗೋನ್‌ನಲ್ಲಿ ವಾಸೋ ಹುಣ್ಣಿಮೆ ಉತ್ಸವದ ಸಂದರ್ಭದಲ್ಲಿ ಶ್ವೇದಗೋನ್ ಪಗೋಡಾಕ್ಕೆ ಭೇಟಿ ನೀಡುತ್ತಿರುವ ಬೌದ್ಧ ಭಕ್ತರು (AFP ಅಥವಾ ಪರವಾನಗಿದಾರರು)  (AFP or licensors)

ಅಂತರ್ಧರ್ಮೀಯ ಶಾಂತಿಗೆ ಬೌದ್ಧರ ವಾಸೋ ಆಚರಣೆಯು ಸೇತುವೆಯಾಗಬಹುದು: ಮಯನ್ಮಾರ್‌ನ ಜೆಸುಯಿಟ್ ಗುರು

ಸಂಘರ್ಷದಿಂದ ನಲುಗಿರುವ ಮಯನ್ಮಾರ್‌ನಲ್ಲಿ ಬೌದ್ಧರ ವಾಸೋ ಕಾಲವು ಕ್ರೈಸ್ತರು ಮತ್ತು ಬೌದ್ಧರಿಗೆ ಸಂವಾದ, ಕರುಣೆ ಹಾಗೂ ಸಾಮರಸ್ಯದತ್ತ ಸಾಗಲು ಹಂಚಿಕೊಂಡ ಮಾರ್ಗವನ್ನು ಒದಗಿಸಬಲ್ಲದು ಎಂದು ದೇಶದಲ್ಲಿರುವ ಯೇಸುಸಭೆಯ ಪ್ರಾದೇಶಿಕ ಮೇಲಧಿಕಾರಿ ಹೇಳಿದ್ದಾರೆ.

ಲೇಖಕರು:ಚೈನರಾಂಗ್ ಮೊಂತಿಯೆನ್‌ವಿಚಿಯೆನ್‌ಚೈ, LiCAS ನ್ಯೂಸ್

ಮಯನ್ಮಾರ್ ನಿರಂತರ ರಾಜಕೀಯ ಅಸ್ಥಿರತೆ ಮತ್ತು ಮಾನವೀಯ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಬೌದ್ಧರ ಪವಿತ್ರ ವಾಸೋ ಕಾಲವು ಅಂತರ್ಧರ್ಮೀಯ ಭೇಟಿಗೆ ಹಾಗೂ ಪರಸ್ಪರ ಶಾಂತಿ ನಿರ್ಮಾಣಕ್ಕೆ “ಅರ್ಥಪೂರ್ಣ ಸೇತುವೆ”ಯಾಗಿ ಕಾರ್ಯನಿರ್ವಹಿಸಬಲ್ಲದು ಎಂದು ವಂ. ಗುರು ಗಿರೀಶ್ ಸಾಂತಿಯಾಗೊ, ಎಸ್.ಜೆ. ಹೇಳಿದ್ದಾರೆ.

ಮಯನ್ಮಾರ್‌ನ ಯೇಸುಸಭೆಯವರು ಮತ್ತು ಅವರೊಂದಿಗೆ ಸೇವೆ ಸಲ್ಲಿಸುವ ಸಾಮಾನ್ಯ ವಿಶ್ವಾಸಿಗಳು ಆಗಸ್ಟ್ ತಿಂಗಳಲ್ಲಿ ವಾಸೋ ಆಚರಣೆಯತ್ತ ಗಮನ ಹರಿಸುತ್ತಿದ್ದಾರೆ. ಇದೇ ತಿಂಗಳು ದೇಶಾದ್ಯಂತ ಭಾರಿ ಮುಂಗಾರು ಮಳೆ ಮತ್ತು ಕೃಷಿ ಚಟುವಟಿಕೆಗಳು ಉತ್ತುಂಗದಲ್ಲಿರುವ ಕಾಲವೂ ಆಗಿದೆ.

ಆಧ್ಯಾತ್ಮಿಕ ಮುಂಗಾರು: ಮಯನ್ಮಾರ್‌ನಲ್ಲಿ ವಾಸೋ ಆಚರಣೆ

ಮಯನ್ಮಾರ್ ಪ್ರಧಾನವಾಗಿ ಥೇರವಾದ ಬೌದ್ಧ ರಾಷ್ಟ್ರವಾಗಿದ್ದು, ದೇಶದ ಸುಮಾರು ಶೇ. 87ರಷ್ಟು ಜನರು ಈ ಧರ್ಮವನ್ನು ಅನುಸರಿಸುತ್ತಾರೆ. ಆಗಸ್ಟ್ ತಿಂಗಳು ವಾಸೋ ಕಾಲದೊಳಗೆ ಬರುತ್ತದೆ. ಇದು ಮೂರು ತಿಂಗಳ ಬೌದ್ಧ ತಪಸ್ಸು ಕಾಲ ಅಥವಾ ಮಳೆಗಾಲದ ವಾಸದ ಅವಧಿಯಾಗಿದೆ.

