ಹುಡುಕಿ

ಇಂಡೋನೇಷ್ಯಾದ ಪೂರ್ವ ನುಸಾ ತೆಂಗಾರಾ ಪ್ರಾಂತ್ಯದ ವಿವಿಧ ಪ್ರದೇಶಗಳಲ್ಲಿ ಭೂಕಂಪದಿಂದ ಉಂಟಾದ ಹಾನಿ ಇಂಡೋನೇಷ್ಯಾದ ಪೂರ್ವ ನುಸಾ ತೆಂಗಾರಾ ಪ್ರಾಂತ್ಯದ ವಿವಿಧ ಪ್ರದೇಶಗಳಲ್ಲಿ ಭೂಕಂಪದಿಂದ ಉಂಟಾದ ಹಾನಿ 

"ಜನರ ಪ್ರೀತಿಯನ್ನು ಭೂಕಂಪ ನಾಶಮಾಡಲು ಸಾಧ್ಯವಾಗಲಿಲ್ಲ"-ಎಂಡೆ ಧರ್ಮಕ್ಷೇತ್ರದ ಪ್ರಧಾನ ಧರ್ಮಾಧ್ಯಕ್ಷರು

ಇಂಡೋನೇಷ್ಯಾದ ಬಹುಸಂಖ್ಯಾತ ಕಥೋಲಿಕರು ವಾಸಿಸುವ ಫ್ಲೋರೆಸ್ ದ್ವೀಪವನ್ನು ತೀವ್ರವಾಗಿ ಬಾಧಿಸಿದ ಭೂಕಂಪದ ಬಳಿಕ ನಡೆಯುತ್ತಿರುವ ಪರಿಹಾರ ಕಾರ್ಯಗಳ ಕುರಿತು ಎಂಡೆ ಧರ್ಮಕ್ಷೇತ್ರದ ಪ್ರಧಾನ ಧರ್ಮಾಧ್ಯಕ್ಷ ಪೌಲಸ್ ಬುಡಿ ಕ್ಲೆಡೆನ್, SVD ಅವರು ವ್ಯಾಟಿಕನ್ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ. ನಂಬಿಕೆ ಮತ್ತು ಐಕ್ಯತೆಯ ಬಂಧಗಳು ಜನರನ್ನು ಹೇಗೆ ಒಗ್ಗೂಡಿಸುತ್ತಿವೆ ಎಂಬುದನ್ನು ಅವರು ವಿವರಿಸುತ್ತಾ, ಚೇತರಿಕೆ ಮತ್ತು ಪುನರ್‌ನಿರ್ಮಾಣದ ಹಾದಿಯನ್ನು ಆರಂಭಿಸಿರುವ ಜನರಿಗಾಗಿ ಪ್ರಾರ್ಥಿಸುವಂತೆ ಮನವಿ ಮಾಡಿದ್ದಾರೆ.

ಲೇಖಕರು: ವಂ.ಗುರು ಕಾಸ್ಮಿರ್ ನೇಮಾ, SVD

ಎಂಡೆ, ಇಂಡೋನೇಷ್ಯಾ — ಇಂಡೋನೇಷ್ಯಾದಲ್ಲಿ ಬಹುಸಂಖ್ಯಾತ ಕಥೋಲಿಕರು ವಾಸಿಸುವ ಫ್ಲೋರೆಸ್ ದ್ವೀಪವನ್ನು ತೀವ್ರವಾಗಿ ಬಾಧಿಸಿದ ಭೀಕರ ಭೂಕಂಪದ ನಂತರ, ಪ್ರಧಾನ ಧರ್ಮಾಧ್ಯಕ್ಷ ಪೌಲಸ್ ಬುಡಿ ಕ್ಲೆಡೆನ್, SVD ಅವರ ಮನಸ್ಸಿನಲ್ಲಿ ಉಳಿದಿರುವ ಒಂದು ದೃಶ್ಯವಿದೆ: ಮನೆಗಳು ಅವಶೇಷಗಳಾಗಿ ಮಾರ್ಪಟ್ಟಿದ್ದರೂ, ಸಂಕಟವು ತಮ್ಮ ನಂಬಿಕೆ ಮತ್ತು ಐಕ್ಯತೆಯ ಬಂಧಗಳನ್ನು ಮುರಿಯಲು ಜನರು ಅವಕಾಶ ನೀಡಲಿಲ್ಲ. “ಅವಶೇಷಗಳ ಮಧ್ಯೆಯೂ ಅವರ ಪ್ರೀತಿ ಅಳಿದಿಲ್ಲ,” ಎಂದು ಎಂಡೆ ಧರ್ಮಕ್ಷೇತ್ರದ ಪ್ರಧಾನ ಧರ್ಮಾಧ್ಯಕ್ಷರು ಪ್ರಬಲ 7.7 ತೀವ್ರತೆಯ ಭೂಕಂಪವು ದ್ವೀಪದ ವಿಶಾಲ ಪ್ರದೇಶಗಳನ್ನು ನಾಶಮಾಡಿದ ಎರಡು ದಿನಗಳ ಬಳಿಕ ವ್ಯಾಟಿಕನ್ ನ್ಯೂಸ್ಗೆ ತಿಳಿಸಿದರು.

