ಇಂಡೋನೇಷ್ಯಾ: ಒಂದು ಡಾಲರ್, 219 ದೇವಾಲಯಗಳು
ಲೇಖಕರು:ವಂ. ಗುರು ಕಾಸ್ಮಿರ್ ನೇಮಾ, ಎಸ್‌ವಿಡಿ – ಜಕಾರ್ತಾ
ಹತ್ತು ವರ್ಷಗಳಿಗೂ ಹಿಂದೆ, ಈಗ 36 ವರ್ಷದವರಾಗಿರುವ ಆಲ್ಬರ್ಟಸ್ ಗ್ರೆಗೊರಿ ಟಾನ್ ಅವರು, ಸಾಮಾನ್ಯ ಲಕೋಟೆಯೊಳಗೆ ಇರಿಸಲಾದ ಕೇವಲ ಒಂದು ಅಮೆರಿಕನ್ ಡಾಲರ್ ತಮ್ಮ ಜೀವನದ ಅತ್ಯಂತ ನಿರ್ಣಾಯಕ ಕ್ಷಣಗಳಲ್ಲಿ ಒಂದಾಗಲಿದೆ ಎಂದು ಎಂದಿಗೂ ಊಹಿಸಿರಲಿಲ್ಲ. 1990ರ ಏಪ್ರಿಲ್ 8ರಂದು ಜಕಾರ್ತಾದಲ್ಲಿ ಜನಿಸಿದ ಈ ಯುವ ಕಥೋಲಿಕ ಸಾಮಾನ್ಯ ವಿಶ್ವಾಸಿ, ಅಸಾಧ್ಯವೆನಿಸುತ್ತಿದ್ದ ಧ್ಯೇಯವೊಂದನ್ನು ಕೈಬಿಡುವ ಹಂತಕ್ಕೆ ತಲುಪಿದ್ದರು. ಸೀಮಿತ ಸಂಪನ್ಮೂಲಗಳು ಮತ್ತು ಹೆಚ್ಚುತ್ತಿದ್ದ ಅಡೆತಡೆಗಳಿಂದ ನಿರಾಶೆಗೊಂಡಿದ್ದ ಅವರು, ಈ ಕಾರ್ಯವನ್ನು ಮುಂದುವರಿಸುವಂತೆ ದೇವರು ನಿಜವಾಗಿಯೂ ತಮ್ಮನ್ನು ಕರೆಯುತ್ತಿದ್ದಾರೆಯೇ ಎಂದು ಪ್ರಶ್ನಿಸತೊಡಗಿದ್ದರು. ಆಗ ಅನಿರೀಕ್ಷಿತವಾಗಿ ಒಂದು ಪತ್ರ ಬಂತು. ಅದರೊಳಗೆ ಕೇವಲ ಒಂದು ಡಾಲರ್ ಮತ್ತು ಪ್ರೋತ್ಸಾಹದ ಕೆಲವು ಮಾತುಗಳಿದ್ದವು. ಆರ್ಥಿಕವಾಗಿ ಅದು ಏನನ್ನೂ ಬದಲಾಯಿಸಲಿಲ್ಲ. ಆದರೆ ಆಧ್ಯಾತ್ಮಿಕವಾಗಿ ಅದು ಎಲ್ಲವನ್ನೂ ಬದಲಾಯಿಸಿತು.
