ಇಂಡೋನೇಷ್ಯಾದ ಪೂರ್ವ ನುಸಾ ತೆಂಗರಾದ ಮೌಮೆರೆಯಲ್ಲಿ ಕುಸಿದ ಕಟ್ಟಡವನ್ನು ಪರಿಶೀಲಿಸುತ್ತಿರುವ ರಕ್ಷಣಾ ಕಾರ್ಯಕರ್ತರು ಇಂಡೋನೇಷ್ಯಾದ ಪೂರ್ವ ನುಸಾ ತೆಂಗರಾದ ಮೌಮೆರೆಯಲ್ಲಿ ಕುಸಿದ ಕಟ್ಟಡವನ್ನು ಪರಿಶೀಲಿಸುತ್ತಿರುವ ರಕ್ಷಣಾ ಕಾರ್ಯಕರ್ತರು  

ಫ್ಲೊರೆಸ್ ಭೂಕಂಪಕ್ಕೆ ಪ್ರತಿಕ್ರಿಯೆಯಾಗಿ ಪರಿಹಾರ ಕಾರ್ಯಗಳನ್ನು ಸಕ್ರಿಯಗೊಳಿಸಿದ ಕರಿತಸ್ ಇಂಡೋನೇಷ್ಯಾ

ಶನಿವಾರ ಇಂಡೋನೇಷ್ಯಾದಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪದ ಬಳಿಕ, ದುರಂತದಿಂದ ಬಾಧಿತರಾದವರಿಗೆ ನೆರವು ನೀಡಲು ಕರಿತಸ್ ಇಂಡೋನೇಷ್ಯಾ ದೇಶಾದ್ಯಂತ ತನ್ನ ಸಂಪನ್ಮೂಲಗಳನ್ನು ಸಜ್ಜುಗೊಳಿಸಿದೆ.

ಲೇಖಕರು: ಗ್ಯಾಬ್ರಿಯೆಲ್ ಅಬ್ದಿ ಸುಸಾಂತೊ

ಶನಿವಾರ ಮುಂಜಾನೆ ಪೂರ್ವ ನುಸಾ ತೆಂಗಾರಾ (NTT) ಪ್ರಾಂತ್ಯದ ಫ್ಲೊರೆಸ್ ದ್ವೀಪವನ್ನು ಅಪ್ಪಳಿಸಿದ ಪ್ರಬಲ 7.7 ತೀವ್ರತೆಯ ಭೂಕಂಪದ ಹಿನ್ನೆಲೆಯಲ್ಲಿ, ಕರಿತಸ್ ಇಂಡೋನೇಷ್ಯಾ ವಿವಿಧ ಧರ್ಮಕ್ಷೇತ್ರಗಳಲ್ಲಿರುವ ಕಥೋಲಿಕ ಧರ್ಮಸಭೆಯ ಮಾನವೀಯ ನೆರವು ಜಾಲವನ್ನು ಸಕ್ರಿಯಗೊಳಿಸಿದೆ. ಭೂಕಂಪದಿಂದ ಸುನಾಮಿ ಉಂಟಾಗಿದ್ದು, ಹಲವು ಪ್ರದೇಶಗಳಲ್ಲಿ ಹಾನಿ ಸಂಭವಿಸಿದೆ.