ಆಗಸ್ಟ್ 15ರ ಮುಂಜಾನೆ ಸಂಭವಿಸಿದ ಭೂಕಂಪದಲ್ಲಿ ಹತ್ತಾರು ಜನರು ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಸಾವಿರಾರು ಜನರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ. ಪೂರ್ವ ನುಸಾ ತೆಂಗಾರಾ ಪ್ರಾಂತ್ಯದ ಹಲವು ಜಿಲ್ಲೆಗಳಲ್ಲಿ ಮನೆಗಳು, ಧರ್ಮಾಲಯಗಳು, ಶಾಲೆಗಳು ಮತ್ತು ಸಾರ್ವಜನಿಕ ಕಟ್ಟಡಗಳು ಭಾರೀ ಹಾನಿಗೊಳಗಾಗಿವೆ. ಆದರೆ ದುಃಖ ಮತ್ತು ಅನಿಶ್ಚಿತತೆಯ ನಡುವೆಯೂ, ಜನರಲ್ಲಿ ಅಸಾಧಾರಣ ಕರುಣೆ, ಸ್ಥೈರ್ಯ ಮತ್ತು ಪರಸ್ಪರ ಸಹಕಾರವನ್ನು ತಾವು ಕಂಡಿರುವುದಾಗಿ ಪ್ರಧಾನ ಧರ್ಮಾಧ್ಯಕ್ಷ ಕ್ಲೆಡೆನ್ ಹೇಳಿದ್ದಾರೆ.

ಸಾವಿನ ಸಂಖ್ಯೆ ಏರಿಕೆ; ಭೂಕಂಪ ನಂತರದ ಕಂಪನಗಳು ಮುಂದುವರಿಕೆ

ಇಂಡೋನೇಷ್ಯಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (BNPB) ಪ್ರಕಾರ, ಆಗಸ್ಟ್ 17ರ ವೇಳೆಗೆ ಸಾವಿನ ಸಂಖ್ಯೆ 68ಕ್ಕೆ ಏರಿದ್ದು, 213 ಮಂದಿ ಗಾಯಗೊಂಡಿದ್ದಾರೆ. ಮಂಗ್ಗರಾಯಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸಾವುಗಳು ದಾಖಲಾಗಿದ್ದು, ಅಲ್ಲಿ 26 ಮಂದಿ ಮೃತಪಟ್ಟಿದ್ದಾರೆ. ಪೂರ್ವ ಮಂಗ್ಗರಾಯಿಯಲ್ಲಿ 24, ನಾಗೆಕೆಯೊದಲ್ಲಿ ಎಂಟು, ಸಿಕ್ಕಾದಲ್ಲಿ ನಾಲ್ಕು ಹಾಗೂ ಎಂಡೆ, ಪಶ್ಚಿಮ ಮಂಗ್ಗರಾಯಿ ಮತ್ತು ನ್ಗಾದಾ ಜಿಲ್ಲೆಗಳಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ. ಹಲವು ಜಿಲ್ಲೆಗಳಲ್ಲಿ 5,000ಕ್ಕೂ ಹೆಚ್ಚು ಜನರು ಇನ್ನೂ ಸ್ಥಳಾಂತರಗೊಂಡಿದ್ದಾರೆ. ಸಿಕ್ಕಾ ಜಿಲ್ಲೆಯಲ್ಲಿ ಅತಿ ಹೆಚ್ಚು ಜನರು ಆಶ್ರಯ ಪಡೆದಿದ್ದು, 3,300ಕ್ಕೂ ಹೆಚ್ಚು ಮಂದಿ ತಾತ್ಕಾಲಿಕ ಆಶ್ರಯ ಕೇಂದ್ರಗಳು ಮತ್ತು ಸ್ಥಳಾಂತರ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ.

