ಹುಡುಕಿ

ಜೀವನದ ಘನತೆಯನ್ನು ಪ್ರತಿಪಾದಿಸುವ ಫಲಕಗಳನ್ನು ಹಿಡಿದಿರುವ ಭಾಗವಹಿಸಿದವರು. ಚಿತ್ರ: ಸಿಯೋನ್ ಜೋಸ್ ಜೀವನದ ಘನತೆಯನ್ನು ಪ್ರತಿಪಾದಿಸುವ ಫಲಕಗಳನ್ನು ಹಿಡಿದಿರುವ ಭಾಗವಹಿಸಿದವರು. ಚಿತ್ರ: ಸಿಯೋನ್ ಜೋಸ್ 

ಧರ್ಮಕೇಂದ್ರದಿಂದ ರಾಷ್ಟ್ರದವರೆಗೆ: ಜೀವದ ಪರವಾಗಿ CHARIS ಭಾರತದ ಐದು ವರ್ಷಗಳ ಹೋರಾಟ

ಜೀವದ ಪರವಾದ ಮೆರವಣಿಗೆಯನ್ನು ಆರಂಭಿಸಿದ ಮಹಾಧರ್ಮಾಧ್ಯಕ್ಷ ಫ್ರಾನ್ಸಿಸ್ ಕಾಲಿಸ್ಟ್, “ಧರ್ಮಸಭೆಯನ್ನು ಮತ್ತು ಜೀವವನ್ನು ರಕ್ಷಿಸುವವರು ‘ನೀವೇ, ಜನರೇ’” ಎಂಬ ಪೂಜ್ಯ ಫುಲ್ಟನ್ ಶೀನ್ ಅವರ ಸ್ಮರಣೆಯನ್ನು ಉಲ್ಲೇಖಿಸುತ್ತಾ, ಕಾರ್ಯಪ್ರವೃತ್ತರಾಗುವಂತೆ ಕರೆ ನೀಡಿದರು.

ಲೇಖಕರು: ಅಗ್ನೆಲ್ ಮರಿಯಾ – ಬೆಂಗಳೂರು, ಭಾರತ

2026ರ ಆಗಸ್ಟ್ 9ರಂದು ಚೆನ್ನೈನ ಸ್ಟೆಲ್ಲಾ ಮಾರಿಸ್ ಕಾಲೇಜಿನಲ್ಲಿ ಭಾರತದ 5ನೇ ರಾಷ್ಟ್ರೀಯ ಜೀವದ ಪರವಾದ ಮೆರವಣಿಗೆಗಾಗಿ 5,000ಕ್ಕೂ ಹೆಚ್ಚು ಮಂದಿ ಸೇರಿದ್ದರು. ಸಾರ್ವಜನಿಕವಾಗಿ ನಡೆದ ಈ ಸಮಾವೇಶದ ಆಚೆಗೆ ಈ ಕಾರ್ಯಕ್ರಮದ ಮಹತ್ವ ವಿಸ್ತರಿಸಿತ್ತು. ಇದರ ಹೃದಯಭಾಗದಲ್ಲಿ ಕುಟುಂಬಗಳು, ವಿದ್ಯಾರ್ಥಿಗಳು ಮತ್ತು ಧರ್ಮಸಭೆಯ ಸಾಮಾನ್ಯ ವಿಶ್ವಾಸಿಗಳು ಕಳೆದ ಐದು ವರ್ಷಗಳಿಂದ ತಮ್ಮದೇ ಧರ್ಮಕೇಂದ್ರಗಳು, ಕಾಲೇಜುಗಳು ಮತ್ತು ಸಮುದಾಯಗಳಲ್ಲಿ ನಿರಂತರವಾಗಿ ನಡೆಸಿಕೊಂಡು ಬಂದ ಪ್ರಯತ್ನಗಳಿದ್ದವು. ಭಾರತವು ಧಾರ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅಪಾರ ವೈವಿಧ್ಯ ಹೊಂದಿರುವ ರಾಷ್ಟ್ರವಾಗಿರುವ ಹಿನ್ನೆಲೆಯಲ್ಲಿ, ಗರ್ಭದಲ್ಲಿರುವ ಶಿಶುಗಳ ಜೀವವನ್ನು ರಕ್ಷಿಸುವ ಈ ಕಾರ್ಯವು ಇನ್ನಷ್ಟು ಸಂಕೀರ್ಣವಾಗಿದೆ.