ಈ ಪವಿತ್ರ ಅವಧಿಯಲ್ಲಿ ಸನ್ಯಾಸಿಗಳು ತಮ್ಮ ಮಠಗಳಲ್ಲಿಯೇ ಉಳಿದುಕೊಂಡು ತೀವ್ರವಾದ ಪ್ರಾರ್ಥನೆ, ಧರ್ಮಗ್ರಂಥಗಳ ಅಧ್ಯಯನ ಮತ್ತು ಧ್ಯಾನದಲ್ಲಿ ತೊಡಗುತ್ತಾರೆ. ಸಾಮಾನ್ಯ ಬೌದ್ಧ ಭಕ್ತರಿಗೆ ವಾಸೋ ಅವಧಿಯು ಆಧ್ಯಾತ್ಮಿಕ ಶಿಸ್ತನ್ನು ಗಾಢಗೊಳಿಸುವ, ಕಟ್ಟುನಿಟ್ಟಾದ ನೈತಿಕ ನಿಯಮಗಳನ್ನು ಪಾಲಿಸುವ ಮತ್ತು ಮಠಗಳ ಸಮುದಾಯಗಳಿಗೆ ವಸ್ತ್ರ, ಆಹಾರ, ಮೇಣದಬತ್ತಿಗಳು ಹಾಗೂ ಅಗತ್ಯ ಸಾಮಗ್ರಿಗಳನ್ನು ಅರ್ಪಿಸುವ ಮೂಲಕ ಉದಾರತೆಯನ್ನು ಪ್ರದರ್ಶಿಸುವ ಕಾಲವಾಗಿದೆ.

“ಮಯನ್ಮಾರ್‌ನಲ್ಲಿ ಕಳೆದ ಹತ್ತು ವರ್ಷಗಳಿಂದ ನಾನು ಬೌದ್ಧ ಸನ್ಯಾಸಿಗಳು, ಸನ್ಯಾಸಿನಿಯರು ಮತ್ತು ಸಾಮಾನ್ಯ ಭಕ್ತರಲ್ಲಿ ಇಂತಹ ಜೀವಂತ ನಂಬಿಕೆಯ ಆಚರಣೆಯನ್ನು ಕಂಡು ಆಳವಾಗಿ ಸ್ಪರ್ಶಿತನಾಗಿದ್ದೇನೆ, ವಾಸೋ ಕ್ರೈಸ್ತರ ಧರ್ಮಾಚರಣೆಯ ಕಾಲವಲ್ಲವಾದರೂ, ಅದರ ಮೂಲ ಆಧ್ಯಾತ್ಮಿಕ ಮೌಲ್ಯಗಳು ಅಂತರ್ಧರ್ಮೀಯ ಭೇಟಿಗೆ ಮತ್ತು ಪರಸ್ಪರ ತಿಳುವಳಿಕೆಗೆ ಅರ್ಥಪೂರ್ಣ ಸೇತುವೆಯನ್ನು ಒದಗಿಸುತ್ತವೆ,” ಎಂದು ವಂ. ಗುರು ಸಾಂತಿಯಾಗೊ ಹೇಳಿದರು.

ಹಂಚಿಕೊಂಡ ನಂಬಿಕೆ ಮತ್ತು ಸಂಪ್ರದಾಯದ ಆರು ಆಧಾರಸ್ತಂಭಗಳು

ಬೌದ್ಧರ ವಾಸೋ ಆಚರಣೆ ಮತ್ತು ಕಥೋಲಿಕ ಆಧ್ಯಾತ್ಮಿಕತೆಯ ನಡುವೆ ಸಾಮಾನ್ಯ ನೆಲೆಯನ್ನು ಹೊಂದಿರುವ ಆರು ವಿಷಯಗಳ ಬಗ್ಗೆ  ವಂ. ಗುರು ಸಾಂತಿಯಾಗೊ ವಿವರಿಸಿದ್ದಾರೆ.