ಸ್ಥಳೀಯ ಕಾಲಮಾನ ಬೆಳಗಿನ 4:58ಕ್ಕೆ ಭೂಕಂಪ ಸಂಭವಿಸಿದ್ದು, ಇದರ ಕೇಂದ್ರಬಿಂದು ಎಂಡೆಯ ಉತ್ತರ-ವಾಯವ್ಯ ದಿಕ್ಕಿನಲ್ಲಿ ಸುಮಾರು 68 ಕಿಲೋಮೀಟರ್ ದೂರದಲ್ಲಿತ್ತು. ಅಧಿಕಾರಿಗಳು ನಂತರ ಸುನಾಮಿ ಎಚ್ಚರಿಕೆಯನ್ನು ಹಿಂಪಡೆದರೂ, ವಿಶೇಷವಾಗಿ ಫ್ಲೋರೆಸ್‌ನ ಉತ್ತರ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಈ ಎಚ್ಚರಿಕೆಯು ವ್ಯಾಪಕ ಭೀತಿಯನ್ನು ಉಂಟುಮಾಡಿತು. ಮುಖ್ಯ ಭೂಕಂಪದ ನಂತರ 300ಕ್ಕೂ ಹೆಚ್ಚು ಭೂಕಂಪಾನಂತರದ ಕಂಪನಗಳು ದ್ವೀಪವನ್ನು ನಿರಂತರವಾಗಿ ನಡುಗಿಸುತ್ತಿವೆ. ಇದರಿಂದ ಜನರಲ್ಲಿ ಭಯ ಮತ್ತಷ್ಟು ಹೆಚ್ಚಿದ್ದು, ಅನೇಕ ಕುಟುಂಬಗಳು ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗುತ್ತಿಲ್ಲ. ವಿಪತ್ತಿನ ಹಿನ್ನೆಲೆಯಲ್ಲಿ ಪೂರ್ವ ನುಸಾ ತೆಂಗಾರಾ ಪ್ರಾಂತ್ಯ ಸರ್ಕಾರವು ಆಗಸ್ಟ್ 15ರಿಂದ 28ರವರೆಗೆ ಎರಡು ವಾರಗಳ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.

“ಅವರ ಮನೆಗಳು ಬಿರುಕು ಬಿಟ್ಟವು, ಆದರೆ ಅವರ ಪ್ರೀತಿ ಮುರಿಯಲಿಲ್ಲ”

ಭೂಕಂಪ ಸಂಭವಿಸಿದಾಗ ಪ್ರಧಾನ ಧರ್ಮಾಧ್ಯಕ್ಷ ಕ್ಲೆಡೆನ್ ಅವರು ಎಂಬಯ್ ಸಮೀಪದ ರೋಯ್ ಎಂಬಲ್ಲಿದ್ದರು. ಸಹ ಧರ್ಮಗುರುವೊಬ್ಬರ ಬೆಳ್ಳಿ ಮಹೋತ್ಸವ ಆಚರಣೆಯಲ್ಲಿ ಪಾಲ್ಗೊಂಡ ಬಳಿಕ ಅವರು ಅಲ್ಲಿ ರಾತ್ರಿ ತಂಗಿದ್ದರು. ಅದೇ ದಿನ ಅವರು ದೃಢೀಕರಣ ಸಂಸ್ಕಾರವನ್ನು ನೆರವೇರಿಸಬೇಕಾಗಿತ್ತು. “ನಾವೆಲ್ಲರೂ ಭಯಭೀತರಾಗಿದ್ದೆವು,” ಎಂದು ಅವರು ನೆನಪಿಸಿಕೊಂಡರು.

