SIGNIS ವಿಶ್ವ ಕಾಂಗ್ರೆಸ್ 2026: ಸಂವಹನ ಮತ್ತು ಶುಭಸಂದೇಶ ಪ್ರಚಾರದ ಸಾಧನವಾಗಿ ಮಾಧ್ಯಮಗಳ ಮಹತ್ವ
ಲೇಖಕರು: ಸಹೋದರಿ ಏಂಜೆಲ್ಲಾ ರ್ವೆಝೌಲಾ, ಸಹೋದರಿ ಅರ್ನೆಸ್ಟಿನಾ ಪ್ಯಾಟ್ರಿಕ್ ಲಾಸ್ವೇ, ಸಹೋದರಿ ಮಿಶೆಲ್ ಎನ್‌ಜೇರಿ – ಕಿಗಾಲಿ, ರುವಾಂಡಾ
ರುವಾಂಡಾದ ಕಿಗಾಲಿಯಲ್ಲಿ “ಸಾಂಸ್ಕೃತಿಕ ಸಾಮರಸ್ಯ ಮತ್ತು ಪರಿಸರ ಯೋಗಕ್ಷೇಮಕ್ಕಾಗಿ ಡಿಜಿಟಲ್ ಸಂವಹನ” ಎಂಬ ವಿಷಯದಡಿ SIGNIS(ವಿಶ್ವ ಕಥೋಲಿಕ ಸಂವಹನ ಸಂಸ್ಥೆ) ವಿಶ್ವ ಕಾಂಗ್ರೆಸ್ ನಡೆಯುತ್ತಿದೆ. ಆಗಸ್ಟ್ 4ರಂದು ವಿವಿಧ ಐಕ್ಯತಾ ಸಂದೇಶಗಳೊಂದಿಗೆ ಕಾಂಗ್ರೆಸ್‌ಗೆ ಚಾಲನೆ ನೀಡಲಾಯಿತು. ವ್ಯಾಟಿಕನ್ ರಾಷ್ಟ್ರ ಕಾರ್ಯದರ್ಶಿ ಪ್ರಧಾನ ಗುರು ಪಿಯೆತ್ರೊ ಪರೋಲಿನ್ ಸಹಿ ಮಾಡಿರುವ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಸಂದೇಶವನ್ನೂ ಈ ಸಂದರ್ಭದಲ್ಲಿ ರುವಾಂಡಾದ ಪ್ರೇಷಿತ ರಾಯಭಾರಿ ಮಹಾಧರ್ಮಾಧ್ಯಕ್ಷ ಅರ್ನಾಲ್ಡೊ ಎಸ್. ಕ್ಯಾಟಲಾನ್ ಮಂಡಿಸಿದರು.
ತಮ್ಮ ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ವಿಶ್ವಪತ್ರಿಕೆಯನ್ನು ಉಲ್ಲೇಖಿಸಿದ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ, “ಆನ್‌ಲೈನ್ ಸಂವಹನವು ಕೇವಲ ಮಾಹಿತಿಯ ಪ್ರಸಾರವಲ್ಲ; ಅದು ಒಂದು ಸಂಸ್ಕೃತಿಯ ನಿರ್ಮಾಣವೂ ಆಗಿದೆ. ಏಕೆಂದರೆ ಜನರು ಜಗತ್ತನ್ನು ಗ್ರಹಿಸುವ ವಿಧಾನವನ್ನು ರೂಪಿಸುವ ಶಕ್ತಿ ಅದಕ್ಕಿದ್ದು, ಆ ಮೂಲಕ ಸಾಮೂಹಿಕ ಪ್ರಜ್ಞೆಯ ಮೇಲೆ ಆಳವಾದ ಪ್ರಭಾವ ಬೀರುತ್ತದೆ” ಎಂದು ಹೇಳಿದರು.