ಸಮುದಾಯಗಳಲ್ಲಿ ಬೇರೂರಿದ ಆಂದೋಲನ

ಈ ವರ್ಷದ ಮೆರವಣಿಗೆಯ ಆಂತರಿಕ ಸಾಧನೆಯನ್ನು ಅರ್ಥಮಾಡಿಕೊಳ್ಳಲು ಈ ಹಿನ್ನೆಲೆ ಅತ್ಯಂತ ಮುಖ್ಯವಾಗಿದೆ. ಮದ್ರಾಸ್-ಮೈಲಾಪುರ ಮಹಾಧರ್ಮಕ್ಷೇತ್ರದ ಆತಿಥ್ಯದಲ್ಲಿ, ಭಾರತದ ಕಥೋಲಿಕ ಧರ್ಮಾಧ್ಯಕ್ಷರ ಸಭೆಯ (CBCI) ಅಧೀನದಲ್ಲಿ CHARIS* ಭಾರತ ಈ ಕಾರ್ಯಕ್ರಮವನ್ನು ಆಯೋಜಿಸಿತು.

ಒಂದು ವಾರ್ಷಿಕ ಸಮಾವೇಶವಾಗಿ ಆರಂಭವಾದ ಈ ಕಾರ್ಯವು ಕಾಲಕ್ರಮೇಣ ಸುಸಂಘಟಿತ ರಾಷ್ಟ್ರೀಯ ಜಾಲವಾಗಿ ಬೆಳೆದಿದೆ. ಇದೇ ಮೊದಲ ಬಾರಿಗೆ  ಮಹಾಧರ್ಮಕ್ಷೇತ್ರವು ಪ್ರತಿಯೊಂದು ಧರ್ಮಕೇಂದ್ರದಲ್ಲಿಯೂ ಜೀವದ ಪರವಾದ ಘಟಕಗಳನ್ನು ಸ್ಥಾಪಿಸಿತು. ಇದರ ಮೂಲಕ ತರಬೇತಿ ಪಡೆದ ಸಾಮಾನ್ಯ ವಿಶ್ವಾಸಿಗಳ ಸಂಘಟಿತ ಜಾಲವೊಂದು ರೂಪುಗೊಂಡಿದ್ದು, ಸಂಕಷ್ಟಕರ ಗರ್ಭಧಾರಣೆಯ ಸಂದರ್ಭದಲ್ಲಿ ಗರ್ಭಪಾತದ ನಿರ್ಧಾರ ಎದುರಾಗುವ ಮೊದಲೇ ಕುಟುಂಬಗಳೊಂದಿಗೆ ಜೀವದ ಕುರಿತು ಸಂವಾದ ನಡೆಸಲು ಅವರಿಗೆ ಅಗತ್ಯವಾದ ತರಬೇತಿ ನೀಡಲಾಗಿದೆ.

ಸಾಮಾನ್ಯ ವಿಶ್ವಾಸಿಗಳು ಮುನ್ನಡೆಸಿದ ಕಾರ್ಯ

ಮೆರವಣಿಗೆ ಆರಂಭವಾದ ದಿನದಿಂದಲೂ ಅದಕ್ಕೆ ಮಾರ್ಗದರ್ಶನ ನೀಡಿದ ಮಹಾಧರ್ಮಾಧ್ಯಕ್ಷ ಫ್ರಾನ್ಸಿಸ್ ಕಾಲಿಸ್ಟ್, ಈ ಆಂದೋಲನದ ಶಕ್ತಿಯ ಮೂಲವನ್ನು ನೇರವಾಗಿ ಗುರುತಿಸಿದರು. ಈ ಕಾರ್ಯವು ಮೂಲತಃ ಸಾಮಾನ್ಯ ವಿಶ್ವಾಸಿಗಳಿಗೆ ಸೇರಿದದ್ದು ಎಂದು ಅವರು ಹೇಳಿದರು. ಈ ವಿಚಾರವನ್ನು ಮೊದಲು ತಮ್ಮ ಗಮನಕ್ಕೆ ತಂದವರು ಕುಟುಂಬಗಳು ಮತ್ತು ಸಾಮಾನ್ಯ ವಿಶ್ವಾಸಿಗಳೇ ಆಗಿದ್ದರು. ನಂತರವೇ ಈ ವಿಷಯವು ಭಾರತದ ಕಥೋಲಿಕ ಧರ್ಮಾಧ್ಯಕ್ಷರ ಸಭೆಯ ಅಧಿಕೃತ ಚರ್ಚೆಗಳಲ್ಲಿ ಪ್ರಸ್ತಾಪಿಸಲ್ಪಟ್ಟಿತು.

