ಧೈರ್ಯದಿಂದ ದೈವಕರೆಯನ್ನು ಸ್ವೀಕರಿಸಲು ಮೆಕ್ಸಿಕೊ ಯುವಜನರಿಗೆ ಕರೆ
ಲೇಖಕರು: ಸಹೋದರಿ ಕ್ರಿಸ್ಟಿನ್ ಮಸಿವೋ, CPS
ಮೆಕ್ಸಿಕೊದ ಸಾನ್ ಲೂಯಿಸ್ ಪೊಟೊಸಿ ಮಹಾಧರ್ಮಕ್ಷೇತ್ರವು ಜುಲೈ 23ರಿಂದ 26ರವರೆಗೆ 15ನೇ ರಾಷ್ಟ್ರೀಯ ಮಿಷನರಿ ಯುವಜನ ಸಮ್ಮೇಳನವನ್ನು (CONAJUM) ಆಯೋಜಿಸಿತ್ತು. ಮೆಕ್ಸಿಕೊದ ಪೋಪರ ಮಿಷನರಿ ಸಂಸ್ಥೆಗಳು (PMS) ಮಹಾಧರ್ಮಕ್ಷೇತ್ರದ ಸಹಯೋಗದೊಂದಿಗೆ ಈ ಸಮ್ಮೇಳನವನ್ನು ಆಯೋಜಿಸಿದ್ದವು.
“ನಿರೀಕ್ಷೆಯ ಚಿಹ್ನೆಯಾದ ಕನ್ಯಾ ಮಾತೆಯೊಂದಿಗೆ, ಸೇವೆಯ ಮೂಲಕ ಭರವಸೆಯ ವಾಹಕರಾಗುವ ಯುವಜನರು!” ಎಂಬ ಧ್ಯೇಯದಡಿ ದೇಶದ ವಿವಿಧ ಧರ್ಮಕ್ಷೇತ್ರಗಳಿಂದ 6,000ಕ್ಕೂ ಹೆಚ್ಚು ಯುವಜನರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಆರಾಮದ ಮಿತಿಗಳನ್ನು ಮೀರಿದ ಸೇವೆ
ನಾಲ್ಕು ದಿನಗಳ ಸಮ್ಮೇಳನವು ಪ್ರಾರ್ಥನೆ, ತರಬೇತಿ, ಸೇವಾ ಅನುಭವ ಮತ್ತು ಶುಭಸಂದೇಶ ಪ್ರಚಾರಕ್ಕಾಗಿ ನವೀಕೃತ ಬದ್ಧತೆಯ ಮೂಲಕ ಯುವಜನರನ್ನು ಬಲಪಡಿಸಿತು. ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಜಗತ್ತಿನ ಸೇವೆಗೂ ವಿಶೇಷ ಗಮನ ನೀಡಲಾಯಿತು. ಶುಭಸಂದೇಶ ಪ್ರಚಾರ ವಿಭಾಗದ ‘ಮೊದಲ ಶುಭಸಂದೇಶ ಪ್ರಚಾರ ಮತ್ತು ಹೊಸ ಸ್ಥಳೀಯ ಧರ್ಮಸಭೆಗಳ ವಿಭಾಗ’ದ ಕಾರ್ಯದರ್ಶಿ ಮಹಾಧರ್ಮಾಧ್ಯಕ್ಷ ಫಾರ್ಚುನಾಟಸ್ ನ್ವಾಚುಕ್ವು, ಕ್ರಿಸ್ತರ ಸೇವಾ ಆದೇಶಕ್ಕೆ ಪೂರ್ಣ ಹೃದಯದಿಂದ ಸ್ಪಂದಿಸುವಂತೆ ಯುವಜನರಿಗೆ ಕರೆ ನೀಡಿದರು. “ಲೋಕದ ಎಲ್ಲೆಡೆ ಹೋಗಿ, ಸಕಲ ಸೃಷ್ಟಿಗೆ ಶುಭಸಂದೇಶವನ್ನು ಸಾರಿರಿ” ಎಂಬ ಕ್ರಿಸ್ತರ ಆದೇಶದಿಂದ ಪ್ರೇರಣೆ ಪಡೆದ ಅವರು, ಎಲ್ಲ ಕ್ರೈಸ್ತರೂ ಪ್ರತಿಯೊಬ್ಬರಿಗೂ ನೇರವಾಗಿಯೂ ಡಿಜಿಟಲ್ ಜಗತ್ತಿನಲ್ಲಿಯೂ ಶುಭಸಂದೇಶವನ್ನು ಸಾರಲು ಕರೆಯಲ್ಪಟ್ಟಿದ್ದಾರೆ ಎಂದು ನೆನಪಿಸಿದರು.