ಸುನಾಮಿ ಎಚ್ಚರಿಕೆ ಹೊರಬಿದ್ದ ತಕ್ಷಣ ಅನೇಕ ನಿವಾಸಿಗಳು ಎತ್ತರದ ಪ್ರದೇಶಗಳತ್ತ ಓಡಿಹೋದರು. ಕೆಲವೇ ಗಂಟೆಗಳಲ್ಲಿ ಪ್ರಧಾನ ಧರ್ಮಾಧ್ಯಕ್ಷರು ಸ್ಥಳಾಂತರಗೊಂಡ ಕುಟುಂಬಗಳನ್ನು ಭೇಟಿ ಮಾಡಲು ಆರಂಭಿಸಿದರು. ಹಾನಿಗೊಳಗಾದ ರಸ್ತೆಗಳ ಮೂಲಕ ಕೆಲವೊಮ್ಮೆ ಗ್ರಾಮ ಮುಖಂಡರೊಂದಿಗೆ, ನಂತರ ತಮ್ಮ ಧರ್ಮಕ್ಷೇತ್ರದ ಚಾಲಕರೊಂದಿಗೆ ಮೋಟಾರ್‌ಸೈಕಲ್‌ನಲ್ಲಿ ಪ್ರಯಾಣಿಸಿ, ರಸ್ತೆ ಬದಿಗಳಲ್ಲಿ, ಕಾಡು ಪ್ರದೇಶಗಳಲ್ಲಿ ಹಾಗೂ ಮನೆಗಳು ಮತ್ತು ಶಾಲೆಗಳ ಸಮೀಪದ ತೆರೆದ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದ ಜನರನ್ನು ಅವರು ಭೇಟಿಯಾದರು. ಅದೇ ದಿನ ಮಧ್ಯಾಹ್ನ ಮತ್ತು ಸಂಜೆ ಅವರು ಇದೇ ಸಮುದಾಯಗಳಿಗೆ ಮತ್ತೆ ಭೇಟಿ ನೀಡಿದರು.

ತಾವು ಕಂಡ ಅನುಭವವನ್ನು ನೆನಪಿಸಿಕೊಳ್ಳುತ್ತಾ ಪ್ರಧಾನ ಧರ್ಮಾಧ್ಯಕ್ಷ ಕ್ಲೆಡೆನ್ ಅವರ ಮನಸ್ಸಿನಲ್ಲಿ ಎರಡು ವಿಭಿನ್ನ ದೃಶ್ಯಗಳು ಆಳವಾಗಿ ಅಚ್ಚೊತ್ತಿವೆ ಎಂದು ಹೇಳಿದರು. “ಮೊದಲನೆಯದಾಗಿ, ಜನರು ಭಯ ಮತ್ತು ಆತಂಕದಿಂದ ಬಳಲುತ್ತಿರುವುದನ್ನು ಕಂಡೆ. ಅವರು ಯಾವಾಗ ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗುತ್ತದೆ ಎಂಬುದು ಅವರಿಗೆ ತಿಳಿದಿರಲಿಲ್ಲ. ಅದನ್ನು ನೋಡುವುದು ತುಂಬಾ ನೋವಿನ ಸಂಗತಿಯಾಗಿತ್ತು,”  “ಆದರೆ ನಂಬಿಕೆಯ ಜನರ ನಡುವೆ ಅಸಾಧಾರಣ ಐಕ್ಯತೆಯನ್ನೂ ನಾನು ಕಂಡೆ.”

ತುಸು ಸುರಕ್ಷಿತ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಕುಟುಂಬಗಳು ತಮ್ಮ ಮನೆಗಳೂ ಹಾನಿಗೊಳಗಾಗಿದ್ದರೂ, ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಆಶ್ರಯಗಳನ್ನು ನಿರ್ಮಿಸಿಕೊಟ್ಟು, ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಹಂಚಿಕೊಂಡರು. “ಅವರ ಮನೆಗಳು ಬಿರುಕು ಬಿಟ್ಟವು, ಆದರೆ ಅವರ ಪ್ರೀತಿ ಮುರಿಯಲಿಲ್ಲ,” ಎಂದು ಅವರು ಹೇಳಿದರು.