ಇದು ಭಾರತದ ವಿಶಾಲ ಹಾಗೂ ವಿಕೇಂದ್ರೀಕೃತ ಕಥೋಲಿಕ ಸಮುದಾಯದೊಳಗಿನ ಒಂದು ಪ್ರಮುಖ ವಾಸ್ತವವನ್ನು ತೋರಿಸುತ್ತದೆ: ಅರ್ಥಪೂರ್ಣ ಬದಲಾವಣೆಗಳು ಅನೇಕ ಬಾರಿ ಸಂಸ್ಥೆಗಳ ಮೇಲ್ದರ್ಜೆಯ ನಿರ್ದೇಶನಗಳಿಂದಲ್ಲ, ಬದಲಾಗಿ ತಳಮಟ್ಟದ ಧರ್ಮಕೇಂದ್ರದ ಸಮುದಾಯಗಳಿಂದಲೇ ಆರಂಭವಾಗುತ್ತವೆ.

ಧ್ವನಿಯಿಲ್ಲದವರ ರಕ್ಷಣೆ

CBCI ಅಧ್ಯಕ್ಷರಾದ ಪ್ರಧಾನ ಗುರು ಆಂಟನಿ ಪೂಲಾ ಅವರು ದಿನದ ಉದ್ದೇಶವನ್ನು ಇದೇ ನೆಲೆಯಲ್ಲಿ ವಿವರಿಸಿದರು. ತಮ್ಮ ಪರವಾಗಿ ಮಾತನಾಡಲು ಸಾಧ್ಯವಾಗದವರನ್ನು ರಕ್ಷಿಸುವುದು ಧರ್ಮಸಭೆಯ ಧ್ಯೇಯವಾಗಿದೆ ಎಂದು ಅವರು ಹೇಳಿದರು. ಗರ್ಭಪಾತದ ಅಪಾಯದಲ್ಲಿರುವ ಗರ್ಭದಲ್ಲಿರುವ ಶಿಶುಗಳು ಮತ್ತು ದಯಾಮರಣದ ಅಪಾಯಕ್ಕೆ ಒಳಗಾಗಬಹುದಾದ ವೃದ್ಧರು ಇವರಲ್ಲಿ ಪ್ರಮುಖರಾಗಿದ್ದಾರೆ.

ದೇಶಾದ್ಯಂತದ ಧರ್ಮಕ್ಷೇತ್ರಗಳು ಮತ್ತು ಕಥೋಲಿಕ ಸಂಸ್ಥೆಗಳು ತಮ್ಮ ಜೀವಪರ ಬದ್ಧತೆಯನ್ನು ನಿರಂತರ ಕಾರ್ಯರೂಪಕ್ಕೆ ತರುವಂತೆ ಅವರು ಕರೆ ನೀಡಿದರು. ಜನರ ಸೇವೆಗಾಗಿ ಸ್ಥಾಪಿಸಲಾದ ಸಂಸ್ಥೆಗಳು ಉಳಿದುಕೊಂಡು, ಸೇವೆ ಪಡೆಯಬೇಕಾದ ಜನರೇ ಇಲ್ಲದಂತಹ ಭವಿಷ್ಯವನ್ನು ಎದುರಿಸಬಾರದು ಎಂದು ಅವರು ಎಚ್ಚರಿಸಿದರು.

ಉಪಸ್ಥಿತರಿದ್ದ ಪ್ರಮುಖ ಧರ್ಮಸಭಾ ನಾಯಕರು 

ಮೆರವಣಿಗೆಯಲ್ಲಿ ಹಲವಾರು ಧರ್ಮಸಭಾ ನಾಯಕರು ಉಪಸ್ಥಿತರಿದ್ದು, ಅದರ ರಾಷ್ಟ್ರೀಯ ಮಹತ್ವವನ್ನು ಮತ್ತಷ್ಟು ಒತ್ತಿಹೇಳಿತು. ಪ್ರಮುಖ ಅತಿಥಿಯಾಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದವರು ಹೈದರಾಬಾದ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಹಾಗೂ CBCI ಅಧ್ಯಕ್ಷರಾದ ಪ್ರಧಾನ ಗುರು ಆಂಟನಿ ಪೂಲಾ. ಅವರೊಂದಿಗೆ ಕಾರ್ಯಕ್ರಮದ ಆತಿಥ್ಯ ವಹಿಸಿದ ಮದ್ರಾಸ್-ಮೈಲಾಪುರ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಹಾಗೂ ತಮಿಳುನಾಡು ಧರ್ಮಾಧ್ಯಕ್ಷರ ಮಂಡಳಿಯ ಅಧ್ಯಕ್ಷರಾದ ಮಹಾಧರ್ಮಾಧ್ಯಕ್ಷ ಜಾರ್ಜ್ ಆಂಟೋನಿಸಾಮಿ ಉಪಸ್ಥಿತರಿದ್ದರು.