“‘ಮುಂದುವರಿಯಿರಿ’ ಎಂದು ದೇವರು ನನಗೆ ಹೇಳುತ್ತಿರುವಂತೆ ನನಗೆ ಅನಿಸಿತು” ಎಂದು ಗ್ರೆಗೊರಿ ನೆನಪಿಸಿಕೊಳ್ಳುತ್ತಾರೆ. ಉದಾರತೆಯಿಂದ ಮಾಡಿದ ಆ ಸಣ್ಣ ಕಾರ್ಯವೇ ನಂತರ ಇಂಡೋನೇಷ್ಯಾದಾದ್ಯಂತ ಸಾವಿರಾರು ಜನರ ಜೀವನವನ್ನು ಸ್ಪರ್ಶಿಸಿದ ಚಳವಳಿಯೊಂದಕ್ಕೆ ಕಿಡಿಯಾಯಿತು. ಇಂದು ಅವರು ಸ್ಥಾಪಿಸಿದ ವಿನಿಯಾ ದೇಯಿ ಪ್ರತಿಷ್ಠಾನವು ತನ್ನ ಡಿಜಿಟಲ್ ಸಾಮೂಹಿಕ ನಿಧಿ ಸಂಗ್ರಹ ವೇದಿಕೆಯಾದ ಜಾಲಾ ಕಾಸಿಹ್ ಮೂಲಕ ದೇಶದ ಅತ್ಯಂತ ದೂರದ ಕಥೋಲಿಕ ಸಮುದಾಯಗಳಲ್ಲಿ 219 ದೇವಾಲಯಗಳು ಮತ್ತು ಪ್ರಾರ್ಥನಾ ಮಂದಿರಗಳನ್ನು ನಿರ್ಮಿಸಲು ನೆರವಾಗಿದೆ. ಆದರೂ, ಇಟ್ಟಿಗೆ, ಕಾಂಕ್ರೀಟ್ ಅಥವಾ ದೊಡ್ಡ ಅಂಕಿ-ಅಂಶಗಳಿಂದ ಈ ಕಾರ್ಯದ ಮಹತ್ತರ ಸಾಧನೆಯನ್ನು ಅಳೆಯಲಾಗುವುದಿಲ್ಲ ಎಂದು ಗ್ರೆಗೊರಿ ಒತ್ತಿಹೇಳುತ್ತಾರೆ.
“ಕಟ್ಟಡಗಳು ಕೇವಲ ಕಣ್ಣಿಗೆ ಕಾಣುವ ಫಲಿತಾಂಶಗಳು” ಎಂದು ಅವರು ಹೇಳುತ್ತಾರೆ. “ಜನರನ್ನು ಕಟ್ಟುವುದೇ ನಿಜವಾದ ಧ್ಯೇಯ—ಭರವಸೆಯನ್ನು ನೀಡುವುದು, ವಿಶ್ವಾಸವನ್ನು ಬಲಪಡಿಸುವುದು ಮತ್ತು ಸಮಾಜದ ಅಂಚಿನಲ್ಲಿರುವವರು ಮರೆತುಹೋಗಿಲ್ಲ ಎಂಬುದನ್ನು ಅವರಿಗೆ ನೆನಪಿಸುವುದು.”
ದೇವಾಲಯಗಳಿಗಿಂತ ಹೆಚ್ಚಿನ ಪುನರ್ನಿರ್ಮಾಣ
ಧರ್ಮಸಭೆಯನ್ನು ಪುನರ್‌ನಿರ್ಮಿಸಲು ನೆರವಾಗಬೇಕೆಂಬ ಪ್ರೇರಣೆ ಗ್ರೆಗೊರಿ ಅವರಿಗೆ ಮೊದಲ ಬಾರಿಗೆ ಬಂದಾಗ, ಅವರು ಆ ಕರೆಯನ್ನು ಅಕ್ಷರಶಃ ಅರ್ಥಮಾಡಿಕೊಂಡಿದ್ದರು.ಕಥೋಲಿಕ ಸಮುದಾಯಗಳಿಗೆ ಆರಾಧನೆಗಾಗಿ ಸೇರುವ ಸೂಕ್ತ ಸ್ಥಳಗಳಿಲ್ಲದ ಪ್ರದೇಶಗಳಲ್ಲಿ ದೇವಾಲಯಗಳನ್ನು ನಿರ್ಮಿಸುವುದೇ ಅದರ ಅರ್ಥ ಎಂದು ಅವರು ಭಾವಿಸಿದ್ದರು. ಆದರೆ ವರ್ಷಗಳ ಕಾಲ ದೂರದ ಹಳ್ಳಿಗಳಿಗೆ ಭೇಟಿ ನೀಡಿದ ಅನುಭವವು ಅವರ ಈ ತಿಳುವಳಿಕೆಯನ್ನು ಕ್ರಮೇಣ ಬದಲಾಯಿಸಿತು.
“ಮೊದಲ ಕಲ್ಲನ್ನು ಇಡುವುದಕ್ಕೂ ಬಹಳ ಮೊದಲೇ ಧರ್ಮಸಭೆಯ ಪುನರ್‌ನಿರ್ಮಾಣ ಆರಂಭವಾಗುತ್ತದೆ” ಎಂದು ಅವರು ವಿವರಿಸುತ್ತಾರೆ. “ಜನರು ಪರಸ್ಪರ ಜೊತೆಯಾಗಿ ನಡೆಯುವಾಗ, ಒಬ್ಬರ ಹೊರೆಗಳನ್ನು ಮತ್ತೊಬ್ಬರು ಹಂಚಿಕೊಳ್ಳುವಾಗ ಮತ್ತು ದೇವರ ಪ್ರೀತಿಯ ಸಂಕೇತಗಳಾಗುವಾಗ ಅದು ಆರಂಭವಾಗುತ್ತದೆ.”