ಆಳಕ್ಕೆ ಬಲೆ ಬೀಸಲು ಕರೆ
ಗಲಿಲಾಯ ಸಮುದ್ರದಲ್ಲಿದ್ದ ಶಿಷ್ಯರಂತೆ ತಮಗೆ ಪರಿಚಿತವಾದ ಪರಿಸರದ ಮಿತಿಗಳನ್ನು ಮೀರಿ ಸಾಗುವಂತೆ ಮಹಾಧರ್ಮಾಧ್ಯಕ್ಷರು ಯುವಜನರನ್ನು ಪ್ರೋತ್ಸಾಹಿಸಿದರು. “ನಿಮ್ಮನ್ನು ಕಳುಹಿಸಿರುವುದು ಸಣ್ಣದಾದ, ಸುರಕ್ಷಿತವಾದ, ಊಹಿಸಬಹುದಾದ ಮತ್ತು ನಿಯಂತ್ರಿತವಾದ ಗಾಜಿನ ತೊಟ್ಟಿಯೊಳಗೆ ಅಲ್ಲ; ಬದಲಾಗಿ ವಿಶಾಲವಾದ, ಆಳವಾದ ಮತ್ತು ಕೆಲವೊಮ್ಮೆ ಬಿರುಗಾಳಿಯಿಂದ ಕೂಡಿರುವ ತೆರೆದ ಸಮುದ್ರಕ್ಕೆ, ಪ್ರತಿಯೊಂದು ಮಾನವ ಹೃದಯವೂ ದೇವರ ಸೇವೆಯ ವಿಶಾಲ ದಿಗಂತಗಳಿಗಾಗಿ ಸೃಷ್ಟಿಸಲ್ಪಟ್ಟಿದೆ” ಎಂದು ಅವರು ಒತ್ತಿಹೇಳಿದರು.
ಅವರ ಸೇವೆಯ ಕರೆ ದೀಕ್ಷಾಸ್ನಾನದಲ್ಲಿಯೇ ಆರಂಭವಾಯಿತು ಎಂಬುದನ್ನು ನೆನಪಿಸಿದ ಅವರು, ಯುವಜನರು ಈಗಾಗಲೇ ಕಳುಹಿಸಲ್ಪಟ್ಟಿದ್ದಾರೆ ಮತ್ತು ಅವರಿಗೆ ಒಂದು ಸೇವೆಯನ್ನು ವಹಿಸಲಾಗಿದೆ: ಕ್ರಿಸ್ತರನ್ನು ಇತರರಿಗೆ ಪರಿಚಯಿಸುವುದು, ಅವರನ್ನು ಪ್ರೀತಿಸುವುದು ಮತ್ತು ಅವರನ್ನು ಅನುಸರಿಸುವುದು ಎಂದು ಹೇಳಿದರು. ದೇವರಲ್ಲಿ ಭರವಸೆಯಿಟ್ಟು, ತಾವು ಎಲ್ಲಿದ್ದರೂ ಧೈರ್ಯದಿಂದ ಶುಭಸಂದೇಶವನ್ನು ಸಾರುವಂತೆ ಅವರ ಸಂದೇಶ ಯುವಜನರಿಗೆ ಕರೆ ನೀಡಿತು.