ಭೂಕಂಪವು ಸ್ಥಳೀಯ ಕಾಲಮಾನ ಮುಂಜಾನೆ 04:58:24ಕ್ಕೆ ಸಂಭವಿಸಿತು. ಇದರ ಕೇಂದ್ರಬಿಂದು ನಗೆಕೆಯೊದ ಮ್ಬಾಯ್‌ನ ಈಶಾನ್ಯಕ್ಕೆ ಸುಮಾರು 30 ಕಿಲೋಮೀಟರ್ ದೂರದಲ್ಲಿತ್ತು. ಭೂಕಂಪದಿಂದ ಸುನಾಮಿ ಉಂಟಾಗಿದ್ದು, ಎಂಡೆಯ ಮೌರೊಲೆ ಪ್ರದೇಶದಲ್ಲಿ ಸಮುದ್ರಮಟ್ಟದಲ್ಲಿ ಗರಿಷ್ಠ 0.94 ಮೀಟರ್‌ನಷ್ಟು ಬದಲಾವಣೆ ದಾಖಲಾಗಿದೆ. ಸುಮಾರು ಎರಡು ಗಂಟೆ 33 ನಿಮಿಷಗಳ ಕಾಲ ಜಾರಿಯಲ್ಲಿದ್ದ ಸುನಾಮಿ ಎಚ್ಚರಿಕೆಯನ್ನು ಬೆಳಿಗ್ಗೆ 07:31:30ಕ್ಕೆ ಅಧಿಕೃತವಾಗಿ ಹಿಂಪಡೆಯಲಾಯಿತು.

ಪ್ರಾಥಮಿಕ ವರದಿಗಳ ಪ್ರಕಾರ, ಭೂಕಂಪದ ಕಂಪನವು ಫ್ಲೊರೆಸ್‌ನಾದ್ಯಂತ ಹಾಗೂ ಸುಮ್ಬಾ, ಅಡೊನಾರಾ ಮತ್ತು ಸೊಲೊರ್‌ನ ಕೆಲವು ಭಾಗಗಳಲ್ಲಿ ತೀವ್ರವಾಗಿ ಅನುಭವಿಸಲಾಯಿತು. ನಗೆಕೆಯೊ, ನ್ಗಾಡಾ, ಎಂಡೆ, ಸಿಕ್ಕಾ, ಮಂಗ್ಗರಾಯಿ ಮತ್ತು ಪಶ್ಚಿಮ ಮಂಗ್ಗರಾಯಿ ಪ್ರದೇಶಗಳನ್ನು ಹೆಚ್ಚಿನ ಪರಿಶೀಲನೆ ಅಗತ್ಯವಿರುವ ಪ್ರಮುಖ ಪ್ರದೇಶಗಳೆಂದು ಗುರುತಿಸಲಾಗಿದೆ. ವರದಿ ಸಿದ್ಧಪಡಿಸುವ ಸಮಯದವರೆಗೆ ಸಾವು-ನೋವು, ಗಾಯಾಳುಗಳು, ಸ್ಥಳಾಂತರಗೊಂಡವರು ಮತ್ತು ಹಾನಿಗೊಳಗಾದ ಮನೆಗಳ ಕುರಿತು ಅಧಿಕೃತ ಸಮಗ್ರ ಮಾಹಿತಿಯನ್ನು ಇನ್ನೂ ಪರಿಶೀಲಿಸಲಾಗುತ್ತಿತ್ತು.

ಆಗಸ್ಟ್ 15ರ ಮಧ್ಯಾಹ್ನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (BNPB)ಯ ಪ್ರಾಥಮಿಕ ಮಾಹಿತಿಯ ಪ್ರಕಾರ, 38 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಲೊರೆನ್ಸ್ ಸಾಯ್ ಬಂದರು ಕುಸಿದಿರುವುದು ಹಾಗೂ ಮೌಮೆರೆದಲ್ಲಿನ ಪೆಲ್ನಿ ಪ್ರಯಾಣಿಕರ ಟರ್ಮಿನಲ್‌ಗೆ ಹಾನಿಯಾಗಿರುವುದು ಸೇರಿದಂತೆ ಮೂಲಸೌಕರ್ಯಗಳಿಗೂ ಹಾನಿಯಾಗಿದೆ. ಹಾನಿಗೊಳಗಾದ ಮನೆಗಳು ಮತ್ತು ಸಾರ್ವಜನಿಕ ಕಟ್ಟಡಗಳು ಹಾಗೂ ಸಂಭವನೀಯ ಬಂಡೆ ಕುಸಿತಗಳ ಕುರಿತ ವರದಿಗಳನ್ನು ಇನ್ನೂ ಪರಿಶೀಲಿಸಲಾಗುತ್ತಿದೆ.