ಪ್ರತಿಯೊಂದು ನಿರ್ಮಾಣ ಯೋಜನೆಯೂ ಪರಿವರ್ತನೆಯ ಪಯಣವಾಗಿದೆ ಎಂದು ಅವರು ಹೇಳುತ್ತಾರೆ. ಹಳ್ಳಿಯ ಜನರು ತಮ್ಮಿಂದ ಸಾಧ್ಯವಾದುದನ್ನು ನೀಡುತ್ತಾರೆ—ಶ್ರಮ, ನಿರ್ಮಾಣ ಸಾಮಗ್ರಿಗಳು, ಆಹಾರ ಅಥವಾ ಕೇವಲ ಪ್ರೋತ್ಸಾಹದ ಮಾತುಗಳನ್ನಾದರೂ ನೀಡುತ್ತಾರೆ. ಒಟ್ಟಾಗಿ ಕೆಲಸ ಮಾಡಲು, ಭಿನ್ನಾಭಿಪ್ರಾಯಗಳನ್ನು ಮೀರಿ ಸಾಗಲು ಮತ್ತು ತಮ್ಮದೇ ಸಮುದಾಯದ ಶಕ್ತಿಯನ್ನು ಮರುಕಂಡುಕೊಳ್ಳಲು ಅವರು ಕಲಿಯುತ್ತಾರೆ. ದೇವಾಲಯದ ನಿರ್ಮಾಣ ಪೂರ್ಣಗೊಳ್ಳುವ ವೇಳೆಗೆ ಅದಕ್ಕಿಂತಲೂ ಮುಖ್ಯವಾದ ಮತ್ತೊಂದು ಸಂಗತಿ ಈಗಾಗಲೇ ರೂಪುಗೊಂಡಿರುತ್ತದೆ: ತಾವು ಒಂದೇ ಸಮುದಾಯಕ್ಕೆ ಸೇರಿದವರು ಎಂಬ ನವೀಕೃತ ಪ್ರಜ್ಞೆ.
ಸಮಾಜದ ಅಂಚಿನಲ್ಲಿರುವವರಲ್ಲಿ ಕ್ರಿಸ್ತನನ್ನು ಕಂಡುಕೊಳ್ಳುವುದು
ಗ್ರೆಗೊರಿ ಭೇಟಿ ನೀಡಿರುವ ಅನೇಕ ಸ್ಥಳಗಳಲ್ಲಿ, ಒಂದು ನೆನಪು ಇಂದಿಗೂ ಅವರ ಧ್ಯೇಯದ ಕುರಿತ ತಿಳುವಳಿಕೆಯನ್ನು ರೂಪಿಸುತ್ತಿದೆ. ಸಿಬೋಲ್ಗಾ ಧರ್ಮಕ್ಷೇತ್ರದಲ್ಲಿ ವಿನಿಯಾ ದೇಯಿ ನೆರವಿನಿಂದ ನಿರ್ಮಿಸಲಾದ ಮೊದಲ ದೇವಾಲಯಕ್ಕೆ ಭೇಟಿ ನೀಡಿದಾಗ, ತೀವ್ರ ಬಡತನದ ನಡುವೆಯೂ ಸಂತೋಷದಿಂದ ಭಕ್ತಿಗೀತೆಗಳನ್ನು ಹಾಡುತ್ತಿದ್ದ ಮಕ್ಕಳನ್ನು ಅವರು ಕಂಡರು.