ಸೇವೆಯ ಹೃದಯ
ಯುವಜನರು ಬೆಳೆಸಿಕೊಳ್ಳಬೇಕಾದ ಸೇವೆಯ ಮೂರು ಅಗತ್ಯ ಗುಣಗಳನ್ನು ಅಳವಡಿಸಿಕೊಳ್ಳುವಂತೆ ಮಹಾಧರ್ಮಾಧ್ಯಕ್ಷ ನ್ವಾಚುಕ್ವು ಪ್ರೋತ್ಸಾಹಿಸಿದರು. ಮೊದಲನೆಯದು ತ್ಯಾಗದ ಮನೋಭಾವ: ಕ್ರಿಸ್ತರೊಂದಿಗೆ ಇನ್ನಷ್ಟು ಆಳವಾದ ಬದ್ಧತೆಗೆ ಅಡ್ಡಿಯಾಗುವ ಎಲ್ಲವನ್ನೂ ಬಿಟ್ಟುಬಿಡುವ ಸಿದ್ಧತೆ. ಎರಡನೆಯದು ಮುಖಾಮುಖಿ: ನಿಜವಾದ ಶುಭಸಂದೇಶ ಪ್ರಚಾರ ಕೇವಲ ವಿಚಾರಗಳನ್ನು ತಿಳಿಸುವುದರಿಂದಲ್ಲ, ನೈಜ ಮಾನವ ಸಂಬಂಧಗಳಿಂದ ಆರಂಭವಾಗುತ್ತದೆ ಎಂಬ ಅರಿವು. ಕೊನೆಯದಾಗಿ, ಮಹಾಧರ್ಮಾಧ್ಯಕ್ಷರು ಶಿಲುಬೆಯನ್ನು ಸ್ವೀಕರಿಸುವುದರ ಕುರಿತು ಮಾತನಾಡಿದರು. ಸೇವಾ ಕಾರ್ಯವು ಅನೇಕ ಬಾರಿ ತ್ಯಾಗ, ದೃಢತೆ ಮತ್ತು ತಕ್ಷಣದ ಫಲಿತಾಂಶಗಳು ಕಾಣಿಸದಿದ್ದರೂ ನಿಷ್ಠೆಯನ್ನು ಬೇಡುತ್ತದೆ ಎಂದು ಅವರು ತಿಳಿಸಿದರು.
ತಮ್ಮ ಭಾಷಣದ ಅಂತ್ಯದಲ್ಲಿ, ಸೇವೆಯ ಸವಾಲುಗಳಿಗೆ ಭಯಪಡಬಾರದು ಎಂದು ಅವರು ಯುವಜನರಿಗೆ ಕರೆ ನೀಡಿದರು. “ಮಾನವತೆಯ ಸಮುದ್ರ ವಿಶಾಲವಾಗಿದೆ. ಜಗತ್ತಿಗೆ ಸೇವೆ ಮಾಡುವವರ ಅಗತ್ಯವಿದೆ. ಧರ್ಮಸಭೆಗೆ ನಿಮ್ಮ ಅಗತ್ಯವಿದೆ. ಕ್ರಿಸ್ತರು ನಿಮ್ಮನ್ನು ಕರೆಯುತ್ತಿದ್ದಾರೆ.” ಕೊನೆಯಲ್ಲಿ ಅವರು ವೈಯಕ್ತಿಕ ಸವಾಲೊಂದನ್ನು ಮುಂದಿಟ್ಟರು: “ಕ್ರಿಸ್ತರ ಮುಖವನ್ನು ಇತರರಿಗೆ ತೋರಿಸಲು ನಿಮ್ಮ ಜೀವನದ ಯಾವುದನ್ನಾದರೂ ತ್ಯಾಗ ಮಾಡಲು ನೀವು ಸಿದ್ಧರಿದ್ದೀರಾ?”
ಇಂದಿನ ಕಾಲದ ಶಿಷ್ಯರಾಗುವುದು
ಧರ್ಮಸಭೆಯ ಸೇವಾ ಕಾರ್ಯದ ನಿರಂತರತೆಯನ್ನು ಆಚರಿಸುತ್ತಲೇ, ಭವಿಷ್ಯದತ್ತ ವಿಶ್ವಾಸದಿಂದ ನೋಡುವ ಸಂದರ್ಭವಾಗಿ ಈ ಸಮ್ಮೇಳನ ನಡೆಯಿತು. ವಿಶ್ವ ಮಿಷನ್ ಭಾನುವಾರದ ಶತಮಾನೋತ್ಸವ ಮತ್ತು ಮೆಕ್ಸಿಕನ್ ಯುವ ಮಿಷನರಿ ಲೀಗ್‌ನ 75ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಸಮಾವೇಶ ನಡೆಯಿತು. 15ನೇ ರಾಷ್ಟ್ರೀಯ ಮಿಷನರಿ ಯುವಜನ ಸಮ್ಮೇಳನವು ಯುವ ಮಿಷನರಿ ಶಿಷ್ಯರನ್ನು ರೂಪಿಸುವ ಧರ್ಮಸಭೆಯ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿತು.