ಸಾಮರಸ್ಯ, ರಾಷ್ಟ್ರೀಯ ಏಕತೆ ಮತ್ತು ಐಕ್ಯತೆಯ ಉತ್ತೇಜನ
ತಮ್ಮ ಭಾಷಣದಲ್ಲಿ ಕಿಗಾಲಿಯ ಮಹಾಧರ್ಮಾಧ್ಯಕ್ಷರು ಹಾಗೂ ರುವಾಂಡಾ ಧರ್ಮಾಧ್ಯಕ್ಷರ ಸಮ್ಮೇಳನದ ಅಧ್ಯಕ್ಷರಾದ ಪ್ರಧಾನ ಗುರು ಆಂಟೋಯಿನ್ ಕಂಬಾಂಡಾ ಅವರು ಕಾಂಗ್ರೆಸ್‌ನ ವಿಷಯವನ್ನು ಉಲ್ಲೇಖಿಸಿ, ಸಂವಹನ ಮತ್ತು ಶುಭಸಂದೇಶ ಪ್ರಚಾರದ ಸಾಧನವಾಗಿ ಮಾಧ್ಯಮಗಳ ಮಹತ್ವವನ್ನು ವಿವರಿಸಿದರು. ಗುಣಪಡಿಸುವಿಕೆ, ಸಾಮರಸ್ಯ, ರಾಷ್ಟ್ರೀಯ ಏಕತೆ ಮತ್ತು ಐಕ್ಯತೆಯನ್ನು ಉತ್ತೇಜಿಸುವ ಸಾಧನವಾಗಿ ಮಾಧ್ಯಮಗಳನ್ನು ಬಳಸಬೇಕಾದ ಅಗತ್ಯವನ್ನು ಅವರು ಒತ್ತಿಹೇಳಿದರು.
1994ರ ರುವಾಂಡಾ ನರಮೇಧದಿಂದ ಕಲಿಯಬೇಕಾದ ಪಾಠವನ್ನು ನೆನಪಿಸಿದ ಅವರು, ಆ ಸಂದರ್ಭದಲ್ಲಿ ದೇಶದಲ್ಲಿ ಮಾಧ್ಯಮಗಳ ತಪ್ಪಾದ ಬಳಕೆಯು ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಲು ಕಾರಣವಾಗಿದ್ದನ್ನು ಸೂಚಿಸಿದರು. ಮಾಧ್ಯಮಗಳ ದುರ್ಬಳಕೆಯಿಂದ ಉಂಟಾಗಬಹುದಾದ ಸವಾಲುಗಳು ಮತ್ತು ಹಾನಿಗಳ ಕುರಿತು ಅವಲೋಕನ ನಡೆಸಲು ಕಾಂಗ್ರೆಸ್‌ನ ಸಮಯವನ್ನು ಬಳಸಿಕೊಳ್ಳುವಂತೆ ಅವರು ಭಾಗವಹಿಸುವವರಿಗೆ ಕರೆ ನೀಡಿದರು.