“ಅವರ ಬಳಿ ಇದ್ದದ್ದು ಅತ್ಯಲ್ಪ. ಆದರೂ ಅವರ ವಿಶ್ವಾಸ ತುಂಬಿ ಹರಿಯುತ್ತಿತ್ತು” ಎಂದು ನೆನಪಿಸಿಕೊಳ್ಳುತ್ತಾರೆ.ಅವರ ಸಂತೋಷವು ಗ್ರೆಗೊರಿ ಎಂದಿಗೂ ಮರೆಯಲಾಗದ ಪಾಠವಾಯಿತು. “ದೇವರ ಪ್ರೀತಿಯು ಭೌತಿಕ ಸಂಪತ್ತಿನ ಮೇಲೆ ಅವಲಂಬಿತವಾಗಿಲ್ಲ ಎಂಬುದನ್ನು ಅವರು ನನಗೆ ಕಲಿಸಿದರು. ಕೆಲವೊಮ್ಮೆ ಅತ್ಯಂತ ಕಡಿಮೆ ಹೊಂದಿರುವವರೇ ಅತ್ಯಂತ ದೊಡ್ಡ ವಿಶ್ವಾಸವನ್ನು ಪ್ರಕಟಿಸುತ್ತಾರೆ.”
ಇಂತಹ ಅನುಭವಗಳು, ಶುಭಸಂದೇಶ ಪ್ರಚಾರವು ದೊಡ್ಡ ದೊಡ್ಡ ಕಾರ್ಯಕ್ರಮಗಳಿಂದ ಆರಂಭವಾಗುವುದಿಲ್ಲ; ಬದಲಾಗಿ ಜನರೊಂದಿಗೆ ಇರುವುದರಿಂದ—ಅವರೊಂದಿಗೆ ನಡೆಯುವುದರಿಂದ, ಅವರ ಮಾತುಗಳನ್ನು ಆಲಿಸುವುದರಿಂದ ಮತ್ತು ಸಾಮಾನ್ಯ ಕರುಣೆಯ ಕಾರ್ಯಗಳ ಮೂಲಕ ದೇವರ ಸಾಮೀಪ್ಯವನ್ನು ಅವರು ಅನುಭವಿಸುವಂತೆ ಮಾಡುವುದರಿಂದ ಆರಂಭವಾಗುತ್ತದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟವು.
ಜನರ ಸಂಸ್ಕೃತಿಯ ಭಾಷೆಯಲ್ಲಿ ಮಾತನಾಡುವ ಧರ್ಮಸಭೆ
ಇದೇ ದೃಢನಂಬಿಕೆ ವಿನಿಯಾ ದೇಯಿ ದೇವಾಲಯಗಳ ನಿರ್ಮಾಣವನ್ನು ಕೈಗೊಳ್ಳುವ ವಿಧಾನವನ್ನೂ ರೂಪಿಸಿದೆ. ಎಲ್ಲೆಡೆ ಒಂದೇ ಮಾದರಿಯ ವಿನ್ಯಾಸವನ್ನು ಹೇರುವ ಬದಲು, ಪವಿತ್ರ ವಾಸ್ತುಶಿಲ್ಪದಲ್ಲಿ ಸ್ಥಳೀಯ ಸಮುದಾಯಗಳು ತಮ್ಮದೇ ಸಾಂಸ್ಕೃತಿಕ ಗುರುತನ್ನು ವ್ಯಕ್ತಪಡಿಸುವಂತೆ ಪ್ರತಿಷ್ಠಾನವು ಪ್ರೋತ್ಸಾಹಿಸುತ್ತದೆ.
ಫ್ಲೋರೆಸ್‌ನಲ್ಲಿ ಇತ್ತೀಚೆಗೆ ಪೂರ್ಣಗೊಂಡ ದೇವಾಲಯವೊಂದು ಮಂಗ್ಗರಾಯಿ ಜನರ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ಮ್ಬಾರು ನಿಯಾಂಗ್ ವಾಸ್ತುಶೈಲಿಯನ್ನು ಅಳವಡಿಸಿಕೊಂಡಿದೆ.ಗ್ರೆಗೊರಿ ಅವರ ದೃಷ್ಟಿಯಲ್ಲಿ ಇದು ಕೇವಲ ವಾಸ್ತುಶಿಲ್ಪದ ಆಯ್ಕೆಯಲ್ಲ. “ಜನರು ಧರ್ಮಸಭೆಯೊಳಗೆ ತಮ್ಮದೇ ಸಂಸ್ಕೃತಿಯನ್ನು ಗುರುತಿಸಿದಾಗ, ಕ್ರಿಸ್ತನು ಈಗಾಗಲೇ ತಮ್ಮ ಇತಿಹಾಸದಲ್ಲಿ, ಸಂಪ್ರದಾಯಗಳಲ್ಲಿ ಮತ್ತು ಜೀವನ ವಿಧಾನದಲ್ಲಿ ಉಪಸ್ಥಿತರಿದ್ದಾರೆ ಎಂಬುದನ್ನೂ ಅವರು ಗುರುತಿಸುತ್ತಾರೆ” ಎಂದು ಹೇಳುತ್ತಾರೆ.