ಒಂದು ನಿರ್ದಿಷ್ಟ ಭೇಟಿಯು ಪ್ರಧಾನ ಧರ್ಮಾಧ್ಯಕ್ಷರ ಮನಸ್ಸಿನಲ್ಲಿ ವಿಶೇಷವಾಗಿ ಉಳಿಯಿತು.ಏರಾಮೊದಿಂದ ದಂಗಾ ಕಡೆಗೆ ಪ್ರಯಾಣಿಸುತ್ತಿದ್ದಾಗ, ಒಬ್ಬ ತಾಯಿ ತನ್ನ ಮೂವರು ಮಕ್ಕಳೊಂದಿಗೆ ಮೋಟಾರ್‌ಸೈಕಲ್‌ನಲ್ಲಿ ಹೋಗುತ್ತಿರುವುದನ್ನು ಅವರು ಗಮನಿಸಿದರು. ಮಕ್ಕಳಲ್ಲಿ ಒಬ್ಬನು ಸಣ್ಣ ಶಿಲುಬೆಯನ್ನು ಕೈಯಲ್ಲಿ ಹಿಡಿದಿದ್ದನು.“ನನಗೆ ಅದು ನಂಬಿಕೆಯ ಆಳವಾದ ಅಭಿವ್ಯಕ್ತಿಯಂತೆ ಕಂಡಿತು,ತಮ್ಮದೇ ಶಿಲುಬೆಯ ಹಾದಿಯಲ್ಲಿ ಸಾಗುತ್ತಿರುವಾಗ, ಆ ಮಗು ಶಿಲುಬೆಗೇರಿಸಲ್ಪಟ್ಟ ಪ್ರಭು ಯೇಸುವನ್ನು ತನ್ನೊಂದಿಗೆ ಹೊತ್ತುಕೊಂಡು ಹೋಗುತ್ತಿತ್ತು.”

ಸಂತ್ರಸ್ತರಿಗೆ ಪ್ರಾರ್ಥನೆಯ ಭರವಸೆ ನೀಡಿದ ಪೂಜ್ಯ ಜಗದ್ಗುರು 14ನೇ ಲಿಯೋ

ಫ್ಲೋರೆಸ್‌ನಾದ್ಯಂತ ಸಮುದಾಯಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖದಲ್ಲಿರುವಾಗ, ಪೂಜ್ಯ 14ನೇ ಲಿಯೋ ಅವರು ಈ ದುರಂತದಿಂದ ಬಾಧಿತರಾದವರೊಂದಿಗೆ ತಮ್ಮ ಆತ್ಮೀಯ ಸಾನ್ನಿಧ್ಯವನ್ನು ವ್ಯಕ್ತಪಡಿಸಿದ್ದಾರೆ. ಪ್ರಧಾನ ಧರ್ಮಾಧ್ಯಕ್ಷ ಪೌಲಸ್ ಬುಡಿ ಕ್ಲೆಡೆನ್ ಅವರಿಗೆ ಕಳುಹಿಸಿದ ಸಂದೇಶದಲ್ಲಿ, ಪವಿತ್ರ ತಂದೆಯವರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸಿ, ಸಂತ್ರಸ್ತರೆಲ್ಲರಿಗೂ ತಮ್ಮ ಆತ್ಮೀಯ ಐಕ್ಯತೆಯ ಭರವಸೆ ನೀಡಿದರು.

ಭೂಕಂಪದಿಂದ ಸಂಭವಿಸಿದ ಜೀವಹಾನಿ ಮತ್ತು ವ್ಯಾಪಕ ವಿನಾಶದಿಂದ ತಾವು “ತೀವ್ರವಾಗಿ ದುಃಖಿತರಾಗಿದ್ದೇನೆ” ಎಂದು ಪೂಜ್ಯ ಜಗದ್ಗುರು 14ನೇ ಲಿಯೋ ಹೇಳಿದರು. ಸಂತ್ರಸ್ತರನ್ನು ದೇವರ ಕರುಣಾಮಯ ಪ್ರೀತಿಗೆ ಒಪ್ಪಿಸುತ್ತಾ, ಮೃತರು, ಗಾಯಾಳುಗಳು ಹಾಗೂ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ತೊಡಗಿರುವ ಎಲ್ಲರಿಗಾಗಿ ಅವರು ಪ್ರಾರ್ಥಿಸಿದರು. ಜಗದ್ಗುರುಗಳ ಈ ಸಂದೇಶವನ್ನು ಸ್ಥಳೀಯ ಕಥೋಲಿಕರು ಕೃತಜ್ಞತೆಯಿಂದ ಸ್ವೀಕರಿಸಿದ್ದಾರೆ. ದೇವಾಲಯಗಳು ಮತ್ತು ಧರ್ಮಕೇಂದ್ರಗಳ ಕಟ್ಟಡಗಳು ಹಾನಿಗೊಳಗಾಗಿದ್ದರೂ ಅನೇಕರು ಇನ್ನೂ ಪ್ರಾರ್ಥನೆಗಾಗಿ ಒಂದಾಗಿ ಸೇರುತ್ತಿದ್ದಾರೆ.