ಮೆರವಣಿಗೆಯನ್ನು ಐದು ವರ್ಷಗಳ ಹಿಂದೆ ಆರಂಭಿಸಿದ ಪಾಂಡಿಚೇರಿ-ಕಡಲೂರು ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಫ್ರಾನ್ಸಿಸ್ ಕಾಲಿಸ್ಟ್, CHARIS ಭಾರತದ ಧರ್ಮಾಧ್ಯಕ್ಷೀಯ ಸಲಹೆಗಾರರು ಹಾಗೂ CBCIಯ ಜೀವಪರ ಕಾರ್ಯದ ಜವಾಬ್ದಾರಿ ಹೊಂದಿರುವವರಾಗಿ ಉಪಸ್ಥಿತರಿದ್ದರು.

ಧರ್ಮಸಭಾ ನಾಯಕತ್ವದ ಹೊರತಾಗಿಯೂ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ತಮಿಳುನಾಡು ವಿಧಾನಸಭೆಯ ಸಭಾಧ್ಯಕ್ಷರಾದ ತಿರು. ಜೆ.ಸಿ.ಡಿ. ಪ್ರಭಾಕರ್ ಅವರ ಉಪಸ್ಥಿತಿಯು ಈ ಮೆರವಣಿಗೆಯ ಪ್ರಭಾವವು ಧರ್ಮೀಯ ಗಡಿಗಳನ್ನು ಮೀರಿ ವಿಸ್ತರಿಸುತ್ತಿರುವುದನ್ನು ತೋರಿಸಿತು. ಜೀಸಸ್ ಕಾಲ್ಸ್ ಮಿನಿಸ್ಟ್ರಿಯ ಪ್ರಮುಖ ನಾಯಕ ಡಾ. ಪಾಲ್ ದಿನಕರನ್ ಅವರ ಉಪಸ್ಥಿತಿಯು ದಿನದ ಕಾರ್ಯಕ್ರಮಕ್ಕೆ ಅಂತರ್‌ಧರ್ಮೀಯ ಕ್ರೈಸ್ತ ಆಯಾಮವನ್ನೂ ನೀಡಿತು.

ಧರ್ಮಸಭೆ, ಶಾಸನಾಂಗ ಮತ್ತು ಸಹಭಾಗಿ ಕ್ರೈಸ್ತ ಸೇವಾ ಸಂಸ್ಥೆಗಳಿಂದ ಬಂದ ಈ ಎಲ್ಲರ ಒಗ್ಗೂಡಿದ ಉಪಸ್ಥಿತಿಯು, ಪಂಥೀಯ ಮತ್ತು ಸಾಂಸ್ಥಿಕ ಗಡಿಗಳನ್ನು ಮೀರಿ ಗರ್ಭದಲ್ಲಿರುವ ಶಿಶುಗಳ ಪರವಾಗಿ ಧ್ವನಿ ಎತ್ತುವ ಮೆರವಣಿಗೆಯ ಆಶಯವನ್ನು ಪ್ರತಿಬಿಂಬಿಸಿತು.

ಸಾಕ್ಷ್ಯ ಮತ್ತು ಸ್ಮರಣೆಯ ದಿನ

ದಿನದ ಕಾರ್ಯಕ್ರಮಗಳು ಸಾರ್ವಜನಿಕ ಸಾಕ್ಷ್ಯ ಮತ್ತು ವೈಯಕ್ತಿಕ ಪಾಲ್ಗೊಳ್ಳುವಿಕೆಯ ಸಮನ್ವಯವನ್ನು ಪ್ರತಿಬಿಂಬಿಸಿದವು. ಮರೀನಾ ಬೀಚ್ ಸಮೀಪ ನಡೆದ ಐದು ಕಿಲೋಮೀಟರ್ ‘ರನ್ ಫಾರ್ ಲೈಫ್’, ಜೀವಪರ ಪ್ರದರ್ಶನ ಮತ್ತು ಮೆರವಣಿಗೆಗೆ ಮುನ್ನ ಸಾವಿರಾರು ಯುವಜನರು ಭಾಗವಹಿಸಿದ ಜೀವದ ಪರವಾದ ವಿಚಾರಗೋಷ್ಠಿ ಪ್ರಮುಖ ಕಾರ್ಯಕ್ರಮಗಳಾಗಿದ್ದವು.