ಧರ್ಮಕ್ಷೇತ್ರದಾದ್ಯಂತ ಪ್ರತಿಕ್ರಿಯೆಯನ್ನು ಸಕ್ರಿಯಗೊಳಿಸಿದ ಕರಿತಸ್

ಕರಿತಸ್ ಇಂಡೋನೇಷ್ಯಾ ತಕ್ಷಣವೇ ರುತೆಂಗ್, ಲಬುವಾನ್ ಬಾಜೋ, ಕುಪಾಂಗ್, ಮೌಮೆರೆ ಮತ್ತು ಎಂಡೆ ಧರ್ಮಕ್ಷೇತ್ರಗಳೊಂದಿಗೆ ತಮ್ಮ ತಮ್ಮ ಪ್ರದೇಶಗಳಲ್ಲಿ ಸಂಭವಿಸಿರುವ ಹಾನಿಯ ಪರಿಸ್ಥಿತಿಯನ್ನು ಪರಿಶೀಲಿಸಲು ಮುಂದಾಯಿತು. “ಪೂರ್ವ ನುಸಾ ತೆಂಗಾರಾದಲ್ಲಿ ಸಂಭವಿಸಿದ ಭೂಕಂಪದ ದುರಂತಕ್ಕೆ ಕರಿತಸ್ ಇಂಡೋನೇಷ್ಯಾ ತ್ವರಿತವಾಗಿ ಪ್ರತಿಕ್ರಿಯಿಸುತ್ತಿದೆ. ಇದು ಇಂಡೋನೇಷ್ಯಾದ ಕಥೋಲಿಕ ಧರ್ಮಸಭೆಯ ಮಾನವೀಯ ಹೊಣೆಗಾರಿಕೆಯ ಒಂದು ಭಾಗವಾಗಿದೆ,” ಎಂದು ಕರಿತಸ್ ಇಂಡೋನೇಷ್ಯಾದ ಕಾರ್ಯನಿರ್ವಾಹಕ ನಿರ್ದೇಶಕ ವಂ. ಗುರು ಫ್ರೆಡಿ ರಾಂತೆ ತಾರೂಕ್ ಹೇಳಿದರು.

ತಕ್ಷಣದ ಪ್ರತಿಕ್ರಿಯೆ ಸಾಧ್ಯವಾಗುವಂತೆ ಧರ್ಮಕ್ಷೇತ್ರೀಯ ಕರಿತಸ್ ತಂಡಗಳು ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಆಯೋಗದೊಂದಿಗೆ (PSE) ಕೈಜೋಡಿಸಿವೆ ಎಂದು ಅವರು ತಿಳಿಸಿದರು. “ಇಂದಿನ ವೇಳೆಗೆ, ಪ್ರತಿಯೊಂದು ಧರ್ಮಕ್ಷೇತ್ರದದಲ್ಲಿಯೂ ಸ್ವಯಂಸೇವಕರು ಮತ್ತು ಕರಿತಸ್ ತಂಡಗಳ ಸಜ್ಜುಗೊಳಿಸುವಿಕೆ ಈಗಾಗಲೇ ಆರಂಭವಾಗಿದೆ. ಭೂಕಂಪದಿಂದ ಬಾಧಿತರಾದವರಿಗೆ ನೆರವು ನೀಡುವುದು ಮತ್ತು ಸ್ಥಳಾಂತರ ಕಾರ್ಯಾಚರಣೆಗಳಿಗೆ ಬೆಂಬಲ ನೀಡುವುದು ಇದರಲ್ಲಿ ಸೇರಿದೆ,” ಎಂದು ಹೇಳಿದರು. “ಒಂದು ಧರ್ಮಸಭೆ, ಒಂದು ಪ್ರತಿಕ್ರಿಯೆ” ಎಂಬ ತತ್ವದಡಿ ಪರಿಹಾರ ಕಾರ್ಯ ನಡೆಯುತ್ತಿದೆ. ಕಥೋಲಿಕ ಧರ್ಮಸಭೆಯ ವಿವಿಧ ಘಟಕಗಳು ಸಹೋದರತ್ವ ಮತ್ತು ಐಕ್ಯತೆಯ ಮನೋಭಾವದಿಂದ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ.