ಮೆಕ್ಸಿಕೊದ ಜಗದ್ಗುರುಗಳ ಮಿಷನರಿ ಸಂಸ್ಥೆಗಳ ರಾಷ್ಟ್ರೀಯ ನಿರ್ದೇಶಕ ಆಂಟೋನಿಯೊ ಡೆ ಜೆಸೂಸ್ ಮಸ್ಕೊರೊ ಟ್ರಿಸ್ಟಾನ್, MG, 1982ರಿಂದ ಇಂತಹ ಕಾರ್ಯಕ್ರಮಗಳು ಸಮ್ಮೇಳನಗಳು, ಸಾಕ್ಷ್ಯಗಳು, ಪವಿತ್ರಬಲಿಪೂಜೆಗಳು, ಪ್ರಾರ್ಥನೆ ಮತ್ತು ಸಹವಾಸದ ಸಮೃದ್ಧ ಕಾರ್ಯಕ್ರಮಗಳ ಮೂಲಕ ಸೇವಾ ತರಬೇತಿಯನ್ನು ರೂಪಿಸುತ್ತಿವೆ ಎಂದು ತಿಳಿಸಿದರು.
ಈ ವರ್ಷದ ಸಮ್ಮೇಳನದ ಪ್ರಮುಖ ಅಂಶಗಳಲ್ಲಿ ಡಿಜಿಟಲ್ ಶುಭಸಂದೇಶ ಪ್ರಚಾರದ ಮೇಲಿನ ಗಮನವೂ ಒಂದಾಗಿತ್ತು. ಕಥೋಲಿಕ ಕಂಟೆಂಟ್ ಕ್ರಿಯೇಟರ್‌ಗಳು ಸಾಮಾಜಿಕ ಮಾಧ್ಯಮವು ಶುಭಸಂದೇಶದ ಸಾರುವ ವೇದಿಕೆಯಾಗಿ ಹೇಗೆ ರೂಪುಗೊಳ್ಳಬಹುದು ಎಂಬುದನ್ನು ಹಂಚಿಕೊಂಡರು.
ಮೆರವಣಿಗೆ ಮತ್ತು ಮೆಕ್ಸಿಕೊದ ಪ್ರೇಷಿತ ರಾಯಭಾರಿ ಮಹಾಧರ್ಮಾಧ್ಯಕ್ಷ ಜೋಸೆಫ್ ಸ್ಪಿಟೇರಿ ಅವರ ನೇತೃತ್ವದ ಸಮಾರೋಪ ಪವಿತ್ರ ಬಲಿಪೂಜೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಅವರು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಆಶೀರ್ವಾದವನ್ನು ಭಾಗವಹಿಸಿದವರಿಗೆ ತಿಳಿಸಿದರು.ಭಾಗವಹಿಸಿದವರು ಕೇವಲ ಒಂದು ಸಮ್ಮೇಳನದಲ್ಲಿ ಪಾಲ್ಗೊಂಡವರಾಗಿ ಅಲ್ಲ, ಬದಲಾಗಿ ಶಿಷ್ಯರಾಗಿ ತಮ್ಮ ಸಮುದಾಯಗಳಿಗೆ ಮರಳಿ, ಶುಭಸಂದೇಶದ ಭರವಸೆ ಮತ್ತು ಆನಂದವನ್ನು ಹಂಚಿಕೊಳ್ಳುವ ನವೀಕೃತ ಬದ್ಧತೆಯೊಂದಿಗೆ ಅಲ್ಲಿಂದ ತೆರಳಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).