ಜೀವಪರ ಪ್ರದರ್ಶನದಲ್ಲಿ ಲೈಫ್ ಫಾರ್ ಆಲ್, ಈವಾ ಪ್ರೊ ಲೈಫ್ ಮತ್ತು ಸೇವ್ಡ್ ಪರ್ಲ್ ಫೌಂಡೇಶನ್ ಸೇರಿದಂತೆ ವಿವಿಧ ಸಂಸ್ಥೆಗಳು ವಿದ್ಯಾರ್ಥಿಗಳು ಮತ್ತು ಕುಟುಂಬಗಳೊಂದಿಗೆ ನೇರವಾಗಿ ಸಂವಾದ ನಡೆಸಿದವು.

ಭಾರತದಲ್ಲಿ ಗರ್ಭಪಾತದಿಂದ ಕಳೆದುಹೋದ ಮಕ್ಕಳ ಸ್ಮರಣಾರ್ಥ ಅರ್ಪಿಸಲಾದ ಪವಿತ್ರ ಬಲಿಪೂಜೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು. ಈ ಮೂಲಕ ಭಾಗವಹಿಸಿದ್ದ ಕುಟುಂಬಗಳಿಗೆ ಸ್ಮರಣೆ, ಪ್ರಾರ್ಥನೆ ಮತ್ತು ಜೀವದ ಪರವಾದ ಬದ್ಧತೆಯನ್ನು ನವೀಕರಿಸುವ ಒಂದು ವಿಶೇಷ ಅವಕಾಶ ದೊರೆಯಿತು.

ಹೈದರಾಬಾದ್‌ಗೆ ಹಸ್ತಾಂತರ

ಕಾರ್ಯಕ್ರಮ ಮುಕ್ತಾಯಗೊಳ್ಳುವ ಮೊದಲು, ರಾಷ್ಟ್ರೀಯ ಜೀವದ ಪರವಾದ ಮೆರವಣಿಗೆಯ ಧ್ವಜ ಮತ್ತು ಅವರ್ ಲೇಡಿ ಆಫ್ ಗ್ವಾಡಲೂಪೆ ಅವರ ಚಿತ್ರವನ್ನು ಹೈದರಾಬಾದ್ ಮಹಾಧರ್ಮಕ್ಷೇತ್ರ ಹಾಗೂ ತೆಲುಗು ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯ ಪ್ರತಿನಿಧಿಗಳಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು.

ಇದರೊಂದಿಗೆ 6ನೇ ರಾಷ್ಟ್ರೀಯ ಜೀವದ ಪರವಾದ ಮೆರವಣಿಗೆ 2027ರ ಆಗಸ್ಟ್ 8 ಮತ್ತು 9ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ ಎಂಬುದನ್ನು ದೃಢಪಡಿಸಲಾಯಿತು.

ಗಣನೀಯ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯಿಂದ ಗುರುತಿಸಲ್ಪಟ್ಟಿರುವ ಭಾರತದಲ್ಲಿ, 2026ರ ಆಗಸ್ಟ್ 9ರಂದು ನಡೆದ ಈ ಮೆರವಣಿಗೆಯ ಮೂಲಕ ಆಯೋಜಕರು ಮತ್ತೊಮ್ಮೆ ಒಂದು ಕ್ರಮಬದ್ಧ ಮತ್ತು ಹಂತ ಹಂತವಾಗಿ ಸಾಗುವ ಮಾರ್ಗವನ್ನು ಪ್ರದರ್ಶಿಸಿದರು. ಏಕರೂಪತೆಯನ್ನು ಒತ್ತಾಯಿಸುವುದಕ್ಕಿಂತ ಧರ್ಮಕೇಂದ್ರ, ಕುಟುಂಬ ಮತ್ತು ವೈಯಕ್ತಿಕ ಸಂವಾದದ ಮಟ್ಟದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವುದರ ಮೂಲಕ ಜೀವದ ಗೌರವವನ್ನು ಕಾಪಾಡುವ ಪ್ರಯತ್ನವೇ ಈ ಆಂದೋಲನದ ಕೇಂದ್ರಬಿಂದುವಾಗಿದೆ.

CHARIS ಭಾರತದಲ್ಲಿರುವ ವ್ಯಾಟಿಕನ್ ಸಂಸ್ಥೆಯಾಗಿದ್ದು ಪವಿತ್ರಾತ್ಮರ ವರದಾನಗಳ ಮೂಲಕ ಪ್ರಾರ್ಥನಾ ತಂಡಗಳನ್ನು ಒಗ್ಗೂಡಿಸಿ, ಆಧ್ಯಾತ್ಮಿಕ ನವೀಕರಣ ಮತ್ತು ಬಡವರ ಸೇವೆ ಮಾಡುತ್ತದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

11 ಆಗಸ್ಟ್ 2026, 20:25