“ಮಾನವೀಯ ಪರಿಸ್ಥಿತಿಗೆ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಹಾಗೂ ಬಾಧಿತ ಜನರು ಮತ್ತು ಸಮುದಾಯಗಳನ್ನು ತಲುಪಲು ಕರಿತಸ್ ಧರ್ಮಸಭೆಯ ಎಲ್ಲ ಘಟಕಗಳನ್ನು ಒಗ್ಗೂಡಿಸುತ್ತಿದೆ. ಪರಸ್ಪರ ಸಹಕಾರದ ಮೂಲಕ ನಾವು ಕಾರ್ಯನಿರ್ವಹಿಸುತ್ತಿದ್ದೇವೆ,” ಎಂದು ವಂ. ಗುರು ಫ್ರೆಡಿ ಹೇಳಿದರು.

ಪರಿಹಾರ ಕಾರ್ಯಕ್ಕೆ ಮುಂದಾದ ಧರ್ಮಕೇಂದ್ರಗಳು 

ಬಾಧಿತ ಧರ್ಮಕ್ಷೇತ್ರಗಳ ಸ್ಥಳೀಯ ಧರ್ಮಸಭೆಗಳು ತಮ್ಮ ಧರ್ಮಾಧ್ಯಕ್ಷರ ಬೆಂಬಲದೊಂದಿಗೆ ತುರ್ತು ಪರಿಹಾರ ಕಾರ್ಯದಲ್ಲಿ ಧರ್ಮಕೇಂದ್ರಗಳು ಸಕ್ರಿಯವಾಗಿ ಭಾಗವಹಿಸುವಂತೆ ಪ್ರೋತ್ಸಾಹಿಸಿವೆ.  ಕರಿತಸ್‌ನ ಪರಿಸ್ಥಿತಿ ವರದಿಯ ಪ್ರಕಾರ, ತಮ್ಮ ತಮ್ಮ ಸಮುದಾಯಗಳಲ್ಲಿ ದುರಂತದಿಂದ ಉಂಟಾದ ಪರಿಣಾಮಗಳ ಕುರಿತು ಸ್ಥಳೀಯವಾಗಿ ಮಾಹಿತಿ ಸಂಗ್ರಹಿಸಿ, ಅದನ್ನು ಧರ್ಮಕ್ಷೇತ್ರೀಯ ಮಟ್ಟಕ್ಕೆ ತಲುಪಿಸುವಂತೆ ಧರ್ಮಕೇಂದ್ರಗಳಿಗೆ ಸೂಚಿಸಲಾಗಿದೆ.