ಮೊದಲನೆಯದಾಗಿ ಅವರು ಧ್ಯಾನ ಮತ್ತು ಪ್ರಾರ್ಥನೆಯನ್ನು ಉಲ್ಲೇಖಿಸಿದರು. ಏಕಾಂತಕ್ಕೆ ತೆರಳಿ ಧ್ಯಾನದಲ್ಲಿ ತೊಡಗುವ ಬೌದ್ಧರ ಆಧ್ಯಾತ್ಮಿಕ ಶಿಸ್ತು, ಮಾರ್ಕ 6:31ರಲ್ಲಿ ಯೇಸು ತಮ್ಮ ಶಿಷ್ಯರಿಗೆ ನೀಡಿದ ಆಹ್ವಾನವನ್ನು ನೆನಪಿಸುತ್ತದೆ ಎಂದು ಅವರು ಹೇಳಿದರು: “ನೀವೆಲ್ಲರೂ ಏಕಾಂತ ಪ್ರದೇಶಕ್ಕೆ ಬಂದು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿರಿ.” ವಾಸೋದ ಆಧ್ಯಾತ್ಮಿಕ ಶಿಸ್ತು ಮತ್ತು ಕಥೋಲಿಕರ ತಪಸ್ಸು ಕಾಲದ ನಡುವೆ ಕೂಡ ಅವರು ಸಾಮ್ಯವನ್ನು ತೋರಿಸಿದರು. ಎರಡೂ ಪ್ರಾರ್ಥನೆ, ಪಶ್ಚಾತ್ತಾಪ, ಆತ್ಮನಿಗ್ರಹ ಮತ್ತು ದಾನಧರ್ಮಕ್ಕೆ ಮಹತ್ವ ನೀಡುತ್ತವೆ.

ಮೆತ್ತಾ, ಅಂದರೆ ಪ್ರೀತಿಪೂರ್ವಕ ದಯೆ, ಮತ್ತು ಕರುಣೆ ಎಂಬ ಬೌದ್ಧ ಬೋಧನೆಗಳು ದೇವರನ್ನು ಮತ್ತು ನೆರೆಯವರನ್ನು ಪ್ರೀತಿಸಬೇಕೆಂಬ ಕ್ರೈಸ್ತ ಆಜ್ಞೆಯೊಂದಿಗೆ ಸಾಮ್ಯ ಹೊಂದಿವೆ ಎಂದು ಹೇಳಿದರು. ವಾಸೋ ಆಚರಣೆಯು ಎರಡೂ ಸಮುದಾಯಗಳನ್ನು, “ನಮ್ಮ ಸುತ್ತಲೂ ಯಾರು ಸಂಕಷ್ಟದಲ್ಲಿದ್ದಾರೆ ಮತ್ತು ಅವರಿಗೆ ಸೇವೆ ಸಲ್ಲಿಸಲು ನಮ್ಮ ನಂಬಿಕೆ ನಮ್ಮನ್ನು ಹೇಗೆ ಪ್ರೇರೇಪಿಸಬಹುದು?” ಎಂಬ ಪ್ರಶ್ನೆಯನ್ನು ಕೇಳುವಂತೆ ಮಾಡುತ್ತದೆ.

ಅಹಿಂಸೆ ಮತ್ತು ಸಾಮರಸ್ಯದ ಕುರಿತು ವಂ. ಗುರು ಸಾಂತಿಯಾಗೊ  ಎರಡೂ ಧಾರ್ಮಿಕ ಸಂಪ್ರದಾಯಗಳು ಮಾನವ ಘನತೆಯನ್ನು ಎತ್ತಿಹಿಡಿಯುತ್ತವೆ, ದ್ವೇಷವನ್ನು ತಿರಸ್ಕರಿಸುತ್ತವೆ ಮತ್ತು ಕ್ಷಮೆ, ಶಾಂತಿ ಹಾಗೂ ದುರ್ಬಲರ ರಕ್ಷಣೆಯನ್ನು ಉತ್ತೇಜಿಸುತ್ತವೆ ಎಂದು  ಹೇಳಿದರು.

ಎರಡೂ ನಂಬಿಕೆಯ ಸಂಪ್ರದಾಯಗಳಲ್ಲಿ ಸರಳತೆ ಮತ್ತು ಅನಾಸಕ್ತಿಗೂ ಮಹತ್ವವಿದೆ ಎಂದು ಅವರು ತಿಳಿಸಿದರು. ಇವು ಗ್ರಾಹಕವಾದ ಮತ್ತು ಸ್ವಕೇಂದ್ರಿತ ಮನೋಭಾವಕ್ಕೆ ಸವಾಲೊಡ್ಡುತ್ತವೆ ಹಾಗೂ ಹೆಚ್ಚು ಕರುಣಾಮಯರಾಗುವುದಕ್ಕೆ ನಮ್ಮನ್ನು ತಡೆಯುತ್ತಿರುವ ಸಂಗತಿಗಳನ್ನು ಪರಿಶೀಲಿಸುವಂತೆ ವಿಶ್ವಾಸಿಗಳನ್ನು ಪ್ರೇರೇಪಿಸುತ್ತವೆ. ಅಂತರ್ಧರ್ಮೀಯ ಸ್ನೇಹವೂ ಮತ್ತೊಂದು ಸಾಮಾನ್ಯ ಕ್ಷೇತ್ರವಾಗಿದೆ.ವಾಸೋ ಕಾಲವು ಗೌರವಪೂರ್ವಕ ಸಂವಾದ, ಧರ್ಮಶಾಸ್ತ್ರೀಯ ಚಿಂತನೆ ಮತ್ತು ಜಂಟಿ ಮಾನವೀಯ ಸೇವೆಗೆ ಅವಕಾಶಗಳನ್ನು ಒದಗಿಸುತ್ತದೆ ಎಂದು ತಿಳಿಸಿದರು.