ಸಂಬಂಧಗಳು ಮತ್ತು ಐಕ್ಯತೆಯ ತಾಣ
ಸಂವಹನ ವಿಭಾಗದ ಮುಖ್ಯಸ್ಥ ಪಾವೊಲೊ ರುಫ್ಫಿನಿ ತಮ್ಮ ಸಂದೇಶದಲ್ಲಿ ಡಿಜಿಟಲ್ ಜಗತ್ತಿನಲ್ಲಿ ಮುಖಾಮುಖಿ ಭೇಟಿಯ ಮಹತ್ವವನ್ನು, “ಈ ರೀತಿಯ ಮುಖಾಮುಖಿ ಸಮಾವೇಶಗಳು ನಮ್ಮ ಡಿಜಿಟಲ್ ಜಗತ್ತು ಆಗಾಗ ಮರೆತುಬಿಡುವ ಒಂದು ಸತ್ಯವನ್ನು ನೆನಪಿಸುತ್ತವೆ: ಸಂವಹನವು ತಂತ್ರಜ್ಞಾನದಿಂದ ಆರಂಭವಾಗುವುದಿಲ್ಲ, ಅದು ಜನರಿಂದ ಆರಂಭವಾಗುತ್ತದೆ” ಎಂದು ವಿವರಿಸಿದರು. “SIGNIS ಒಂದು ಧರ್ಮಸಭಾ ಆಡಳಿತ ವ್ಯವಸ್ಥೆಯಾಗಿರಬಾರದು. ಬದಲಾಗಿ ಅದು ಒಂದೇ ವಿಶ್ವಾಸವನ್ನು ಹಂಚಿಕೊಳ್ಳುವ ಜನರ ಮತ್ತು ವೃತ್ತಿಪರರ ಜಾಲವಾಗಿರಬೇಕು. ಪರಸ್ಪರ ವಿಶ್ವಾಸದ ಸಂಬಂಧಗಳು ರೂಪುಗೊಳ್ಳುವ, ಸತ್ಯವಾದ ಮಾಹಿತಿಯನ್ನು ಹಂಚಿಕೊಳ್ಳುವ ಮತ್ತು ಉತ್ತಮ ಯೋಜನೆಗಳನ್ನು ರೂಪಿಸುವ ತಾಣವಾಗಬೇಕು” ಎಂದು ಅವರು ಹೇಳಿದರು.
ಐಕ್ಯತೆಗಾಗಿ ಸಂವಹನದ ಅಗತ್ಯ
SIGNIS ವಿಶ್ವ ಅಧ್ಯಕ್ಷೆ ಹೆಲೆನ್ ಒಸ್ಮಾನ್ ಅವರು SIGNISನೊಂದಿಗೆ ನಿರಂತರವಾಗಿ ಸಹಕರಿಸುತ್ತಿರುವ ಸಂವಹನ ವಿಭಾಗಕ್ಕೆ ಕೃತಜ್ಞತೆ ಸಲ್ಲಿಸಿದರು. ಸಿನೊಡಾಲಿಟಿಯ ಮನೋಭಾವದಲ್ಲಿ ಪರಸ್ಪರ ಸಹಕಾರಕ್ಕೆ ಕರೆ ನೀಡಿದ ಅವರು, “ಜಾಗತಿಕ ಒತ್ತಡಗಳ ನಡುವೆ ಕ್ರೈಸ್ತ ಐಕ್ಯತೆ ಮತ್ತು ಏಕತೆಯನ್ನು ಬೆಳೆಸುವ ಬಲವಾದ ಸಂವಹನ ಜಾಲ ನಮಗೆ ಅಗತ್ಯವಾಗಿದೆ” ಎಂದು ಹೇಳಿದರು.
SIGNISನ ಫಲಗಳು
SIGNIS ಆಫ್ರಿಕಾದ ಅಧ್ಯಕ್ಷ ವಂದನೀಯ ಗುರು ವಾಲ್ಟರ್ ಇಹೆಜಿರಿಕಾ ಅವರು, ಗುರುಗಳು, ಧಾರ್ಮಿಕ ಸಹೋದರಿಯರು ಮತ್ತು ಸಾಮಾನ್ಯ ವಿಶ್ವಾಸಿಗಳನ್ನು ಸಹಕಾರದ ಮನೋಭಾವದಲ್ಲಿ ಒಂದೆಡೆ ಸೇರಿಸುವ ಸಾಮರ್ಥ್ಯವೇ SIGNIS ಆಫ್ರಿಕಾದ ಪ್ರಮುಖ ಶಕ್ತಿಯಾಗಿದೆ ಎಂದು