ಉದಾಹರಣೆಗೆ, ಕರಿತಸ್ ರುತೆಂಗ್ ಸ್ಥಳೀಯ ಪ್ರಾದೇಶಿಕ ಸಾರ್ವಜನಿಕ ಆಸ್ಪತ್ರೆಯಿಂದ ರೋಗಿಗಳನ್ನು ಈಗಾಗಲೇ ಸ್ಥಳಾಂತರಿಸಿದೆ. ಪಶ್ಚಾತ್‌ ಕಂಪನಗಳಿಂದ ಉಂಟಾಗಬಹುದಾದ ಅಪಾಯ ಮತ್ತು ಆಸ್ಪತ್ರೆಯ ಕಟ್ಟಡಗಳಿಗೆ ಸಂಭವಿಸಬಹುದಾದ ಹೆಚ್ಚಿನ ಹಾನಿಯನ್ನು ಗಮನದಲ್ಲಿಟ್ಟುಕೊಂಡು ರೋಗಿಗಳಿಗಾಗಿ ತುರ್ತು ಗುಡಾರಗಳನ್ನೂ(tent) ಸ್ಥಾಪಿಸಲಾಗಿದೆ.ಕರಿತಸ್ ಜಾಲದ ನಡುವೆ ಮಾಹಿತಿ ಹಂಚಿಕೆ ಮತ್ತು ತುರ್ತು ಸಮನ್ವಯಕ್ಕಾಗಿ ಕರಿತಸ್ ಇಂಡೋನೇಷ್ಯಾ ತನ್ನ ಕರಿನಾ ತುರ್ತು ಪ್ರತಿಕ್ರಿಯಾ ಜಾಲದ (KERNET) ವಾಟ್ಸಾಪ್ ಗುಂಪನ್ನೂ ಸಕ್ರಿಯಗೊಳಿಸಿದೆ.

NTTಯಾದ್ಯಂತದ ಧರ್ಮಕ್ಷೇತ್ರಗಳೊಂದಿಗೆ ಸಮನ್ವಯ ಸಾಧಿಸಿದ ಬಳಿಕ, ರಾಷ್ಟ್ರೀಯ ಕರಿತಸ್ ಇಂಡೋನೇಷ್ಯಾ ಜಾಲದ ಮೂಲಕ ಪರಿಹಾರ ಕಾರ್ಯವನ್ನು ಕೈಗೊಳ್ಳಲು ಮತ್ತು ರಾಷ್ಟ್ರೀಯ ತುರ್ತು ಪ್ರತಿಕ್ರಿಯಾ ಐಕ್ಯತಾ ನಿಧಿಯನ್ನು (Dana APP Tanggap Darurat Nasional)ಸಕ್ರಿಯ ಗೊಳಿಸಲು ಕರಿತಸ್ ಇಂಡೋನೇಷ್ಯಾ ನಿರ್ಧರಿಸಿದೆ. ಸಿಕ್ಕಾ ಜಿಲ್ಲೆಯಲ್ಲಿ ಪರಿಹಾರ ಕಾರ್ಯಕ್ಕೆ ಬೆಂಬಲ ನೀಡಲು ಮೌಮೆರೆ ಧರ್ಮಕ್ಷೇತ್ರದ ವಿಪತ್ತು ಪ್ರತಿಕ್ರಿಯಾ ತಂಡವನ್ನೂ (CRT) ಕರಿತಸ್ ಇಂಡೋನೇಷ್ಯಾ ಸಕ್ರಿಯಗೊಳಿಸಿದೆ.

ತಕ್ಷಣದ ಅಗತ್ಯಗಳು

ಕರಿತಸ್ ಜಾಲದ ಪ್ರಾಥಮಿಕ ಪರಿಶೀಲನೆಯಲ್ಲಿ ಹಲವು ತುರ್ತು ಅಗತ್ಯಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಸುರಕ್ಷಿತ ಸ್ಥಳಾಂತರ ಮತ್ತು ಭದ್ರತಾ ನೆರವು, ಶುದ್ಧ ಕುಡಿಯುವ ನೀರು, ಸಿದ್ಧ ಆಹಾರ, ತಾತ್ಕಾಲಿಕ ಆಶ್ರಯ ಸಾಮಗ್ರಿಗಳು, ಸ್ವಚ್ಛತಾ ಸಾಮಗ್ರಿಗಳು, ತುರ್ತು ಆರೋಗ್ಯ ಸೇವೆಗಳು ಹಾಗೂ ವಿಶೇಷ ಕಾಳಜಿ ಅಗತ್ಯವಿರುವ ಜನರಿಗೆ ನೆರವು ಸೇರಿವೆ. ಇವುಗಳಲ್ಲಿ ಮಕ್ಕಳು, ವೃದ್ಧರು, ಗರ್ಭಿಣಿಯರು ಮತ್ತು ಬಾಣಂತಿಯರು, ಅಂಗವಿಕಲರು ಹಾಗೂ ನಿಯಮಿತವಾಗಿ ಔಷಧ ಸೇವಿಸಬೇಕಾದವರು ಪ್ರಮುಖವಾಗಿ ಸೇರಿದ್ದಾರೆ.