ತಮ್ಮ ಸಂದೇಶದಲ್ಲಿ ಪ್ರಧಾನ ಧರ್ಮಾಧ್ಯಕ್ಷ ಕ್ಲೆಡೆನ್ ಅವರು ನಂಬಿಕೆಯ ಜನರು ನಿರಾಶೆಗೆ ಶರಣಾಗಬಾರದು ಎಂದು ಪ್ರೋತ್ಸಾಹಿಸಿದರು.“ನಂಬಿಕೆಯುಳ್ಳವರಾಗಿ, ಇಂತಹ ಪರಿಸ್ಥಿತಿಯಲ್ಲಿ ನಾವು ಏಕಾಂಗಿಗಳಲ್ಲ ಎಂಬ ವಿಶ್ವಾಸ ನಮಗಿದೆ. ದೇವರು ನಮ್ಮನ್ನು ಕೈಬಿಟ್ಟಿಲ್ಲ“ಈ ವಿಶ್ವಾಸದೊಂದಿಗೆ ನಾವು ನಮಗೆ ಸಹಾಯ ಮಾಡುತ್ತೇವೆ ಮತ್ತು ಇತರರಿಗೂ ಸಹಾಯ ಮಾಡುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಐಕ್ಯತೆಯೇ ಮುಖ್ಯ.”

ವ್ಯಾಪಕ ವಿನಾಶದ ನಡುವೆಯೂ, ಪ್ರಧಾನ ಧರ್ಮಾಧ್ಯಕ್ಷರ ಸೂಚನೆಯಂತೆ ಎಂಡೆ ಧರ್ಮಕ್ಷೇತ್ರದಾದ್ಯಂತ ಧರ್ಮಗುರುಗಳು ಹೊರಾಂಗಣದಲ್ಲಿ ಪವಿತ್ರ ಬಲಿಪೂಜೆಯನ್ನು ನೆರವೇರಿಸುವುದನ್ನು ಮುಂದುವರಿಸಿದ್ದಾರೆ. ತಾತ್ಕಾಲಿಕ ಆಶ್ರಯಗಳಲ್ಲಿ ವಾಸಿಸುತ್ತಿದ್ದರೂ ನಂಬಿಗಸ್ತರು ಪ್ರಾರ್ಥನೆ ಮತ್ತು ಆರಾಧನೆಗಾಗಿ ಒಂದಾಗಿ ಸೇರುತ್ತಿದ್ದಾರೆ ಎಂದು ಅವರು ತಿಳಿಸಿದರು.

ಧರ್ಮಸಭೆಯಿಂದ ತುರ್ತು ಪರಿಹಾರ ಕಾರ್ಯಕ್ಕೆ ಚಾಲನೆ

ಪ್ರಧಾನ ಧರ್ಮಾಧ್ಯಕ್ಷ ಕ್ಲೆಡೆನ್ ಅವರ ಪ್ರಕಾರ, ಭೂಕಂಪದ ನಂತರ ಯಾವುದೇ ಅಧಿಕೃತ ಧರ್ಮಕ್ಷೇತ್ರೀಯ ತುರ್ತು ಕಾರ್ಯಯೋಜನೆ ರೂಪುಗೊಳ್ಳುವ ಮೊದಲೇ ಧರ್ಮಗುರುಗಳು, ಭಗಿನಿಯರು ಮತ್ತು ಧಾರ್ಮಿಕ ಸೇವಕ-ಸೇವಕಿಯರು ಹಾಗೂ ಸಾಮಾನ್ಯ ನಂಬಿಗಸ್ತರು ತಕ್ಷಣವೇ ನೆರವಿಗೆ ಧಾವಿಸಿದರು.“ಇದೇ ನಿಜವಾದ ಅರ್ಥದಲ್ಲಿ ಕರಿತಸ್,” ಎಂದು ಅವರು ಹೇಳಿದರು.