ಸಾಮರಸ್ಯ ಮತ್ತು ನಿರೀಕ್ಷೆಯ ದೃಷ್ಟಿಕೋನ

ವಂ. ಗುರು ಸಾಂತಿಯಾಗೊ ಅವರು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ Magnifica humanitas (ಭವ್ಯ ಮಾನವತೆ) ಎಂಬ ವಿಶ್ವಪತ್ರಿಕೆಯನ್ನೂ ಉಲ್ಲೇಖಿಸಿದರು. ನಿಜವಾದ ಅಂತರ್ಧರ್ಮೀಯ ಸಂವಾದವು ಧರ್ಮಶಾಸ್ತ್ರೀಯ ಭಿನ್ನತೆಗಳನ್ನು ಗೌರವಿಸುವುದರ ಜೊತೆಗೆ, ಸಾಮಾನ್ಯ ಹಿತವನ್ನು ಮುನ್ನಡೆಸಬಲ್ಲ ಹಂಚಿಕೊಂಡ ಮಾನವೀಯ ಮೌಲ್ಯಗಳನ್ನು ಗುರುತಿಸುತ್ತದೆ ಎಂದು ಅವರು ಒತ್ತಿಹೇಳಿದರು.

ಮುಂಗಾರು ಮಳೆಯು ಮಯನ್ಮಾರ್‌ನ ಕೃಷಿ ಭೂಮಿಗಳನ್ನು ತೋಯಿಸುತ್ತಿರುವ ಸಂದರ್ಭದಲ್ಲಿ, ಆ ಕಾಲಕ್ಕೆ ಸಂಬಂಧಿಸಿದ ಆಧ್ಯಾತ್ಮಿಕ ಆಚರಣೆಗಳು ಆಳವಾದ ಸಂಕಷ್ಟವನ್ನು ಎದುರಿಸುತ್ತಿರುವ ದೇಶದ ಗಾಯಗಳನ್ನು ಗುಣಪಡಿಸಲು ನೆರವಾಗಬಹುದು ಎಂಬ ನಿರೀಕ್ಷೆಯನ್ನು ಯೇಸುಸಭೆಯ ಪ್ರಾದೇಶಿಕ ಮೇಲಧಿಕಾರಿ ವ್ಯಕ್ತಪಡಿಸಿದರು.

“ಮಳೆಯು ಹೊಲಗಳಿಗೆ ಪೋಷಣೆಯನ್ನು ನೀಡುವಂತೆ, ನಂಬಿಕೆಯ ಜನರು ಶಾಂತಿಗಾಗಿ ಪ್ರಾರ್ಥಿಸುವುದನ್ನೂ ಶ್ರಮಿಸುವುದನ್ನೂ ಮುಂದುವರಿಸಬೇಕು. ಈ ಹಂಚಿಕೊಂಡ ಶಾಂತ ಪ್ರಾರ್ಥನೆ, ಉದಾರತೆ ಮತ್ತು ಕರುಣೆಯ ಪ್ರಯತ್ನವು ಮಯನ್ಮಾರ್‌ನಾದ್ಯಂತ ಸಾಮರಸ್ಯಕ್ಕಾಗಿ ಸಮೃದ್ಧ ಫಲವನ್ನು ನೀಡಲಿ,” ಎಂದು ವಂ. ಗುರು ಸಾಂತಿಯಾಗೊ ಹೇಳಿದರು.

ಈ ಲೇಖನವನ್ನು ಮೂಲತಃ LiCAS News ಪ್ರಕಟಿಸಿದೆ. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಮೂರನೇ ವ್ಯಕ್ತಿಗಳಿಂದ ಅನುಮತಿಯಿಲ್ಲದೆ ಮರುಪ್ರಕಟಿಸುವುದನ್ನು ಅನುಮತಿಸಲಾಗುವುದಿಲ್ಲ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

13 ಆಗಸ್ಟ್ 2026, 16:07