ತಿಳಿಸಿದರು. ಈ ಸಹಕಾರದ ಜಾಲವು ಸಂಸ್ಥೆಯ ಸಾಧನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು. ಸಾಮಾನ್ಯ ವಿಶ್ವಾಸಿಗಳು, ಕುಟುಂಬ ಮತ್ತು ಜೀವನ ವಿಭಾಗ, ಸಂವಹನ ವಿಭಾಗ ಮತ್ತು ಶುಭಸಂದೇಶ ಪ್ರಚಾರ ವಿಭಾಗಗಳಿಗೆ ಹಾಗೂ ಆಫ್ರಿಕಾ ಮತ್ತು ಮಡಗಾಸ್ಕರ್ ಧರ್ಮಾಧ್ಯಕ್ಷರ ಸಮ್ಮೇಳನಗಳ ಒಕ್ಕೂಟಕ್ಕೆ (SECAM) ಅವರು ಕೃತಜ್ಞತೆ ಸಲ್ಲಿಸಿದರು. ಅವರ ಬದ್ಧತೆಯನ್ನು ಶ್ಲಾಘಿಸಿದ ಅವರು, ಈ ಸಮಾವೇಶದಲ್ಲಿ ಭಾಗವಹಿಸುವವರ ಉಪಸ್ಥಿತಿಯು ದೇವಜನರಾಗಿ ಒಟ್ಟಾಗಿ ನಡೆಯುವ ಸಿನೊಡಲ್ ಮನೋಭಾವದ ಸ್ಪಷ್ಟ ಸಂಕೇತವಾಗಿದೆ ಎಂದು ಹೇಳಿದರು.
ತಮ್ಮ ಭಾಷಣದಲ್ಲಿ ವಂದನೀಯ ಗುರು ಇಹೆಜಿರಿಕಾ ಅವರು ಕಥೋಲಿಕ ಮಾಧ್ಯಮ ಸಂಸ್ಥೆಗಳು ಮತ್ತು ಧರ್ಮಸಭೆಯ ಸಂವಹನ ಕಚೇರಿಗಳ ನಡುವೆ ಇನ್ನಷ್ಟು ಬಲವಾದ ಐಕ್ಯತೆ ಮತ್ತು ಸಹಕಾರದ ಅಗತ್ಯವಿದೆ ಎಂದು ಕರೆ ನೀಡಿದರು. ಪರಸ್ಪರ ಕೈಜೋಡಿಸುವ ಮೂಲಕ ಧರ್ಮಸಭೆಗೂ ಸಮಕಾಲೀನ ಸಮಾಜಕ್ಕೂ ಸೇವೆ ಸಲ್ಲಿಸಬಲ್ಲ ವಿಶ್ವಾಸಾರ್ಹ ಕಥೋಲಿಕ ಮಾಧ್ಯಮವನ್ನು ನಿರ್ಮಿಸಲು ಸಾಧ್ಯ ಎಂದು ಅವರು ಹೇಳಿದರು.
2026ರ SIGNIS ವಿಶ್ವ ಕಾಂಗ್ರೆಸ್ ಆಗಸ್ಟ್ 8ರವರೆಗೆ ನಡೆಯಲಿದೆ. ವಿಶ್ವದ ವಿವಿಧ ಭಾಗಗಳಿಂದ ಆಗಮಿಸಿರುವ ಕಥೋಲಿಕ ಸಂವಹನಕಾರರನ್ನು ಒಂದೆಡೆ ಸೇರಿಸುವ ಈ ಸಮಾವೇಶವು ಸಂವಹನ ಕ್ಷೇತ್ರದಲ್ಲಿ ಉದಯಿಸುತ್ತಿರುವ ಹೊಸ ವಿಷಯಗಳ ಕುರಿತು ಚಿಂತನೆ ನಡೆಸಲು, ಕಲಿಯಲು, ಪರಸ್ಪರ ಸಂಪರ್ಕ ಬೆಳೆಸಲು ಮತ್ತು ಚರ್ಚಿಸಲು ಅವಕಾಶ ಕಲ್ಪಿಸಲಿದೆ. ಇದರ ಮೂಲಕ ವಿವಿಧ ಸಂಸ್ಕೃತಿಗಳು ಮತ್ತು ಪ್ರದೇಶಗಳ ನಡುವಿನ ಸಂವಹನವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).