ಎಂಡೆ ಧರ್ಮಕ್ಷೇತ್ರವು ಇದೀಗ ಕರಿತಾಸ್ ಇಂಡೋನೇಷ್ಯಾದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುವ ಸಮನ್ವಯ ತಂಡವನ್ನು ರಚಿಸಿದ್ದು, ಸಂತ್ರಸ್ತ ಸಮುದಾಯಗಳಿಗೆ ತುರ್ತು ನೆರವು ಒದಗಿಸುವ ಕಾರ್ಯವನ್ನು ಸಂಘಟಿಸುತ್ತಿದೆ. ತಕ್ಷಣದ ಆದ್ಯತೆಗಳಲ್ಲಿ ಒಂದಾಗಿ ಮಾನಸಿಕ ಮತ್ತು ಆಘಾತದಿಂದ ಚೇತರಿಸಿಕೊಳ್ಳಲು ನೆರವು ನೀಡುವುದನ್ನು ಗುರುತಿಸಲಾಗಿದೆ. ವಿಶೇಷವಾಗಿ ಭೂಕಂಪ ನಂತರದ ಕಂಪನಗಳಿಂದ ಇನ್ನೂ ಭಯದಲ್ಲಿರುವ ಮಕ್ಕಳು ಮತ್ತು ಕುಟುಂಬಗಳಿಗೆ ಈ ನೆರವು ಅಗತ್ಯವಾಗಿದೆ. ಮನೆಗಳು, ದೇವಾಲಯಗಳು, ಶಾಲೆಗಳು ಮತ್ತು ಸಾರ್ವಜನಿಕ ಮೂಲಸೌಕರ್ಯಗಳನ್ನು ಪುನರ್‌ನಿರ್ಮಿಸುವ ದೀರ್ಘ ಹಾಗೂ ಕಠಿಣ ಕಾರ್ಯಕ್ಕೂ ಧರ್ಮಸಭೆಯ ನಾಯಕರು ಯೋಜನೆ ರೂಪಿಸಲು ಆರಂಭಿಸಿದ್ದಾರೆ. ವಿನಾಶದ ಪ್ರಮಾಣ ಅಪಾರವಾಗಿದೆ. ಪ್ರಧಾನ ಧರ್ಮಾಧ್ಯಕ್ಷರ ನಿವಾಸವೂ ಗಣನೀಯ ರಚನಾತ್ಮಕ ಹಾನಿಗೆ ಒಳಗಾಗಿದೆ.

“ಭೂಕಂಪ ಬಿಟ್ಟುಹೋದ ಅವಶೇಷಗಳಿಂದ ಪುನರ್‌ನಿರ್ಮಾಣ ಮಾಡಲು ನಾವು ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಮತ್ತು ಸದುದ್ದೇಶ ಹೊಂದಿರುವ ಎಲ್ಲರೊಂದಿಗೆ ಸೇರಿ ಕಾರ್ಯನಿರ್ವಹಿಸುತ್ತಿದ್ದೇವೆ,” ಎಂದು ಪ್ರಧಾನ ಧರ್ಮಾಧ್ಯಕ್ಷ ಕ್ಲೆಡೆನ್ ಹೇಳಿದರು. ಫ್ಲೋರೆಸ್‌ನ ಜನರು ಗುಣಮುಖತೆ ಮತ್ತು ಪುನರ್‌ನಿರ್ಮಾಣದ ಹಾದಿಯನ್ನು ಆರಂಭಿಸುತ್ತಿರುವ ಈ ಸಂದರ್ಭದಲ್ಲಿ, ವಿಶ್ವದಾದ್ಯಂತ ಇರುವ ಕಥೋಲಿಕರು ಅವರಿಗಾಗಿ ನಿರಂತರವಾಗಿ ಪ್ರಾರ್ಥಿಸಬೇಕೆಂದು ಅವರು ಮನವಿ ಮಾಡಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

17 ಆಗಸ್ಟ್ 2026, 07:54