ಸ್ಥಳೀಯ ಸಂಸ್ಕೃತಿಯೊಂದಿಗೆ ವಿಶ್ವಾಸವನ್ನು ಬೆಸೆಯುವ ಪ್ರಕ್ರಿಯೆಯು ಜನರು ಈಗಾಗಲೇ ಅರ್ಥಮಾಡಿಕೊಂಡಿರುವ ಮತ್ತು ಗೌರವಿಸುವ ಸಂಕೇತಗಳ ಮೂಲಕ ಶುಭಸಂದೇಶವನ್ನು ಪ್ರಕಟಿಸುವುದರಿಂದ, ಅದು ಅವರ ಜೀವನದಲ್ಲಿ ಇನ್ನಷ್ಟು ಆಳವಾಗಿ ಬೇರೂರಲು ನೆರವಾಗುತ್ತದೆ ಎಂಬುದು ಅವರ ನಂಬಿಕೆ.
ಸಹಯಾತ್ರಿ (ಸಿನೊಡಲ್) ಧರ್ಮಸಭೆಯ ನಿರ್ಮಾಣ: ಧ್ಯೇಯದಲ್ಲಿ ಸಾಮಾನ್ಯ ವಿಶ್ವಾಸಿಗಳು
ಪ್ರತಿಷ್ಠಾನವು ಬೆಳೆದಂತೆ, ಅದರ ಧ್ಯೇಯವೂ ದೇವಾಲಯಗಳ ನಿರ್ಮಾಣವನ್ನು ಮೀರಿ ವಿಸ್ತರಿಸಿತು. ಇಂದು ವಿನಿಯಾ ದೇಯಿ ಆರ್ಥಿಕವಾಗಿ ಹಿಂದುಳಿದ ಕಥೋಲಿಕ ಕುಟುಂಬಗಳ ಮಕ್ಕಳಿಗೆ ವಿದ್ಯಾರ್ಥಿವೇತನ ಮತ್ತು ಶೈಕ್ಷಣಿಕ ನೆರವನ್ನೂ ಒದಗಿಸುತ್ತಿದೆ. ಯುವಜನರಲ್ಲಿ ಹೂಡಿಕೆ ಮಾಡುವುದು ಧರ್ಮಸಭೆಯ ಭವಿಷ್ಯವನ್ನು ನಿರ್ಮಿಸುವ ಮತ್ತೊಂದು ಮಾರ್ಗ ಎಂಬುದು ಪ್ರತಿಷ್ಠಾನದ ನಂಬಿಕೆಯಾಗಿದೆ. ಈ ಸಂಪೂರ್ಣ ಉಪಕ್ರಮವು ಬಹುತೇಕ ಸಾಮಾನ್ಯ ಕಥೋಲಿಕ ವಿಶ್ವಾಸಿಗಳ ಸಹಕಾರದಿಂದಲೇ ನಡೆಯುತ್ತಿದೆ.
ಉದ್ಯಮಿಗಳು, ಶಿಕ್ಷಕರು, ಲೆಕ್ಕಪರಿಶೋಧಕರು, ವಿದ್ಯಾರ್ಥಿಗಳು, ಬ್ಯಾಂಕ್ ಉದ್ಯೋಗಿಗಳು, ಯುವ ವೃತ್ತಿಪರರು ಮತ್ತು ನಿವೃತ್ತರು—ಪ್ರತಿಯೊಬ್ಬರೂ ತಮ್ಮಲ್ಲಿರುವ ವರದಾನಕ್ಕೆ ಅನುಗುಣವಾಗಿ ಕೊಡುಗೆ ನೀಡುತ್ತಾರೆ. ಅವರಲ್ಲಿ ಅನೇಕರು ಒಬ್ಬರನ್ನೊಬ್ಬರು ಎಂದಿಗೂ ಭೇಟಿಯಾಗಿಲ್ಲ. ಆದರೂ ಸೇವೆ ಸಲ್ಲಿಸಬೇಕೆಂಬ ಸಾಮಾನ್ಯ ಬಯಕೆ ಅವರನ್ನು ಒಂದಾಗಿಸಿದೆ. ಗ್ರೆಗೊರಿ ಅವರ ಪ್ರಕಾರ, ಸಹಯಾತ್ರಿ ಧರ್ಮಸಭೆ ಪ್ರಾಯೋಗಿಕವಾಗಿ ಹೀಗೆಯೇ ಕಾಣುತ್ತದೆ. “ಪ್ರತಿಯೊಬ್ಬರಿಗೂ ಒಂದು ಕರೆ ಇದೆ. ಪ್ರತಿಯೊಬ್ಬರಲ್ಲೂ ನೀಡಲು ಏನಾದರೂ ಇದೆ. ಧರ್ಮಸಭೆಯ ಧ್ಯೇಯವು ದೀಕ್ಷಾಸ್ನಾನ ಪಡೆದ ಪ್ರತಿಯೊಬ್ಬರಿಗೂ ಸೇರಿದೆ.”