ಪಶ್ಚಾತ್‌ ಕಂಪನಗಳು ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ವಿಶ್ವಾಸಾರ್ಹ ಮಾಹಿತಿ ಮತ್ತು ಧರ್ಮಕೇಂದ್ರ ಮಟ್ಟದವರೆಗಿನ ಪರಿಣಾಮಕಾರಿ ಸಮನ್ವಯದ ಮಹತ್ವವನ್ನೂ ಕರಿತಸ್ ಒತ್ತಿಹೇಳಿದೆ. ತಪ್ಪು ಮಾಹಿತಿಯು ಬಾಧಿತ ಸಮುದಾಯಗಳಿಗೆ ಹೆಚ್ಚುವರಿ ಅಪಾಯಗಳನ್ನು ಉಂಟುಮಾಡಬಹುದು.

ಧರ್ಮಸಭೆಯ ಪ್ರತಿಕ್ರಿಯೆ ಕೇವಲ ಒಂದು ಸಂಸ್ಥೆಯಾದ ಕರಿತಸ್‌ಗೆ ಸೀಮಿತವಾಗಿಲ್ಲ ಎಂದು ವಂ. ಗುರು ಫ್ರೆಡಿ ಒತ್ತಿಹೇಳಿದರು. ಇಡೀ ಧರ್ಮಸಭೆಯ ಸಮುದಾಯವೇ ಈ ಕಾರ್ಯದಲ್ಲಿ ಭಾಗವಹಿಸುತ್ತಿದೆ. ಹೀಗಾಗಿ “ಒಂದು ಧರ್ಮಸಭೆ, ಒಂದು ಪ್ರತಿಕ್ರಿಯೆ” ಎಂಬುದು ಕಥೋಲಿಕ ಧರ್ಮಸಭೆಯ ಮಾನವೀಯ ನೆರವು ಕಾರ್ಯದ ಮಾರ್ಗದರ್ಶಕ ಆತ್ಮವಾಗಿ ರೂಪುಗೊಳ್ಳುತ್ತಿದೆ. ಧರ್ಮಕ್ಷೇತ್ರಗಳು, ಧರ್ಮಕೇಂದ್ರಗಳು, ಕರಿತಸ್ ತಂಡಗಳು, ಸ್ವಯಂಸೇವಕರು ಮತ್ತು ಧರ್ಮಸಭೆಯ ಇತರ ಘಟಕಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು, ಅತ್ಯಂತ ಅಗತ್ಯದಲ್ಲಿರುವವರನ್ನು ಸಾಧ್ಯವಾದಷ್ಟು ಬೇಗ ತಲುಪಿಸುವ ಗುರಿಯನ್ನು ಹೊಂದಿವೆ. ಪರಿಸ್ಥಿತಿ ಇನ್ನೂ ಬದಲಾಗುತ್ತಿದ್ದು, ತ್ವರಿತ ಪರಿಶೀಲನೆಗಳು ಹಾಗೂ ಸರ್ಕಾರಿ ಸಂಸ್ಥೆಗಳು ಮತ್ತು ಕರಿತಸ್ ಜಾಲದಿಂದ ಅಧಿಕೃತ ಮಾಹಿತಿ ಲಭ್ಯವಾಗುತ್ತಿದ್ದಂತೆ ಕರಿತಸ್ ಇಂಡೋನೇಷ್ಯಾ ಮಾಹಿತಿಯನ್ನು ನವೀಕರಿಸುತ್ತಿರುತ್ತದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

16 ಆಗಸ್ಟ್ 2026, 20:23