ನೀವು ಇರುವಲ್ಲಿಂದಲೇ ಆರಂಭಿಸಿ
ಭವಿಷ್ಯದತ್ತ ನೋಡುತ್ತಿರುವ ಗ್ರೆಗೊರಿ, ವಿನಿಯಾ ದೇಯಿ ದೂರದ ಸಮುದಾಯಗಳನ್ನು ತಲುಪುವುದನ್ನು ಮುಂದುವರಿಸಲಿ ಎಂದು ಆಶಿಸುತ್ತಾರೆ. ಜೊತೆಗೆ, ಆರ್ಥಿಕ ಸಂಕಷ್ಟದಿಂದಾಗಿ ಗುರುತರಬೇತಿಗೆ ಅಡ್ಡಿಯಾಗುತ್ತಿರುವ ಗುರುಶಿಕ್ಷಣಾರ್ಥಿಗಳಿಗೆ ನೆರವು ನೀಡಬೇಕೆಂಬ ಆಶಯವನ್ನೂ ಹೊಂದಿದ್ದಾರೆ. ಮುಂದೊಂದು ದಿನ ಈ ಚಳವಳಿ ಇಂಡೋನೇಷ್ಯಾವನ್ನು ಮೀರಿ ವಿಶ್ವದ ಇತರ ಭಾಗಗಳ ಧರ್ಮಸಭೆಗೂ ಸೇವೆ ಸಲ್ಲಿಸಲಿ ಎಂಬುದು ಅವರ ಕನಸು. ಆದರೆ ಅವರ ಕೊನೆಯ ಸಂದೇಶ ಅತ್ಯಂತ ಸರಳವಾಗಿದೆ.ಅದು ದೇಣಿಗೆ ನೀಡುವಂತೆ ಮಾಡುವ ಮನವಿಯಲ್ಲ; ಬದಲಾಗಿ ಒಂದು ಆಹ್ವಾನ.
“ಎಲ್ಲರೂ ಜಾಲಾ ಕಾಸಿಹ್‌ಗೆ ನೆರವು ನೀಡಬೇಕೆಂದು ನಾವು ಕೇಳುತ್ತಿಲ್ಲ,ನಿಮ್ಮದೇ ಧರ್ಮಕೇಂದ್ರಕ್ಕೆ ನೆರವಾಗಿ. ನಿಮ್ಮ ಸ್ಥಳೀಯ ಸಮುದಾಯಕ್ಕೆ ಸಹಾಯ ಮಾಡಿ. ಏಕಾಂಗಿಯಾಗಿರುವ ಯಾರನ್ನಾದರೂ ಭೇಟಿಯಾಗಿ. ಸಂಕಷ್ಟದಲ್ಲಿರುವವರನ್ನು ಪ್ರೋತ್ಸಾಹಿಸಿ. ಯಾವುದಾದರೂ ಸಣ್ಣ ಕಾರ್ಯದಿಂದ ಆರಂಭಿಸಿ.”
“ದೇವರು ಅನೇಕ ಬಾರಿ ಅತ್ಯಂತ ಸಣ್ಣ ಪ್ರೀತಿಯ ಕಾರ್ಯಗಳ ಮೂಲಕವೇ ಮಹಾನ್ ಧ್ಯೇಯಗಳನ್ನು ಆರಂಭಿಸುತ್ತಾರೆ.”
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).